ಪ್ರಗತಿವಾಹಿನಿ ಸುದ್ದಿ, ಬಡೇಕೊಳ್ಳಮಠ:
ತಾಲೂಕಿನ ಪಾವನಕ್ಷೇತ್ರ ಬಡೇಕೊಳ್ಳಮಠದ ಸದ್ಗುರು ನಾಗೇಂದ್ರ ಮಹಾಸ್ವಾಮಿಜಿಯವರ ಮಹಾಶಿವರಾತ್ರಿ ಜಾತ್ರೆಯು ಪ್ರತಿ ವರ್ಷದಂತೆ ಐದು ದಿನಗಳ ಕಾಲ ವಿವಿಧ ಕಾರ್ಯಕ್ರಮಗಳೊಂದಿಗೆ ಮಾ.೩ ರಿಂದ ೭ರವರೆಗೆ ಜರುಗಲಿದೆ.
ಮಾ.೩ ರಂದು ಸಂಜೆ ೫ಕ್ಕೆ ಶಿವಯೋಗಿ ನಾಗೇಂದ್ರ ಮಹಾಸ್ವಾಮಿಜಿಗಳ ಸಂತಿಬಸ್ತವಾಡದ ಬಸವೇಶ್ವರ ದೇವಸ್ಥಾನದಿಂದ ಬರುವ ಧ್ವ್ವಜ, ಶಿಂದೂಳ್ಳಿಯ ರಾಮಲಿಂಗೇಶ್ವರ ದೇವಸ್ಥಾನದಿಂದ ಬಸವಗುರು ಸೇವಾ ಭಜನಾ ಸಂಘದ ನೇತೃತ್ವದಲ್ಲಿ ತರುವ ದ್ವಜ ಸೂತ್ರಗಳಿಂದ ಸದ್ಗುರು ನಾಗೇಂದ್ರ ಶಿವಯೋಗಿಗಳವರ ಮಠದ ಪರಂಪರೆಯ ಧರ್ಮಲಾಂಛನ ದ್ಯೋತಕವಾದ ದ್ವಜಾರೋಹಣದೊಂದಿಗೆ ಜಾತ್ರೆ ಆರಂಭವಾಗಲಿದೆ.
ಮಾ.೪ ರಂದು ವಿಶ್ವಶಾಂತಿಗಾಗಿ ಶ್ರೀಮಠದಲ್ಲಿ ಮಹಾರುದ್ರಾಭಿಷೇಕ, ನಂತರ ಬೆಳಗ್ಗೆ ೯.೩೦ಕ್ಕೆ ಕಲ್ಲಯ್ಯ ಶಾಸ್ತ್ರಿಗಳು ಉದೇಶಿಮಠ, ಹಿರೇಬಾಗೇವಾಡಿ ಹಾಗೂ ಸಂಗಡಿಗರ ನೇತೃತ್ವದಲ್ಲಿ ಹೋಮ, ಸಂಜೆ ೪ಕ್ಕೆ ತಾರಿಹಾಳ ಗ್ರಾಮದ ರಾಮಲಿಂಗೇಶ್ವರ ದೇವಸ್ಥಾನದಿಂದ ಆಗಮಿಸುವ ಪಲ್ಲಕ್ಕಿ ಬರಮಾಡಿಕೊಳ್ಳಲಾಗುವುದು. ಸಂಜೆ ೭.೧೫ಕ್ಕೆ ಕೀರ್ತನೆ ಹಾಗೂ ರಾತ್ರಿ ನಾಟಕಗಳ ಪ್ರದರ್ಶನವಿದೆ.
ಮಾ.೫ ರಂದು ೧೧.೩೦ ರಿಂದ ಶ್ರೀಗಳ ಪಾದಪೂಜೆ, ಮಧ್ಯಾಹ್ನ ೧ಕ್ಕೆ ರಥೋತ್ಸವ, ೨.೩೦ಕ್ಕೆ ಮಹಾಪ್ರಸಾದ, ಸಂಜೆ ೪ಕ್ಕೆ ಯರಮಳ್ಳಿಯ ಬಲಭೀಮ ಯುವಕ ಮಂಡಳ ವತಿಯಿಂದ ಸೈಕಲ್ ವೃತ್ತಾಕಾರ ಚಲನೆಯ ಸ್ಪರ್ಧೆ, ಸಂಜೆ ೬-೩೦ಕ್ಕೆ ಹಿರೇಬಾಗೇವಾಡಿ ಶಾಲಾ ಮಕ್ಕಳಿಂದ ವಿವಿಧ ಸಾಂಸ್ಕೃತಿಕ ಕಾರ್ಯಕ್ರಮಗಳು ನಡೆಯಲಿವೆ.
ಮಾ.೬ ರಂದು ಬೆಳಗ್ಗೆ ಭಜನಾ ಕಾರ್ಯಕ್ರಮ, ಮಧ್ಯಾಹ್ನ ಕುಸ್ತಿ ಸ್ಪರ್ಧೆ, ಸಂಜೆ ಸಂಗೀತ ಕಾರ್ಯಕ್ರಮ, ರಾತ್ರಿ ೧೧ಕ್ಕೆ ನಾಟಕ ಪ್ರದರ್ಶನ ನಡೆಯಲಿವೆ.
ಮಾ.೭ ರಂದು ಬೆಳಗ್ಗೆ ೧೦.೩೦ಕ್ಕೆ ಪಲ್ಲಕ್ಕಿ ಬೀಳ್ಕೊಡುವ ಸಮಾರಂಭ ಹಾಗೂ ಸಂಜೆ ೪ಕ್ಕೆ ಧ್ವಜಾರೋಹಣದೊಂದಿಗೆ ಜಾತ್ರೆ ಮುಕ್ತಾಯವಾಗಲಿದೆ ಎಂದು ಬಡೇಕೊಳ್ಳಮಠದ ನಾಗಯ್ಯ ಸ್ವಾಮಿಜಿ ಪ್ರಕಟಣೆಯಲ್ಲಿ ತಿಳಿಸಿದ್ದಾರೆ.