ಪ್ರಗತಿವಾಹಿನಿ ಸುದ್ದಿ, ಬೆಳಗಾವಿ: ಲಿಂಗತ್ವ ಮತ್ತು ಲೈಂಗಿಕ ಅಲ್ಪಸಂಖ್ಯಾತರನ್ನು ಬೆಳಕಿಗೆ ತರಲು ಮತ್ತು ಅವರ ವಿಮೋಚನೆಗಾಗಿ ನವೆಂಬರ್ 20 ರಂದು ಬೆಳಗಾವಿಯಲ್ಲಿ ಕರ್ನಾಟಕ ಸ್ವಾಭಿಮಾನಿ ನಡಿಗೆ ನಡೆಯಲಿದೆ ಎಂದು ಲಿಂಗತ್ವ ಮತ್ತು ಲೈಂಗಿಕ ಅಲ್ಪಸಂಖ್ಯಾತರ ಸಂಘಟನೆಯ ವೈಶಾಲಿ ಅವರು ತಿಳಿಸಿದರು.
ಕನ್ನಡ ಸಾಹಿತ್ಯ ಭವನದಲ್ಲಿ ಮಾಧ್ಯಮಗೋಷ್ಠಿ ನಡೆಸಿ ಮಾತನಾಡಿದ ಅವರು, ನ.20 ರಂದು ಬೆಳಗ್ಗೆ 11 ಗಂಟೆಗೆ ಸರ್ದಾರ್ ಕ್ರೀಡಾಂಗಣದಿಂದ ಸ್ವಾಭಿಮಾನಿ ನಡಿಗೆ ಆರಂಭವಾಗಲಿದೆ. ಬಳಿಕ ಕುಮಾರ ಗಂಧರ್ವ ರಂಗಮಂದಿರದಲ್ಲಿ ಸಾರ್ವಜನಿಕ ಸಭೆ ಇರಲಿದೆ ಎಂದರು.
ಜೂನ್ 29, 1969 ರಂದು, ಲಿಂಗತ್ವ ಮತ್ತು ಲೈಂಗಿಕ ಅಲ್ಪಸಂಖ್ಯಾತರು ಹೆಚ್ಚಾಗಿ ಬರುವ ಅಮೇರಿಕ ದೇಶದ ನ್ಯೂಯಾರ್ಕ್ ನಗರದ ಗ್ರೀನ್ವಿಚ್ ನಲ್ಲಿರುವ ಸ್ಪೋನ್ಸಾಲ್ ಇನ್ ಎನ್ನುವ ಬಾರ್ ಮೇಲೆ ಪೊಲೀಸರು ದಾಳಿ ನಡೆಸಿದರು. ಪೊಲೀಸರ ದಾಳಿಯಿಂದ ಕೆರಳಿ ಮತ್ತು ಪೊಲೀಸರ ಸದಾ ಕಿರುಕುಳದಿಂದ ಬೇಸತ್ತು, ಲಿಂಗತ್ವ ಮತ್ತು ಲೈಂಗಿಕ ಅಲ್ಪಸಂಖ್ಯಾತರು ಪೊಲೀಸ್ ದಾಳಿಯನ್ನು ಪ್ರಬಲವಾಗಿ ವಿರೋಧಿಸಿದರು, ಆ ಘಟನೆಯು ‘ಗಲಭೆ’ ಎಂದು ಕರೆಯಲ್ಪಟ್ಟಿತು. ಆದರೆ ವಿಶ್ವದಾದ್ಯಂತದ ಸಮುದಾಯದ ಹೆಚ್ಚಿನ ಭಾಗವು ಇದನ್ನು ‘ಗಲಭೆ’ ಎನ್ನಲು ನಿರಾಕರಿಸಿ ಇದನ್ನು ‘ದಂಗೆ’ಯ ದಿನವೆಂದು ಪರಿಗಣಿಸುತ್ತದೆ, ಏಕೆಂದರೆ ಸ್ಪೋನ್ಸಾಲ್ ಘಟನೆಯು ಅಂತರರಾಷ್ಟ್ರೀಯ ಮಟ್ಟದಲ್ಲಿ ಆಧುನಿಕ ಲಿಂಗತ್ವ ಮತ್ತು ಲೈಂಗಿಕ ಅಲ್ಪಸಂಖ್ಯಾತರ ಚಳುವಳಿಯ ಹುಟ್ಟು ಎಂದು ಪರಿಗಣಿಸಲ್ಪಟ್ಟಿದೆ. ಪ್ರತಿ ವರ್ಷ ಲಿಂಗತ್ವ ಮತ್ತು ಲೈಂಗಿಕ ಅಲ್ಪಸಂಖ್ಯಾತರು ಮತ್ತು ಅವರ ಬೆಂಬಲಿಗರು ಸ್ವಾಭಿಮಾನಿ ನಡಿಗೆ ಆಯೋಜಿಸುತ್ತಾರೆ ಎಂದು ತಿಳಿಸಿದರು.
ಪ್ರಗತಿವಾಹಿನಿ ಸುದ್ದಿಗಳನ್ನು ನಿಮ್ಮ ಸ್ನೇಹಿತರಿಗೆ, ಬೇರೆ ಗ್ರುಪ್ ಗಳಿಗೆ ಶೇರ್ ಮಾಡಿ