ಸಚಿವ ಸ್ಥಾನ ಕೊಡೋದು ಬಿಡೋದು ಅವರಿಗೆ ಬಿಟ್ಟದ್ದು ಎಂದ ವಿಶ್ವನಾಥ್

ಪ್ರಗತಿವಾಹಿನಿ ಸುದ್ದಿ; ಮೈಸೂರು: ಗೆದ್ದ 10 ಶಾಸಕರಿಗೆ ಮಾತ್ರ ಸಚಿವ ಸ್ಥಾನ ಎಂಬ ಸಿಎಂ ಯಡಿಯೂರಪ್ಪ ಹೇಳಿಕೆ ಬೆನ್ನಲ್ಲೇ ಪ್ರತಿಕ್ರಿಯಿಸಿರುವ ಮಾಜಿ ಸಚಿವ ಹೆಚ್ ವಿಶ್ವನಾಥ್, ನಾನು ಈಗ ಮಾಜಿ ಮಂತ್ರಿ ಹಾಗೂ ಮಾಜಿ ಶಾಸಕ. ನನಗೆ ಮಂತ್ರಿಯಾಗುವ ಅರ್ಹತೆ ಇದೆ ಹಾಗಂತ ನಾನು ಯಾರಿಗೂ ದುಂಬಾಲು ಬೀಳಲ್ಲ ಎಂದು ಹೇಳಿದ್ದಾರೆ.

ಮೈಸೂರಿನಲ್ಲಿ ಮಾತನಾಡಿದ ವಿಶ್ವನಾಥ್, ಸಂಪುಟ ವಿಸ್ತರಣೆ ದಿನಾಂಕ ನಿಗದಿಯಾಗಿದ್ದು ಸಂತೋಷ. ಆದರೆ ಸೋತವರಿಗೆ ಸ್ಥಾನ ಕೊಡಲು ಕಾನೂನಿನ ತೊಡಕಿದೆ ಎನ್ನುವುದು ಸರಿಯಲ್ಲ. ಸ್ಪೀಕರ್ ಮಾಡಿದ್ದ ಅನರ್ಹತೆಯನ್ನು ಸುಪ್ರೀಂಕೋರ್ಟ್ ತೊಡೆದು ಹಾಕಿದೆ. ನಾವು ಚುನಾವಣೆಗೆ ನಾಮಪತ್ರ ಹಾಕಿದ ತಕ್ಷಣ ನಮ್ಮ ಅಪವಿತ್ರತೆ ಕಳೆದುಹೋಗಿದೆ. ನಾವು ಈಗ ಪವಿತ್ರರು. ನಾನು ಮಂತ್ರಿಯಾಗಲು ಅರ್ಹನಾಗಿದ್ದೇನೆ ಎಂದರು.

ಮಂತ್ರಿ ಸ್ಥಾನಕ್ಕಾಗಿ ನಾನು ದಮ್ಮಯ್ಯ ದಪ್ಪಯ್ಯ ಅನ್ನಲ್ಲ, ಮಾತು ಕೊಟ್ಟಿದ್ದಾರೆ ಸಚಿವ ಸ್ಥಾನ ಕೊಡೋದು ಬಿಡೋದು ಅವರಿಗೆ ಬಿಟ್ಟದ್ದು. ಕ್ಷಿಪ್ರ ಕ್ರಾಂತಿಯಲ್ಲಿ ಯಾರ್ಯಾರು ಭಾಗಿಯಾಗಿದ್ದರು ಅವರಿಗೆಲ್ಲ ಸ್ಥಾನ ಕೊಡಬೇಕು. ರಾಜ್ಯದಲ್ಲಿ ವಚನ ಪಾಲನೆಯಾಗಿದೆ. ಅದೆ ರೀತಿ ವಚನ ಭ್ರಷ್ಟತೆಯೂ ಆಗಿದೆ. ನೀವು ವಚನ ಭ್ರಷ್ಟರಾಗಬೇಡಿ ಎಂದು ಸಿಎಂ ಬಿಎಸ್​ ಯಡಿಯೂರಪ್ಪನವರಿಗೆ ಮನವಿ ಮಾಡಿದರು.

ಸೋತವರಿಗೆ ಸಚಿವ ಸ್ಥಾನ ನೀಡುವ ಬಗ್ಗೆ ಸಿಎಂ ಕಾನೂನು ತಜ್ಞರನ್ನು ಭೇಟಿಯಾಗಿ ಚರ್ಚಿಸಲಿ. ಸಚಿವ ಸ್ಥಾನ ಕೊಡಲು ಕಾನೂನಿನ ತೊಡಕಿದೆ ಎಂಬ ಸಂದೇಶ ರವಾನೆಯಾಗಬಾರದು. ಇನ್ನೊಮ್ಮೆ ಚರ್ಚೆ ಮಾಡಿ ಜನರಿಗೆ ಸಂದೇಶ ನೀಡಿ. ಮಂತ್ರಿ ಸ್ಥಾನ ಸಿಗದಿದ್ದರೆ ಆಕಾಶ ಬಿದ್ದೋಗಲ್ಲ. ಕೊಡೋದು ಬಿಡೋದು ಎಲ್ಲ ಅವರಿಗೆ ಬಿಟ್ಟದ್ದು. ಸೋತ ನಂತರ ನನ್ನ ಕನಸು ಸತ್ತೋಗಿಲ್ಲ. ನಾನು ಸೋತಿರಬಹುದು ಆದರೆ ಕನಸು ಜೀವಂತ ಇದೆ ಎಂದರು.

Home add -Advt

 

Related Articles

Back to top button