
ಪ್ರಗತಿವಾಹಿನಿ ಸುದ್ದಿ: ವಿದ್ಯಾರ್ಥಿಯ ಜೊತೆ ಸೆಕ್ಸ್ ಪ್ರಕರಣಕ್ಕೆ ಸಂಬಂಧಿಸಿದಂತೆ ಶಾಲೆಯ ಶಿಕ್ಷಕಿಯನ್ನು ಬಂಧಿಸಿರುವ ಘಟನೆ ನಡೆದಿದೆ.
40 ವರ್ಷದ ಇಂಗ್ಲೀಷ್ ಶಿಕ್ಷಕಿಯನ್ನು ಪೋಕ್ಸೋ ಕಾಯ್ದೆಯಡಿ ಮುಂಬೈ ಪೊಲೀಸರು ಬಂಧಿಸಿದ್ದಾರೆ. ಮುಂಬೈನ ಪ್ರತಿಷ್ಠಿತ ಶಾಲೆಯ ಶಿಕ್ಷಕಿ 16 ವರ್ಷದ ವಿದ್ಯಾರ್ಥಿಯ ಮೇಲೆ ಒಂದು ವರ್ಷದಲ್ಲಿ ಹಲವು ಬಾರಿ ಲೈಂಗಿಕ ದೌರ್ಜನ್ಯ ನಡೆಸಿದ್ದಾಳೆ. ಆರೋಪಿ ಶಿಕ್ಷಕಿಗೆ ಮದುವೆಯಾಗಿದ್ದು ಮಕ್ಕಳು ಕೂಡ ಇದ್ದಾರೆ. ಆದಾಗ್ಯೂ ವಿದ್ಯಾರ್ಥಿಯ ಮೇಲೆ ಲೈಂಗಿಕ ದೌರ್ಜನ್ಯ ನಡೆಸಿದ್ದಾಳೆ ಎಂದು ಪೊಲೀಸರು ತಿಳಿಸಿದ್ದಾರೆ.
ಪೋಕ್ಸೋ, ಬಾಲ ನ್ಯಾಯ ಕಾಯ್ದೆ( ಮಕ್ಕಳ ಆರೈಕೆ ಹಾಗೂ ರಕ್ಷಣೆ ಕಾಯ್ದೆ) ಮತ್ತು ಭಾರತೀಯ ನ್ಯಾಯ ಸಂಹಿತೆಯ ವಿವಿಧ ಸೆಕ್ಷನ್ ಅಡಿ ಪ್ರಕರಣ ದಾಖಲಾಗಿದ್ದು, ಶಿಕ್ಷಕಿಯನ್ನು ಬಂಧಿಸಲಾಗಿದೆ.
ವಿದ್ಯಾರ್ಥಿ 11ನೇ ತರಗತಿ ಓದುತ್ತಿದ್ದಾಗ 2023ರಲ್ಲಿ ಶಾಲೆಯ ವಾರ್ಷಿಕ ಕಾರ್ಯಕ್ರಮಕ್ಕಾಗಿ ವಿದ್ಯಾರ್ಥಿಗಳ ಡ್ಯಾನ್ಸ್ ಕಾರ್ಯಕ್ರಮಕ್ಕೆ ವಿದ್ಯಾರ್ಥಿಗಳ ಗುಂಪು ರಚಿಸಲಾಗಿತ್ತು. ಈ ವೇಳೆ ಶಿಕ್ಷಕಿ ಅಪ್ರಾಪ್ತ ವಿದ್ಯಾರ್ಥಿಗಳತ್ತ ಆಕರ್ಷಿತಳಾಗಿದ್ದಾಳೆ. 2024ರ ಜನವರಿಯಲ್ಲಿ ವಿದ್ಯಾರ್ಥಿಗಳ ಜೊತೆ ಅಸಭ್ಯವಾಗಿ ವರ್ತಿಸುತ್ತಿದ್ದಳು. ಶಿಕ್ಷಕಿಯ ವರ್ತನೆಯಿಂದ ವಿದ್ಯಾರ್ಥಿ ಆಕೆಯಿಂದ ದೂರ ಸರಿದಿದ್ದ. ಆದರೆ ಶಿಕ್ಷಕಿ ತನ್ನ ಸ್ನೇಹಿತೆಯ ಮೂಲಕ ವಿದ್ಯಾರ್ಥಿಯನ್ನು ಸಂಪರ್ಕಿಸಿದ್ದಳು. ಶಿಕ್ಷಕಿಯ ದುರ್ವರ್ತನೆಗೆ ಆಕೆಯ ಸ್ನೇಹಿತೆಯೂ ಸಾಥ್ ನೀಡಿದ್ದಳು. ನಿಮ್ಮ ಜೋಡಿ ಸ್ವರ್ಗದಲಿ ನಿಶ್ಚಯವಾಗಿದೆ ಎಂದು ವಿದ್ಯಾರ್ಥಿಗೆ ಬಲವಂತದಿಂದ ಮನವೊಲಿಸುವ ಯತ್ನವನ್ನು ಶಿಕ್ಷಕಿ ಸ್ನೇಹಿತೆ ಮಾಡಿದ್ದಳು. ಶಿಕ್ಷಕಿ ಕಾರಿನಲ್ಲಿ ವಿದ್ಯಾರ್ಥಿಯನ್ನು ಫೈವ್ ಸ್ಟಾರ್ ಹೋಟೆಲ್ ಗಳಿಗೆ ಕರೆದೊಯ್ದು ದೌರ್ಜನ್ಯ ನಡೆಸಿದ್ದಾಳೆ.
ವಿದ್ಯಾರ್ಥಿ ಹಲವು ಭಾರಿ ಭಯಗೊಂಡು ಆಘಾತಕ್ಕೊಳಗಾಗಿದ್ದ. ಆದರೂ ಬಿಡದ ಶಿಕ್ಷಕಿ ವಿದ್ಯಾರ್ಥಿಗೆ ಭಯ ನಿವಾರಕ ಮಾತ್ರೆ, ಬಲವಂತದಿಂದ ಮಧ್ಯ ಕುಡಿಸಿ ದಕ್ಷಿಣ ಮುಂಬೈನ ಹಾಗೂ ವಿಮಾನ ನಿಲ್ದಾಣ ಬಳಿಯ ಪಂಚತಾರಾ ಹೋಟೆಲ್ ಗಳಿಗೆ ಕರೆದೊಯ್ದು ಕೃತ್ಯವೆಸಗುತ್ತಿದ್ದಳು.
ಪೋಷಕರು ತಮ್ಮ ಮಗನ ನಡವಳಿಕೆಯಲ್ಲಿ ಭಾರಿ ಬದಲಾವಣೆಗಳನ್ನು ಗಮನಿಸಿ ಗಂಭೀರವಾಗಿ ವಿಚಾರಿಸಿದಾಗ ವಿದ್ಯಾರ್ಥಿ ನಡೆಯುತ್ತಿರುವ ಘಟನೆಗಳ ಬಗ್ಗೆ ಬಾಯ್ಬಿಟ್ಟಿದ್ದಾನೆ. ಅಲ್ಲದೇ ತನ್ನ ಕಷ್ಟದ ಬಗ್ಗೆ ದು:ಖಿತನಾಗಿದ್ದಾನೆ. ಪೋಷಕರು ಶೀಘ್ರದಲ್ಲೇ ತಮ್ಮ ಮಗ 12ನೇ ತರಗತಿ ಪಾಸ್ ಆಗಿ ಆ ಶಾಲೆಯನ್ನು ತೊರೆಯುತ್ತಾನೆ ಎಂದು ವಿಷಯ ರಹಸ್ಯವಾಗಿಟ್ಟಿದ್ದರು. ಆದರೆ ವಿದ್ಯಾರ್ಥಿ 12ನೇ ತರಗತಿ ಪಾಸ್ ಆಗಿ ಆ ಶಾಲೆ ತೊರೆದ ಬಳಿಕವೂ ಶಿಕ್ಷಕಿ ವಿದ್ಯಾರ್ಥಿಯನ್ನು ಸಂಪರ್ಕಿಸಲು ಯತ್ನಿಸಿದ್ದಾಳೆ. ತನ್ನ ಮನೆಕೆಲಸದ ಸಿಬ್ಬಂದಿ ಮೂಲಕ ವಿದ್ಯಾರ್ಥಿಯನ್ನು ಸಂಪರ್ಕಿಸಿ, ತನ್ನನ್ನು ಭೇಟಿಯಾಗುವಂತೆ ಒತ್ತಾಯಿಸಿದ್ದಾಳೆ. ಈ ವಿಷಯ ಪೋಷಕರಿಗೆ ತಿಳಿಯುತ್ತಿದ್ದಂತೆ ಪೊಲೀಸರಿಗೆ ದೂರು ನೀಡಿದ್ದಾರೆ. ತಕ್ಷಣ ಪೊಲೀಸರು ಪ್ರಕರಣ ದಾಖಲಿಸಿಕೊಂದು ಶಿಕ್ಷಕಿಯನ್ನು ಬಂಧಿಸಿದ್ದಾರೆ.