ಬಿಜೆಪಿ ನಾಯಕರು ರಾವಣನ ಮಕ್ಕಳು ಎಂದ ಕಾಂಗ್ರೆಸ್ ನಾಯಕ

ಪ್ರಗತಿವಾಹಿನಿ ಸುದ್ದಿ; ನವದೆಹಲಿ: ರಾಷ್ಟ್ರಪಿತ ಮಹಾತ್ಮ ಗಾಂಧೀಜಿ ನಡೆಸಿದ್ದ ಸ್ವಾತಂತ್ರ್ಯ ಚಳುವಳಿ ಒಂದು ನಾಟಕ ಎಂದು ಹೊಸ ವಿವಾದ ಸೃಷ್ಟಿಸಿದ್ದ ಸಂಸದ ಅನಂತ ಕುಮಾರ್ ಹೆಗಡೆ ಹೇಳಿಕೆ ಸಂಸತ್ ನಲ್ಲಿ ಪ್ರತಿಧ್ವನಿಸಿದೆ. ಗಾಂಧೀಜಿ ಬಗ್ಗೆ ವಿವಾದಾತ್ಮಕ ಹೇಳಿಕೆ ನೀಡಿರುವ ಅನಂತ ಕುಮಾರ್​ ಹೆಗಡೆ ಕ್ಷಮೆಯಾಚಿಸಬೇಕು ಎಂದು ವಿಪಕ್ಷಗಳು ಪಟ್ಟು ಹಿಡಿದಿವೆ.

ಲೋಕಸಭೆಯಲ್ಲಿ ಮಾತನಾಡಿದ ಕಾಂಗ್ರೆಸ್​ ಹಿರಿಯ ನಾಯಕ ಅಧೀರ್​ ರಂಜನ್​ ಚೌಧರಿ, ರಾಮ ಭಕ್ತ ಗಾಂಧೀಜಿಯನ್ನು ಅವಮಾನಿಸುವ ಬಿಜೆಪಿ ನಾಯಕರು ರಾವಣನ ಮಕ್ಕಳು ಎಂದು ಆಕ್ರೋಶ ವ್ಯಕ್ತಪಡಿಸಿದರು. ರಾಷ್ಟ್ರಪಿತನ ಬಗ್ಗೆ ಅವಹೇಳನಕಾರಿ ಹೇಳಿಕೆ ನೀಡಿರುವ ಸಂಸದ ಹೆಗಡೆ ಬೇಷರತ್ ಆಗಿ ಕ್ಷಮೆ ಕೋರಬೇಕು ಎಂದು ಆಗ್ರಹಿಸಿದರು.

Home add -Advt

ಇದೇ ವೇಳೆ ಬಿಜೆಪಿ ಸಂಸದರು ಪದೇ ಪದೇ ಗೋಡ್ಸೆ ಪರವಾಗಿ ಹೇಳಿಕೆ ನೀಡುತ್ತಾರೆ. ಬಿಜೆಪಿ ನಾಯಕರು ಗಾಂಧಿಜೀ ಪರವಾಗಿದ್ದೀರಾ ಅಥವಾ ಗೋಡ್ಸೆ ಜೊತೆಗಿದ್ದೀರಾ ಎಂಬುದನ್ನು ಸ್ಪಷ್ಟಪಡಿಸಿ ಎಂದು ಸಂಸದ ಕಮಲ್​ನಾಥ್ ಒತ್ತಾಯಿಸಿದರು.

ಇದಕ್ಕೆ ಪ್ರತ್ಯುತ್ತರ ನೀಡಿರುವ ಕೇಂದ್ರ ಸಚಿವ ಪ್ರಲ್ಹಾದ್​ ಜೋಷಿ, ಬಿಜೆಪಿಯವರಾದ ನಾವು ನಿಜವಾದ ರಾಮಭಕ್ತರು. ನಾವು ಮಹಾತ್ಮ ಗಾಂಧಿಜೀಯ ನಿಜವಾದ ಅನುಯಾಯಿಗಳು. ಇವರೆಲ್ಲಾ ನಕಲಿ ಗಾಂಧಿಗಳಾದ ಸೋನಿಯಾ ಗಾಂಧಿ ಮತ್ತು ರಾಹುಲ್​ ಗಾಂಧಿ ಭಕ್ತರು ಎಂದು ಟೀಕಿಸಿದರು.

ಈ ವೇಳೆ ಆಡಳಿತ ಹಾಗೂ ಪ್ರತಿಪಕ್ಷಗಳ ನಡುವೆ ಗದ್ದಲ-ಕೋಲಾಹಲದ ವಾತಾವರಣ ಉಂಟಾಯಿತು. ಜೋಷಿ ಹೇಳಿಕೆಗೆ ಆಕ್ರೋಶಗೊಂಡ ಕಾಂಗ್ರೆಸ್​ ನಾಯಕರು, ಮಹಾತ್ಮ ಗಾಂಧಿ ಅಮರರಾಗಿರಲಿ ಎಂದು ಘೋಷಣೆ ಕೂಗುವ ಮೂಲಕ ಸದನದಿಂದ ಹೊರ ನಡೆದರು.

 

Related Articles

Back to top button