
ಪ್ರಗತಿವಾಹಿನಿ ಸುದ್ದಿ: ಸೋಂದಾ ಸ್ವರ್ಣವಲ್ಲೀ ಮಹಾಸಂಸ್ಥಾನದ ಉಭಯ ಶ್ರೀಗಳ ಚಾತುರ್ಮಾಸ್ಯ ವ್ರತಾಚರಣೆ ಜುಲೈ 10ರಿಂದ ಸೆಪ್ಟೆಂಬರ್ 7ರ ತನಕ ನಡೆಯಲಿದೆ ಎಂದು ಮಠದ ಆಡಳಿತ ಮಂಡಳಿ ಅಧ್ಯಕ್ಷ ವಿ.ಎನ್.ಹೆಗಡೆ ಬೊಮ್ನಳ್ಳಿ ತಿಳಿಸಿದ್ದಾರೆ.
ಶ್ರೀಮಜ್ಜಗದ್ಗುರು ಶಂಕರಾಚಾರ್ಯ ಶ್ರೀಗಂಗಾಧರೇಂದ್ರ ಸರಸ್ವತೀ ಮಹಾಸ್ವಾಮೀಜಿಗಳು ಹಾಗೂ ಮಠದ ಕಿರಿಯ ಶ್ರೀಗಳಾದ ಶ್ರೀ ಆನಂದಬೋಧೇಂದ್ರ ಸರಸ್ವತೀ ಮಹಾಸ್ವಾಮೀಜಿಗಳು ವ್ಯಾಸ ಪೂಜೆ ನಡೆಸಿ ವ್ರತ ಸಂಕಲ್ಪಿಸಲಿದ್ದಾರೆ.
ಸಂಕಲ್ಪಿಸಲಿರುವ ಚಾತುರ್ಮಾಸ್ಯ ವ್ರತಾಚರಣೆಯ ಅಂಗವಾಗಿ ಶ್ರೀ ಮಠದಲ್ಲಿ ಋಗ್ವೇದ, ಕೃಷ್ಣಯಜುರ್ವೇದ, 18 ಪುರಾಣಗಳ ಪಾರಾಯಣವು ನಡೆಯಲಿದೆ. ಸಂಜೆ ೪:೩೦ಕ್ಕೆ ಉಭಯ ಶ್ರೀಗಳ ಸಾನ್ನಿಧ್ಯದಲ್ಲಿ ಧರ್ಮಸಭೆ ನಡೆಯಲಿದ್ದು, ಅತಿಥಿಗಳಾಗಿ ಕರ್ನಾಟಕ ಬ್ರಾಹ್ಮಣ ಮಹಾಸಭಾ ಅಧ್ಯಕ್ಷ ರಂಗನಾಥ ಎಸ್., ವಿಶ್ವ ರಾಮಕ್ಷತ್ರಿಯ ಮಹಾಸಭಾದ ಅಧ್ಯಕ್ಷ ಶಶಿಧರ ನಾಯ್ಕ ಭಾಗವಹಿಸಲಿದ್ದಾರೆ.
ನಿವೃತ್ತ ಪ್ರಾಚಾರ್ಯ ಕೆ.ಎನ್.ಹೊಸ್ಮನಿ, ಸಿಬಿಐ ನಿವೃತ್ತ ಅಧಿಕಾರಿ ಶಿವಾನಂದ ದೀಕ್ಷಿತ ಅವರನ್ನು ಶ್ರೀಗಳು ಗೌರವಿಸಲಿದ್ದಾರೆ. ಇದೇ ವೇಳೆ ಬೃಹತ್ ಗಂಗಾಧರೇಂದ್ರ ಸರಸ್ವತೀ ಮಹಾಸ್ವಾಮೀಜಿಗಳು ಅಂದು ಬರೆದಿದ್ದ ವೇದಾಂತಸಿದ್ಧಾಂತಸೂಕ್ತಿಮರಿ ಗ್ರಂಥದ ಕನ್ನಡ ಅನುವಾದದ ಕೃತಿ ಬಿಡುಗಡೆ ಆಗಲಿದೆ. ಶಿಷ್ಯ ಭಕ್ತರು ಚಾತುರ್ಮಾಸ್ಯದಲ್ಲಿ ಮಠಕ್ಕೆ ಆಗಮಿಸಿ ಶ್ರೀಗಳ ಸೇವೆ ಸಲ್ಲಿಸಲು ಪ್ರಕಟನೆಯಲ್ಲಿ ಕೋರಿದ್ದಾರೆ.