
ಪ್ರಗತಿವಾಹಿನಿ ಸುದ್ದಿ, ಬೆಂಗಳೂರು: ಕನ್ನಡ ಸಾಹಿತ್ಯ ಪರಿಷತ್ತು 2020, 21 ಹಾಗೂ 22 ನೇ ಸಾಲಿನ ದಿ. ಶ್ರೀಮತಿ ತಾಯಮ್ಮ ಎಸ್.ಸಿ. ಮಲ್ಲಯ್ಯ ಜಾನಪದ ದತ್ತಿ ಪ್ರಶಸ್ತಿಗೆ ದತ್ತಿ ದಾನಿಗಳ ಆಶಯದಂತೆ ಮಂಡ್ಯ ಜಿಲ್ಲೆಯ ಒಬ್ಬರು ಜನಪದ ಕಲಾವಿದರು ಸೇರಿದಂತೆ ರಾಜ್ಯದಲ್ಲಿ ಜಾನಪದ ಕ್ಷೇತ್ರಗಳಲ್ಲಿ ಗಣನೀಯ ಸಾಧನೆಗೈದ ಒಟ್ಟು ಮೂರು ಜನರನ್ನು ಆಯ್ಕೆ ಮಾಡಲಾಗುತ್ತದೆ. ಅದರಂತೆ ಮೂರು ವರ್ಷಗಳ ಪ್ರಶಸ್ತಿಗಾಗಿ ಒಂಬತ್ತು ಜನಪದ ಸಾಧಕರನ್ನು ಆಯ್ಕೆ ಮಾಡಲಾಗಿದೆ ಎಂದು ಕನ್ನಡ ಸಾಹಿತ್ಯ ಪರಿಷತ್ತಿನ ಅಧ್ಯಕ್ಷ ನಾಡೋಜ ಡಾ. ಮಹೇಶ ಜೋಶಿ ತಿಳಿಸಿದ್ದಾರೆ.
ದಿ.ಶ್ರೀಮತಿ ತಾಯಮ್ಮ ಎಸ್.ಸಿ. ಮಲ್ಲಯ್ಯ ಜಾನಪದ ದತ್ತಿʼ ಪ್ರಶಸ್ತಿಯನ್ನು ಮಂಡ್ಯ ಜಿಲ್ಲೆಯ ಹಿರಿಯ ಸಮಾಜಸೇವಕ ಎಸ್.ಎಂ. ಶಂಕರ್ ಅವರು ಕನ್ನಡ ಸಾಹಿತ್ಯ ಪರಿಷತ್ತಿನಲ್ಲಿ ಈ ದತ್ತಿಯನ್ನು ಸ್ಥಾಪಿಸಿದ್ದು. ಪ್ರತಿ ವರ್ಷ ಜನಪದ ಕ್ಷೇತ್ರದಲ್ಲಿ ಸಾಧನೆ ಮಾಡಿದ ಕಲಾವಿದರನ್ನು ಗುರುತಿಸಿ ಗೌರವಿಸಲಾಗುತ್ತದೆ.
2020ನೇ ಸಾಲಿನ ʻದಿ. ಶ್ರೀಮತಿ ತಾಯಮ್ಮ ಎಸ್.ಸಿ. ಮಲ್ಲಯ್ಯ ಜಾನಪದ ದತ್ತಿʼ ಮಂಡ್ಯದ ಲಾವಣಿಪದ ಕಲಾವಿದ ಆರ್.ಕೆ. ಸ್ವಾಮಿ, ಚನ್ನಪಟ್ಟಣದ ಡೊಳ್ಳುಕುಣಿತ ಕಲಾವಿದೆ ಲಕ್ಷ್ಮಿ ಶ್ರೀನಿವಾಸ್ ಹಾಗೂ ಶ್ರೀರಂಗಪಟ್ಟಣದ ನೀಲಗಾರರ ಪದ ಹಾಡುವ ಕಲಾವಿದ ಮಂಟೆ ಲಿಂಗಯ್ಯ ಅವರನ್ನು ಆಯ್ಕೆ ಮಾಡಲಾಗಿದೆ.
2021 ನೇ ಸಾಲಿನ ʻದಿ. ಶ್ರೀಮತಿ ತಾಯಮ್ಮ ಎಸ್.ಸಿ. ಮಲ್ಲಯ್ಯ ಜಾನಪದ ದತ್ತಿʼ ಪ್ರಶಸ್ತಿಗಾಗಿ ಮಳವಳ್ಳಿಯ ತಮಟೆ ಕಲಾವಿದ ಕುಂತೂರು ಕುಮಾರ, ಕೆ.ಆರ್.ಪೇಟೆಯ ಜಾನಪದ ಹಾಡುಗಾರ್ತಿ ಶಾಂತಮ್ಮ ಪಿ.ಆರ್. ಹಾಗೂ ಗುಬ್ಬಿ ತಾಲೂಕಿನ ಚೇಳೂರು ಗ್ರಾಮದ ತಮಟೆ ಕಲಾವಿದೆ ತಮಟೆ ನರಸಮ್ಮ ಅವರನ್ನು ಆಯ್ಕೆಮಾಡಲಾಗಿದೆ.
2022 ನೇ ಸಾಲಿನ ʻದಿ. ಶ್ರೀಮತಿ ತಾಯಮ್ಮ ಎಸ್.ಸಿ. ಮಲ್ಲಯ್ಯ ಜಾನಪದ ದತ್ತಿ ಪ್ರಶಸ್ತಿಗಾಗಿ ಪಾಂಡವಪುರದ ಸೋಬಾನೆಪದ ಹಾಡುವ ಕಲಾವಿದೆ ಸೋಬಾನೆ ನಾಗಮ್ಮ, ಮಂಡ್ಯದ ಜಾನಪದ ಗೀತೆಗಳ ಗಾಯಕಿ ಮಂಜುಳ ಆಲದಳ್ಳಿ ಹಾಗೂ ಕೊಳ್ಳೇಗಾಲದ ಕಂಸಾಳೆ ಕಲಾವಿದ ಎಂ. ಕೈಲಾಸಮೂರ್ತಿ ಅವರನ್ನು ಆಯ್ಕೆ ಮಾಡಲಾಗಿದೆ ಎಂದು ಪ್ರಕಟಣೆಯಲ್ಲಿ ತಿಳಿಸಿದ್ದಾರೆ.
ಜಾನಪದ ಕಲಾವಿದರಿಗಾಗಿಯೇ ಮೀಸಲಾಗಿರುವ ʻದಿ. ಶ್ರೀಮತಿ ತಾಯಮ್ಮ ಎಸ್.ಸಿ. ಮಲ್ಲಯ್ಯ ಜಾನಪದ ದತ್ತಿ ಪ್ರಶಸ್ತಿಯನ್ನು ಜನಪದ ಕ್ಷೇತ್ರದ ವಿವಿಧ ವಿಭಾಗಗಳಲ್ಲಿ ಗಣನೀಯ ಸಾಧನೆ ಮಾಡಿದವರಿಗಾಗಿ ಮೀಸಲಿಡಲಾಗಿದ್ದು. ನಿರಂತರ ಸೇವೆ ಸಲ್ಲಿಸುತ್ತ ಉತ್ತಮ ಸಾಧನೆ ಮಾಡಿದವರಿಗೆ ಈ ಪ್ರಶಸ್ತಿಗಳನ್ನು ಕೊಡಲಾಗುತ್ತದೆ ಎಂದು ಕನ್ನಡ ಸಾಹಿತ್ಯ ಪರಿಷತ್ತು ಪ್ರಕಟಿಸಿದೆ.
ʻದಿ. ಶ್ರೀಮತಿ ತಾಯಮ್ಮ ಎಸ್.ಸಿ. ಮಲ್ಲಯ್ಯ ಜಾನಪದ ದತ್ತಿ ಪ್ರಶಸ್ತಿ ಆಯ್ಕೆ ಸಮಿತಿಯ ಅಧ್ಯಕ್ಷತೆ ವಹಿಸಿದ ಕನ್ನಡ ಸಾಹಿತ್ಯ ಪರಿಷತ್ತಿನ ಅಧ್ಯಕ್ಷ ನಾಡೋಜ ಡಾ. ಮಹೇಶ ಜೋಶಿ ಅವರು ಮಾಧ್ಯಮಗಳೊಂದಿಗೆ ಮಾತನಾಡಿ, “ಪ್ರಸ್ತುತ ದತ್ತಿ ಪ್ರಶಸ್ತಿಗಳು ಜಾನಪದ ಕ್ಷೇತ್ರಕ್ಕೆ ಮೀಸಲಿದ್ದು ಗ್ರಾಮಾಂತರ ಭಾಗದಲ್ಲಿ ತಮ್ಮ ನಿತ್ಯ ಬದುಕಿನಲ್ಲಿ ಜಾನಪದದೊಂದಿಗೆ ಸದ್ದಿಲ್ಲದೆ ವಿಸ್ತರಿಸುವ ಸಾಧಕರಿಗೆ ಕನ್ನಡ ಸಾಹಿತ್ಯ ಪರಿಷತ್ತು ಅಭಿನಂದಿಸುತ್ತದೆ. ಅವರ ಜಾನಪದ ಕ್ಷೇತ್ರದ ಸೇವೆ ಹಾಗೂ ನಮ್ಮ ನೆಲಮೂಲ ಸಂಸ್ಕೃತಿಯನ್ನು ಉಳಿಸಿಕೊಳ್ಳಲು ನಡೆಸುತ್ತಿರುವ ನಿರಂತರ ಪ್ರಯತ್ನ ಮುಂದುವರೆಯಲಿ ಎಂದು ಆಶಿಸುತ್ತದೆ. ಕನ್ನಡ ನಾಡಿನ ವಿವಿಧ ಕ್ಷೇತ್ರಗಳಲ್ಲಿ ಅಪರಿಮಿತ ಸಾಧನೆ ಮಾಡಿರುವ ಗಣ್ಯರನ್ನು ಸೂಕ್ಷ್ಮವಾಗಿ ಗಮನಿಸಿ, ದತ್ತಿ ದಾನಿಗಳ ಆಶಯಕ್ಕೆ ಯಾವುದೇ ಚ್ಯುತಿಯಾಗದ ರೀತಿಯಲ್ಲಿ ಆಯ್ಕೆ ಸಮಿತಿ ಆಯ್ಕೆ ಮಾಡಿದೆ” ಎಂದು ಹೇಳಿದ್ದಾರೆ.
ನಾಡೋಜ ಡಾ. ಮಹೇಶ ಜೋಶಿ ಅವರ ಅಧ್ಯಕ್ಷತೆಯಲ್ಲಿ ನಡೆದ ಆಯ್ಕೆ ಸಮಿತಿಯಲ್ಲಿ ಕನ್ನಡ ಸಾಹಿತ್ಯ ಪರಿಷತ್ತಿನ ಮಂಡ್ಯ ಜಿಲ್ಲಾಧ್ಯಕ್ಷ ರವಿಕುಮಾರ ಚಾಮಲಾಪುರ, ಗುರುಚರಣ ಮಂಡ್ಯ, ಪರಿಷತ್ತಿನ ಗೌರವ ಕಾರ್ಯದರ್ಶಿ ಡಾ. ಪದ್ಮಿನಿ ನಾಗರಾಜು ಹಾಗೂ ಗೌರವ ಕೋಶಾಧ್ಯಕ್ಷರಾದ ಡಾ. ಬಿ.ಎಂ.ಪಟೇಲ್ ಪಾಂಡು ಅವರು ಉಪಸ್ಥಿತರಿದ್ದರು.