Latest

ನನ್ನ ಸ್ಥಿತಿಗೆ ನೀವೇ ಕಾರಣ ಎಂದು ಸ್ಟಾರ್ ನಟನ ಮನೆ ಮುಂದೆ ಮಹಿಳೆ ಆತ್ಮಹತ್ಯೆಗೆ ಯತ್ನ

ಪ್ರಗತಿವಾಹಿನಿ ಸುದ್ದಿ; ಚೆನ್ನೈ: ತಮಿಳು ನಟ ಅಜಿತ್ ಮನೆ ಮುಂದೆ ಮಹಿಳೆಯೊಬ್ಬರು ಬೆಂಕಿ ಹಚ್ಚಿಕೊಂಡು ಆತ್ಮಹತ್ಯೆಗೆ ಯತ್ನಿಸಿದ ಘಟನೆ ನಡೆದಿದೆ.

ಕೆಲಸ ಕಳೆದುಕೊಂಡಿದ್ದ ಮಹಿಳೆ ಫರ್ಜಾನಾ, ನಟ ಅಜಿತ್ ಅವರನ್ನು ಭೇಟಿಯಾಗಲೆಂದು ಬಂದಿದ್ದಳು. ಆದರೆ ಸಾಧ್ಯವಾಗದೇ ಬೇಸತ್ತ ಮಹಿಳೆ ನನ್ನ ಈ ಸ್ಥಿತಿಗೆ ನೀವೇ ಕಾರಣ ಎಂದು ಕಣ್ಣೀರಿಡುತ್ತಾ ಅಜಿತ್ ಮನೆ ಮುಂದೆಯೇ ಬೆಂಕಿ ಹಚ್ಚಿಕೊಂಡು ಆತ್ಮಹತ್ಯೆಗೆ ಮುಂದಾಗಿದ್ದಾರೆ. ಇದನ್ನು ಗಮನಿಸಿದ ಸೆಕ್ಯೂರಿಟಿ ಗಾರ್ಡ್ ತಕ್ಷಣ ನೀರು ಹಾಕಿ ಬೆಂಕಿ ಆರಿಸಿದ್ದಾರೆ.

ಖಾಸಗಿ ಆಸ್ಪತ್ರೆ ಸಿಬ್ಬಂದಿಯಾಗಿದ್ದ ಮಹಿಳೆ ಕಳೆದ ವರ್ಷ ನಟ ಅಜಿತ್ ಹಾಗೂ ಅವರ ಪತ್ನಿ ಶಾಲಿನಿ ಆಸ್ಪತ್ರೆಗೆ ಭೇಟಿ ನೀಡಿದ್ದ ವೇಳೆ ಅವರೊಂದಿಗೆ ಫೋಟೋ ಕ್ಲಿಕ್ಕಿಸಿಕೊಂಡಿದ್ದರು. ನಟನೊಂದಿಗೆ ಫೋಟೋ ಕ್ಲಿಕ್ಕಿಸಿಕೊಂಡ ಸಂತಸವನ್ನು ತಮ್ಮ ಸಾಮಾಜಿಕ ಜಾಲತಾಣದ ಖಾತೆಯಲ್ಲಿ ಹಂಚಿಕೊಂಡಿದ್ದರು. ಈ ಫೋಟೊ ಭಾರಿ ವೈರಲ್ ಆಗಿತ್ತಲ್ಲದೇ ನಟ ಆಸ್ಪತ್ರೆಗೆ ಭೇಟಿ ನೀಡಿದ್ದು ಚರ್ಚೆಗೆ ಕಾರಣವಾಗಿತ್ತು.

ಆಸ್ಪತ್ರೆ ಸಿಬ್ಬಂದಿಯಾಗಿ ಆಸ್ಪತ್ರೆ ನಿಯಮಗಳನ್ನು ಮೀರಿ ಆಸ್ಪತ್ರೆಗೆ ಬರುವವರಿಗೆ ಅನಗತ್ಯ ತೊಂದರೆಯುಂಟುಮಾಡಿದ್ದಕ್ಕೆ ಮಹಿಳೆಯನ್ನು ಆಸ್ಪತ್ರೆ ಆಡಳಿತ ಮಂಡಳಿ ಕೆಲಸದಿಂದ ತೆಗೆದುಹಾಕಿತ್ತು. ಈ ಎಲ್ಲಾ ಘಟನೆಗಳಿಂದ ಆಘಾತಕ್ಕೊಳಗಾಗಿದ್ದ ಮಹಿಳೆ ಮತ್ತೆ ಕೆಲಸಕ್ಕಾಗಿ ಯತ್ನಿಸಿದ್ದಳು. ಆದರೂ ಸಾಧ್ಯವಾಗಿರಲಿಲ್ಲ. ಅಂತಿಮವಾಗಿ ನಟ ಅಜಿತ್ ಅವರನ್ನು ಭೇಟಿಯಾಗಿ ಕ್ಷಮೆ ಕೋರಿ, ಆಸ್ಪತ್ರೆಯ ಅಧಿಕಾರಿಗಳಿಗೆ ತನ್ನನ್ನು ಕೆಲಸದಿಂದ ತೆಗೆಯದಂತೆ ಹೇಳಿ ಎಂದು ಮನವಿ ಮಾಡಲು ಅವರ ಮನೆ ಬಳಿ ಬಂದಿದ್ದಳು ಎನ್ನಲಾಗಿದೆ. ಆದರೆ ನಟ ಅಜಿತ್ ಭೇಟಿಗೆ ಅವಕಾಶ ಸಿಗದ ಕಾರಣ ನೊಂದ ಮಹಿಳೆ ಆತ್ಮಹತ್ಯೆಗೆ ಯತ್ನಿಸಿದ್ದಾಳೆ.

Home add -Advt

ಘಟನೆ ಬಳಿಕ ಪೊಲೀಸರು ಮಹಿಳೆಯನ್ನು ವಶಕ್ಕೆ ಪಡೆದಿದ್ದಾರೆ ಎನ್ನಲಾಗಿದೆ.

ಕೆಲಸದಾಳಿಗೆ ಹೊಡೆದ ಗುಂಡು ಮಗನ ತಲೆಗೆ ಬಡಿಯಿತು!

Related Articles

Back to top button