Kannada NewsKarnataka NewsLatestPolitics

*ತೆರಿಗೆ ಪಾವತಿ ನೋಟಿಸ್ ಬಗ್ಗೆ ಮಹತ್ವದ ಹೇಳಿಕೆ ನೀಡಿದ ಡಿಸಿಎಂ*

ಪ್ರಗತಿವಾಹಿನಿ ಸುದ್ದಿ: ಬೆಂಗಳೂರಲ್ಲಿ ಆಸ್ತಿ ತೆರಿಗೆ ಪಾವತಿ ಕುರಿತ ನೋಟೀಸ್, ದುಬಾರಿ ದಂಡದ ವಿಚಾರವಾಗಿ ಅನೇಕ ದೂರುಗಳು ವ್ಯಕ್ತವಾಗುತ್ತಿದ್ದು, 30″ x 40″ ಅಳತೆಯ ನಿವೇಶನ, ಶೆಡ್ ಹೊಂದಿರುವವರಿಗೆ ಆಸ್ತಿ ತೆರಿಗೆ ವಿನಾಯಿತಿ ಹಾಗೂ ದಂಡ ಕಡಿಮೆ ಮಾಡುವ ಬಗ್ಗೆ ಅಧಿಕಾರಿಗಳ ಜತೆ ಚರ್ಚೆ ನಡೆಯುತ್ತಿದೆ ಎಂದು ಡಿಸಿಎಂ ಡಿ.ಕೆ. ಶಿವಕುಮಾರ್ ಅವರು ತಿಳಿಸಿದರು.

ಗಾಂಧಿನಗರದ ಶಿರೂರ್ ಉದ್ಯಾನವನದಲ್ಲಿ ಮಂಗಳವಾರ ನಡೆದ “ಬಾಗಿಲಿಗೆ ಬಂತು ಸರ್ಕಾರ, ಸೇವೆಗೆ ಇರಲಿ ಸಹಕಾರ” ಕಾರ್ಯಕ್ರಮ ಉದ್ದೇಶಿಸಿ ಮಾತನಾಡಿದ ಶಿವಕುಮಾರ್ ಅವರು ಹೇಳಿದ್ದಿಷ್ಟು;

“ಆಸ್ತಿ ತೆರಿಗೆ ವಿಚಾರದಲ್ಲಿ ಸಮಸ್ಯೆ ಆಗಿದೆ ಎಂಬ ಅನೇಕ ದೂರುಗಳು ಬಂದಿವೆ. ಕಾಲಮಿತಿಯೊಳಗೆ ತೆರಿಗೆ ಪಾವತಿಸಿ ಎಂದು ನೋಟೀಸ್ ಬಂದಿರುವುದರ ಬಗ್ಗೆ ಗಾಬರಿಯಾಗಬೇಡಿ. ದಂಡವನ್ನು ಎಷ್ಟು ಸಾಧ್ಯವೋ ಅಷ್ಟು ಕಡಿಮೆ ಮಾಡುತ್ತೇವೆ. ಈ ಕಾರ್ಯಕ್ರಮ ನಡೆದ ಎಲ್ಲಾ ಕ್ಷೇತ್ರಗಳಲ್ಲೂ ಈ ಬಗ್ಗೆ ದೂರು ಬಂದ ಹಿನ್ನೆಲೆಯಲ್ಲಿ ಈ ಬಗ್ಗೆ ಪರಿಶೀಲಿಸಲಾಗುತ್ತಿದೆ.

2020 ರಲ್ಲಿ ಜಾರಿಗೆ ಬಂದ ಆಸ್ತಿ ತೆರಿಗೆ ಕುರಿತ ಕಾಯ್ದೆಯಿಂದಾಗಿ ಜನರಿಗೆ ದುಬಾರಿ ದಂಡ ವಿಧಿಸಲಾಗುತ್ತಿದೆ. ಈಗ ಆ ಕಾನೂನಿಗೆ ತಿದ್ದುಪಡಿ ತರಬೇಕಿದೆ. ಕೆಲ ದಿನಗಳಲ್ಲಿ ಈ ತಿದ್ದುಪಡಿ ಬಗ್ಗೆ ಮಾಹಿತಿ ನೀಡಲಾಗುವುದು. ನಮ್ಮ ಸರ್ಕಾರವೇ ಸಮೀಕ್ಷೆ ಮಾಡಿಸಿ, ನಿಮ್ಮ ಮನೆ ಬಾಗಿಲಿಗೇ ನಿಮ್ಮ ಸ್ವತ್ತಿನ ದಾಖಲೆಗಳನ್ನು ಉಚಿತವಾಗಿ ತಂದು ಕೊಡಲಾಗುವುದು.

ಆಸ್ತಿ ತೆರಿಗೆ ಪಾವತಿ ಬಗ್ಗೆ ಜನರ ಮೇಲೆ ಒತ್ತಡ ಹೇರಬೇಡಿ ಎಂದು ಅಧಿಕಾರಿಗಳಿಗೆ ಈಗಾಗಲೇ ಸೂಚನೆ ನೀಡಲಾಗಿದೆ. ಯಾರು ಎಷ್ಟು ತೆರಿಗೆ ಕಟ್ಟುತ್ತಿದ್ದಾರೋ, ಅವರಿಂದ ಅಷ್ಟು ಕಟ್ಟಿಸಿಕೊಳ್ಳಿ. ಯಾರಾದರೂ ಹೆಚ್ಚುವರಿ ತೆರಿಗೆ ಪಾವತಿ ಮಾಡಿದ್ದರೆ ಮುಂದಿನ ವರ್ಷ ಅದನ್ನು ಸರಿದೂಗಿಸಲು ಸೂಚಿಸಿದ್ದೇನೆ.

ಎಲ್ಲರೂ ಆಸ್ತಿ ತೆರಿಗೆ ವ್ಯಾಪ್ತಿಯಲ್ಲಿ ಬರಬೇಕು. ಜನರಿಗೂ ಅನುಕೂಲ ಆಗಬೇಕು, ಪಾಲಿಕೆಗೂ ಆದಾಯ ಬರಬೇಕು. ನಿಮ್ಮ ತೆರಿಗೆ ಹಣವಿಲ್ಲದೆ ಬೆಂಗಳೂರು ಅಭಿವೃದ್ಧಿ ಅಸಾಧ್ಯ. ನಾವು ಇಷ್ಟು ದಿನ ಸ್ವಯಂಘೋಷಿತ ಆಸ್ತಿ ತೆರಿಗೆ ಪದ್ಧತಿ ಅಳವಡಿಸಿಕೊಂಡು ಬಂದಿದ್ದೇವೆ. ಆದರೆ ಈ ವ್ಯವಸ್ಥೆಯಲ್ಲಿ ಜನ ತಮ್ಮ ಆಸ್ತಿಗೆ ತಕ್ಕಂತೆ ತೆರಿಗೆ ಪಾವತಿ ಮಾಡುತ್ತಿಲ್ಲ. ಮೂರು ಅಂತಸ್ತಿನ ಮನೆ ಇದ್ದರೆ ಒಂದು ಅಂತಸ್ತು ಎಂದು ತೋರಿಸಿ ಕಡಿಮೆ ತೆರಿಗೆ ಕಟ್ಟುತ್ತಿದ್ದಾರೆ. ನಮ್ಮ ಸಚಿವ ರಾಮಲಿಂಗಾರೆಡ್ಡಿ ಅವರು ಈ ಬಗ್ಗೆ ಪತ್ರ ಬರೆದಿದ್ದಾರೆ.

ಅಧಿಕಾರಿಗಳು ನಿಮಗೆ ಸಹಕಾರ ನೀಡದ ಕಾರಣ ನೀವು ನಮ್ಮ ಬಳಿ ಬರುತ್ತೀರಿ. ನಿಮ್ಮ ವೈಯಕ್ತಿಕ ಸಮಸ್ಯೆ, ಏರಿಯಾ ಸಮಸ್ಯೆ ಹೊತ್ತು ತಂದಿದ್ದೀರಿ. ಎಲ್ಲರ ಸಮಸ್ಯೆಯನ್ನು ಆಲಿಸುತ್ತೇವೆ. ನಿಮ್ಮ ಅಹವಾಲುಗಳನ್ನು ನೋಂದಣಿ ಮಾಡಿಕೊಳ್ಳಿ. ನಿಮ್ಮ ಹೆಸರು, ಸಮಸ್ಯೆ ಹಾಗೂ ದೂರವಾಣಿ ಸಂಖ್ಯೆ ನಮೂದಿಸಿ.

ನಿಮ್ಮ ಅಹವಾಲು ಬಗೆಹರಿಸಲು ಪ್ರತ್ಯೇಕ ತಂಡ ರಚಿಸುತ್ತೇವೆ. ನೀವು ಕೊಟ್ಟಿರುವ ಅರ್ಜಿಗಳನ್ನು ವಿಂಗಡಿಸಿ, ಅವುಗಳನ್ನು ಕಾನೂನು ವ್ಯಾಪ್ತಿಯಲ್ಲಿ ಬಗೆಹರಿಸುತ್ತೇವೆ. ನಿಮ್ಮ ದೂರವಾಣಿ ಸಂಖ್ಯೆಗೆ ಪಾಲಿಕೆ ಅಧಿಕಾರಿಗಳು ಸಂಪರ್ಕಿಸುತ್ತಾರೆ.

ಸಂಚಾರ ದಟ್ಟಣೆ ಸಮಸ್ಯೆ ಬಗೆಹರಿಸಲು ಕ್ರಮ ಕೈಗೊಳ್ಳಲಾಗುವುದು. 2 ಸಾವಿರ ಕೋಟಿ ರೂ. ಮೌಲ್ಯದ ವೈಟ್ ಟ್ಯಾಪಿಂಗ್ ರಸ್ತೆಗಳ ಕಾಮಗಾರಿಗೆ ಟೆಂಡರ್ ಕರೆಯಲಾಗಿದೆ. ಬೆಂಗಳೂರಿನಲ್ಲಿ ನಿತ್ಯ 55 ಲಕ್ಷ ವಾಹನ ಸಂಚಾರ ಮಾಡುತ್ತಿವೆ.

ತಳ್ಳುವ ಗಾಡಿಯಲ್ಲಿ ಮಾತ್ರ ಬೀದಿ ವ್ಯಾಪಾರಕ್ಕೆ ಅವಕಾಶ:

ಶಾಸಕ ಅಶ್ವತ್ ನಾರಾಯಣ ಅವರು ಆಸ್ತಿ ತೆರಿಗೆ ಮತ್ತು ಪಾದಚಾರಿ ಮಾರ್ಗ ವಿಚಾರವಾಗಿ ಗಮನ ಸೆಳೆದರು. ಈ ವಿಚಾರವಾಗಿ ಹೈಕೋರ್ಟ್ ಆದೇಶ ಕೂಡ ಬಂದಿದೆ. ಆ ಆದೇಶ ಪಾಲನೆ ಆಗದಿದ್ದರೆ ಪಾಲಿಕೆ ಆಯುಕ್ತರು ಜೈಲಿಗೆ ಹೋಗಬೇಕಾಗುತ್ತದೆ.

ಬೀದಿಬದಿ ವ್ಯಾಪಾರಿಗಳು ವ್ಯಾಪಾರ ಮಾಡಬಾರದು ಎಂದು ಹೇಳುವುದಿಲ್ಲ. ನೀವು ನೋಂದಣಿ ಮಾಡಿಸಿಕೊಂಡು, ತಳ್ಳುವ ಗಾಡಿಯಲ್ಲಿ ವ್ಯಾಪಾರ ಮಾಡಬೇಕು. ಪಾದಚಾರಿ ಮಾರ್ಗದಲ್ಲಿ ಅಂಗಡಿ ಹಾಕಿಕೊಂಡರೆ ಜನ ಸಾಮಾನ್ಯರು ಎಲ್ಲಿ ಓಡಾಡಬೇಕು? ಎಂದು ಪ್ರಶ್ನಿಸಿದರು.

ಅನಧಿಕೃತ ಫ್ಲೆಕ್ಸ್ ವಿರುದ್ಧ ಪ್ರಕರಣ:

ನಾವು ಅನಧಿಕೃತ ಜಾಹೀರಾತು ಫ್ಲೆಕ್ಸ್ ಗಳ ನಿಷೇಧ ಮಾಡಿದ್ದೇವೆ. ನನ್ನ ಮನೆ ಬಳಿ ಸೇರಿದಂತೆ ಅನೇಕ ಕಡೆಗಳಲ್ಲಿ ಹಬ್ಬ, ಹೊಸವರ್ಷದ ಶುಭಾಶಯಗಳ ಫ್ಲೆಕ್ಸ್ ಹಾಕಲಾಗಿದೆ. ಇವರ ವಿರುದ್ಧ ಪ್ರಕರಣ ದಾಖಲಿಸುವಂತೆ ಆಯುಕ್ತರಿಗೆ ಸೂಚನೆ ನೀಡಲಾಗಿದೆ. ಯಾವುದೇ ಪಕ್ಷದವರಾಗಿರಲಿ, ನನ್ನ ಫೋಟೋ ಹಾಕಿರಲಿ ಅಥವಾ ಬೇರೆಯವರ ಫೋಟೋ ಹಾಕಿರಲಿ ಎಲ್ಲ ಅನಧಿಕೃತ ಫ್ಲೆಕ್ಸ್ ತೆರವು ಮಾಡಬೇಕು ಎಂದು ಸೂಚಿಸಿದ್ದೇನೆ. ಮುಂದೆ ಇದನ್ನು ನಿಯಂತ್ರಿಸಲು ಹೊಸ ಜಾಹೀರಾತು ನೀತಿ ತರಲಾಗುವುದು.

ಕಸ ವಿಲೇವಾರಿ ಸಮಸ್ಯೆ ಬಗೆಹರಿಸಲು ನಾವು ಬದ್ಧರಾಗಿದ್ದೇವೆ. ಇದರ ಹಿಂದೆ ಮಾಫಿಯಾ ಇದೆ. ಇದನ್ನು ನಾವು ಹತೋಟಿಗೆ ತರಬೇಕಿದೆ. ನೀವು ನಿಮ್ಮ ಮನೆ ಕಸವನ್ನು ಚರಂಡಿಯಲ್ಲಿ ಹಾಕಿದರೆ ಆಗುವುದಿಲ್ಲ. ನಮ್ಮ ನಗರದಲ್ಲಿ ಕಸ ವಿಲೇವಾರಿ ಹಾಗು ಸಂಚಾರ ದಟ್ಟಣೆ ನಿಯಂತ್ರಣ ಮಾಡಿದರೆ ಎಲ್ಲವೂ ಹತೋಟಿಗೆ ಬರುತ್ತದೆ ಎಂದರು.

ಪ್ರಗತಿವಾಹಿನಿ ಸುದ್ದಿಗಳನ್ನು ನಿಮ್ಮ ಸ್ನೇಹಿತರಿಗೆ, ಬೇರೆ ಗ್ರುಪ್ ಗಳಿಗೆ ಶೇರ್ ಮಾಡಿ

Related Articles

Back to top button