ಪ್ರಗತಿವಾಹಿನಿ ಸುದ್ದಿ, ಸಂಕೇಶ್ವರ : ಪ್ರತಿಯೊಬ್ಬರಿಗೂ ಹಸಿವು -ನೀರಡಿಕೆಯಾದರೆ ಹೇಗಾದರೂ ದಾಹ ನೀಗಿಸಿಕೊಳ್ಳುತ್ತೇವೆ. ಆದರೆ ಮೂಕ ಪ್ರಾಣಿ , ಪಕ್ಷಿಗಳಿಗೆ ಎಲ್ಲಿ ಸಿಗುತ್ತದೆಯೇ ಅಲ್ಲಿ ಹುಡುಕಾಡಿಕೊಂಡು ಹೋಗಬೇಕು. ಆಹಾರ-ಹನಿ ನೀರು ಸಿಗದಿದ್ದರೆ ಪಕ್ಷಿಗಳು ಅಲೆದಾಡುತ್ತವೆ. ಅವುಗಳ ಮೂಕವೇದನೆ ಗಮನಿಸಿ ಸ್ವಾಮೀಜಿಯೊಬ್ಬರು ನಿತ್ಯ ಪಾರಿವಾಳ -ಗುಬ್ಬಿಗಳಿಗೆ ಅಕ್ಕಿಕಾಳು ಹಾಕಿ, ನೀರಿನ ತೊಟ್ಟಿ ನಿರ್ಮಿಸಿ ಮಾನವೀಯತೆ ಮೆರೆಯುತ್ತಿದ್ದಾರೆ.
ಬೆಳಗಾವಿ ಜಿಲ್ಲೆ ಹುಕ್ಕೇರಿ ತಾಲೂಕಿನ ನಿಡಸೋಸಿ ಗ್ರಾಮದ ದುರದುಂಡೀಶ್ವರ ಸಿದ್ಧ ಸಂಸ್ಥಾನ ಮಠದ ಜಗದ್ಗುರು ಪಂಚಮ ಶಿವಲಿಂಗೇಶ್ವರ ಸ್ವಾಮೀಜಿ ನಿತ್ಯ ಆಹಾರ ಅರಸಿ ಬರುವ ನೂರಾರು ಪಾರಿವಾಳ ಹಾಗೂ ಗುಬ್ಬಿಗಳಿಗೆ ಆಹಾರ ಹಾಗೂ ನೀರಿಗಾಗಿಯೇ ಸ್ವಂತ ನೆಲೆಯೊಂದನ್ನು ನಿರ್ಮಿಸಿಕೊಟ್ಟಿದ್ದಾರೆ. ಪ್ರತಿ ದಿನ ಎರಡು ಬಾರಿ ಅಕ್ಕಿಕಾಳು ಹಾಗೂ ಇನ್ನಿತರ ಧಾನ್ಯಗಳನ್ನು ತಾವೇ ಸ್ವತಃ ನೀಡಿ ಪಕ್ಷಿಗಳ ಚಿಲಿಪಿಲಿ ಸದ್ದಿನಲ್ಲಿ ಸಂತೋಷ ಕಂಡುಕೊಳ್ಳುತ್ತಲಿದ್ದಾರೆ.
ಪಕ್ಷಿಗಳಗೆ ತುತ್ತು ಅನ್ನ, ಕಾಳುಕಡಿ, ನೀರು ಕೊಡುವ ಹವ್ಯಾಸವನ್ನು ಬೆಳೆಸಿಕೊಂಡಿರುವ ಸ್ವಾಮೀಜಿ ಕಳೆದ ೨೫ ವರ್ಷಗಳಿಂದಲೂ ಮಠದ ಮೇಲ್ಚಾವಣಿಯಲ್ಲಿ ಧಾನ್ಯಗಳನ್ನು ಹಾಕುತ್ತಾರೆ. ಕೆಳಭಾಗದಲ್ಲಿ ನೀರಿನ ತೊಟ್ಟಿ ನಿರ್ಮಿಸಿದ್ದಾರೆ.
ಸ್ವಾಮೀಜಿ ನಿತ್ಯದ ಧಾರ್ಮಿಕ ಕಾರ್ಯಗಳಲ್ಲಿ ತೊಡಗಿದರೆ ಮಠದಲ್ಲಿರುವ ಅವರ ಶಿಷ್ಯದಿಂದಿರು ಈ ಕಾರ್ಯ ಮಾಡುತ್ತಾರೆ. ನಿತ್ಯ ಕೆಲಸದ ಒತ್ತಡದ ಮಧ್ಯೆಯೂ ನೂರಾರು ಪಕ್ಷಿಗಳಿಗೆ ಪಾತ್ರೆಗಳಲ್ಲಿ ನೀರು ಹಾಕಿ, ಕಾಳು ಕಡಿ ಹಾಕಿದ ನಂತರವೇ ತಾವು ಉಪಹಾರ, ಊಟ ಮಾಡುವುದು ಎಂದು ಸ್ವಾಮೀಜಿ ಅಭಿಮಾನದಿಂದ ಹೇಳುತ್ತಾರೆ.
ಗುಬ್ಬಿ, ಪಾರಿವಾಳ ಸೇರಿದಂತೆ ಇನ್ನಿತರ ಪಕ್ಷಿಗಳಿಗೆ ಶ್ರೀಮಠವೇ ನೆಲೆಯಾಗಿಬಿಟ್ಟಿದ್ದು, ಇದಲ್ಲದೇ ಸುಮಾರು ನೂರು ಎಕರೆ ಶ್ರೀಮಠದ ಜಮೀನಿನಲ್ಲಿ ಗೋಶಾಲೆ ನಿರ್ಮಿಸಿ ಕಸಾಯಿಖಾನೆ ಸೇರುವ ನೂರಾರು ಗೋವುಗಳನ್ನು ಸಾಕಿ ಸಲಹುವ ಮೂಲಕ ತಮ್ಮ ಮಾತೃಹೃದಯವನ್ನು ತೋರ್ಪಡಿಸಿದ್ದಾರೆ.
ಬಿಸಿಲಿನ ಸಂದರ್ಭದಲ್ಲಿ ನಿಡಸೋಸಿ ಸುತ್ತಮುತ್ತಲಿನ ಪ್ರದೇಶದಲ್ಲಿ ವಾಸವಾಗಿರುವ ಪಕ್ಷಿಗಳು ನಿತ್ಯ ಮಠದ ಸುತ್ತಲೇ ಚಿಲಿ-ಪಿಲಿ ಸದ್ದು ಮಾಡುತ್ತವೆ. ಶ್ರೀಮಠದಲ್ಲಿ ಪ್ರತಿವರ್ಷ ಎರಡು ಬಾರಿ ಧ್ವಜಾರೋಹಣ ಮಾಡುತ್ತಿದ್ದು, ಗಣರಾಜ್ಯೋತ್ಸವ ಹಾಗೂ ಸ್ವಾತಂತ್ರ್ಯೋತ್ಸವ ಸಂದರ್ಭದಲ್ಲಿ ಧ್ವಜಾರೋಹಣ ನಂತರ ಸ್ವಾಮೀಜಿ ಪಾರಿವಾಳಗಳನ್ನು ಹಾರಿಬಿಡುತ್ತಾರೆ.
ಒಟ್ಟಾರೆಯಾಗಿ ಧಾರ್ಮಿಕ ಪರಂಪರೆಯಲ್ಲಿ ಬೆಳೆದು ಬಂದಿರುವ ಜಗದ್ಗುರು ಪಂಚಮ ಶಿವಲಿಂಗೇಶ್ವರ ಸ್ವಾಮೀಜಿ ಕಾರ್ಯ ಇನ್ನಿತರರ ಮಾದರಿಯಾಗಲಿ
ಪ್ರತಿಯೊಬ್ಬರು ತಮ್ಮ ಮಹಡಿ, ಮನೆ ಮೇಲ್ಭಾಗದಲ್ಲಿ ಪಾತ್ರೆಗಳಲ್ಲಿ ನೀರು ಹಾಕಿಟ್ಟರೆ ಪಕ್ಷಿಗಳಿಗೆ ಹನಿ ನೀರು ಕುಡಿಸಿ ಅಲ್ಪ ಸೇವೆ ಮಾಡಿದಂತಾಗುತ್ತದೆ. ಬಹಳಷ್ಟು ಜನರು ತಮ್ಮ ಬಿಡುವಿನ ವೇಳೆಯಲ್ಲಾದರೂ ಪಾತ್ರೆಯಲ್ಲಿ ನೀರು ಹಾಕಿಡುವ ಹವ್ಯಾಸ ಬೆಳೆಸಿಕೊಂಡರೇ ಪಕ್ಷಿ ಸಂಕುಲ ಜೀವಿಸಲು ಅವಕಾಶ ಮಾಡಿಕೊಟ್ಟಂತಾಗುತ್ತದೆ.
-ಜಗದ್ಗುರು ಪಂಚಮ ಶಿವಲಿಂಗೇಶ್ವರ ಸ್ವಾಮೀಜಿ, ನಿಡಸೋಸಿ
ಜಗದ್ಗುರುಗಳಿಗೆ ಪ್ರಾಣ -ಪಕ್ಷಿ ಎಂದರೇ ಎಲ್ಲಿಲ್ಲದ ಪ್ರೀತಿ, ಶ್ರೀಮಠದಲ್ಲಿ ಪೋಷಿಸುತ್ತಿರುವ ಜಾನುವಾರುಗಳ ಬಗೆಗೆ ಅತ್ಯಂತ ಕಾಳಜಿವಹಿಸುತ್ತಾರೆ. ಶ್ರೀಮಠದಲ್ಲಿದ್ದರೆ ಪಕ್ಷಿಗಳಿಗೆ ಕಾಳು ಹಾಕುತ್ತ ಅವುಗಳ ಚಿಲಿಪಿಲಿ ಸದ್ದಿನಲ್ಲಿ ಸಂತಸ ಪಡುತ್ತಾರೆ.
-ಸಾತಯ್ಯ ಕಮತೆ, ಶ್ರೀಗಳ ಆಪ್ತ ಸಹಾಯಕ
ಪ್ರಗತಿವಾಹಿನಿ ಸುದ್ದಿಗಳನ್ನು ನಿಮ್ಮ ಸ್ನೇಹಿತರಿಗೆ, ಬೇರೆ ಗ್ರುಪ್ ಗಳಿಗೆ ಶೇರ್ ಮಾಡಿ