*ಪ್ರತಿಭಾ ಪುರಸ್ಕಾರ, ಕಾರ್ಯಕ್ರಮ ವೈವಿದ್ಯ*: *ಯಶಸ್ವಿಯಾದ ಪ್ರದರ್ಶನ ಮೇಳ*


ಪ್ರಗತಿವಾಹಿನಿ ಸುದ್ದಿ, ಬೆಳಗಾವಿ – ಪ್ರತಿಭಾ ಪುರಸ್ಕಾರ, ಸಾಂಸ್ಕೃತಿಕ ಕಾರ್ಯಕ್ರಮ ಸೇರಿದಂತೆ ವೈವಿದ್ಯಮಯ ಕಾರ್ಯಕ್ರಮಗಳೊಂದಿಗೆ ಬೆಳಗಾವಿ ಜಿಲ್ಲಾ ಬ್ರಾಹ್ಮಣ ಸಮಾಜ ಟ್ರಸ್ಟ್ ಆಯೋಜಿಸಿದ್ದ ಶ್ರಾವಣ ಸಂಭ್ರಮ – ವಸ್ತು ಪ್ರದರ್ಶನ ಹಾಗೂ ಮಾರಾಟ ಮೇಳದ ಎರಡು ದಿನಗಳ ಕಾರ್ಯಕ್ರಮ ಯಶಸ್ವಿಯಾಗಿ ನಡೆಯಿತು.
ಎರಡನೇ ದಿನವಾದ ಭಾನುವಾರ ಸಹ ವಿವಿಧ ಕಾರ್ಯಕ್ರಮಗಳು ನಡೆದವು. ಬೆಳಗಿನ ಅಧಿವೇಶನದಲ್ಲಿ ಸಂತ ಮೀರಾ ಶಾಲೆ ಹಾಗೂ ಇತರ ಶಾಲೆಗಳ ವಿದ್ಯಾರ್ಥಿಗಳು ಭಕ್ತಿಗೀತೆ, ಭರತನಾಟ್ಯ, ಭಗವದ್ಗೀತೆ ಶ್ಲೋಕ ಪಠಣ ಮಾಡಿದರು. ಕಾರ್ಯಕ್ರಮವನ್ನು ಟ್ರಸ್ಟಿ ಅನುಶ್ರೀ ದೇಶಪಾಂಡೆ ಸಂಯೋಜಿಸಿದರು.

ಸಂಜೆಯ ಅಧಿವೇಶನದಲ್ಲಿ ಪ್ರತಿಭಾ ಪುರಸ್ಕಾರ ಹಾಗೂ ಸನ್ಮಾನ ಸಮಾರಂಭ ನಡೆಯಿತು. ಮುಖ್ಯ ಅತಿಥಿಯಾಗಿ ಆಗಮಿಸಿದ್ದ ಜಿಲ್ಲಾ ಕೈಗಾರಿಕಾ ಕೇಂದ್ರದ ಜಂಟಿ ನಿರ್ದೇಶಕ ಸತ್ಯನಾರಾಯಣ ಭಟ್ ಎಸ್ಎಸ್ಎಲ್ಸಿ ಮತ್ತು ಪಿಯುಸಿ ಪರೀಕ್ಷೆಗಳಲ್ಲಿ ಶೇ. 90ಕ್ಕಿಂತ ಹೆಚ್ಚು ಅಂಕ ಗಳಿಸಿದ ವಿದ್ಯಾರ್ಥಿಗಳನ್ನು ಸನ್ಮಾನಿಸಿದರು.
ಮೊಟ್ಟ ಮೊದಲ ಬಾರಿಗೆ ಬ್ರಾಹ್ಮಣ ಟ್ರಸ್ಟ್ ವತಿಯಿಂದ ಆಯೋಜಿಸಿರುವ ಪ್ರದರ್ಶನ ಮತ್ತು ಮಾರಾಟ ಮೇಳ ಅತ್ಯಂತ ಯಶಸ್ವಿಯಾಗಿದೆ. ಇಂತಹ ಕಾರ್ಯಕ್ರಮಗಳಿಂದ ಸಮಾಜದ ಉದ್ಯಮಿಗಳು ಹಾಗೂ ಪ್ರತಿಭಾವಂತರಿಗೆ ಪ್ರೇರಣೆ ಸಿಗುತ್ತದೆ. ಮುಂದಿನ ದಿನಗಳಲ್ಲಿ ಇನ್ನೂ ದೊಡ್ಡ ಮಟ್ಟದಲ್ಲಿ ಕಾರ್ಯಕ್ರಮ ನಡೆಯಲಿ. ಇಲಾಖೆಯಿಂದ ಅಗತ್ಯವಾದ ಸಹಕಾರ ನೀಡಲಾಗುವುದು ಎಂದು ಸತ್ಯನಾರಾಯಣ ಭಟ್ ತಿಳಿಸಿದರು.

ಅಧ್ಯಕ್ಷತೆ ವಹಿಸಿದ್ದ ಖ್ಯಾತ ಉದ್ಯಮಿ ರಾಮ್ ಭಂಡಾರೆ, ಮೊದಲ ಬಾರಿಗೆ ಕಾರ್ಯಕ್ರಮ ಆಯೋಜಿಸಿದರೂ ಸಮಾಜದ ಎಲ್ಲರಿಂದ ಉತ್ತಮ ಬೆಂಬಲ, ಪ್ರೋತ್ಸಾಹ ಸಿಕ್ಕಿದೆ. ಅದಕ್ಕಾಗಿ ಎಲ್ಲರಿಗೂ ಧನ್ಯವಾದ ಸಲ್ಲಿಸುತ್ತೇನೆ. ಮುಂದಿನ ದಿನಗಳಲ್ಲಿ ದೊಡ್ಡ ಮಟ್ಟದಲ್ಲಿ ಕಾರ್ಯಕ್ರಮ ಆಯೋಜಿಸಲಾಗುವುದು. ಸಮಾಜದ ಜನರನ್ನೆಲ್ಲ ಒಂದೆಡೆ ಸೇರಿಸುವುದು ಈ ಕಾರ್ಯಕ್ರಮದ ಪ್ರಮುಖ ಉದ್ದೇಶ ಎಂದು ತಿಳಿಸಿದರು.
ಕರ್ನಾಟಕ ಲಾ ಸೊಸೈಟಿ, ವಿಭಾಶ್ರೀ ಹೋಂಡಾ, ಸಮರ್ಥ ಅರ್ಬನ್ ಕೊ-ಆಪ್ ಕ್ರೆಡಿಟ್ ಸೊಸೈಟಿ, ಕರ್ನಾಟಕ ಬ್ಯಾಂಕ್, ಆರ್ಎನ್ ಫಿನ್-ಸರ್ವೀಸ್, ರೆಮಿಂಗ್ಟನ್ ಲಿಫ್ಟ್ಸೈನ್ಸ್ಡ್ ಎಲ್ಎಲ್ಪಿ, ಶ್ರೀ ಬಾಲಾಜಿ ಫೆರ್ರೋಕಾಸ್ಟ್, ಎಂ.ಎಸ್. ಎಂಟರ್ಪ್ರೈಸ್, ಶ್ರೀ ಗಜಾನನ ಅಲಾಯ್ಸ್ ಕಾರ್ಯಕ್ರಮಕ್ಕೆ ಸಹಕಾರ ನೀಡಿದ್ದವು.
ಸಾಂಸ್ಕೃತಿಕ ಹಾಗೂ ಪ್ರದರ್ಶನ ಚಟುವಟಿಕೆಗಳಲ್ಲಿ ಭಾಗವಹಿಸಿದವರಿಗೆ ಪ್ರಮಾಣಪತ್ರಗಳನ್ನು ವಿತರಿಸಲಾಯಿತು. ಟ್ರಸ್ಟ್ ಉಪಾಧ್ಯಕ್ಷ ಭರತ್ ದೇಶಪಾಂಡೆ ಸ್ವಾಗತಿಸಿದರು. ಕಾರ್ಯದರ್ಶಿ ವಿಲಾಸ್ ಬದಾಮಿ ಸ್ವಾಗತಿಸಿ, ಕಾರ್ಯಕ್ರಮದ ಕುರಿತು ಪ್ರಾಸ್ತಾವಿಕ ಮಾತನಾಡಿದರು. ಟ್ರಸ್ಟಿಗಳಾದ ವಿ. ಎನ್. ಪಾಟೀಲ್, ಅನುಶ್ರೀ ದೇಶಪಾಂಡೆ, ಆರ್. ಎಸ್. ಕುಲಕರ್ಣಿ ಉಪಸ್ಥಿತರಿದ್ದರು.