
ಪ್ರಗತಿವಾಹಿನಿ ಸುದ್ದಿ; ಬೆಂಗಳೂರು: ಬೆಂಗಳೂರಿನಲ್ಲಿ ಇತ್ತೀಚೆಗೆ ನಡೆದ ಜಾಗತಿಕ ಹೂಡಿಕೆದಾರರ ಸಮಾವೇಶದ ಹಿನ್ನೆಲೆಯಲ್ಲಿ 8 ಲಕ್ಷ ಕೋಟಿ ರೂ. ಗಳ ಹೂಡಿಕೆಯ ನಿರೀಕ್ಷೆಯಲ್ಲಿದ್ದೇವೆ. ಈ ಹೂಡಿಕೆಯ ಲಾಭ ಪಡೆಯಲು ಯುವಕರು ಕೌಶಲ್ಯಾಭಿವೃದ್ಧಿಗೆ ಒತ್ತು ನೀಡಬೇಕೆಂದು ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಅವರು ತಿಳಿಸಿದರು.
ಅವರು ಇಂದು ಶ್ರೀ ಕಂಠೀರವ ಒಳಾಂಗಣ ಕ್ರೀಡಾಂಗಣದಲ್ಲಿ ಉನ್ನತ ಶಿಕ್ಷಣ, ಕೌಶಲ್ಯಾಭಿವೃದ್ಧಿ ಮತ್ತು ಜೀವನೋಪಾಯ ಇಲಾಖೆ ಮತ್ತು ಐಟಿ, ಬಿಟಿ ಹಾಗೂ ವಿಜ್ಞಾನಮತ್ತು ತಂತ್ರಜ್ಙಾನ ಇಲಾಖೆಗಳು ಸಂಯುಕ್ತ ಆಶ್ರಯದಲ್ಲಿ ಆಯೋಜಿಸಲಾಗಿದ್ದ ಸುಶಾಸನ ದಿವಸ ಅಂಗವಾಗಿ 10 ಸಾವಿರ ಯುವಜನರಿಗೆ ಉದ್ಯೋಗ ಪತ್ರ ನೀಡುವ ಕಾರ್ಯಕ್ರಮದಲ್ಲಿ ಭಾಗವಹಿಸಿ ಮಾತನಾಡಿದರು.
ಈ ಬೃಹತ್ ಪ್ರಮಾಣದ ಹೂಡಿಕೆ ಹರಿದು ಬಂದಾಗ ಅದಕ್ಕೆ ತಕ್ಕಂತ ಕೌಶಲ್ಯ ಯುತ ಮಾನವ ಸಂಪನ್ಮೂಲ ಅತಿ ಅಗತ್ಯ. ಇಲ್ಲವಾದರೆ ಹೂಡಿಕೆ ಯಶಸ್ವಿಯಾಗುವುದಿಲ್ಲ. ಕೌಶಲ್ಯ ಪಡೆಯುವ ಮೂಲಕ ಯುವಕರು ಉತ್ತಮ ವೇತನದ ಉದ್ಯೋಗ ಪಡೆಯಲು ಸಾಧ್ಯ ಎಂದು ಅವರು ತಿಳಿಸಿದರು.
ಶಿಕ್ಷಣ, ಕೌಶಲ್ಯ, ವ್ಯಕ್ತಿತ್ವ ವಿಕಸನ
ಕರ್ನಾಟಕದಇತಿಹಾಸದಲ್ಲಿ ಒಂದೇ ದಿವಸ 10 ಸಾವಿರ ಜನರಿಗೆ ಉದ್ಯೋಗ ಕೊಡುವ ಮೇಳ ಅಪರೂಪವಾದುದು ಎಂದು ಅಭಿಪ್ರಾಯ ವ್ಯಕ್ತಪಡಿಸಿದ ಮುಖ್ಯಮಂತ್ರಿಗಳು, ಇವತ್ತು, ಜಾಗತೀಕರಣ, ಉದಾರೀಕರಣ, ಖಾಸಗೀಕರಣದ ನಂತ ಎಲ್ಲ ದೇಶಗಳೊಂದಿಗೆ ಅನಿವಾರ್ಯವಾಗಿ ಪೈಪೋಟಿ ಮಾಡಬೇಕಾಗಿದೆ. ಇದಕ್ಕೆ ಶಿಕ್ಷಣ, ಕೌಶಲ್ಯ ಹಾಗೂ ವ್ಯಕ್ತಿತ್ವ ವಿಕಸನ ಅತಿ ಅಗತ್ಯ. ಈ ಮೂರನ್ನೂ ಒಗ್ಗೂಡಿಸಿ, ಯುವಕರಿಗೆ ಅವಕಾಶ ಕಲ್ಪಿಸುವ ಪ್ರಯತ್ನ ಮಾಡಿರುವುದು ಸರ್ಕಾರ ಕರ್ನಾಟಕ ಸರ್ಕಾರ ಮಾತ್ರ. ಸಚಿವ ಡಾ. ಅಶ್ವತ್ಥನಾರಾಯಣ ನೇತೃತ್ವದಲ್ಲಿ ತಮ್ಮ ಖಾತೆಯ ಎಲ್ಲ ಸಂಸ್ಥೆಗಳನ್ನು ಜೋಡಿಸಿ, ಶಿಕ್ಷಣ ಜೊತೆಗೆ ಉದ್ಯೋಗವನ್ನು ಕೊಟ್ಟು, ಇಡೀ ದೇಶಕ್ಕೆ ಮಾದರಿಯೆನಿಸಿದ್ದಾರೆ ಎಂದು ಮೆಚ್ಚುಗೆ ವ್ಯಕ್ತ ಪಡಿಸಿ, ಸಚಿವರು ಹಾಗೂ ಅಧಿಕಾರಿಗಳನ್ನು ಅಭಿನಂದಿಸಿದರು.
‘ನೀವು ಒಳ್ಳೆ ಉದ್ಯೋಗದಲ್ಲಿದ್ದರೆ ನಿಮ್ಮ ಸ್ವಾಭಿಮಾನ ಎತ್ತರದಲ್ಲಿರುತ್ತದೆ. ಅದರಲ್ಲಿ ಆತ್ಮವಿಶ್ವಾಸವಿರುತ್ತದೆ. ಆತ್ಮವಿಶ್ವಾಸದಿಂದ ದೊಡ್ಡ ಸಾಧನೆ ಮಾಡಲು ಸಾಧ್ಯವಾಗುತ್ತದೆ. ದೊಡ್ಡ ಸಾಧನೆ ಮಾಡಲು ಶಿಕ್ಷಣದೊಂದಿಗೆ ಕೌಶಲ್ಯ ಅಗತ್ಯ. ದಶಕದ ಹಿಂದೆ ಭಾರತ ದೇಶದಲ್ಲಿ ಜನಸಖ್ಯೆ ಅಭಿವೃದ್ಧಿಗೆ ಮಾರಕ ಎಂಬ ಭಾವನೆ ಪರಿಣತರಲ್ಲಿತ್ತು. ಅದನ್ನು ಸುಳ್ಳು ಮಾಡಿ, ನಮ್ಮೆಲ್ಲರ ನೆಚ್ಚಿನ ಪ್ರಧಾನಿ ನರೇಂದ್ರ ಮೋದಿಜಿಯವರು ಜನಸಂಖ್ಯೆಯನ್ನು ಸಂಪನ್ಮೂಲವಾಗಿ ಬಳಸಿಕೊಳ್ಳುವ ಬಗ್ಗೆ ಮಾತನಾಡಿದ ಮೊದಲ ಪ್ರಧಾನ ಮಂತ್ರಿ. ದೇಶದಲ್ಲಿ ಶೇ. 46 ರಷ್ಟಿರುವ ಯುವಕರನ್ನು ಆರ್ಥಿಕ, ಸಾಮಾಜಿಕ ಹಾಗೂ ಒಟ್ಟಾರೆ ಅಭಿವೃದ್ಧಿಗೆ ಬಳಸಿಕೊಳ್ಳಲು ಕೌಶಲ್ಯ ಅಗತ್ಯವೆಂದು ಅರಿತ ಪ್ರಧಾನಮಂತ್ರಿಯವರು ಸ್ಕಿಲ್ ಇಂಡಿಯಾ ಯೋಜನೆ ಪ್ರಾರಂಭಿಸಿದರು. ಭಾರತದೇಶ ದೀನ್ ದಯಾಳ್ ಉಪಾಧ್ಯಾಯ ಕೌಶಲ್ಯಾಭಿವೃದ್ಧಿ ಯೋಜನೆ ರೂಪಿಸಿದರು. ಈ ತರಬೇತಿ ಯಲ್ಲಿ ಆತ್ಮರಕ್ಷಣೆ, ಪ್ರೆಸೆಂಟೇಷನ್ ಸ್ಕಿಲ್, ಫಿನಿಷಿಂಗ್ ಸ್ಕಿಲ್ಸ್, ವ್ಯಕ್ತಿತ್ವ ವಿಕಸನದಿಂದ ಉತ್ತಮ ಅವಕಾಶ ದೊರೆಯುತ್ತದೆ ಎಂದು ವಿವರಿಸಿದರು.
ಯಶಸ್ವಿಯಾಗಿ; ಇತರರಿಗೆ ನೆರವಾಗಿ
ಈಗ ಎಲ್ಲರಿಗೂ ಶಿಕ್ಷಣದ ಅವಕಾಶವಿದೆ. ವೈಯಕ್ತಿಕವಾಗಿ ನೀವು ಯಶಸ್ಸು ಕಂಡರೆ, ಇತರರಿಗೆ ಸಹಾಯ ಮಾಡಲು ಸಾಧ್ಯ. ನಿಮ್ಮ ಜೀವನದ ಗುರಿ ಯಾವಾಗಲೂ ಕೊಡುವ ಸ್ಥಾನದಲ್ಲಿರಬೇಕು. ನಿಮ್ಮ ಕೈ ಭೂಮಿಯನ್ನು ನೋಡಬೇಕು. ಆಕಾಶವನ್ನಲ್ಲ. ಕೌಶಲ್ಯ ಅಭಿವೃದ್ಧಿಯಿಂದ ಇದು ಸಾಧ್ಯ ಎಂದು ಅವರು ಅಭಿಪ್ರಾಯಪಟ್ಟರು.
ಈ ದೇಶಕ್ಕೆ ಬಹಳ ದೊಡ್ಡ ಭವಿಷ್ಯವಿದೆ. ಪಾಶ್ಚಿಮಾತ್ಯ ದೇಶಗಳು ಆರ್ಥಿಕ ಹಿಂಜರಿತ ಕಾಣುತ್ತಿದೆ. ಚೈನಾ ದೇಶ ಕೋವಿಡ್ ನಿಂದಾಗಿ ತತ್ತರಿಸಿದೆ. ದೇಶದ ಆರ್ಥಿಕತೆಗೆ ಗಂಡಾಂತರ ಬಂದಿದೆ. ಬೇಡಿಕೆ ಹೆಚ್ಚಾಗಿದೆ. ಪೂರೈಕೆ ಕಡಿಮೆಯಾಗಿದೆ. ಇದನ್ನು ಸರಿದೂಗಿಸುವ ಸಾಮರ್ಥ್ಯ ಭಾರತ ದೇಶಕ್ಕೆ ಮಾತ್ರವಿದೆ ಎಂದು ನುಡಿದರು.
ಭಾರತದ ಆರ್ಥಿಕತೆ ಮೇಲೆರುವ ಸಂದರ್ಭದಲ್ಲಿ ನೀವಿದ್ದೀರಿ. ಭಾರತದ ಅಭಿವೃಧ್ಧಿಯ ವಿಮಾನದಲ್ಲಿ ನೀವು ಕುಳಿತಿದ್ದೀರಿ. ನಿಮ್ಮ ಭವಿಷ್ಯ ನಿಮ್ಮ ಕೈಯಲ್ಲಿದೆ. ಕಠಿಣ ಪರಿಶ್ರಮ, ಏಕಾಗ್ರತೆಯಿಂದ ಮಾತ್ರ ಯಶಸ್ಸು ಸಾಧ್ಯ ಎಂದು ಅವರು ನುಡಿದರು.
ಮುದ್ರಾ ಯೋಜನೆ: ರಾಜ್ಯದ 25 ಲಕ್ಷ ಯುವಕರಿಗೆ ಅನುಕೂಲ
ಪ್ರಧಾನಿಯವರು ಸ್ಕಿಲ್ ಇಂಡಿಯಾದೊಂದಿಗೆ ಯುವಜನರ ಸ್ವಾಭಿಮಾನಿ, ಸ್ವಾವಲಂಬನೆಯ ಬದುಕಿದಾಗಿ ಮುದ್ರಾ ಸಾಲ ಯೋಜನೆ ಜಾರಿಗೆ ತಂದರು. ಭಾರತ ದೇಶದಲ್ಲಿ 6.5 ಕೋಟಿ ಯುವಕರು ಹಾಗೂ ಕರ್ನಾಟಕದಲ್ಲಿ 25 ಲಕ್ಷ ಯುವಜನರಿಗೆ ಇದರಿಂದ ಅನುಕೂಲವಾಗಿದೆ. ನೀವು ಕೂಡ ಈ ಸಾಲ ಸೌಲಭ್ಯ ಪಡೆಯಬಹುದು. ಉದ್ಯೋಗ ಪಡೆಯುವುದಕ್ಕಿಂತ ಉದ್ಯಮಿಗಳಾಗುವ ಪ್ರಯತ್ನ ಮಾಡಬೇಕು ಎಂದು ಅವರು ಸಲಹೆ ನೀಡಿದರು.
ಭಾರತ ದೇಶಕ್ಕೆ, ಅದರಲ್ಲೂ ಕರ್ನಾಟಕಕ್ಕೆ ಉತ್ತಮ ಭವಿಷ್ಯವಿದೆ. ರಾಜ್ಯದಲ್ಲಿ ಬೇರೆಲ್ಲೂ ಜಾರಿಯಲ್ಲಿ ಇಲ್ಲದ, ಉದ್ಯೋಗ ನೀತಿಯನ್ನು ಜಾರಿ ಮಾಡಲಾಗಿದೆ. ಹೆಚ್ಚು ಉದ್ಯೋಗ ನೀಡುವ ಉದ್ಯಮಗಳಿಗೆ ಪ್ರೋತ್ಸಾಹಕ ನೀಡಲಾಗುತ್ತಿದೆ. ಕನ್ನಡಿಗರಿಗೆ ಹೆಚ್ಚು ಉದ್ಯೋಗ ದೊರೆಯಲಿ ಎಂಬ ಆಶಯದೊಂದಿಗೆ ಈ ನೀತಿ ಜಾರಿಗೆ ತರಲಾಗಿದೆ ಎಂದು ಅವರು ತಿಳಿಸಿದರು.
ಅಂತೆಯೇ ರಾಜ್ಯದಲ್ಲಿ ಸಂಶೋಧನೆ ಮತ್ತು ಅಭಿವೃದ್ಧಿ ನೀತಿ ಜಾರಿಯಲ್ಲಿದೆ. ಬೆಂಗಳೂರಿನಲ್ಲಿ ವಿದ್ಯುತ್ ಚಾಲಿತ ವಾಹನಗಳ ಕುರಿತ ಅತಿ ಹೆಚ್ಚು ಸಂಖ್ಯೆಯ ಸಂಶೋಧನೆ ಮತ್ತು ಅಭಿವೃದ್ಧೀ ಕೇಂದ್ರಗಳಿವೆ. ಹೆಚ್ಚು ವಿದ್ಯುತ್ ಚಾಲಿತ ವಾಹನ ಬಳಕೆದಾರರೂ ಕರ್ನಾಟಕದಲ್ಲಿದ್ದಾರೆ. ಆದರೆ ವಿದ್ಯುತ್ ಚಾಲಿನ ವಾಹನಗಳ ತಯಾರಿಕೆ ಇತರ ರಾಜ್ಯಗಳಲ್ಲಿ ಆಗುತ್ತಿದೆ. ತಯಾರಿಕೆಯೂ ಕರ್ನಾಟಕದಲ್ಲಿ ಮಾಡುವಂತೆ ಉದ್ಯಮಿಗಳ ಮನವೊಲಿಸಲಾಗುತ್ತಿದೆ ಎಂದು ತಿಳಿಸಿದರು.
ಗ್ರಾಮೀಣ ಮಹಿಳೆಯರು, ಯುವಕರಿಗೆ ವಿಶೇಷ ಯೋಜನೆ:
ಗ್ರಾಮೀಣ ಮಹಿಳೆಯರು, ಯುವಕರಿಗೆ ಉದ್ಯೋಗಾವಕಾಶ ಕಲ್ಪಿಸಲು ವಿಶೇಷ ಕಾರ್ಯಕ್ರಮ ರೂಪಿಸಲಾಗಿದೆ. ಸ್ತ್ರೀ ಸಾಮರ್ಥ್ಯ ಯೋಜನೆಯಡಿ 23 ಯೋಜನೆಗಳನ್ನು ಗುರುತಿಸಲಾಗಿದ್ದು, ಅವುಗಳಿಗೆ 5 ಲಕ್ಷ ರೂ. ವರೆಗೆ ಹಣಕಾಸು ಸೌಲಭ್ಯ ಒದಗಿಸಲಾಗುತ್ತಿದ್ದು, ಈ ಮೊತ್ತವು 1.5 ಲಕ್ಷ ರೂ. ಸಬ್ಸಿಡಿಯನ್ನು ಒಳಗೊಂಡಿದೆ. 5 ಲಕ್ಷ ಹೆಣ್ಣುಮಕ್ಕಳಿಗೆ ಉದ್ಯೋಗ ಒದಗಿಸುವ ಗುರಿ ಹೊಂದಲಾಗಿದೆ. ಅಂತೆಯೇ ಸ್ವಾಮಿ ವಿವೇಕಾನಂದ ಯುವಶಕ್ತಿ ಯೋಜನೆಯಡಿ ಗ್ರಾಮೀಣ ಯುವಕರ ಸ್ವಸಹಾಯ ಸಂಘಗಳಿಗೆ ಸ್ವಯಂ ಉದ್ಯೋಗ ಕೈಗೊಳ್ಳಲು ಎಂಡ್-ಟು-ಎಂಡ್ ನೆರವು ನೀಡಲಾಗುತ್ತಿದೆ. ಈ ವರ್ಷ 5 ಲಕ್ಷ ಯುವಕರಿಗೆ ಅನುಕೂಲ ಕಲ್ಪಿಸುವ ಗುರಿಯಿದೆ. ಸತತ 5 ವರ್ಷ ಈ ಯೋಜನೆಯನ್ನು ಮುನ್ನಡೆಸಿದಲ್ಲಿ ಗ್ರಾಮೀಣ ಪ್ರದೇಶದ ಎಲ್ಲ ಯುವಕರಿಗೆ ಉದ್ಯೋಗ ದೊರೆಯಲಿದೆ ಎಂದು ತಿಳಿಸಿದರು.
ದುಡಿಯುವ ವರ್ಗಗಳಿಗೆ ಆದ್ಯತೆ
ನಮ್ಮ ಸರ್ಕಾರ ಶಿಕ್ಷಣದ ಮೂಲಕ ಉದ್ಯೋಗಕ್ಕೆ ದಾರಿ ಮಾಡಿದೆ. ರೈತ ವಿದ್ಯಾನಿಧಿ, ಕೃಷಿ ಕೂಲಿಕಾರರು, ಮೀನುಗಾರರು, ಟ್ಯಾಕ್ಸಿ ಚಾಲಕರು, ಟೈಲರುಗಳು , ನೇಕಾರರು ಮೊದಲಾದ ದುಡಿಯುವ ವರ್ಗದವರ ಮಕ್ಕಳಿಗೆ ಉತ್ತಮ ಶಿಕ್ಷಣ ಒದಗಿಸಲು ಪೂರಕವಾಗಿ ವಿದ್ಯಾನಿಧಿ ಯೋಜನೆಯನ್ನು ಜಾರಿಗೆ ತರಲಾಗಿದೆ.
ದುಡಿಮೆಯೇ ದೊಡ್ಡಪ್ಪ ಎಂಬ ನೀತಿಯೊಂದಿಗೆ ದುಡಿಯುವ ವರ್ಗಗಳವರ ಅನುಕೂಲಕ್ಕಾಗಿ ಈ ಯೋಜನೆ ಜಾರಿಗೊಳಿಸಲಾಗಿದೆ. ಮುಂಬರುವ ಆಯವ್ಯಯದಲ್ಲಿ ಯುವಕರಿಗೆ ಉತ್ತಮ ಶಿಕ್ಷಣ, ತರಬೇತಿ ನೀಡುವ ಕುರಿತಾದ ಯೋಜನೆಗಳನ್ನು ರೂಪಿಸಲಾಗುವುದು.
ಕೌಶಲ್ಯಾಭಿವೃದ್ಧಿಗೆ ಸಾಂಸ್ಥಿಕ ರೂಪ ಕೌಶಲ್ಯಾಭಿವೃದ್ಧಿಗೆ ನಮ್ಮ ಸರ್ಕಾರ ಸಾಂಸ್ಥಿಕ ರೂಪ ನೀಡಿ, ಅಕ್ರಮವನ್ನು ತಡೆಗಟ್ಟಿದೆ. ಖಾಸಗಿ ಸಹಭಾಗಿತ್ವದೊಂದಿಗೆ ಈಗಾಗಲೇ 150 ಐಟಿಐ ಗಳ ಉನ್ನತೀಕರಣವಾಗಿದ್ದು, ಒಟ್ಟು 180 ಐಟಿಐಗಳನ್ನು ಉನ್ನತೀಕರಿಸಲಾಗುತ್ತಿದೆ. ಆಯಾ ಭಾಗದ ಯುವಜನರಿಗೆ ಅಲ್ಪಾವಧಿ ಕೋರ್ಸ್ಗಳನ್ನು ಆಯೋಜಿಸುವಂತೆ ಇಲಾಖೆಗೆ ಸಲಹೆ ನೀಡಲಾಗಿದೆ. ಈ ಐಟಿಐಗಳ ಉನ್ನತೀಕರಣಕ್ಕೆ ಖಾಸಗಿ ವಲಯದವರ ಕೊಡುಗೆಯನ್ನು ಕೃತಜ್ಞತೆಯಿಂದ ಸ್ಮರಿಸುವುದಾಗಿ ಮುಖ್ಯಮಂತ್ರಿಗಳು ತಿಳಿಸಿದರು.
ದೂರದೃಷ್ಟಿಯ ಅಜಾತಶತ್ರು ನಾಯಕ ವಾಜಪೇಯಿ
ಮಾಜಿ ಪ್ರಧಾನಿ ವಾಜಪೇಯಿ ಅವರ ಜನ್ಮದಿನವನ್ನು ಸುಶಾಸನ ದಿವಸ ಎಂದು ಆಚರಿಸಲಾಗುತ್ತಿದೆ. ಅವರು ಶಾಸ್ತ್ರೀಜಿಯವರ ಜೈ ಜವಾನ್ ಜೈ ಕಿಸಾನ್ ಘೋಷವಾಕ್ಯಕ್ಕೆ ಜೈ ವಿಜ್ಞಾನ್ ಎಂದು ಸೇರ್ಪಡೆ ಮಾಡಿದ ದೂರದೃಷ್ಟಿಯ ಶ್ರೇಷ್ಠ ನಾಯಕ; ಅಜಾತ ಶತ್ರು. ಪೋಖ್ರಾನ್ ಪರಮಾಣು ಬಾಂಬ್ ಸ್ಫೋಟದ ಮೂಲಕ ಭಾರತದ ಪರಮಾಣು ಶಸ್ತ್ರ ಸಾಮರ್ಥ್ಯವನ್ನು ಜಗತ್ತಿಗೆ ತಿಳಿಸಿದರು. ಸರ್ವಶಿಕ್ಷಣ ಅಭಿಯಾನ, ಪ್ರಧಾನ ಮಂತ್ರಿ ಗ್ರಾಮೀಣ ಸಡಕ್ ಯೋಜನಾ, ಸುವರ್ಣ ಚತುಷ್ಪಥ ರಸ್ತೆಗಳ ಮೂಲಕ ದೇಶದ ಅಭಿವೃದ್ಧಿಗೆ ಮಹತ್ತರ ಕೊಡುಗೆ ನೀಡಿದರು. ಅಂತರರಾಷ್ಟ್ರೀಯ ಮಟ್ಟದಲ್ಲಿ ದೇಶದ ಬೆಳವಣಿಗೆಗೆ ಭದ್ರ ಅಡಿಪಾಯ ಹಾಕಿದರು. ಸುಶಾಸನ ದಿನವೆಂದು ಆಚರಿಸುವ ಅವರ ಜನ್ಮದಿನದಂದು ಮೂರೂ ಇಲಾಖೆಗಳು ಉತ್ತಮ ಆಡಳಿತದ ಫಲಿತಾಂಶವಾಗಿ 10 ಸಾವಿರ ಯುವಕರಿಗೆ ಉದ್ಯೋಗ ಪತ್ರ ವಿತರಿಸಿರುವುದು ಅಭಿನಂದನೀಯ ಎಂದು ತಿಳಿಸಿದರು.
ಉನ್ನತ ಶಿಕ್ಷಣ, ಕೌಶಲ್ಯಾಭಿವೃದ್ಧಿ ಹಾಗೂ ಐಟಿ ಬಿಟಿ ಮತ್ತು ವಿಜ್ಞಾನ, ತಂತ್ರಜ್ಞಾನ ಸಚಿವ ಡಾ. ಅಶ್ವತ್ಥನಾರಾಯಣ, ಕೌಶಲ್ಯಾಭಿವೃದ್ಧಿ ಇಲಾಖೆಯ ಪ್ರಧಾನ ಕಾರ್ಯದರ್ಶಿ ಡಾ.ಎಸ್. ಸೆಲ್ವಕುಮಾರ್ ಮತ್ತು ಇತರ ಹಿರಿಯ ಅಧಿಕಾರಿಗಳು ಸಮಾರಂಭದಲ್ಲಿ ಭಾಗವಹಿಸಿದ್ದರು.
*ಭಾರತೀಯತೆ ಅಂದ್ರೆ ಮಾನವೀಯತೆ: ಸಿಎಂ ಬೊಮ್ಮಾಯಿ*
https://pragati.taskdun.com/spirit-of-india-programmeatal-vison-foundation-and-karnataka-working-journalists-associationcm-basavaraj-bommai/