CrimeKannada NewsKarnataka NewsLatest

*ಆಸ್ತಿಗಾಗಿ ತಂದೆಯ ಕೊಲೆ ಶಂಕೆ*: *ಎರಡು ತಿಂಗಳ ಬಳಿಕ ಸಮಾಧಿಯಿಂದ ಶವ ಹೊರಕ್ಕೆ!*

ಪ್ರಗತಿವಾಹಿನಿ ಸುದ್ದಿ: ಕೋಟ್ಯಂತರ ರೂಪಾಯಿ ಮೌಲ್ಯದ ಆಸ್ತಿ ವಿವಾದದ ಹಿನ್ನೆಲೆಯಲ್ಲಿ ಸ್ವಂತ ತಂದೆಯನ್ನೇ ಮಗಳು ಹಾಗೂ ಆಕೆಯ ಪ್ರಿಯಕರ ಸೇರಿ ಹತ್ಯೆ ಮಾಡಿರುವ ಶಂಕೆ ವ್ಯಕ್ತವಾಗಿದೆ. ಸಾವಿನ ಬಳಿಕ ಯಾವುದೇ ಮಾಹಿತಿ ನೀಡದೆ ಶವವನ್ನು ದಫನ ಮಾಡಿದ್ದ ಪ್ರಕರಣದಲ್ಲಿ, ಬರೋಬ್ಬರಿ ಎರಡು ತಿಂಗಳ ಬಳಿಕ ಸಮಾಧಿಯಿಂದ ಶವ ಹೊರತೆಗೆದು ವಿಧಿವಿಜ್ಞಾನ ಪರೀಕ್ಷೆಗೆ ಒಳಪಡಿಸಲಾಗಿದೆ.

ಮಂಗಳೂರಿನ ಕೊಟ್ಟಾರ ಫಸ್ಟ್ ಕ್ರಾಸ್ ನಿವಾಸಿ ಆಲ್ಬರ್ಟ್ ರೇಗೋ ಅವರು ಜುಲೈ 19ರಂದು ಮೃತಪಟ್ಟಿದ್ದರು. ಬಳಿಕ ಮಗಳು ಮಾಯಾ ರೇಗೋ, ನೆರೆಹೊರೆಯವರು ಹಾಗೂ ದೂರದ ಸಂಬಂಧಿಕರಿಗೆ ಮಾಹಿತಿ ನೀಡದೆ ದೇರೆಬೈಲ್ ಚರ್ಚ್‌ನ ದಫನ ಭೂಮಿಯಲ್ಲಿ ಶವವನ್ನು ಹೂತುಹಾಕಿದ್ದರು ಎನ್ನಲಾಗಿದೆ. ಈ ನಡೆ ಆಲ್ಬರ್ಟ್ ಅವರ ಆಪ್ತ ಸ್ನೇಹಿತರಲ್ಲಿ ಅನುಮಾನ ಮೂಡಿಸಿತ್ತು.

ಆಲ್ಬರ್ಟ್‌ಗೆ ನಾಲ್ವರು ಮಕ್ಕಳಿದ್ದು, ಇಬ್ಬರು ದುಬೈನಲ್ಲಿ ನೆಲೆಸಿದ್ದಾರೆ. ಮಕ್ಕಳ ಭವಿಷ್ಯಕ್ಕಾಗಿ ಕೋಟ್ಯಂತರ ರೂಪಾಯಿ ಮೌಲ್ಯದ ಆಸ್ತಿ ಮಾಡಿದ್ದರು ಎನ್ನಲಾಗಿದೆ. ಸಾವಿಗೂ ಮುನ್ನ ಆಸ್ತಿಯ ವಿಲ್‌ ಅನ್ನು ಒತ್ತಾಯಪೂರ್ವಕವಾಗಿ ಬರೆಸಿಕೊಳ್ಳಲಾಗಿತ್ತು ಎಂಬ ಆರೋಪವೂ ಕೇಳಿಬಂದಿದೆ. ಮಗಳು ಮಾಯಾ ಹಾಗೂ ಆಕೆಯ ಪ್ರಿಯಕರನ ವಿರುದ್ಧ ಕೊಲೆ ಶಂಕೆ ವ್ಯಕ್ತವಾಗಿದೆ.

ಆಲ್ಬರ್ಟ್ ಅವರ ಸಾವಿನ ಬಗ್ಗೆ ಅನುಮಾನಗೊಂಡ ಆಪ್ತ ಸ್ನೇಹಿತರು ಉರ್ವಾ ಪೊಲೀಸ್ ಠಾಣೆಗೆ ದೂರು ನೀಡಿದ್ದಾರೆ. ದೂರಿನ ಆಧಾರದ ಮೇಲೆ ಪೊಲೀಸರು ಪ್ರಕರಣದ ಮರುತನಿಖೆ ಆರಂಭಿಸಿದ್ದಾರೆ. ಸಾವಿನ ಸುತ್ತಲಿನ ಅನುಮಾನಾಸ್ಪದ ಬೆಳವಣಿಗೆಗಳು ಹಾಗೂ ಆಸ್ತಿ ವಿವಾದದ ಕುರಿತು ತನಿಖೆ ನಡೆಸಲಾಗುತ್ತಿದೆ.

ಪ್ರಕರಣದ ಸತ್ಯಾಸತ್ಯತೆ ಪತ್ತೆಹಚ್ಚಲು ತಹಸೀಲ್ದಾರ್ ಮತ್ತು ವಿಧಿವಿಜ್ಞಾನ ಪ್ರಯೋಗಾಲಯದ (FSL) ತಜ್ಞರ ಸಮ್ಮುಖದಲ್ಲಿ ದೇರೆಬೈಲ್ ಚರ್ಚ್‌ನ ದಫನ ಭೂಮಿಯಿಂದ ಶವವನ್ನು ಹೊರತೆಗೆಯಲಾಗಿದೆ. ಮರಣೋತ್ತರ ಪರೀಕ್ಷೆ ಹಾಗೂ ವಿಧಿವಿಜ್ಞಾನ ವರದಿ ತನಿಖೆಯಲ್ಲಿ ಮಹತ್ವದ ಪಾತ್ರ ವಹಿಸುವ ನಿರೀಕ್ಷೆಯಿದೆ.

ಆಲ್ಬರ್ಟ್ ಅವರ ಸಾವು ಸಹಜವಾಗಿತ್ತೇ ಅಥವಾ ಅಪರಾಧ ನಡೆದಿದೆಯೇ ಎಂಬುದು ವೈದ್ಯಕೀಯ ವರದಿ ಮತ್ತು ಪೊಲೀಸ್ ತನಿಖೆಯ ಬಳಿಕ ಸ್ಪಷ್ಟವಾಗಬೇಕಿದೆ.

ಪ್ರಗತಿವಾಹಿನಿ ಸುದ್ದಿಗಳನ್ನು ನಿಮ್ಮ ಸ್ನೇಹಿತರಿಗೆ, ಬೇರೆ ಗ್ರುಪ್ ಗಳಿಗೆ ಶೇರ್ ಮಾಡಿ

Related Articles

Back to top button