*ಕೈಗಾರಿಕೆಗಳ ವಿರುದ್ಧ ಕ್ರಮ ಕೈಗೊಳ್ಳಿ: ಜಿಲ್ಲಾಧಿಕಾರಿ ಮೊಹಮ್ಮದ್ ರೋಷನ್*
ಪ್ರಗತಿವಾಹಿನಿ ಸುದ್ದಿ, ಬೆಳಗಾವಿ: ಕಾರ್ಖಾನೆಗಳು ಅನಗತ್ಯವಾಗಿ ರಸ್ತೆಬದಿಯಲ್ಲಿ ತ್ಯಾಜ್ಯಗಳನ್ನು ತಂದು ಹಾಕುವುದು ಕಂಡು ಬಂದಲ್ಲಿ ಅಂತಹ ಕೈಗಾರಿಕೆಗಳ ವಿರುದ್ಧ ಕೂಡಲೇ ಸಂಬಂಧಿಸಿದ ಇಲಾಖೆಯಿಂದ ಕ್ರಮ ಕೈಗೊಳ್ಳಬೇಕು ಎಂದು ಜಿಲ್ಲಾಧಿಕಾರಿ ಮೊಹಮ್ಮದ್ ರೋಷನ್ ಅವರು ಸೂಚನೆ ನೀಡಿದರು.
ಜಿಲ್ಲಾಧಿಕಾರಿಗಳ ಕಚೇರಿಯ ಸಭಾಂಗಣದಲ್ಲಿ ಶುಕ್ರವಾರ (ಆ.16) ನಡೆದ ಕೈಗಾರಿಕೆ ಇಲಾಖೆಯ ವಿವಿಧ ಜಿಲ್ಲಾ ಮಟ್ಟದ ಸಮಿತಿ ಸಭೆಯ ಅಧ್ಯಕ್ಷತೆ ವಹಿಸಿ ಅವರು ಮಾತನಾಡಿದರು.
ಮಹಾನಗರ ಪಾಲಿಕೆಯಿಂದ ಕೈಗಾರಿಕಾ ಪ್ರದೇಶದಲ್ಲಿನ ಕಚೇರಿಗಳ ತ್ಯಾಜ್ಯ ವಿಲೇವಾರಿಗೆ ಕ್ರಮ ವಹಿಸಬೇಕು. ಎಣ್ಣೆ, ಕ್ರಾಫ್ಟ್ ವಸ್ತು, ಮರಳು ಸೇರಿದಂತೆ ಇತರೆ ಮಾದರಿಯ ಘನತ್ಯಾಜ್ಯ ವಿಲೇವಾರಿಗೆ ಪಾಲಿಕೆ ಮತ್ತು ಗಣಿ ಮತ್ತು ಭೂ ವಿಜ್ಞಾನ ಇಲಾಖೆಗಳು ಕ್ರಮ ವಹಿಸುವಂತೆ ತಿಳಿಸಿದರು.
ಕೈಗಾರಿಕಾ ಪ್ರದೇಶದಲ್ಲಿರುವ ವಿವಿಧ ಕಾರ್ಖಾನೆಗಳ ತ್ಯಾಜ್ಯಗಳ ಮರು ಬಳಕೆಗೆ ಅವಕಾಶ ಇರುವುದಿಲ್ಲ. ಹಾಗಾಗಿ ಪರಿಸರ ಮಾಲಿನ್ಯ ನಿಯಂತ್ರಣ ಮಂಡಳಿಯ ಮಾರ್ಗಸೂಚಿ ಪ್ರಕಾರ ಕಸ ವಿಲೇವಾರಿ ಮಾಡಬೇಕು. ತ್ಯಾಜ್ಯ ವಿಲೇವಾರಿಗೆ ಪಾಲಿಕೆ ಕ್ರಮ ವಹಿಸಬೇಕು ಎಂದು ಜಿಲ್ಲಾಧಿಕಾರಿಗಳು ತಿಳಿಸಿದರು.
ಇದಕ್ಕೆ ಪ್ರತಿಕ್ರಿಯಿಸಿದ ಪಾಲಿಕೆ ಅಧಿಕಾರಿಗಳು ಕೈಗಾರಿಕಾ ಪ್ರದೇಶದಲ್ಲಿ ಕ್ಯಾಂಟಿನ್, ಹೋಟೆಲ್‌ಗಳ ಕಸ ವಿಲೇವಾರಿಗೆ ಮಾತ್ರ ಪಾಲಿಕೆಯಿಂದ ಅವಕಾಶವಿದೆ. ಇತರೆ ಘನತ್ಯಾಜ್ಯ, ಮರಳು, ಕಟಾವು ಮಾಡಿದ ಇತರೆ ವಸ್ತುಗಳ ವಿಲೇವಾರಿಗೆ ಪಾಲಿಕೆಗೆ ಹೆಚ್ಚಿನ ಖರ್ಚು ವೆಚ್ಚ ತಗಲುವುದರಿಂದ ಅದನ್ನು ವಿಲೇವಾರಿ ಮಾಡಲು ಸಾಧ್ಯವಾಗುತ್ತಿಲ್ಲ ಎಂದು ತಿಳಿಸಿದರು.
ಮಾಲಿನ್ಯ ಮುಕ್ತ ತರಕಾರಿ ಹಾಗೂ ಸೊಪ್ಪುಗಳು ಸಾರ್ವಜನಿಕರಿಗೆ ಲಭ್ಯವಾಗಲು ಕ್ರಮ ತೆಗೆದುಕೊಳ್ಳಲು ಸರ್ಕಾರದ ನಿರ್ದೇಶನದಂತೆ ಈ ಸಮಿತಿ ರಚಿಸಲು ಸೂಚಿಸಿದರು. ಮಾಲಿನ್ಯಕರ ತರಕಾರಿಗಳನ್ನು ಜಾನುವಾರುಗಳಿಗೆ ನೀಡಿ ಹಾಲು ಉತ್ಪಾದನೆ ಮಾಡದಂತೆ ನಿಗಾವಹಿಸಲು ತಿಳಿಸಿದರು. ಬಳ್ಳಾರಿ ನಾಲಾ ಮೂಲಕ ಸಾಕಷ್ಟು ಕಲುಷಿತ ನೀರು ಹರಿದು ಹೋಗುತ್ತದೆ, ರೈತರು ತಮ್ಮ ಬೆಳೆಗಳನ್ನು ಬೆಳೆಯಲು ಈ ನೀರು ಬಳಕೆ ಮಾಡುತ್ತಾರೆ ಇಂಥವುಗಳನ್ನು ಗಮನಿಸಿ ಸೂಕ್ತ ತಿಳುವಳಿಕೆ ನೀಡಬೇಕು. ಈ ನಿಟ್ಟಿನಲ್ಲಿ ಸರ್ಕಾರದ ನಿರ್ದೇಶನದಂತೆ ಸಮಿತಿ ರಚನೆ ಮಾಡಲಾಗುವುದು ಎಂದು ಹೇಳಿದರು
ಗ್ರಾಮೀಣ ಪ್ರದೇಶಗಳಲ್ಲಿ ಪ್ರತಿ ಘಟಕಕ್ಕೆ ಬಂಡವಾಳ ಹೂಡಿ ಸೂಕ್ಷ್ಮ ಕೈಗಾರಿಕೆಗಳನ್ನು ಸ್ಥಾಪಿಸುವ ನಿರುದ್ಯೊಗಿ ಯುವಕ, ಯುವತಿಯರು ಸ್ವಯಂ ಉದ್ಯೊಗ ಕೈಗೊಳ್ಳುವಂತೆ ಉತ್ತೇಜಿಸಲು ಯೋಜನೆಗಳ ಸಮರ್ಪಕ ಅನುಷ್ಠಾನ ಆಗಬೇಕು ಎಂದು ಜಿಲ್ಲಾಧಿಕಾರಿಗಳು ತಿಳಿಸಿದರು.
ಜಿಲ್ಲಾ ಪಂಚಾಯತ ಮುಖ್ಯಕಾರ್ಯನಿರ್ವಾಹಕ ಅಧಿಕಾರಿ ರಾಹುಲ್ ಶಿಂಧೆ ಅವರು ಮಾತನಾಡಿ ವಿವಿಧ ತ್ಯಾಜ್ಯಗಳನ್ನು ಕಾರ್ಖಾನೆಗಳು ವಿಲೇವಾರಿಗೆ ಗುರುತಿಸಿದ ಸ್ಥಳಗಳಲ್ಲಿ ಮಾತ್ರ ಕಸ ಹಾಕಬೇಕು. ಮಹಾನಗರ ಪಾಲಿಕೆ ವತಿಯಿಂದ ಬುಡಾ, ಮಹಾನಗರ ಪಾಲಿಕೆ, ಮಾಲಿನ್ಯ ನಿಯಂತ್ರಣ ಮಂಡಳಿ ಜಂಟಿ ಸಮೀಕ್ಷೆ ಜರುಗಿಸಿ ಕಸದ ಮಾದರಿಯನ್ನು ಪರಿಶೀಲಿಸಿ ಸಂಬಂಧಪಟ್ಟ ಕಾರ್ಖಾನೆಗಳಿಗೆ ನಿರ್ದೇಶನ ನೀಡಬೇಕು. ಈ ಕುರಿತು ಸಭೆ ನಡೆಸಿ ಕಾರ್ಯಗಾರ ಹಮ್ಮಿಕೊಳ್ಳಬೇಕು. ಇದರಿಂದ ಸೂಕ್ತ ಸ್ಥಳಗಳಲ್ಲಿ ಘನತ್ಯಾಜ್ಯ ವಿಲೇವಾರಿ ಮಾಡಲು ಸಹಾಯವಾಗಲಿದೆ ಎಂದು ತಿಳಿಸಿದರು.
ಆಟೋನಗರ, ಉದ್ಯಮಭಾಗ, ನಾವಗೆ ಕೈಗಾರಿಕಾ ಪ್ರದೇಶಗಳಿಗೆ ಭೇಟಿ ನೀಡಿ ನಿರಂತರ ಪರಿಶೀಲನೆ ನಡೆಸಬೇಕು.
ಜನ ವಸತಿ ಪ್ರದೇಶಗಳಲ್ಲಿ ಇದರಿಂದ ತುಂಬಾ ತೊಂದರೆ ಎದುರಾಗುತ್ತಿದೆ ಈ ಬಗ್ಗೆ ಸಾಕಷ್ಟು ದೂರುಗಳು ಬರುತ್ತಿವೆ. ಕೂಡಲೇ ಸಂಬಂಧಿಸಿದ ಕಾರ್ಖಾನೆಗಳಿಗೆ ಸೂಚನೆ ನೀಡಬೇಕು. ಹೊನಗ, ನಾವಗೆ, ಕಿಣಯೆ, ವಾಗವಾಡೆ, ದೇಸೂರು ಗ್ರಾಮ ಪಂಚಾಯತಿ ವ್ಯಾಪ್ತಿಯಲ್ಲಿ ಬರುವ ಕಾರ್ಖಾನೆಗಳಿಗೆ ಸರ್ಕಾರದ ಮಾರ್ಗಸೂಚಿಯ ಅನ್ವಯ ತೆರಿಗೆ ನಿಗದಿಪಡಿಸಬೇಕು.
ಈಗಾಗಲೇ ಈ ಕುರಿತು ಗ್ರಾಮ ಪಂಚಾಯತಿಗಳಿಗೆ ಸೂಚನೆ ನೀಡಿದೆ. ಒಂದುವೇಳೆ ಹೆಚ್ಚುವರಿ ತೆರಿಗೆ ವಸೂಲಿ ಕಂಡು ಬಂದಲ್ಲಿ ಅಂತಹ ಗ್ರಾಮ ಪಂಚಾಯತಿ ಅಧಿಕಾರಿಗಳ ವಿರುದ್ಧ ಕ್ರಮ ಜರುಗಿಸಲಾಗುವುದು ಎಂದು ಜಿಪಂ ಸಿಇಒ ರಾಹುಲ್ ಶಿಂಧೆ ಅವರು ತಿಳಿಸಿದರು.
ಮಚ್ಚೆ ಯಿಂದ ಮಾರ್ಕಂಡೇಯ ನಗರದವರೆಗೆ ಕಾರ್ಖಾನೆಗಳಿಗೆ ಬರುವ ರಸ್ತೆಗಳು ಸರಿಯಾಗಿಲ್ಲ. ಸಾಕಷ್ಟು ಕಾರ್ಮಿಕರು ದ್ವಿಚಕ್ರ ವಾಹನಗಳಲ್ಲಿ ಸಂಚರಿಸುತ್ತಾರೆ. ಅಂತಹ ರಸ್ತೆಗಳನ್ನು ದುರಸ್ತಿ ಕಾರ್ಯ ಕೈಗಳ್ಳಬೇಕು ಎಂದು ಕಾರ್ಖಾನೆಗಳ ಮಾಲಿಕರು ಮನವಿ ಮಾಡಿಕೊಂಡರು.
ಜಿಲ್ಲಾ ಕೈಗಾರಿಕಾ ಕೇಂದ್ರದ ಜಂಟಿ ನಿರ್ದೇಶಕರಾದ ಸೂರ್ಯನಾರಾಯಣ ಭಟ್ ಅವರು ಮಾತನಾಡಿ, ಆರ್ಥಿಕವಾಗಿ ಹಿಂದುಳಿದವರಿಗೆ ಆರ್ಥಿಕ ಸಬಲತೆ ಹೊಂದಲು ಮುಖ್ಯಮಂತ್ರಿಗಳ ಸ್ವಯಂ ಉದ್ಯೋಗ ಸೃಜನ ಯೋಜನೆ ವರದಾನವಾಗಿದೆ. ಆರ್ಥಿಕವಾಗಿ ಸದೃಢವಾಗಿರುವ ಎಲ್ಲ ಉತ್ಪಾದನಾ ಮತ್ತು ಸೇವಾ ಚಟುವಟಿಕೆಗಳು ಈ ಯೋಜನೆ ಅಡಿಯಲ್ಲಿ ಅರ್ಹವಾಗಿವೆ ಎಂದು ಹೇಳಿದರು.
ಮಹಾನಗರ ಪಾಲಿಕೆ ಉಪ ಆಯುಕ್ತ ವಿಜಯಕುಮಾರ ತಳವಾರ, ಕೃಷಿ ಇಲಾಖೆ ಜಂಟಿ ನಿರ್ದೇಶಕ ಶಿವನಗೌಡ ಪಾಟೀಲ, ತೋಟಗಾರಿಕೆ ಇಲಾಖೆ ಉಪ ನಿರ್ದೇಶಕ ಮಹಾಂತೇಶ ಮುರಗೋಡ, ಹೆಸ್ಕಾಂ ಅಧಿಕಾರಿಗಳು, ವಿವಿಧ ಕಾರ್ಖಾನೆಗಳ ಮಾಲಿಕರು ಸಭೆಯಲ್ಲಿ ಹಾಜರಿದ್ದರು.
ಪ್ರಗತಿವಾಹಿನಿ ಸುದ್ದಿಗಳನ್ನು ನಿಮ್ಮ ಸ್ನೇಹಿತರಿಗೆ, ಬೇರೆ ಗ್ರುಪ್ ಗಳಿಗೆ ಶೇರ್ ಮಾಡಿ