ಪ್ರಗತಿವಾಹಿನಿ ಸುದ್ದಿ, ಬೆಳಗಾವಿ – ಬೆಳಗಾವಿಯಲ್ಲಿ ಕಳೆದ ವರ್ಷದ ಮಳೆಗಾಲದಲ್ಲಿ ಉಂಟಾದಂತೆ ಈ ಬಾರಿಯೂ ಪ್ರವಾಹ ಅಪ್ಪಳಿಸದಂತೆ ಮುನ್ನೆಚ್ಚರಿಕೆ ವಹಿಸಲು ಸೂಕ್ತ ಕ್ರಮ ತೆಗೆದುಕೊಳ್ಳಬೇಕು ಎಂದು ಬಿಜೆಪಿ ಮುಖಂಡ ಕಿರಣ ಜಾಧವ ರಾಜ್ಯ ಜಲ ಸಂಪನ್ಮೂಲ ಸಚಿವ ರಮೇಶ ಜಾರಕಿಹೊಳಿ ಅವರಲ್ಲಿ ಮನವಿ ಮಾಡಿದ್ದಾರೆ.
ಈ ಕುರಿತು ಸೋಮವಾರ ಕಿರಣ ಜಾಧವ ಬೆಳಗಾವಿಯಲ್ಲಿ ರಮೇಶ ಜಾರಕಿಹೊಳಿ ಜೊತೆ ಚರ್ಚೆ ನಡೆಸಿ, ಕಳೆದ ವರ್ಷ ಉಂಟಾದ ಪರಿಸ್ಥಿತಿಯನ್ನು ವಿವರಿಸಿದ್ದಾರೆ.
ಕಳೆದ ವರ್ಷ ಮಳೆಗಾಲದಲ್ಲಿ ನಾನಾವಾಡಿ, ಗೂಡ್ಸೆವಾಡಿ, ಮರಾಠಾ ಕಾಲನಿ, ಶಾಸ್ತ್ರಿ ನಗರ, ಎಸ್ ಪಿಎಂ ರಸ್ತೆ, ಕಪಿಲೇಶ್ವರ ಕಾಲನಿ, ಸಮರ್ಥ ನಗರ, ಶಿವಾಜಿ ನಗರ, ಗಾಂಧಿ ನಗರ ಮೊದಲಾದ ಪ್ರದೇಶಗಳಲ್ಲಿ ಭಾರೀ ಅವಾಂತರ ಸೃಷ್ಟಿಯಾಗಿತ್ತು. ಜನರ ತೀವ್ರ ಸಂಕಷ್ಟ ಎದುರಿಸಿದ್ದರು. ಈ ವರ್ಷ ಅದೇ ರೀತಿ ಮಳೆಯಾದರೆ ಮತ್ತೆ ಅನಾಹುತ ಉಂಟಾಗಬಹುದು. ಹಾಗಾಗಿ ಸಾಕಷ್ಟು ಮುಂಜಾಗ್ರತೆ ವಹಿುವುದು ಅಗತ್ಯವಾಗಿದೆ ಎಂದು ಕಿರಣ ಜಾಧವ ವಿವರಿಸಿದರು.
ಈ ಕುರಿತು ಕೂಡಲೆ ಕ್ರಮ ತೆಗೆದುಕೊಳ್ಳಲು ಅಧಿಕಾರಿಗಳಿಗೆ ಸೂಚಿಸಲಾಗುವುದು. ಎಲ್ಲ ರೀತಿಯ ಮುನ್ನೆಚ್ಚರಿಕೆ ವಹಿಸುವಂತೆ ತಿಳಿಸಲಾಗುವುದು. ಆದಷ್ಟು ಶೀಘ್ರ ಈ ಸಂಬಂಧ ಸಭೆ ಆಯೋಜಿಸಲಾಗುವುದು ಎಂದು ರಮೇಶ ಜಾರಕಿಹೊಳಿ ಭರವಸೆ ನೀಡಿದರು ಎಂದು ಕಿರಣ ಜಾಧವ ಪ್ರಗತಿವಾಹಿನಿಗೆ ತಿಳಿಸಿದ್ದಾರೆ.
ಪ್ರಗತಿವಾಹಿನಿ ಸುದ್ದಿಗಳನ್ನು ನಿಮ್ಮ ಸ್ನೇಹಿತರಿಗೆ, ಬೇರೆ ಗ್ರುಪ್ ಗಳಿಗೆ ಶೇರ್ ಮಾಡಿ