Kannada NewsKarnataka NewsLatest

ಸಂಭವನೀಯ 3ನೇ ಅಲೆಯಲ್ಲಿ ಮಕ್ಕಳ ರಕ್ಷಣೆಗೆ ಎಲ್ಲ ಕ್ರಮ: ಸಚಿವೆ ಶಶಿಕಲಾ ಜೊಲ್ಲೆ

ಪ್ರಗತಿವಾಹಿನಿ ಸುದ್ದಿ, ಬೆಳಗಾವಿ  ಸಂಭವನೀಯ ಕೋವಿಡ್ 3 ನೇ ಅಲೆಯ ಸಂದರ್ಭದಲ್ಲಿ ಯಾವುದೇ ಮಕ್ಕಳಿಗೆ ತೊಂದರೆಯಾಗದಂತೆ ಹಾಗೂ ತುರ್ತು ಚಿಕಿತ್ಸೆಗೆ ಅಗತ್ಯ ಸಿದ್ಧತೆಗಳನ್ನು ಮಾಡಿಕೊಳ್ಳಬೇಕು ಎಂದು ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ, ವಿಕಲಚೇತನರು ಹಾಗೂ ಹಿರಿಯ ನಾಗರಿಕರ ಸಬಲೀಕರಣ ಇಲಾಖೆಯ ಸಚಿವರಾದ ಶಶಿಕಲಾ ಜೊಲ್ಲೆ ಅವರು ಅಧಿಕಾರಿಗಳಿಗೆ ಕಟ್ಟುನಿಟ್ಟಿನ ಸೂಚನೆ ನೀಡಿದರು.

ಜಿಲ್ಲಾ ಪಂಚಾಯತ ಸಭಾಂಗಣದಲ್ಲಿ ಬುಧವಾರ (ಜೂ.23) ನಡೆದ ಕೋವಿಡ್ ಸಂಭಾವ್ಯ 3ನೇ ಅಲೆಯಿಂದ ಮಕ್ಕಳ ರಕ್ಷಣೆ ಹಾಗೂ ಆರೈಕೆಗೆ ಕೈಗೊಳ್ಳಬೇಕಾದ ಮುಂಜಾಗ್ರತಾ ಕ್ರಮಗಳ ಕುರಿತು ಜನಪ್ರತಿನಿಧಿಗಳ ಹಾಗೂ ಅಧಿಕಾರಿಗಳ ಸಭೆಯ ಅಧ್ಯಕ್ಷತೆ ವಹಿಸಿ ಮಾತನಾಡಿದರು.

ಮುಂಜಾಗ್ರತಾ ಕ್ರಮವಾಗಿ ಜಿಲ್ಲಾ ಆಸ್ಪತ್ರೆ ಸೇರಿದಂತೆ ಎಲ್ಲ ತಾಲ್ಲೂಕು ಆಸ್ಪತ್ರೆಗಳಲ್ಲಿ ಔಷಧಿ, ವೈದ್ಯಕೀಯ ಸಾಮಗ್ರಿಗಳು ಸೇರಿದಂತೆ ತುರ್ತು ಪರಿಸ್ಥಿತಿ ನಿರ್ವಹಣೆಗೆ ಸಿದ್ಧತೆಗಳನ್ನು ಮಾಡಿಕೊಳ್ಳಬೇಕು ಎಂದು ಆರೋಗ್ಯ ಇಲಾಖೆಯ ಅಧಿಕಾರಿಗಳಿಗೆ ನಿರ್ದೇಶನ ನೀಡಿದರು.

Related Articles

ಮಕ್ಕಳ ಆರೈಕೆಗೆ ಸುಸಜ್ಜಿತ ಕೇಂದ್ರ:

ಎರಡು ಮತ್ತು ಮೂರನೇ ಅಲೆಯಿಂದ ಬಾಧಿತರಾಗುವ ಮಕ್ಕಳಿಗೆ ಯಾವುದೇ ರೀತಿಯ ತೊಂದರೆಯಾಗದಂತೆ ಎಲ್ಲ ವೈದ್ಯಕೀಯ ಮತ್ತು ಊಟೋಪಹಾರದ ಸೌಕರ್ಯಗಳನ್ನು ಒದಗಿಸಲಾಗುವುದು.

Home add -Advt

ಕೋವಿಡ್ ಸೋಂಕಿತ ಮಕ್ಕಳ ಆರೈಕೆಗಾಗಿ ಸುಸಜ್ಜಿತ ಮತ್ತು ಪ್ರತ್ಯೇಕ ಕೋವಿಡ್ ಕೇರ್ ಕೇಂದ್ರಗಳನ್ನು ಇಲಾಖೆಯ ವತಿಯಿಂದ ಆರಂಭಿಸಲಾಗುತ್ತಿದೆ ಎಂದು ಸಚಿವರಾದ ಶಶಿಕಲಾ ಜೊಲ್ಲೆ ತಿಳಿಸಿದರು.

ಎರಡನೇ ಅಲೆಯಲ್ಲಿ ರಾಜ್ಯದಲ್ಲಿ ಒಟ್ಟು 52 ಬಡ ಹಾಗೂ ಮಧ್ಯಮ ವರ್ಗದ ಮಕ್ಕಳು ತಂದೆ-ತಾಯಿಯನ್ನು ಕಳೆದುಕೊಂಡು ಅನಾಥರಾಗಿದ್ದಾರೆ. ಇಂತಹ ಮಕ್ಕಳ ಪೋಷಣೆ ಜವಾಬ್ದಾರಿಯನ್ನು ಇಲಾಖೆ ತೆಗೆದುಕೊಂಡಿರುತ್ತದೆ ಎಂದು ಸಚಿವೆ ಶಶಿಕಲಾ ಜೊಲ್ಲೆ ತಿಳಿಸಿದರು.

ಮುಖ್ಯಮಂತ್ರಿಗಳ ಬಾಲಸೇವಾ ಯೋಜನೆಯಡಿ ಈ ಮಕ್ಕಳಿಗೆ ಪ್ರತಿ ತಿಂಗಳು ಮೂರುವರೆ ಸಾವಿರ ರೂಪಾಯಿ; ಉಚಿತ ಶಿಕ್ಷಣ; ಹೆಣ್ಣು ಮಗುವಿದ್ದರೆ 18 ವರ್ಷದ ಬಳಿಕ ಒಂದು ಲಕ್ಷ ರೂಪಾಯಿ ‌ಆರ್ಥಿಕ ನೆರವು ಸರಕಾರದ ವತಿಯಿಂದ ನೀಡಲು ನಿರ್ಧರಿಸಲಾಗಿದೆ ಎಂದು ಸಚಿವೆ ಶಶಿಕಲಾ ಜೊಲ್ಲೆ ತಿಳಿಸಿದರು.

ಇಲಾಖೆಯಿಂದ ಅನಾಥ ಮಕ್ಕಳ ದತ್ತುಸ್ವೀಕಾರ ಕೇಂದ್ರ ಆರಂಭಿಸಲಾಗಿದೆ. ಅದೇ ರೀತಿ ಏಕ ಪೋಷಕ ಮಕ್ಕಳ ನೋಂದಣಿ ಪ್ರಕ್ರಿಯೆ ಆರಂಭಿಸಲಾಗಿದೆ ಎಂದು ಅವರು ಹೇಳಿದರು.


ಬೈಲಹೊಂಗಲ ಶಾಸಕ ಮಹಾಂತೇಶ ದೊಡಗೌಡ್ರ, ಶಿಥಿಲಗೊಂಡಿರುವ ಅಂಗನವಾಡಿ ಕೇಂದ್ರಗಳ ದುರಸ್ತಿಗೆ ಹೆಚ್ಚುವರಿ ಅನುದಾನ ಬಿಡುಗಡೆಗೆ ಕ್ರಮ ಕೈಗೊಳ್ಳಬೇಕು ಎಂದು ಹೇಳಿದರು.

ವಿಧಾನ ಪರಿಷತ್ ಸದಸ್ಯ ಡಾ.ಸಾಯಬಣ್ಣ ತಳವಾರ, ಬೆಳಗಾವಿ ದೊಡ್ಡ ಜಿಲ್ಲೆಯಾಗಿರುವುದರಿಂದ ಗ್ರಾಮೀಣ ಪ್ರದೇಶಗಳಲ್ಲಿ ತಾಯಿ-ಮಕ್ಕಳ ರಕ್ಷಣೆಗೆ ಹೆಚ್ಚಿನ ಆದ್ಯತೆ ನೀಡಬೇಕಿದೆ ಎಂದು ಅಭಿಪ್ರಾಯಪಟ್ಟರು.

ಜಿಲ್ಲಾಧಿಕಾರಿ ಎಂ.ಜಿ.ಹಿರೇಮಠ, ಎಲ್ಲ ಇಲಾಖೆಯ ಅಧಿಕಾರಿಗಳು ಹಾಗೂ ಸಿಬ್ಬಂದಿ ಸಹಕಾರದಿಂದ ಕೋವಿಡ್ ನಿರ್ವಹಣೆ ಹಾಗೂ ಲಸಿಕಾಕರಣ ದಲ್ಲಿ ಉತ್ತಮ ಕೆಲಸ ಮಾಡಲಾಗಿದೆ ಎಂದು ತಿಳಿಸಿದರು.

ಜಿಲ್ಲಾ ಪಂಚಾಯತ ಮುಖ್ಯ ಕಾರ್ಯನಿರ್ವಾಹಕ ಅಧಿಕಾರಿ ದರ್ಶನ್ ಎಚ್.ವಿ., ಸೋಂಕಿತ ಮಕ್ಕಳ ಚಿಕಿತ್ಸೆ ಹಾಗೂ ಪ್ರತ್ಯೇಕವಾಗಿರಿಸಲು ಅನುಕೂಲವಾಗುವಂತೆ ಆರೈಕೆ ಕೇಂದ್ರಗಳನ್ನು ಜಿಲ್ಲೆಯಾದ್ಯಂತ ಗುರುತಿಸಲಾಗಿದೆ ಎಂದು ವಿವರಿಸಿದರು.

ಮೊದಲ ಅಲೆಯಲ್ಲಿ ಏಳು ನೂರಕ್ಕೂ ಅಧಿಕ ಹಾಗೂ ಎರಡನೇ ಅಲೆಯಲ್ಲಿ ಎರಡು ಸಾವಿರ ಮಕ್ಕಳು ಸೋಂಕಿತರಾಗಿದ್ದು, ಆರೈಕೆಯ‌ ನಂತರ ಅವರು ಗುಣಮುಖರಾಗಿದ್ದಾರೆ.

ಎರಡನೇ ಅಲೆಯ ಸಂದರ್ಭದಲ್ಲಿ ಬಿಮ್ಸ್ ಗೆ ದಾಖಲಾದ 30 ಮಕ್ಕಳ ಪೈಕಿ ನಾಲ್ಕು ಮಕ್ಕಳು ಮರಣ ಹೊಂದಿರುತ್ತಾರೆ. ಉಳಿದವರು ಗುಣಮುಖರಾಗಿರುತ್ತಾರೆ ಎಂದು ಬಿಮ್ಸ್ ಪ್ರಭಾರ ನಿರ್ದೇಶಕ ಡಾ.ಕುಲಕರ್ಣಿ ತಿಳಿಸಿದರು.

ಜಿಲ್ಲಾ ಆರೋಗ್ಯ ಮತ್ತು ಕುಟುಂಬ ಕಲ್ಯಾಣಾಧಿಕಾರಿ ಡಾ.ಎಸ್.ವಿ.ಮುನ್ಯಾಳ ಅವರು, ತಾಲ್ಲೂಕು ಆಸ್ಪತ್ರೆಗಳು, ಸಮುದಾಯ ಮತ್ತು ಪ್ರಾಥಮಿಕ ಆರೋಗ್ಯ ಕೇಂದ್ರಗಳಲ್ಲಿ ಮಕ್ಕಳ ಚಿಕಿತ್ಸೆಗೆ ಅಗತ್ಯವಿರುವ ವ್ಯವಸ್ಥೆಯನ್ನು ಮಾಡಿಕೊಳ್ಳಲಾಗುತ್ತಿದೆ ಎಂದು ಮಾಹಿತಿ ನೀಡಿದರು.

ಪೌಷ್ಟಿಕ ಆಹಾರ ಕಿಟ್ ಹಾಗೂ ಗಾಲಿಕುರ್ಚಿ ವಿತರಣೆ:

ಸಚಿವರಾದ ಶಶಿಕಲಾ ಜೊಲ್ಲೆ ಅವರು ಸಭೆಯ ಆರಂಭದಲ್ಲಿ ತೀವ್ರ ಅಪೌಷ್ಟಿಕತೆ ಹೊಂದಿರುವ ಮಕ್ಕಳಿಗೆ ಪೌಷ್ಟಿಕಾಹಾರದ ಕಿಟ್ ಗಳನ್ನು ನೀಡಿದರು.

ಮಾಜಿ ದೇವದಾಸಿಯರಿಗೆ ಹಾಗೂ ಲಿಂಗತ್ವ ಅಲ್ಪಸಂಖ್ಯಾತರಿಗೂ ಕೂಡ ಇದೇ ವೇಳೆ ಕಿಟ್ ಗಳನ್ನು ವಿತರಿಸಲಾಯಿತು.
ವಿಕಲಚೇತನ ಮಕ್ಕಳಿಗೆ ಗಾಲಿಕುರ್ಚಿಗಳನ್ನು ಸಚಿವೆ ಶಶಿಕಲಾ ಜೊಲ್ಲೆ ಅವರು ವಿತರಿಸಿದರು.

ಚಿಕ್ಕೋಡಿ ಸಂಸದ ಅಣ್ಣಾಸಾಹೇಬ್ ಜೊಲ್ಲೆ, ಬೆಳಗಾವಿ ಸಂಸದರಾದ ಮಂಗಲಾ ಸುರೇಶ್ ಅಂಗಡಿ, ಶಾಸಕ ಅನಿಲ್ ಬೆನಕೆ, ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಲಕ್ಷ್ಮಣ ನಿಂಬರಗಿ, ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ ಇಲಾಖೆಯ ಉಪ ನಿರ್ದೇಶಕ ರಾದ ಬಸವರಾಜ ವರವಟ್ಟಿ, ಜಿಲ್ಲಾ ವಿಕಲಚೇತನರ ಕಲ್ಯಾಣಾಧಿಕಾರಿ ನಾಮದೇವ ಬಿಲ್ಕರ್ ಮತ್ತಿತರರು ಉಪಸ್ಥಿತರಿದ್ದರು.

“ಸಖಿ ಒನ್ ಸ್ಟಾಪ್ ಸೆಂಟರ್” ಉದ್ಘಾಟಿಸಿದ ಸಚಿವೆ ಶಶಿಕಲಾ ಜೊಲ್ಲೆ

 

ಸಿಡಿ ಬಹಿರಂಗ ಕೇಸ್; ಸಚಿವೆ ಶಶಿಕಲಾ ಜೊಲ್ಲೆ ಹೇಳಿದ್ದೇನು?

Related Articles

Back to top button