Latest

ನಿತ್ಯ 18 ಕಿ.ಮೀ ಕಾಲ್ನಡಿಗೆ; ಕುರುಡಾಗಿರುವ ಅಧಿಕಾರಿಗಳು; ಎಲ್ಲಿದೆ ಶಿಕ್ಷಣ ಇಲಾಖೆಯ ಯೋಜನೆಗಳು?

ಪ್ರಗತಿವಾಹಿನಿ ಸುದ್ದಿ; ಕಾರವಾರ: ತಾಲೂಕಿನ ದೇವಳಮಕ್ಕಿ ಗ್ರಾಮ ಪಂಚಾಯಿತಿ ವ್ಯಾಪ್ತಿಯ ಕುಗ್ರಾಮವಾದ ಶಿರ್ವೆಯ ಶಾಲಾ-ಕಾಲೇಜು ವಿದ್ಯಾರ್ಥಿಗಳು ಪ್ರತಿನಿತ್ಯ ಶಿಕ್ಷಣವನ್ನು ಪಡೆಯಲು ದಟ್ಟವಾದ ಕಾಡು ಇರುವ ರಸ್ತೆಯಿಂದ ಹೋಗಿ ಬರುವುದಕ್ಕೆ ಒಟ್ಟು 18 ಕಿ.ಮೀ (9 ಕಿಮೀ ಹೋಗಿ, 9 ಕಿಮೀ ಬರಬೇಕು) ಕಾಲ್ನಡಿಗೆ ಮೂಲಕ ಕ್ರಮಿಸಬೇಕಾಗಿದೆ.

ಪ್ರೌಢಶಾಲಾ ವಿದ್ಯಾರ್ಥಿಗಳಿಗೆ ನೀಡುತ್ತಿರುವ ಉಚಿತ ಬೈಸಿಕಲ್ ವಿತರಣೆಯನ್ನು ಸರಕಾರ  ಸ್ಥಗಿತಗೊಳಿಸಿದೆ. ಇದರಿಂದ ಶಿರ್ವೆಯ ವಿದ್ಯಾರ್ಥಿಗಳಿಗೆ ಬೈಸಿಕಲ್ ಸೌಲಭ್ಯ ಇಲ್ಲದೆ ಈಗ ಕಾಲ್ನಡಿಗೆ ಮೂಲಕ ಶಾಲೆಗೆ ಹೋಗುವುದು ಅನಿವಾರ್ಯವಾಗಿದೆ.

ಶಿರ್ವೆ ಗ್ರಾಮದಿಂದ ದೇವಳಮಕ್ಕಿಯ ಆದರ್ಶ ವಿದ್ಯಾಲಯದಲ್ಲಿ 18 ವಿದ್ಯಾರ್ಥಿಗಳು ಕೇರವಡಿಯ ದುರ್ಗಾದೇವಿ ಪದವಿಪೂರ್ವ ಕಾಲೇಜಿನಲ್ಲಿ 9 ವಿದ್ಯಾರ್ಥಿಗಳು, ಹಾಗೂ ಸಿದ್ದರ ಐಟಿಐದಲ್ಲಿ ಒಬ್ಬ ವಿದ್ಯಾರ್ಥಿ ವಾಸ್ಯಂಗ ಮಾಡುತ್ತಿದ್ದಾರೆ.

ಅಷ್ಟು ಮಾತ್ರವಲ್ಲದೆ ಆ ಗ್ರಾಮಸ್ಥರು ಬೇರೆ ಕಡೆ ಕೂಲಿ ಕೆಲಸವನ್ನು ಮಾಡಬೇಕಾದರೆ ತಮ್ಮ ಗ್ರಾಮದಿಂದ ಬೇರೆ ಗ್ರಾಮದ ಕಡೆ ತಮ್ಮ ಗ್ರಾಮದಲ್ಲಿ ಯಾವುದೇ ಸಾರಿಗೆ ಸೌಕರ್ಯ ಇಲ್ಲದೆ ಕಾಲ್ನಡಿಗೆ ಮೂಲಕ ಹೋಗಿ ಬರುವುದಕ್ಕೆ ತುಂಬಾ ತೊಂದರೆ ಅನುಭವಿಸುವಂತಾಗಿದೆ.

Home add -Advt

ಬೆಳಿಗ್ಗೆ 7 ಗಂಟೆಯಿಂದ ಕಾಲ್ನಡಿಗೆ ಮೂಲಕ ನಡೆದು ಸರಿಯಾದ ಸಮಯಕ್ಕೆ ಶಾಲಾ ಕಾಲೇಜಿಗೆ ಹೋಗುವುದು ಪ್ರಯಾಸವಾಗಿದೆ. 6 ಘಂಟೆ ಕಾಲ ಕಾಲ್ನಡಿಗೆ ಮೂಲಕ ಹೋಗಿ ಬರಲು ಸಮಯ ಹೋಗುತ್ತದೆ. ಇದರಿಂದ ಶಿರ್ವೆ ಗ್ರಾಮದ ವಿದ್ಯಾರ್ಥಿಗಳಿಗೆ ಸರಿಯಾಗಿ ವಿದ್ಯಾಭ್ಯಾಸ ಮಾಡಲು ಸಹ ಸಮಯಾವಕಾಶ ಸಿಗುವುದಿಲ್ಲ.

ದೇವಳಮಕ್ಕಿ ಗ್ರಾಮದಿಂದ ಶಿರ್ವೆ ಗ್ರಾಮದ ತನಕ ಪ್ರಧಾನ ಮಂತ್ರಿ ಗ್ರಾಮ ಸಡಕ ಯೋಜನೆ ಅಡಿಯಲ್ಲಿ ಅಂದಾಜು 4 ಕೋಟಿ 35 ಲಕ್ಷ ರೂಪಾಯಿ ವೆಚ್ಚದ ಹೊಸದಾದ ಡಾಂಬರೀಕರಣ ರಸ್ತೆ ಸಂಪರ್ಕ ಇದ್ದರೂ ಸಹ ಇನ್ನೂ ತನಕ ಬಸ್ ಸಂಚಾರ ಇಲ್ಲ ಎಂದು ಅಲ್ಲಿನ ಗ್ರಾಮಸ್ಥರು ತಮ್ಮ ಅಳಲು ತೋಡಿಕೊಂಡಿದ್ದಾರೆ.

ಕುಗ್ರಾಮದ ವಿದ್ಯಾರ್ಥಿಗಳು ಯಾವುದೇ ಕಾರಣ ಇಲ್ಲದೇ ಶಿಕ್ಷಣದಲ್ಲಿ ವಂಚಿತರಾಗಬಾರದು ಎಂದು ಹತ್ತಾರು ಯೋಜನೆ ಜಾರಿಗೆ ಬರುತ್ತದೆ. ಆದರೆ ಶಿರ್ವೆ ಗ್ರಾಮದ ವಿದ್ಯಾರ್ಥಿಗಳಿಗೆ ಯಾವುದೇ ಸೌಲಭ್ಯ ಸಿಗುವುದಿಲ್ಲ ಎಂದು ಗ್ರಾಮಸ್ತರ ದೂರು. ದಿನಾಲೂ ಕಾಲ್ನಡಿಗೆ ಮೂಲಕ ಕಷ್ಟವನ್ನು ಪಡುತ್ತಿರುವ ವಿದ್ಯಾರ್ಥಿಗಳ ನೋವನ್ನು ಶಿಕ್ಷಣ ಇಲಾಖೆಯ ಅಧಿಕಾರಿಗಳು ಗಮನಿಸಬೇಕಾಗಿದೆ.

ಈ ಬಗ್ಗೆ ದೇವಳಮಕ್ಕಿ ಯುವ ಮುಖಂಡ ಪ್ರಜ್ವಲ್ ಬಾಬುರಾಯ ಶೇಟ್, ಶಿರ್ವೆ ಗ್ರಾಮದ ಯಾವೊಬ್ಬ ವಿದ್ಯಾರ್ಥಿ ಕೂಡ ಶಿಕ್ಷಣದಿಂದ ವಂಚಿತರಾಗಬಾರದು. ಹಲವು ವರ್ಷಗಳಿಂದ ಅವರು ಕಾಲ್ನಡಿಗೆ ಮೂಲಕ ಶಾಲಾ-ಕಾಲೇಜುಗಳಿಗೆ ಹೋಗುತ್ತಿದ್ದಾರೆ. ಅವರಿಗೆ ಯಾವುದೇ ಕಷ್ಟವಾಗದಂತೆ ಸಂಬಂಧ ಪಟ್ಟ ಅಧಿಕಾರಿಗಳು ಪರ್ಯಾಯ ಸಾರಿಗೆ ವ್ಯವಸ್ಥೆ ಕಲ್ಪಿಸಬೇಕು ಎಂದು ಮನವಿ ಮಾಡಿದ್ದಾರೆ.

ನಾವು ಪ್ರತಿದಿನ ಶಾಲೆಗಳಿಗೆ ಕಾಲ್ನಡಿಗೆಯಲ್ಲಿಯೇ ಹೋಗಿ ಬಂದು ಮಾಡುತ್ತಿದ್ದೇವೆ. ಕಾಲುನೋವು ಬರುತ್ತಿದೆ ಎಂದು ಶಿರ್ವೆ ಪ್ರೌಢಶಾಲಾ ವಿದ್ಯಾರ್ಥಿನಿ ಭವಾನಿ ಸುಬ್ರಾಯ ಗೌಡ ಅಳಲು ತೋಡಿಕೊಂಡಿದ್ದಾರೆ.

ನಾನು ಎರಡುವರೆ ವರ್ಷಗಳಿಂದ ಹೈಸ್ಕೂಲ್ ಗೆ ಕಾಲ್ನಡಿಗೆ ಮೂಲಕ ಹೋಗುತ್ತಾ ಇದ್ದೇನೆ. ಇನ್ನು ತನಕ ನಮಗೆ ಯಾವುದೇ ಬಸ್ ವ್ಯವಸ್ಥೆ ಇಲ್ಲ ಎಂದು 10ನೇ ತರಗತಿ ವಿದ್ಯಾರ್ಥಿ ನಲೇಶ ಮಹಾದೇವ ಗೌಡ ಬೇಸರ ವ್ಯಕ್ತಪಡಿಸಿದ್ದಾರೆ.

ಸತತ ಐದನೇ ದಿನವೂ ವಿಚಾರಣೆ ಮುಂದೂಡಿದ ಹೈಕೋರ್ಟ್ ತ್ರಿಸದಸ್ಯ ಪೀಠ

Related Articles

Back to top button