Kannada News

ಯುವಕಾಂಗ್ರೆಸ್ ನಿಂದ ಸುವರ್ಣ ವಿಧಾನಸೌಧ ಮುತ್ತಿಗೆ ಯತ್ನ; ಕಾರ್ಯಕರ್ತರನ್ನು ವಶಕ್ಕೆ ಪಡೆದ ಪೊಲೀಸರು

ಪ್ರಗತಿವಾಹಿನಿ ಸುದ್ದಿ,  ಬೆಳಗಾವಿ:  ರಾಜ್ಯ  ಸರಕಾರದ ಭ್ರಷ್ಟಾಚಾರ ಸೇರಿದಂತೆ ವಿವಿಧ ಧೋರಣೆಗಳನ್ನು ವಿರೋಧಿಸಿ ಸುವರ್ಣ ವಿಧಾನಸೌಧಕ್ಕೆ ಮುತ್ತಿಗೆ ಹಾಕಲು ಯತ್ನಿಸಿದ ಯುವಕಾಂಗ್ರೆಸ್  ಕಾರ್ಯಕರ್ತರನ್ನು ಪೊಲೀಸರು ವಶಕ್ಕೆ ಪಡೆದಿದ್ದಾರೆ.
 ಯುವಕಾಂಗ್ರೆಸ್ ರಾಜ್ಯಾಧ್ಯಕ್ಷ ಮೊಹ್ಮದ್ ನಲ್ಪಾಡ್ ಸೇರಿದಂತೆ ನೂರಾರು ಕಾರ್ಯಕರ್ತರನ್ನು ಪೊಲೀಸರು ವಶಕ್ಕೆ ಪಡೆದಿದ್ದಾರೆ.
 ಇಲ್ಲಿಯ ಯಡಿಯೂರಪ್ಪ ಮಾರ್ಗದಿಂದ ಆರಂಭವಾದ ಪ್ರತಿಭಟನಾ ಮೆರವಣಿಗೆ ಅಲಾರವಾಡ ಕ್ರಾಸ್ ಬಳಿ ತಲುಪುತ್ತಿದ್ದಂತೆ ಪೊಲೀಸರು ತಡೆದು ವಶಕ್ಕೆ ಪಡೆದರು. ಈ ವೇಳೆ ನಲಪಾಡ್ ಮತ್ತು ಪೊಲೀಸರ ಮಧ್ಯೆ ವಾಗ್ವಾದ ನಡೆಯಿತು.
ಶಾಸಕಿ ಲಕ್ಷ್ಮೀ ಹೆಬ್ಬಾಳಕರ್, ವಿಧಾನ ಪರಿಷತ್ ಸದಸ್ಯ ಚನ್ನರಾಜ ಹಟ್ಟಿಹೊಳಿ, ಯುವ ಕಾಂಗ್ರೆಸ್ ಮುಖಂಡರಾದ  ಮೃಣಾಲ್ ಹೆಬ್ಬಾಳಕರ, ರಾಹುಲ್ ಜಾರಕಿಹೊಳಿ ಮೊದಲಾದವರು ಪ್ರತಿಭಟನೆಯಲ್ಲಿ ಭಾಗಿಯಾಗಿದ್ದರು.
ಸರ್ಕಾರದ ವಿರುದ್ಧ ಧಿಕ್ಕಾರ ಕೂಗುತ್ತ ಮೆರವಣಿಗೆ ಆರಂಭವಾಯಿತು. 40 ಪರ್ಸೆಂಟ್ ಕಮೀಷನ್ ವಿಚಾರ, ಪಿಎಸ್ ಐ ಹಗರಣ, ನಿರುದ್ಯೋಗ ಸಮಸ್ಯೆ, ಗುತ್ತಿಗೆದಾರ ಕೆಂಪಣ್ಣ ಬಂಧನ ವಿರೋಧ ಸೇರಿದಂತೆ ಹಲವು ವಿಚಾರಗಳನ್ನ ಮುಂದಿಟ್ಟುಕೊಂಡ ಪ್ರತಿಭಟನೆ ನಡೆಯಿತು. ಕೈಯಲ್ಲಿ ಫಲಕಗಳನ್ನು ಹಿಡಿದು ಸರಕಾರದ ವಿರುದ್ಧ ದಿಕ್ಕಾರ ಕೂಗಿದರು.
ಈ ಸಂದರ್ಭದಲ್ಲಿ ಶಾಸಕಿ ಲಕ್ಷ್ಮಿ ಹೆಬ್ಬಾಳ್ಕರ್ ಮಾತನಾಡಿ, ಯುವಕರಿಗೆ ಎರಡು ಕೋಟಿ ಉದ್ಯೋಗ ಕೊಡ್ತಿವಿ ಎಂದವರು ಪಾಲಾಯನ ಮಾಡಿದ್ದಾರೆ.  ಬಿಜೆಪಿ ಸರ್ಕಾರ ಪ್ರತಿ ಹಂತದಲ್ಲೂ ಭ್ರಷ್ಟಾಚಾರ ಮಾಡುತ್ತಿದೆ. 40%  ನಿಂದ ಯುವಕರು ಹೆಚ್ಚು ನಿರುದ್ಯೋಗಿರಾಗಿದ್ದಾರೆ‌. ಬಿಜೆಪಿ ಸರ್ಕಾರದ ದುರಾಡಳಿತ ವಿರುದ್ಧ ಯೂತ್ ಕಾಂಗ್ರೆಸ್ ಧ್ವನಿ ಎತ್ತುತ್ತಿದೆ. ಪ್ರತಿ ಹಂತದಲ್ಲೂ ಯೂತ್ ಕಾಂಗ್ರೆಸ್ ಗೆ ನಮ್ಮ ಬೆಂಬಲ ಇರುತ್ತದೆ ಎಂದು ಹೇಳಿದರು.
 ಯೂತ್ ಕಾಂಗ್ರೆಸ್ ಅಧ್ಯಕ್ಷ ಮಹಮ್ಮದ್ ನಲ್ಪಾಡ್ ಮಾತನಾಡಿ, ಬಿಜೆಪಿ ಮೊದಲು ನಮ್ಮ ಉದ್ಯೋಗ ಕಸಿದುಕೊಂಡಿದೆ.  ಈಗ ಚಿಲುಮೆ ಎಂಬ ಸಂಸ್ಥೆ ಮೂಲಕ ನಮ್ಮ ವೋಟ್ ಕದ್ದಿದೆ.
 ಪ್ರಜಾಪ್ರಭುತ್ವ ಕಗ್ಗೋಲೆ ಮಾಡುತ್ತಿದೆ. ಸರ್ಕಾರದ ವಿರುದ್ಧ ಮಾತನಾಡಲು ಜನ ಭಯ ಪಡುವಂತಾಗಿದೆ. ಈ 40% ಸರ್ಕಾರವನ್ನು ಅಧಿಕಾರದಿಂದ ಕೆಳಗಿಳಿಸುವವರೆಗೆ ಯುತ್ ಕಾಂಗ್ರೆಸ್ ಸುಮ್ಮನಿರುವುದಿಲ್ಲ ಎಂದು ಗುಡುಗಿದರು.
40% ವಿರುದ್ಧ ಧ್ವನಿ ಎತ್ತಿದ ಗುತ್ತಿಗೆದಾರ ಸಂಘದ ಅಧ್ಯಕ್ಷರನ್ನು ಬಂಧಿಸಿದರು.  ಈ ಸರ್ಕಾರ ಪ್ರತಿ ಹಂತದಲ್ಲೂ ಸ್ಕಾಮ್ ಮಾಡುತ್ತಿದೆ. ಈ ಅಧಿವೇಶನ ಮಾಡುತ್ತಿರುವುದು ಜನರ ಸಮಸ್ಯೆ ಆಲಿಸಲು ಅಲ್ಲ. ಅವರ 4೦% ಕಮಿಷನ್ ಬಗ್ಗೆ ಮಾತಾಡಲು. ಹಾಗಾಗಿ ಇದನ್ನು ಪ್ರತಿಭಟಿಸಿ ಸುವರ್ಣ ವಿಧಾನಸೌಧ ಮುತ್ತಿಗೆ ಹಾಕಲಾಗುತ್ತಿದೆ ಎಂದು ನಲ್ಪಾಡ್ ಹೇಳಿದರು.
  ವಿಧಾನ ಪರಿಷತ್ ಸದಸ್ಯ ಚನ್ನರಾಜ ಹಟ್ಟಿಹೊಳಿ ಮಾತನಾಡಿ, ಬಿಜೆಪಿ ಉದ್ಯೋಗ ನೀಡಲು ವಿಫಲವಾಗಿದೆ. ಭ್ರಷ್ಟಾಚಾರ, ಬೆಲೆ ಏರಿಕೆ, ದುರಾಡಳಿತ ವಿರೋಧಿಸಿ ಯುವಕರು ಧ್ವನಿ ಎತ್ತಬೇಕು.
ಕೇಂದ್ರ ಕರ್ನಾಟಕ ಎಂದು ಬಂದಾಗ ದ್ವಂದ್ವ ನೀತಿ ಅನುಸರಿಸುತ್ತಿದೆ.  ಬಿಜೆಪಿಯ ದ್ವಂದ್ವ ನೀತಿ ಕುರಿತು ಮುಂದೆ ಬೃಹತ್ ಹೋರಾಟ ಮಾಡೋಣ ಎಂದು ಹೇಳಿದರು.
ಯುವ ಕಾಂಗ್ರೆಸ್‌ ಜಿಲ್ಲಾಧ್ಯಕ್ಷ ಕಾರ್ತಿಕ್‌ ಪಾಟೀಲ ಅವರು ಮಾತನಾಡಿ,  ಪ್ರವಾಹದಿಂದ ಮನೆಗಳನ್ನು ಕಳೆದುಕೊಂಡ ಸಂತ್ರಸ್ತರಿಗೆ  ಸೂಕ್ತ ಪರಿಹಾರ ಸಿಕ್ಕಿಲ್ಲ, ಬಡಜನರನ್ನು ನಿತ್ಯವೂ ನರಕಕ್ಕೆ ತಳುತ್ತಿರುವ ಬಿಜೆಪಿ ಸರ್ಕಾರಕ್ಕೆ  ಕಿವಿ ಇಲ್ಲ,  ಕಣ್ಣು ಕೂಡ ಮೊದಲೇ ಇಲ್ಲವೆಂದು ವಾಗ್ದಾಳಿ ನಡೆಸಿದರು.
ಕೇಂದ್ರ ಹಾಗೂ ರಾಜ್ಯದಲ್ಲಿ ಬಿಜೆಪಿ ಆಡಳಿತ ಇದೆ. ದಿನಸಿ ಬೆಲೆ  ಕಡಿಮೆ ಮಾಡಲಿ, ನಿತ್ಯವೂ ದಿನಸಿ ಬೆಲೆ ಗಗನಕ್ಕೇರುತ್ತಿದೆ.  ಕಬ್ಬಿಗೆ ಬೆಂಬಲ ಬೆಲೆ ನೀಡುತ್ತಿಲ್ಲ ರೈತರು ಕಷ್ಟಪಟ್ಟು ಬೆಳೆಸಿದ ಬೆಳೆ ಆದಾಯ  ಧನವಂತರ ಪಾಲಾಗುತ್ತಿದೆ . ಚುನಾವಣೆ ಪೂರ್ವದಲ್ಲಿ  ಬಿಜೆಪಿ  ಪ್ರಣಾಳಿಕೆಯಲ್ಲಿ ನೀಡಿರುವ ಭರವಸೆ ಈಡೇರಿಸಿಲ್ಲ. ಮತದಾರರನ್ನು ಮುಗಿಸಲು ಯತ್ನ ಮಾಡುತ್ತಿರುವ  ಸರ್ಕಾರದ  ಮಾಲ್ಯಗಳು ಕುಸಿದಿದೆ ಎಂದು ಗುಡುಗಿದರು.
ಯುವ ನಾಯಕ ರಾಹುಲ್‌ ಜಾರಕಿಹೊಳಿ ಮಾತನಾಡಿ, ಉತ್ತರ ಕರ್ನಾಟಕ ಆಶೋತ್ತರಗಳಿಗೆ ಧ್ವನಿಯಾಗಬೇಕೆಂಬ ಉದ್ದೇಶದಿಂದ ಸುರ್ವಣಸೌಧ  ನಿರ್ಮಿಸಲಾಗಿದೆ.  ಆದರೆ ಬಿಜೆಪಿ ಸರ್ಕಾರದ ನಿರ್ಲಕ್ಷ್ಯದಿಂದ  ಯಾವುದೇ ಅಭಿವೃದ್ಧಿ ಕಾರ್ಯಗಳು ನೆರವೇರುತ್ತಿಲ್ಲ ಎಂದು  ಆಕ್ರೋಶ ವ್ಯಕ್ತಪಡಿಸಿದರು.

ಕಾಂಗ್ರೆಸ್‌ ಸರ್ಕಾರದ ಆಡಳಿತ ಅವಧಿಯಲ್ಲಿನ ಅನೇಕ ಅಭಿವೃದ್ಧಿ ಯೋಜನೆಗಳನ್ನು ಬಿಜೆಪಿಯವರು ಉದ್ಘಾಟನೆ ಮಾಡಲು ಹೊರಟಿದ್ದಾರೆ. ಸರ್ಕಾರದ ನಡೆಗೆ  ಜನರು ಬೇಸತ್ತಿದ್ದಾರೆ. ಈ 40 % ಸರ್ಕಾರಕ್ಕೆ ಸರ್ಕಾರಕ್ಕೆ ಮುಂದಿನ ದಿನಗಳಲ್ಲಿ ಯುವ ಜನತೆ ತಿರುಗೇಟು ನೀಡುತ್ತಾರೆ ಎಂದು ಕಿಡಿಕಾರಿದರು.

 ಪ್ರತಿಭಟನೆ ಮುಂದೆ ಸಾಗುತ್ತಿದ್ದಂತೆ ಡಿಸಿಪಿ ರವೀಂದ್ರ ಗಡಾದಿ ನೇತೃತ್ವದಲ್ಲಿ ಪೊಲೀಸರು ಕಾರ್ಯಕರ್ತರನ್ನು ವಶಕ್ಕೆ ಪಡೆದರು.
https://pragati.taskdun.com/suvarnavidhana-soudha-siege-by-yuva-congress/

ಪ್ರಗತಿವಾಹಿನಿ ಸುದ್ದಿಗಳನ್ನು ನಿಮ್ಮ ಸ್ನೇಹಿತರಿಗೆ, ಬೇರೆ ಗ್ರುಪ್ ಗಳಿಗೆ ಶೇರ್ ಮಾಡಿ

Related Articles

Back to top button