Latest

ಎಸ್ ಎಸ್ ಎಲ್ ಸಿ ಪರೀಕ್ಷೆ ಮೇಲೆ ಕಾರ್ಮೋಡ

ಪ್ರಗತಿವಾಹಿನಿ ಸುದ್ದಿ, ಬೆಳಗಾವಿ – ಜೂನ್ 25ರಿಂದ ಪ್ರೌಢ ಶಿಕ್ಷಣ ಪರೀಕ್ಷಾ ಮಂಡಳಿ ನಡೆಸಲು ಉದ್ದೇಶಿಸಿರುವ ಎಸ್ಎಸ್ಎಲ್ ಸಿ ಪರೀಕ್ಷೆಗೆ ಈಗ ಕಾರ್ಮೋಡ ಕವಿದಿದೆ.

ಕೊರೆನಾ ಮತ್ತು ಈ ಹಿನ್ನೆಲೆಯಲ್ಲಿ ವಿಧಿಸಲಾಗಿರುವ ಲಾಕ್ ಡೌನ್ ನಿಂದಾಗಿ ಎಸ್ಎಸ್ಎಲ್ ಸಿ ಪರೀಕ್ಷೆ ಸೇರಿದಂತೆ ಇಡೀ ಶೈಕ್ಷಣಿಕ ವ್ಯವಸ್ಥೆ ಅಸ್ತವ್ಯಸ್ತವಾಗಿದೆ. ಬಹುತೇಕ ಪರೀಕ್ಷೆಗಳನ್ನು ರದ್ದುಪಡಿಸಲಾಗಿದೆ. ಇನ್ನು ಹಲವು ಪರೀಕ್ಷೆಗಳು ಸ್ಪಷ್ಟತೆ ಇಲ್ಲದೆ ಗೊಂದಲದಲ್ಲೇ ಮುಂದುವರಿದಿವೆ.

ಹಲವು ದಿನಗಳ ನಂತರ ಅಂತೂ ರಾಜ್ಯ ಸರಕಾರ ಎಸ್ಎಸ್ಎಲ್ ಸಿ ಪರೀಕ್ಷೆ ದಿನಂಕವನ್ನು ಪ್ರಕಟಿಸಿದೆ. ಸಾಮಾಜಿಕ ಅಂತರ, ಮಾಸ್ಕ್ ಧಾರಣೆ ಸೇರಿದಂತೆ ಎಲ್ಲ ಮುಂಜಾಗ್ರತೆ ಕ್ರಮ ತೆಗೆದುಕೊಂಡು ಪರೀಕ್ಷೆ ನಡೆಸಲು ಸಿದ್ಧತೆ ನಡೆಸಲಾಗಿದೆ. ಮಕ್ಕಳು ಇದ್ದ ಊರಲ್ಲೇ ಪರೀಕ್ಷೆ ನಡೆಸಲು ಅವಕಾಶ ಕಲ್ಪಿಸುವ ನಿರ್ಧಾರವನ್ನೂ ಪ್ರಕಟಿಸಲಾಗಿದೆ.

ದೊಡ್ಡ ಆತಂಕ

ರಾಜ್ಯದಲ್ಲಿ ಸುಮಾರು 8 ಲಕ್ಷ ಮಕ್ಕಳು ಎಸ್ಎಸ್ಎಲ್ ಸಿ ಪರೀಕ್ಷೆ ಬರೆಯಲಿದ್ದಾರೆ. ಅಂದರೆ ಅಷ್ಟು ಮಕ್ಕಳು, ಸರಿಸುಮಾರ ಅಷ್ಟೇ ಸಂಖ್ಯೆ ಪಾಲಕರು ಮಕ್ಕಳನ್ನು ಪರೀಕ್ಷೆ ಕೇಂದ್ರಕ್ಕೆ ಬಿಡಲು ಸೇರಿ ಸುಮಾರು 16 ಲಕ್ಷ ಜನರು ಕೇವಲ ಎಸ್ಎಸ್ಎಲ್ ಸಿ ಪರೀಕ್ಷೆಯ ಕಾರಣಕ್ಕಾಗಿ ಆ ದಿನಗಳಂದ ಬೀದಿಗೆ ಬರಲಿದ್ದಾರೆ.

Home add -Advt

ಇದು ಈಗ ಎಲ್ಲೆಡೆ ಆತಂಕಕ್ಕೆ ಕಾರಣವಾಗಿದೆ. ಇಷ್ಟು ದೊಡ್ಡ ಪ್ರಮಾಣದಲ್ಲಿ ಜನರು ಮನೆಯಿಂದ ಹೊರಗೆ ಬಂದರೆ ಪರಿಸ್ಥಿತಿ ಏನಾಗಬಹುದು? ಎಸ್ಎಸ್ಎಲ್ ಸಿ ಮಕ್ಕಳು ಮತ್ತು ಅವರ ಪಾಲಕರಲ್ಲಿ ಈ 16 ಲಕ್ಷ ಜನರಲ್ಲಿ ಎಷ್ಟು ಜನರಿಗೆ ಸೋಂಕು ತಗುಲಿದೆ ಎನ್ನುವುದನ್ನು ಹೇಳಲು ಯಾರಿಂದರೂ ಸಾಧ್ಯವಿಲ್ಲ. ಎಷ್ಟೋ ಮಕ್ಕಳು ಸಾರ್ವಜನಿಕ ಸಾರಿಗೆ ಮೂಲಕವೇ ಪರೀಕ್ಷೆ ಕೇಂದ್ರ ತಲುಪಬೇಕಾಗಿದೆ.

ಜೊತೆಗೆ ಮಕ್ಕಳಿಗೆ ಪ್ರಶ್ನೆ ಪತ್ರಿಕೆಯನ್ನು ದೂರದಿಂದ ಎಸೆಯಲು ಬರುವುದಿಲ್ಲ, ಮಕ್ಕಳ ಸಮೀಪ ಹೋಗಿಯೇ ವಿತರಿಸಬೇಕಾಗುತ್ತದೆ. ಮತ್ತು ಅವರಿಂದ ಉತ್ತರ ಪತ್ರಿಕೆಗಳನ್ನು ಪಡೆಯಬೇಕಾಗುತ್ತದೆ. ಮಕ್ಕಳು ಕಾಪಿ ಹೊಡೆಯುವ ಅನುಮಾನ ಬಂದರೆ ಸಮೀಪ ಹೋಗಿ ಪರಿಶೀಲಿಸಬೇಕಾಗುತ್ತದೆ. ಪರೀಕ್ಷೆಯ 3 ಗಂಟೆಗಳ ಕಾಲ ಮಾಸ್ಕನ್ನು ಧರಿಸಿಯೇ ಕುಳಿತುಕೊಳ್ಳುವುದೂ ಸುಲಭವಲ್ಲ.

ಇದೆಲ್ಲದರಿಂದಾಗಿ ಕೊರೋನಾ ವೈರಸ್ ಗೆ ಶರವೇಗದಲ್ಲಿ ಹರಡಲು ಇದೊಂದು ಸುವರ್ಣಾವಕಾಶವಾಗಲಿದೆಯೇ ಎನ್ನುವ ಆತಂಕ ಎಲ್ಲರನ್ನೂ ಕಾಡುತ್ತಿದೆ.

ಹಲವರ ವಿರೋಧ

ಈ ಎಲ್ಲ ಕಾರಣಕ್ಕಾಗಿಯೇ ಈಗಾಗಲೆ ಎಸ್ಎಸ್ಎಲ್ ಸಿ ಪರೀಕ್ಷೆ ನಡೆಸುವುದಕ್ಕೆ ದೊಡ್ಡ ಪ್ರಮಾಣದಲ್ಲಿ ವಿರೋಧ ವ್ಯಕ್ತವಾಗುತ್ತಿದೆ. ಹಲವಾರು ಸಂಘ ಸಂಸ್ಥೆಗಳು, ಬುದ್ದಿ ಜೀವಿಗಳು ಮುಖ್ಯಮಂತ್ರಿಗಳಿಗೆ ಮನವಿ ಸಲ್ಲಿಸಿದ್ದಾರೆ. ಪರೀಕ್ಷೆ ನಡೆಸದಿದ್ದರೆ ಏನೂ ಆಗುವುದಿಲ್ಲ.

ಆದರೆ ಕೊರೋನಾ ಹರಡಿತೆಂದರೆ ಅದನ್ನು ನಿಯಂತ್ರಿಸಲು ಸಾಧ್ಯವಿಲ್ಲ ಎನ್ನುವ ಆತಂಕ ಅವರದ್ದು. ಮಕ್ಕಳ ಸಮೂಹದಲ್ಲಿ ವೈರಸ್ ಹರಡಿದರೆ ಅದನ್ನು ತಡೆಯುವುದು ಯಾರಿಂದಲೂ ಸಾಧ್ಯವಿಲ್ಲ. ಅದು ನಿಯಂತ್ರಿಸಲಾಗದ ವೇಗದಲ್ಲಿ ಹಬ್ಬಬಹುದು. ಹಾಗಾಗಿ ಪರೀಕ್ಷೆ ರದ್ದುಪಡಿಸಿ, ಆಂತರಿಕ ಪರೀಕ್ಷೆಗಳ ಮೂಲಕ ಮುಂದಿನ ತರಗತಿಗೆ ಪ್ರವೇಶ ನೀಡಿ ಎಂದು ಸಲಹೆ ನೀಡಿದ್ದಾರೆ.

ಪಿಐಎಲ್ ಗೆ ಸಿದ್ಧತೆ

ಇದರ ಜೊತೆಗೆ ಕೆಲವರು ಸಾರ್ವಜನಿಕ ಹಿತಾಸಕ್ತಿ ಮೊಕದ್ದಮೆ ಹೂಡಲು ಸಿದ್ಧತೆ ನಡೆಸಿದ್ದಾರೆ. ನಿವೃದ್ದ ಡಿಡಿಪಿಐ ಒಬ್ಬರು ಸೇರಿದಂತೆ ಹಲವು ತಜ್ಞರು ಸೇರಿ ಪಿಐಎಲ್ ಸಲ್ಲಿಸಲು ಈಗಾಗಲೆ ಚರ್ಚಿಸಿ, ಸಿದ್ಧತೆ ನಡೆಸಿದ್ದಾರೆ. ನ್ಯಾಯಾಲಯದ ಕಲಾಪ ಆರಂಭವಾಗುತ್ತಿದ್ದಂತೆ ಪಿಐಎಲ್ ಸಲ್ಲಿಸಲು ಅವರು ನಿರ್ಧರಿಸಿದ್ದಾರೆ.

ಬೆಳಗಾವಿಯ ಮರಾಠಾ ಮಂಡಳ ಶಿಕ್ಷಣ ಸಂಸ್ಥೆಯ ಚೇರಮನ್ ರಾಜಶ್ರೀ ಹಲಗೆಕರ್ ತಾವು ಪರೀಕ್ಷೆ ನಡೆಸುವುದನ್ನು ವಿರೋಧಿಸಿ ಪಿಐಎಲ್ ಹಾಕುವುದಾಗಿ ಪ್ರಕಟಿಸಿದ್ದಾರೆ.

ವಿಶ್ವ ಆರೋಗ್ಯ ಸಂಸ್ಥೆ ಕೂಡ ಶೈಕ್ಷಣಿಕ ವಿಷಯದಲ್ಲಿ ಜಾಗರೂಕರಾಗಿರುವಂತೆ ಎಚ್ಚರಿಕೆ ನೀಡಿದೆ.

ಆದರೆ ಶಿಕ್ಷಣ ಸಚಿವ ಸುರೇಶ ಕುಮಾರ ತಾವು ತಜ್ಞರೊಂದಿಗೆ ಚರ್ಚಿಸಿಯೇ ಪರೀಕ್ಷೆ ನಡೆಸುವ ತೀರ್ಮಾನ ತೆಗೆದುಕೊಂಡಿರುವುದಾಗಿ ಖಡಾಖಂಡಿತವಾಗಿ ಪ್ರತಿಕ್ರಿಯಿಸಿದ್ದಾರೆ.

ಈ ಎಲ್ಲ ಕಾರಣದಿಂದಾಗಿ ಈ ಬಾರಿಯ ಎಸ್ಎಸ್ಎಲ್ ಸಿ ಪರೀಕ್ಷೆಯ ಮೇಲೆ ಕಾರ್ಮೋಡ ಕವಿದಿದೆ. ಮಕ್ಕಳು ಗೊಂದಲದಲ್ಲಿದ್ದಾರೆ. ಆದಷ್ಟು ಬೇಗ ಇದಕ್ಕೆ ಸ್ಪಷ್ಟತೆ ನೀಡುವುದು ಮಕ್ಕಳ ಮತ್ತು ಶಿಕ್ಷಣದ ಹಿತದೃಷ್ಟಿಯಿಂದ ಒಳ್ಳೆಯದು.

 

Related Articles

Back to top button