Kannada NewsLatest

ಶಾವಿಗೆ, ಸಂಡಿಗೆ ಪ್ರಕರಣದ ಬೆನ್ನಲ್ಲೇ ಸುವರ್ಣ ವಿಧಾನಸೌಧಕ್ಕೆ ಜಿಲ್ಲಾಧಿಕಾರಿ ಭೇಟಿ; ಸ್ವಚ್ಛತೆ, ಭದ್ರತೆ‌ ಪರಿಶೀಲನೆ

ಪ್ರಗತಿವಾಹಿನಿ ಸುದ್ದಿ; ಬೆಳಗಾವಿ: ಸುವರ್ಣ ವಿಧಾನಸೌಧದ ಘನತೆಯನ್ನು ಗಮನದಲ್ಲಿಟ್ಟುಕೊಂಡು ಅಲ್ಲಿನ ಭದ್ರತೆ, ಸ್ವಚ್ಛತೆ ಸೇರಿದಂತೆ ಒಟ್ಟಾರೆ ನಿರ್ವಹಣಗೆ ಸಂಬಂಧಿಸಿದಂತೆ ಸರಕಾರದ ಮಾರ್ಗಸೂಚಿ ಪ್ರಕಾರ ಎಲ್ಲ ಕ್ರಮಗಳನ್ನು ಕಟ್ಟುನಿಟ್ಟಾಗಿ ಪಾಲಿಸಬೇಕು ಎಂದು ಜಿಲ್ಲಾಧಿಕಾರಿ ನಿತೇಶ್ ಪಾಟೀಲ ಸೂಚನೆ ನೀಡಿದರು.

ನಗರದ ಹೊರಹೊಲಯದಲ್ಲಿರುವ ಸುವರ್ಣ ವಿಧಾನಸೌಧಕ್ಕೆ ಬುಧವಾರ(ಜೂ.1) ಅವರು ಭೇಟಿ ನೀಡಿ ಪರಿಶೀಲಿಸಿದರು. ಈ ಸಂದರ್ಭದಲ್ಲಿ ಸುವರ್ಣ ವಿಧಾನಸೌಧದ ನಿರ್ವಹಣೆ ಮಾಡುತ್ತಿರುವ ಲೋಕೋಪಯೋಗಿ ಇಲಾಖೆಯ ಅಧಿಕಾರಿಗಳು ಹಾಗೂ ಕಾರ್ಮಿಕರ ಜತೆ ಚರ್ಚೆ ನಡೆಸಿದರು.

ಸುವರ್ಣ ವಿಧಾನಸೌಧದ ಮುಂದೆ ಶಾವಿಗೆ ಹಾಗೂ ಸಂಡಿಗೆ ಒಣಹಾಕಿದ್ದ ಮಹಿಳಾ ಕಾರ್ಮಿಕರೊಬ್ಬರ ವಿರುದ್ಧ ಈಗಾಗಲೇ ಕ್ರಮ ಕೈಗೊಳ್ಳಲಾಗಿದೆ. ಮುಂಬರುವ ದಿನಗಳಲ್ಲಿ ಇಂತಹ ಘಟನೆಗಳು ಮರುಕಳಿಸದಂತೆ ಸಂಬಂಧಿಸಿದ ಇಲಾಖೆಯ ಅಧಿಕಾರಿಗಳು ನಿಗಾ ವಹಿಸಬೇಕು. ಸ್ವಚ್ಛತೆ ಸೇರಿದಂತೆ ಮತ್ತಿತರ ದೈನಂದಿನ ನಿರ್ವಹಣೆಯ ಕೆಲಸಕಾರ್ಯಗಳಿಗೆ ನಿಯೋಜಿಸಲಾಗುವ ಸಿಬ್ಬಂದಿ ಹಾಗೂ ಕಾರ್ಮಿಕರು ಶಿಸ್ತುಬದ್ಧವಾಗಿ ಹಾಗೂ ಅಚ್ಚುಕಟ್ಟಾಗಿ ಕೆಲಸ ಮಾಡಬೇಕ ಎಂದು ಜಿಲ್ಲಾಧಿಕಾರಿ ನಿತೇಶ್ ಪಾಟೀಲ ತಿಳಿಸಿದರು.

ಕಡ್ಡಾಯ ತಪಾಸಣೆಗೆ ನಿರ್ದೇಶನ:

ಭದ್ರತೆಗೆ ಸಂಬಂಧಿಸಿದಂತೆ ಕೂಡ ಮಾಹಿತಿಯನ್ನು ಪಡೆದುಕೊಂಡ ಜಿಲ್ಲಾಧಿಕಾರಿಗಳು, ಪ್ರತಿಯೊಬ್ಬರನ್ನು ಕಡ್ಡಾಯವಾಗಿ ತಪಾಸಣೆ ನಡೆಸಬೇಕು ಹಾಗೂ ಗುರುತಿನ ಚೀಟಿ ಪರಿಶೀಲಿಸಿ ಪ್ರವೇಶ ಕಲ್ಪಿಸಬೇಕು ಎಂದು ನಿರ್ದೇಶನ ನೀಡಿದರು.

ಯಾವುದೇ ರೀತಿಯ ಕೆಲಸಗಳನ್ನು ‌ಮಾಡುವಾಗ ಸಂಬಂಧಿಸಿದ ಇಲಾಖೆಯ ಅಧಿಕಾರಿಗಳ ಸಲಹೆ-ಸೂಚನೆಗಳನ್ನು ತಪ್ಪದೇ ಪಾಲಿಸಬೇಕು. ಯಾವುದೇ ರೀತಿಯ ಅಚಾತುರ್ಯ ಉಂಟಾದರೆ ಅವರನ್ನೇ ಹೊಣೆ ಮಾಡಲಾಗುವುದು ಎಂದು ಎಚ್ಚರಿಕೆಯನ್ನು ನೀಡಿದರು.

ಲೋಕೋಪಯೋಗಿ ಇಲಾಖೆಯ ಕಾರ್ಯನಿರ್ವಾಹಕ ಎಂಜಿನಿಯರ್ ಸಂಜೀವಕುಮಾರ್ ಹುಲಕಾಯಿ ಅವರು, ಸುವರ್ಣ ವಿಧಾನದೌಧದ ನಿರ್ವಹಣೆಯ ಕುರಿತು ಜಿಲ್ಲಾಧಿಕಾರಿಗಳಿಗೆ ವಿವರಿಸಿದರು

ಸಹಾಯಕ ಕಾರ್ಯನಿರ್ವಾಹಕ ಎಂಜಿನಿಯರ್ ಭೀಮಾ ನಾಯ್ಕ, ಪೊಲೀಸ್ ಅಧಿಕಾರಿಗಳು ಮತ್ತಿತರರು ಈ ಸಂದರ್ಭದಲ್ಲಿ ಉಪಸ್ಥಿತರಿದ್ದರು.
ಬಿಜೆಪಿ ಮುಖಂಡನ ಆತ್ಮಹತ್ಯೆ ಪ್ರಕರಣ; ಪೊಲೀಸ್ ಠಾಣೆ ಎದುರೇ ಆತ್ಮಹತ್ಯೆಗೆ ಯತ್ನಿಸಿದ ರೇಖಾ

ಪ್ರಗತಿವಾಹಿನಿ ಸುದ್ದಿಗಳನ್ನು ನಿಮ್ಮ ಸ್ನೇಹಿತರಿಗೆ, ಬೇರೆ ಗ್ರುಪ್ ಗಳಿಗೆ ಶೇರ್ ಮಾಡಿ

Related Articles

Back to top button