ಪ್ರಗತಿವಾಹಿನಿ ಸುದ್ದಿ, ಗೋಕಾಕ:
ನಗರದ ವಿವಿಧ ಪ್ರದೇಶಗಳಲ್ಲಿ ಟ್ರಾಫಿಕ್ ಸಮಸ್ಯೆ ಹೆಚ್ಚುತ್ತಿರುವ ಹಿನ್ನೆಲೆಯಲ್ಲಿ ಸ್ಥಳೀಯ ಪೊಲೀಸ್ ಅಧಿಕಾರಿಗಳು ಕಾರ್ಯಾಚರಣೆ ನಡೆಸಿ, ಮನಸೋ ಇಚ್ಛೆ ಪಾರ್ಕ್ ಮಾಡಿದ ವಾಹನಗಳನ್ನು ಎತ್ತೊಯ್ಯುತ್ತಿದ್ದಾರೆ.
ಡಿವೈಎಸ್‌ಪಿ ಡಿ ಟಿ ಪ್ರಭು ಅವರ ಮಾರ್ಗದರ್ಶನದಲ್ಲಿ ಕಳೆದ ಮೂರು ದಿನಗಳಿಂದ ಕಾರ್ಯಾಚರಣೆಯಲ್ಲಿ ತೋಡಗಿರುವ ಪೊಲೀಸ್ ರು ವಿವಿದೆಢೆ ಅಡ್ಡಾದಿಡ್ಡಿಯಾಗಿ ರಸ್ತೆಯ ಮೇಲೆ ಪಾರ್ಕಿಂಗ್ ಮಾಡುತ್ತಿದ್ದ ಬೈಕ್, ವಾಹನಗಳನ್ನು ಎತ್ತೊಯ್ಯುತ್ತಿದ್ದಾರೆ. ತನ್ಮೂಲಕ ಟ್ರಾಫಿಕ್ ಸಮಸ್ಯೆ ಬಗೆಹರಿಸಲು ಇಲಾಖೆ ಮುಂದಾಗಿದೆ.
ನಗರ ಠಾಣೆಯ ಪಿಎಸ್‌ಐ ಶ್ರೀಶೈಲ್ ಬ್ಯಾಕೂಡ ನೇತೃತ್ವದಲ್ಲಿ ಎಎಸ್‌ಐ ಬಿ ಸಿ ಕಿಚಡಿ, ಅಶೋಕ ಶಾಂಡಗೆ, ಹನಮಂತ ಗೌಡಿ, ಎಮ್ ಎಸ್ ದೇಶನೂರ, ಬಸವರಾಜ ಸುಣಗಾರ, ಮಹಾಂತೇಶ ಮನ್ನಿಕೇರಿ, ಸಚೀನ ಹೊಳೆಪ್ಪಗೋಳ, ಉದಯ ಪೂಜೇರಿ ಸೇರಿದಂತೆ ಹತ್ತಕ್ಕೂ ಹೆಚ್ಚು ಪೊಲೀಸ್ ಸಿಬ್ಬಂದಿ ಕಾರ್ಯಾಚರಣೆಯಲ್ಲಿ ತೊಡಗಿ ಇಲ್ಲಿಯ ಬಸ್ ನಿಲ್ದಾಣ, ಬಸವೇಶ್ವರ ವೃತ್ತ, ಸ್ಟೇಟ್ ಬ್ಯಾಂಕ್ ಹತ್ತಿರ, ಡಿಎಸ್‌ಪಿ ಕಾರ್ಯಾಲಯ, ಲಕ್ಷ್ಮೀ ಚಿತ್ರ ಮಂದಿರ ಸೇರಿದಂತೆ ವಿವಿಧ ಪ್ರದೇಶಗಳಲ್ಲಿ ಅಡ್ಡಾ ದಿಡ್ಡಿಯಾಗಿ ನಿಲ್ಲಿಸಿರುವ ೫೦ಕ್ಕೂ ಹೆಚ್ಚು ಬೈಕ್, ೧೦ಕ್ಕೂ ಹೆಚ್ಚು ನಾಲ್ಕು ಚಕ್ರದ ವಾಹನ ಸೇರಿದಂತೆ ವಿವಿಧ ವಾಹನಗಳಿಗೆ ದಂಡ ವಸೂಲಿ ಮಾಡಿ ಎಚ್ಚರಿಕೆ ನೀಡಿದ್ದಾರೆ.
ಬೈಕ್ ಸವಾರರಿಗೆ ರಸ್ತೆ ನಿಯಮಗಳನ್ನು ತಿಳಿಹೇಳಿ, ರಸ್ತೆ ಬದಿಯಲ್ಲಿ ವಾಹನಗಳನ್ನು ಅಡ್ಡಾ ದಿಡ್ಡಿಯಾಗಿ ನಿಲ್ಲಿಸದಂತೆ ತಿಳುವಳಿಕೆ ನೀಡಿ, ಜೊತೆಗೆ ದಾಖಲೆಪತ್ರಗಳನ್ನು ಇಟ್ಟುಕೊಳ್ಳಬೇಕೆಂದು ಮನವಿ ಮಾಡಿದ್ದಾರೆ. ಟ್ರಾಫಿಕ್ ಸಮಸ್ಯೆ ಹತೋಟಿಗೆ ತರುವ ನಿಟ್ಟಿನಲ್ಲಿ ಈ ಕಾರ್ಯಾಚರಣೆಯನ್ನು ಪ್ರತಿದಿನ ಮುಂದುವರೆಸುವುದಾಗಿ ಪಿಎಸ್‌ಐ ಶ್ರೀಶೈಲ ಬ್ಯಾಕೂಡ ತಿಳಿಸಿದ್ದಾರೆ.