Latest

ಏಷ್ಯಾದಲ್ಲೇ ಅತೀ ದೊಡ್ಡ ನೌಕಾನೆಲೆಯಾಗಲಿದೆ ಕಾರವಾರದ ಕದಂಬ – ರಾಜನಾಥ ಸಿಂಗ್

ಪ್ರಗತಿವಾಹಿನಿ ಸುದ್ದಿ,  ಕಾರವಾರ – ಕಾರವಾರದ ಕದಂಬ ನೌಕಾನೆಲೆಯ ಎರಡನೇ ಹಂತದ ಕಾಮಗಾರಿ ವೇಗವಾಗಿ ನಡೆದಿದೆ. ಇದಕ್ಕೆ ಎಲ್ಲ ನೌಕಾ ಸೈನ್ಯದ ಅಧಿಕಾರಿಗಳು ಸಿಬ್ಬಂದಿ ಅಭಿನಂದನಾರ್ಹರು. ಕದಂಬ ನೌಕಾನೆಲೆಯನ್ನು ಏಷ್ಯಾದಲ್ಲೇ ಅತೀ ದೊಡ್ಡ ನೌಕಾನೆಲೆಯಾಗಿ ರೂಪಿಸುವ ಚಿಂತನೆಯಿದ್ದು ಈ ಕುರಿತು ಬಜೆಟ್‌ನಲ್ಲಿ ಅಗತ್ಯವಿರುವ ಕ್ರಮಗಳನ್ನು ಕೈಗೊಳ್ಳುವುದಾಗಿ ರಕ್ಷಣಾ ಸಚಿವ ರಾಜನಾಥ ಸಿಂಗ್ ಹೇಳಿದರು.

ಇಲ್ಲಿನ ಕದಂಬ ನೌಕಾನೆಲೆಗೆ ಗುರುವಾರ ಭೇಟಿ ನೀಡಿದ್ದ ವೇಳೆ ನೌಕಾಸೇನೆಯ ಹಿರಿಯ ಅಕಾರಿಗಳನ್ನುದ್ದೇಶಿಸಿ ಮಾತನಾಡಿದ ಅವರು, ನೌಕಾನೆಲೆ ಮುಂಬರುವ ದಿನಗಳಲ್ಲಿ ಏಷಿಯಾದಲ್ಲೇ ಅತಿ ದೊಡ್ಡ ನೌಕಾನೆಲೆಯಾಗಲಿದೆ ಎಂದು ತಿಳಿಸಿದರು.

ಕದಂಬ ನೌಕಾನೆಲೆಯ ವೈಮಾನಿಕ ಸಮೀಕ್ಷೆ ನಡೆಸಿದ ರಕ್ಷಣಾ ಮಂತ್ರಿ ರಾಜನಾಥ ಸಿಂಗ್ ಅವರು ಎರಡನೇ ಹಂತದ ಕಾಮಗಾರಿಗಳನ್ನು ಪರಿಶೀಲಿಸಿ ಅಗತ್ಯ ಸಲಹೆ ಸೂಚನೆಗಳನ್ನು ನೀಡಿದರು.

ಪ್ರಧಾನ ಮಂತ್ರಿ ನರೇಂದ್ರ ಮೋದಿ ಅವರು, ಸೆಕ್ಯುರಿಟಿ ಆಂಡ್ ಗ್ರೋಥ್ ಫಾರ್ ಆಲ್ (ಸಾಗರ ) ಎಂಬ ದೇಶದ ಸಮುದ್ರವಲಯವನ್ನು ಬಲಗೊಳಿಸಲು ಯೋಜನೆ ಹಮ್ಮಿಕೊಳ್ಳಲು ಚಿಂತನೆ ನಡೆಸಿದ್ದಾರೆ. ಮುಂದಿನ ೧೦-೧೨ವರ್ಷಗಳಲ್ಲಿ ಮೊದಲ ಮೂರು ಸ್ಥಾನಗಳಲ್ಲಿ ಒಂದಾಗುವ ಪ್ರಯತ್ನ ನಡೆಸಲಾಗುತ್ತದೆ ಎಂದರು.

Home add -Advt

ಸ್ವದೇಶಿ ತಂತ್ರಜ್ಞಾನದಲ್ಲಿ ನಿರ್ಮಾಣಗೊಳ್ಳುತ್ತಿರುವ ವಿಮಾನವಾಹಕ ಯುದ್ಧ ನೌಕೆ ಐಎನ್‌ಎಸ್ ವಿಕ್ರಾಂತ ಸಧ್ಯದಲ್ಲೇ ಭಾರತೀಯ ನೌಕಾಪಡೆಗೆ ಸೇರ್ಪಡೆಗೊಳ್ಳಲಿದೆ. ರಕ್ಷಣಾ ಇಲಾಖೆಯಲ್ಲೂ ಆತ್ಮನಿರ್ಭರಕ್ಕೆ ಹೆಚ್ಚು ಮಹತ್ವ ನೀಡಲಾಗುತ್ತಿದೆ. ಆಧುನಿಕ ತಂತ್ರಜ್ಞಾನದ ೪೬ ಸಬ್‌ಮರೈನ್‌ಗಳು ದೇಶದ ವಿವಿಧ ಶಿಪ್‌ಯಾರ್ಡ್‌ಗಳಲ್ಲಿ ನಿರ್ಮಾಣವಾಗುತ್ತಿದೆ ಎಂದರು.

ಈ ಮೊದಲು ಐಎನ್‌ಎಸ್ ವಿಕ್ರಮಾದಿತ್ಯದ ಮೇಲೆ ಒಂದು ರಾತ್ರಿ ತಂಗಿದ್ದು ಬಳಿಕ ಹೆಲಿಕಾಪ್ಟರ್‌ನಲ್ಲಿ ವಾಪಸ್ ತೆರಳುತ್ತಿದ್ದಾಗ ನೌಕಾಪಡೆಯ ಮುಖ್ಯಸ್ಥ ಕರಂಬೀರ್ ಸಿಂಗ್ ಅವರು ಕಾರವಾರವನ್ನು ತೋರಿಸಿದ್ದರು. ಈ ಬಾರಿ ಸಮೀಪದಿಂದ ನೋಡಿದ್ದು ಸಂತಸ ತಂದಿದೆ ಎಂದರು.

ಕದಂಬ ನೌಕಾನೆಲೆಯ ಮುಖ್ಯಸ್ಥ ರಿಯರ್ ಅಡ್ಮಿರಲ್ ಮಹೇಶ ಸಿಂಗ್ ಅವರು ರಾಜನಾಥ ಸಿಂಗ್ ಅವರನ್ನು ನೌಕಾನೆಲೆಗೆ ಬರಮಾಡಿಕೊಂಡರು. ಭಾರತೀಯ ನೌಕಾಪಡೆಯ ಮುಖ್ಯಸ್ಥ ಅಡ್ಮಿರಲ್ ಕರಂಬೀರ್ ಸಿಂಗ್, ಕದಂಬ ನೌಕಾನೆಲೆಯ ಹಿರಿಯ ಅಕಾರಿ ವೈಸ್ ಅಡ್ಮಿರಲ್ ಗೋಸ್ವಾಮಿ ಮತ್ತಿತರ ಅಧಿಕಾರಿಗಳು ಇದ್ದರು.

 

ಬೆಳಗಾವಿಯಲ್ಲಿ 61 ಲಕ್ಷ ರೂ. ಮೌಲ್ಯದ ಡ್ರಗ್ಸ್ ನಾಶಕ್ಕೆ ನಿರ್ಧಾರ

Related Articles

Back to top button