
ಪ್ರಗತಿವಾಹಿನಿ ಸುದ್ದಿ, ಸಾಂಗಲಿ (ಮಹಾರಾಷ್ಟ್ರ) : ನೆರೆಯ ರಾಜ್ಯ ಕರ್ನಾಟಕದೊಂದಿಗೆ ಸಮನ್ವಯದ ಕೊರತೆಯಿಂದ ರಾಜ್ಯ ಮಳೆ, ನೆರೆಯಿಂದ ಕಳೆದ ವರುಷ ತೊಂದರೆಗೊಳಗಾಯಿತು, ಈ ಬಾರಿ ಆ ಸ್ಥಿತಿ ಮರುಕಳಿಸಬಾರದಿದ್ದರೆ ಆ ರಾಜ್ಯದೊಂದಿಗೆ ಮುಂಗಾರು ಪೂರ್ವ ಸಮನ್ವಯ ಅಗತ್ಯವೆಂದು ಆ ರಾಜ್ಯದ ಉನ್ನತಾಧಿಕಾರಿಗಳು ವರದಿ ನೀಡಿರುವ ಹಿನ್ನೆಲೆಯಲ್ಲಿ, ಮಹಾರಾಷ್ಟ್ರ ರಾಜ್ಯದೊಂದಿಗೆ ಚರ್ಚೆಗೆ ಮುಂದಾಗಿದೆ.
ಮಹಾರಾಷ್ಟ್ರದ ಉನ್ನತ ಅಧಿಕಾರಿಗಳು ಆ ರಾಜ್ಯದ ಪ್ರವಾಹ ಪೀಡಿತ ಸ್ಥಳಗಳಿಗೆ, ನದಿಪಾತ್ರದ ಸ್ಥಳಗಳಿಗೆ ಹಲವಾರು ಸಲ ಭೇಟಿ ನೀಡಿ, ಅಭ್ಯಸಿಸಿ “ನೆರೆಯ ಕರ್ನಾಟಕದೊಂದಿಗೆ ಸಮನ್ವಯ ಸಾಧಿಸಿದರೆ ಮಾತ್ರ ಈ ಬಾರಿ ಪ್ರವಾಹದ ಸಮಸ್ಯೆ ಉಂಟಾಗಲಾರದು. ರಾಜ್ಯದ ಜಲಾಶಯಗಳಿಂದ ನದಿಗಳಿಗೆ ನೀರು ಬಿಡುವದಕ್ಕೆ ಮೊದಲು ಕರ್ನಾಟಕಕ್ಕೆ ಮಾಹಿತಿ ನೀಡಿದರೆ ಅದು ತನ್ನ ಜಲಾಶಯಗಳ ಮಟ್ಟ ಕಾಪಾಡಿಕೊಂಡು, ರಾಜ್ಯದಲ್ಲಿ ಪ್ರವಾಹ ಉಂಟಾಗದಂತೆ ಕ್ರಮ ಕೈಕೊಳ್ಳುವದು”, ಎಂಬ ವರದಿ ನೀಡಿರುವ ಹಿನ್ನಲೆಯಲ್ಲಿ ಮಹಾರಾಷ್ಟ್ರ ಕೊಲ್ಲಾಪುರ ಜಿಲ್ಲಾಧಿಕಾರಿಗಳ ಕಚೇರಿಯಲ್ಲಿ ಭಾನುವಾರ ಸಭೆ ನಡಿಸಿತು.
ಈ ಬಾರಿ ಕಳೆದ ಸಲದಂತಹ ಪ್ರವಾಹ ಉಂಟಾದರೆ ಹೇಗೆ ಎದುರಿಸುವದೆಂದು ಪ್ರವಾಹ ಪೀಡಿತ ಸ್ಥಳಗಳ ಪರಿಶೀಲನೆ ನಡಿಸಿ, ನೆರೆಯ ಕರ್ನಾಟಕದೊಂದಿಗೆ ಸಮನ್ವಯದಿಂದ ಇದು ಸಾಧ್ಯವೆಂದು ವರದಿ ಸಲ್ಲಿಸಿದ್ದರಿಂದ, ಭಾನುವಾರ ಕೊಲ್ಲಾಪುರ ಜಿಲ್ಲಾಧಿಕಾರಿ ಕಚೇರಿಯಲ್ಲಿ ಸಭೆ ನಡಿಸಿ, ಯೋಜನೆಯನ್ನು ರೂಪಿಸಿದೆ. ಅದರಂತೆ ಮಹಾರಾಷ್ಟ್ರದ ನೀರಾವರಿ ಸಚಿವ ಜಯಂತ್ ಪಾಟೀಲ ಕರ್ನಾಟಕದ ನೀರಾವರಿ ಮಂತ್ರಿ ರಮೇಶ ಜಾರಕಿಹೊಳಿಯವರೊಂದಿಗೆ ಬರುವ ವಾರ ಕೊಲ್ಲಾಪುರದಲ್ಲಿ ಚರ್ಚಿಸಲಿದ್ದು, ಜೂಲೈ ಮೊದಲನೆಯ ವಾರ ಮಹಾರಾಷ್ಟ್ರದ ಮುಖ್ಯಮಂತ್ರಿ ಉದ್ಧವ್ ಠಾಕ್ರೆ, ರಾಜ್ಯದ ಮುಖ್ಯಮಂತ್ರಿ ಯಡಿಯೂರಪ್ಪ ಅವರನ್ನು ಮುಂಬೈ ಅಥವಾ ಬೆಂಗಳೂರಿನಲ್ಲಿ ಭೆಟ್ಟಿಯಾಗಲಿದ್ದಾರೆ.
ಕಳೆದ ಮಳೆಗಾಲದಲ್ಲಿ ರಾಜ್ಯ ತೀವ್ರವಾದ ಪ್ರವಾಹಕೊಳ್ಳಗಾಗಿತ್ತು, ಮಹಾರಾಷ್ಟ್ರದ ದಕ್ಷಿಣ ಪ್ರಾಂತ್ಯದ ಕೊಲ್ಲಾಪುರ, ಸಾಂಗ್ಲಿ, ಸತಾರ, ಕರಾಡ ಮುಂತಾದ ಜಿಲ್ಲೆಗಳು ತೀವ್ರವಾಗಿ ಭಾದಿತವಾಗಿದ್ದವು, ನದಿ ದಂಡೆಯ ಜನರಲ್ಲದೆ ನಗರ ಪ್ರದೇಶಗಳ ಜನರನ್ನೂ ದೋಣಿಗಳ ಮೂಲಕ ಸುರಕ್ಷಿತ ಸ್ಥಳಗಳಿಗೆ ಸ್ಥಳಾಂತರಿಸಲಾಗಿತ್ತು.
ನೂರಾರು ಜನ ಪ್ರಾಣ ಕಳೆದು ಕೊಂಡು, ಸಾವಿರಾರು ಜಾನುವಾರುಗಳು ಅಸುನೀಗಿ, ಕೋಟ್ಯಂತರ ರೂಪಾಯಿಗಳ ಆಸ್ತಿ, ಬೆಳೆದ ಬೆಳೆ ಹಾನಿಗೊಳಗಾಗಿ ಚೇತರಿಸಿಕೊಳ್ಳದ ಸಂಕಷ್ಟಕ್ಕೆ ಕರ್ನಾಟಕ ಹಾಗು ಮಹಾರಾಷ್ಟ್ರಗಳು ಈಡಾಗಿದ್ದವು.