
ಪ್ರಗತಿವಾಹಿನಿ ಸುದ್ದಿ; ನವದೆಹಲಿ: ದೇಶಾದ್ಯಂತ ಈಗಾಗಲೇ ಕೊರೊನಾ ಸೋಂಕು ಅಟ್ಟಹಾಸ ಮುಂದುವರೆಸುದೆ. ಇದೀಗ ನವೆಂಬರ್ ವೇಳೆಗೆ ಸೋಂಕು ಇನ್ನಷ್ಟು ತಾರಕಕ್ಕೇರಲಿದೆ ಎಂದು ಎಂಬ ಮಾಹಿತಿಯೊಂದು ಹೊರಬಿದ್ದಿದೆ.
ನವೆಂಬರ್ ಮಧ್ಯ ಭಾಗದಲ್ಲಿ ಕೊರೋನಾ ಸಮಸ್ಯೆ ತಾರರಕ್ಕೇರಲಿದೆ ಎಂದು ಭಾರತದ ಪ್ರತಿಷ್ಠಿತ ವೈದ್ಯಕೀಯ ಸಂಸ್ಥೆಯಾದ ಇಂಡಿಯನ್ ಕೌನ್ಸಿಲ್ ಆಫ್ ಮೆಡಿಕಲ್ ರಿಸರ್ಚ್ (ಐಸಿಎಂಆರ್) ಭವಿಷ್ಯ ನುಡಿದಿದೆ.
ಕೊರೋನಾ ಸಮಸ್ಯೆ ಅರಿಯಲೆಂದು ಇಂಡಿಯನ್ ಕೌನ್ಸಿಲ್ ಆಫ್ ಮೆಡಿಕಲ್ ರಿಸರ್ಚ್ ರಚಿಸಿದ್ದ ಕಾರ್ಯಾಚರಣೆ ಸಂಶೋಧನಾ ಗುಂಪು ಸಂಶೋಧನೆ ನಡೆಸಿ ಈ ವರದಿ ಸಲ್ಲಿಸಿದೆ. ಸದ್ಯ ಈಗ 10 ಸಾವಿರಕ್ಕೂ ಹೆಚ್ಚು ಪ್ರಕರಣಗಳು ಪ್ರತಿದಿನ ದಾಖಲಾಗುತ್ತಿದೆ. ಮುಂದೆ ಸೋಂಕಿತರ ಸಂಖ್ಯೆ ಮತ್ತಷ್ಟು ಹೆಚ್ಚಾಗಲಿದೆ. ಲಾಕ್‌ಡೌನ್ ಘೋಷಣೆಯಿಂದಾಗಿ ಸೋಂಕು ಹರಡುವ ವೇಗ ಇಳಿಕೆಯಾಗಿದೆ.
ಭಾರತದಲ್ಲಿ ಜುಲೈ ವೇಳೆಗೆ ಸೋಂಕಿತರ ಸಂಖ್ಯೆ ಗರಿಷ್ಠ ಮಟ್ಟ ತಲುಪಬೇಕಿತ್ತು. ಆದರೆ 8 ವಾರಗಳ ಲಾಕ್‌ಡೌನ್ ಘೋಷಣೆಯಿಂದಾಗಿ ಸೋಂಕು ಗರಿಷ್ಠ ಮಟ್ಟಕ್ಕೆ ಹೋಗುವುದು 34ರಿಂದ 76 ದಿನಗಳಷ್ಟು ಮುಂದಕ್ಕೆ ಹೋಗಿದೆ. ಮುಂದಕ್ಕೆ ಹೋಗಿರುವ ಕಾರಣ ಅಗತ್ಯ ವೈದ್ಯಕೀಯ ಮೂಲಸೌಕರ್ಯಗಳನ್ನು ಹೆಚ್ಚಿಸಿಕೊಳ್ಳಲು ಸಮಯ ಸಿಕ್ಕಿದಂತಾಗಿದೆ. ಲಾಕ್‌ಡೌನ್‌ನಿಂದಾಗಿ ಸೋಂಕಿತರ ಸಂಖ್ಯೆ ಶೇ.69ರಿಂದ ಶೇ.97ರಷ್ಟು ಕಡಿಮೆಯಾಗಿದೆ. ಗರಿಷ್ಠ ಮಟ್ಟ ತಲುಪುವ ಸಂದರ್ಭದಲ್ಲಿ ತೀವ್ರ ನಿಗಾ ಘಟಕ(ಐಸಿಯು), ವೆಂಟಿಲೇಟರ್, ಐಸೋಲೇಷನ್ ಹಾಸಿಗೆಗಳ ಕೊರತೆ ಕಾಡಬಹುದು. ಹೀಗಾಗಿ ಲಸಿಕೆ ಬರುವವರೆಗೂ ಸೋಂಕಿತರ ಪತ್ತೆ, ತಪಾಸಣೆ, ಕ್ವಾರಂಟೈನ್, ಐಸೊಲೇಷನ್ ಮಾಡುತ್ತಲೇ ಇರಬೇಕು ಎಂದು ಎಂದು ತಿಳಿಸಿದೆ.
17 ವರ್ಗದ ಜನರನ್ನು ಹೈ ರಿಸ್ಕ್ ಜನರೆಂದು ಐಸಿಎಂಆರ್ ಹೇಳಿದ್ದು ಅವರನ್ನು ತಪಸಾಣೆಗೆ ಒಳಪಡಿಸಿ ಎಂದು ಐಸಿಎಂಆರ್ ರಾಜ್ಯ ಸರ್ಕಾರಗಳಿಗೆ ತಿಳಿಸಿದೆ. ಎಚ್‌ಐವಿ, ಉಸಿರಾಟ ತೊಂದರೆ, ಕ್ಷಯ, ಡಯಾಲಿಸಿಸ್ ಮಾಡಿಸಿಕೊಳ್ಳುವ ರೋಗಿಗಳು, ಕಂಟೈನ್ಮೆಂಟ್ ವಲಯದಲ್ಲಿರುವ ಪ್ರತಿಯೊಬ್ಬ ವ್ಯಕ್ತಿ, ವೈದ್ಯಕೀಯ ಸಿಬ್ಬಂದಿ, ಭದ್ರತಾ ಸಿಬ್ಬಂದಿ, ಮಾಧ್ಯಮದ ವರದಿಗಾರರು, ಛಾಯಾಗ್ರಾಹಕರು, ಪೊಲೀಸರು, ನಗರದಿಂದ ವಲಸೆ ಬಂದ ಗ್ರಾಮೀಣ ಜನ, ಮಾರುಕಟ್ಟೆಗೆ ಭೇಟಿ ನೀಡುತ್ತಿರುವ ರೈತರು, ವ್ಯಾಪಾರಿಗಳು, ಚಾಲಕರು, ಸ್ಥಳೀಯ ಸಂಸ್ಥೆಗಳ ಸಿಬ್ಬಂದಿ, ಬ್ಯಾಂಕ್, ಅಂಚೆ, ದೂರವಾಣಿ ಸಿಬ್ಬಂದಿ, ವಿಮಾನಯಾನ ಸಿಬ್ಬಂದಿ, ವೃದ್ಧಾಶ್ರಮ, ಅನಾಥಶ್ರಮಗಳಲ್ಲಿರುವ ಸಿಬ್ಬಂದಿ, ಜೈಲಿನಲ್ಲಿರುವ ಕೈದಿಗಳನ್ನು ಸಮೀಕ್ಷೆ ನಡೆಸುವಂತೆ ಸೂಚಿಸಿದೆ.