
ಪ್ರಗತಿವಾಹಿನಿ ಸುದ್ದಿ; ಬೆಂಗಳೂರು: ಮಾಜಿ ಸಚಿವ ರಮೇಶ್ ಜಾರಕಿಹೊಳಿ ಸಿಡಿ ಪ್ರಕರಣ ತಿರುವು ಪಡೆದುಕೊಂಡಿದ್ದು, ಎಸ್ ಐಟಿ ವಿಚಾರಣೆ ಬಳಿಕ ಯುವತಿಯ ಪೋಷಕರು ಸುದ್ದಿಗೋಷ್ಠಿನಡೆಸಿದ್ದಾರೆ. ಓರ್ವ ಎಸ್ಟಿ ಹೆಣ್ಣುಮಗಳನ್ನು ಇಟ್ಟುಕೊಂಡು ಯಾವ ರೀತಿ ರಾಜಕಾರಣ ಮಾಡುತ್ತಿದ್ದಾರೆ ಎಂಬುದಕ್ಕೆ ನನ್ನ ಮಗಳು ಇಂದು ಉದಾಹರಣೆ ಎಂದು ಯುವತಿ ತಂದೆ ನೋವು ತೋಡಿಕೊಂಡಿದ್ದಾರೆ.
ಸುದ್ದಿಗೋಷ್ಠಿಯನ್ನುದ್ದೇಶಿಸಿ ಮಾತನಾಡಿದ ಯುವತಿಯ ತಂದೆ, ನಾನು ಓರ್ವ ಮಾಜಿ ಸೈನಿಕ. ದೇಶ ಕಾಯುವುದು ನನಗೆ ಗೊತ್ತಿರುವಾಗ ಮಗಳನ್ನು ಕಾಯುವುದು ಹೇಗೆಂದು ನನಗೆ ಗೊತ್ತಿಲ್ಲವೇ? ಆಕೆಯ ರಕ್ಷಣೆ ನನಗೆ ಗೊತ್ತಿಲ್ಲವೇ? ಆದರೆ ತಮ್ಮ ಹೊಲಸು ರಾಜಕಾರಣಕ್ಕಾಗಿ ನನ್ನ ಮಗಳನ್ನು ಯಾಕೆ ಬಳಸಿಕೊಂಡಿದ್ದೀರಿ? ಎಂದು ಪ್ರಶ್ನಿಸಿದ್ದಾರೆ. ರಾಜಕೀಯಕ್ಕೋಸ್ಕರ ನಮ್ಮ ಮಗಳನ್ನು ಒತ್ತೆಯಾಳಾಗಿ ಇಟ್ಟುಕೊಂಡು ರಾಜಕೀಯ ಮಾಡುತ್ತಿರುವುದು ಎಷ್ಟು ಸರಿ? ನಮ್ಮ ಮಗಳಿಗೆ ಏನೇ ಆದರೂ ಅದಕ್ಕೆ ಡಿಕೆ ಶಿವಕುಮಾರ್ ಅವರೇ ನೇರ ಹೊಣೆ ಎಂದು ಆಕ್ರೋಶ ವ್ಯಕ್ತಪಡಿಸಿದ್ದಾರೆ.
ನಮ್ಮ ಬಳಿ ಸಾಕಷ್ಟು ಸಾಕ್ಷಿಗಳಿವೆ. ಓರ್ವ ಹೆಣ್ಣುಮಗಳನ್ನು ಇಟ್ಟುಕೊಂಡು ರಾಜಕಾರಣ ಮಾಡಬೇಡಿ. ಡಿ.ಕೆ.ಶಿವಕುಮಾರ್ ಅವರು ನಮ್ಮ ಅಕ್ಕನನ್ನು ಗೋವಾಕ್ಕೆ ಕಳುಹಿಸಿದ್ದಾರೆ. ದಯವಿಟ್ಟು ನಮ್ಮ ಅಕ್ಕನನ್ನು ವಾಪಸ್ ಕಳುಹಿಸಿ ಎಂದು ಸಹೋದರ ಹೇಳಿದರು.