ಪ್ರಗತಿವಾಹಿನಿ ಸುದ್ದಿ, ಬೆಳಗಾವಿ: ಬೆಳಗಾವಿಯಲ್ಲಿ ಮತಾಂತರ ಯತ್ನ ನಡೆಯುತ್ತಿದೆ ಎನ್ನುವ ಬಲವಾದ ಶಂಕೆಯ ಹಿನ್ನೆಲೆಯಲ್ಲಿ ವಿಶ್ವ ಹಿಂದೂ ಪರಿಷತ್ ಮತ್ತು ಬಜರಂಗದಳದ ಕಾರ್ಯಕರ್ತರು 40 ಆದಿವಾಸಿ ಮಹಿಳೆಯರನ್ನು ತಡೆದು ಪೊಲೀಸ್ ಠಾಣೆಗೆ ಒಪ್ಪಿಸಿದರು.
ಆದರೆ ಸರಿಯಾಗಿ ವಿಚಾರಿಸದೆ ಪೊಲೀಸರು ಅವರನ್ನೆಲ್ಲ ಬಿಟ್ಟು ಕಳಿಸಿದ್ದಾರೆ ಎನ್ನುವುದು ವಿಎಚ್ ಪಿ ಆರೋಪ.
ಮಹಾರಾಷ್ಟ್ರದಿಂದ ರೈಲಿನಲ್ಲಿ 40 ಆದಿವಾಸಿ ಮಹಿಳೆಯರನ್ನು ಮತಾಂತರಕ್ಕೆಂದು ಬೆಳಗಾವಿ ಕಡೆಗೆ ಕರೆತರಲಾಗುತ್ತಿದೆ ಎನ್ನುವ ಮಾಹಿತಿ ಹಿನ್ನೆಲೆಯಲ್ಲಿ ವಿಶ್ವಹಿಂದೂ ಪರಿಷತ್ ಮತ್ತು ಬಜರಂಗದಳದ ಕಾರ್ಯಕರ್ತರು ಮಧ್ಯರಾತ್ರಿ ಬೆಳಗಾವಿ ರೈಲ್ವೆ ನಿಲ್ದಾಣಕ್ಕೆ ತೆರಳಿ ಕಾವಲಿಗೆ ನಿಂತರು. ಕ್ರೈಸ್ತ ಧರ್ಮಗುರು ಒಬ್ಬರ ಜೊತೆಗೆ ಬಂದಿಳಿದ ಮಹಿಳೆಯರನ್ನು ಪೊಲೀಸರ ಸಹಕಾರದಿಂದ ಠಾಣೆಗೆ ಕರೆತರಲಾಯಿತು.
ಬೆಳಗ್ಗೆ ಅವರನ್ನೆಲ್ಲ ವಿಚಾರಣೆ ನಡೆಸಲಾಗುವುದು ಎನ್ನುವ ಪೊಲೀಸರ ಭರವಸೆ ಮೇರೆಗೆ ಕಾರ್ಯಕರಕರ್ತರು ತೆರಳಿದರು. ಆದರೆ ಬೆಳಗ್ಗೆ ಎಲ್ಲರನ್ನೂ ಬಿಟ್ಟು ವಾಪಸ್ ಮಹಾರಾಷ್ಟ್ರಕ್ಕೆ ಕಳಿಸಲಾಗಿದೆ. ಅವರನ್ನು ಸರಿಯಾಗಿ ವಿಚಾರಿಸದೆ ವಾಪಸ್ ಕಳಿಸಲಾಗಿದೆ ಎಂದು ವಿಶ್ವಹಿಂದೂ ಪರಿಷತ್, ಬಜರಂಗದಳದ ಮುಖಂಡ ಕೃಷ್ಣ ಭಟ್ ಆರೋಪಿಸಿದ್ದಾರೆ.
ಸ್ವಯಂ ಸೇವಾ ಸಂಸ್ಥೆಯೊಂದರ ವತಿಯಿಂದ ಮಹಿಳೆಯರನ್ನು ಗೋವಾಕ್ಕೆ ಪ್ರವಾಸಕ್ಕೆ ಕರೆದೊಯ್ಯಲಾಗುತ್ತಿದೆ. ರೈಲು ಬೆಳಗಾವಿವರೆಗೆ ಮಾತ್ರ ಇದ್ದುದರಿಂದ ಇಲ್ಲಿ ಇಳಿದು ಮುಂದೆ ಹೋಗಬೇಕಿತ್ತು. ಮತಾಂತರ ಮಾಡುವುದಿಲ್ಲ ಎಂದು ಅವರ ಜೊತೆ ಇದ್ದ ವ್ಯಕ್ತಿ ಹೇಳಿಕೆ ನೀಡಿದ್ದಾರೆ.
ಪ್ರಗತಿವಾಹಿನಿ ಸುದ್ದಿಗಳನ್ನು ನಿಮ್ಮ ಸ್ನೇಹಿತರಿಗೆ, ಬೇರೆ ಗ್ರುಪ್ ಗಳಿಗೆ ಶೇರ್ ಮಾಡಿ