ಪ್ರಗತಿವಾಹಿನಿ ಸುದ್ದಿ, ಬೆಳಗಾವಿ:
ನಗರದ ಕೆಎಲ್‌ಇ ಸಂಸ್ಥೆಯ ರಾಜಾ ಲಖಮಗೌಡ ವಿಜ್ಞಾನ ಮಹಾವಿದ್ಯಾಲಯದ (ಸ್ವಾಯತ್ತ) ಎನ್ನೆಸ್ಸೆಸ್ ಘಟಕದ ವಿಶೇಷ ವಾರ್ಷಿಕ ಶಿಬಿರದ ಸಮಾರೋಪ ಸಮಾರಂಭ ಜರುಗಿತು.
ಮುಖ್ಯ ಅತಿಥಿ ಆರ್.ಎಲ್. ವಿಜ್ಞಾನ ಮಹಾವಿದ್ಯಾಲಯದ ಸಂಖ್ಯಾಶಾಸ್ತ್ರ ವಿಭಾಗದ ಮುಖ್ಯಸ್ಥ ಪ್ರೊ. ಸಿ.ಎಂ. ಮಠ ಮಾತನಾಡಿ, ಎನ್ನೆಸ್ಸೆಸ್ ಶಿಬಿರ ಕೇವಲ ಗ್ರಾಮದ ಸ್ವಚ್ಛತೆಗೆ ಸೀಮಿತವಲ್ಲ. ಗ್ರಾಮದ ಜನರಿಗೆ ಸಾಮಾಜಿಕ ಮೌಢ್ಯಗಳ ಅರಿವು ಮೂಡಿಸುವ ವಿಶೇಷ ಕಾರ್ಯಕ್ರಮವಾಗಬೇಕು. ಗ್ರಾಮೀಣ ಜನರೊಂದಿಗೆ ಭಾವನಾತ್ಮಕವಾಗಿ ಸ್ಪಂದಿಸಬೇಕು ಎಂದು ಹೇಳಿದರು.
ಮಾಜಿ ಗ್ರಾಪಂ ಅಧ್ಯಕ್ಷ ನಾಗೇಂದ್ರ ಧರ್ಮೋಜಿ ಮಾತನಾಡಿ, ಮುಂದಿನ ವಿಶೇಷ ವಾರ್ಷಿಕ ಶಿಬಿರಕ್ಕೆ ಮತ್ತೆ ನಮ್ಮ ಗ್ರಾಮಕ್ಕೆ ಆಗಮಿಸಿದರೆ ಪ್ರಾಂಜಲ ಮನಸ್ಸಿನಿಂದ ಸ್ವಾಗತಿಸುತ್ತೇವೆ ಎಂದರು.
ಮಹಾಲಕ್ಷ್ಮಿ ಹಾಗೂ ಸಂಗಡಿಗರು ಎನ್ನೆಸ್ಸೆಸ್ ಗೀತೆ ಹಾಡಿದರು. ಸೌಮ್ಯಾ ಸ್ವಾಗತಿಸಿದರು. ನೇಹಾ ಪಾಟೀಲ ವಂದಿಸಿದರು. ಶಿಲ್ಪಾ ರುದ್ರನ್ನವರ ನಿರೂಪಿಸಿದರು. ಡಾ. ಎಸ್.ಎನ್. ಬನಸೋಡೆ, ಎಸ್.ಎಸ್. ಪಾಟೀಲ, ಸಂಯೋಜನಾಧಿಕಾರಿ ಪ್ರೊ. ಎಸ್.ಎಸ್. ಅಬ್ಬಾಯಿ ಹಾಗೂ ಗ್ರಾಮಸ್ಥರು, ಸ್ವಯಂ ಸೇವಕರು ಉಪಸ್ಥಿತರಿದ್ದರು.