ಶಿಕ್ಷಕರ ವರ್ಗಾವಣೆ : ಆಕ್ಷೇಪಣೆಗೆ ಆಹ್ವಾನ
ಪ್ರಗತಿವಾಹಿನಿ ಸುದ್ದಿ – ಬೆಳಗಾವಿ : 2018-19 ನೇ ಸಾಲಿನ ಬೆಳಗಾವಿ ಶೈಕ್ಷಣಿಕ ಜಿಲ್ಲೆಯ ಸರಕಾರಿ ಪ್ರಾಥಮಿಕ ಹಾಗೂ ಪ್ರೌಢ ಶಾಲೆಗಳ ಶಿಕ್ಷಕರು ಕಡ್ಡಾಯ ಮತ್ತು ಕೋರಿಕೆ ವರ್ಗಾವಣೆಯ ತಾತ್ಕಾಲಿಕ ಆದ್ಯತಾ ಪಟ್ಟಿಗೆ ವಿನಾಯಿತಿ ಮತ್ತು ಆದ್ಯತೆ ಬಯಸಿ ಸಲ್ಲಿಸಿದ ಮನವಿಗಳ ದಾಖಲೆಗಳನ್ನು ಮರು ಪರಿಶೀಲಿಸಿ ರಚಿಸಲಾಗಿರುವ ಕರಡು ಅಂಗೀಕೃತ ಪಟ್ಟಿ ಮತ್ತು ಕರಡು ತಿರಸ್ಕೃತ ಪಟ್ಟಿಯನ್ನು ಆಯಾ ಕ್ಷೇತ್ರ ಶಿಕ್ಷಣಾಧಿಕಾರಿಗಳ ಕಛೇರಿಯಲ್ಲಿ ಜುಲೈ 19 ರಂದು ಪ್ರಕಟಿಸಲಾಗಿದೆ.
ಸದರಿ ಪಟ್ಟಿಯಿಂದ ಬಾಧಿತರಾದ ಶಿಕ್ಷಕರು ತಮ್ಮ ಆಕ್ಷೇಪಣೆಗಳನ್ನು ಮೂಲ ದಾಖಲೆಗಳೊಂದಿಗೆ ಜುಲೈ 23 ರಂದು ಸಂಬಂಧಪಟ್ಟ ಕ್ಷೇತ್ರ ಶಿಕ್ಷಣಾಧಿಕಾರಿಗಳ ಕಛೇರಿಯಲ್ಲಿ ಖುದ್ದಾಗಿ ಹಾಜರಾಗಿ ಸಲ್ಲಿಸಲು ತಿಳಿಸಲಾಗಿದೆ. ಅಂತಿಮ ಪಟ್ಟಿ ಪ್ರಕಟಿಸಿದ ನಂತರ ಬಂದ ಆಕ್ಷೇಪಣೆಗಳನ್ನು ಪರಿಗಣಿಸಲಾಗುವುದಿಲ್ಲ ಎಂದು ಸಾರ್ವಜನಿಕ ಶಿಕ್ಷಣ ಇಲಾಖೆ ಸಾರ್ವಜನಿಕ ಶಿಕ್ಷಣ ಇಲಾಖೆ ಬೆಳಗಾವಿ(ದ) ಉಪನಿರ್ದೇಶಕರಾದ ಡಾ. ಎ.ಬಿ.ಪುಂಡಲೀಕ ತಿಳಿಸಿದ್ದಾರೆ.
ಅಪ್ರೆಂಟೈಸ್‌ಶಿಪ್ ತರಬೇತಿಗೆ ಅರ್ಜಿ ಆಹ್ವಾನ :
ತಾಂತ್ರಿಕ ತರಬೇತಿ ಸಂಸ್ಥೆ (ಟಿ.ಟಿ.ಐ.) ಹಿಂದುಸ್ತಾನ್ ಏರೋನಾಟಿಕ್ಸ್ ಲಿ. ಬೆಂಗಳೂರು ಇವರು ಅಪ್ರೆಂಟೈಸ್‌ಶಿಪ್ ಕಾಯ್ದೆ 1961 ರ ಅಡಿಯಲ್ಲಿ ಡಿಫ್ಲೋಮಾ ಟೆಕ್ನಿಷಿಯನ್ ಟ್ರೇಡ್‌ಗಾಗಿ 1 ವರ್ಷಗಳ ಅಪ್ರೆಂಟೈಸ್‌ಶಿಪ್ ತರಬೇತಿಗಾಗಿ ಡಿಫ್ಲೋಮಾ ಇನ್ ಇಂಜಿನಿಯರಿಂಗ್ ವಿದ್ಯಾರ್ಹತೆಯುಳ್ಳ ಅರ್ಹ ಹಾಗೂ ಆಸಕ್ತ ಅಭ್ಯರ್ಥಿಗಳಿಂದ ಅರ್ಜಿ ಆಹ್ವಾನಿಸಲಾಗಿದೆ.
ಅರ್ಜಿ ಸಲ್ಲಿಸಲು ಆಗಸ್ಟ್ 5 ಕೊನೆಯ ದಿನವಾಗಿದೆ. ಅರ್ಹ ಹಾಗೂ ಆಸಕ್ತ ಅಭ್ಯರ್ಥಿಗಳು ಅರ್ಜಿ ನಮೂನೆಗಳಿಗಾಗಿ ಹಾಗೂ ಹೆಚ್ಚಿನ ಮಾಹಿತಿಗಳಿಗಾಗಿ ಬೆಳಗಾವಿ ಸದಾಶಿವ ನಗರದ ಜಿಲ್ಲಾ ಉದ್ಯೋಗ ವಿನಿಮಯ ಕಛೇರಿಯನ್ನು ಸಂಪರ್ಕಿಸಬಹುದು ಎಂದು ಬೆಳಗಾವಿ ಜಿಲ್ಲಾ ಉದ್ಯೋಗ ವಿನಿಮಯ ಕಛೇರಿ ಸಹಾಯಕ ನಿರ್ದೇಶಕರು ತಿಳಿಸಿದ್ದಾರೆ.
ಬಡ್ಡಿ ರಹಿತ ಸಾಲ: ಸ್ತ್ರೀ ಶಕ್ತಿ ಸಂಘಗಳಿಂದ ಅರ್ಜಿ ಆಹ್ವಾನ: ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ ಇಲಾಖೆಯ ಕರ್ನಾಟಕ ರಾಜ್ಯ ಅಭಿವೃದ್ಧಿ ನಿಗಮದಿಂದ ಮಂಜೂರಾಗಿರುವ 2019-20 ನೇ ಸಾಲಿನ ಕಿರುಸಾಲ ಯೋಜನೆಯಡಿ ಸ್ತ್ರೀ ಶಕ್ತಿ ಸಂಘಗಳಿಗೆ ರೂ.2 ಲಕ್ಷಗಳ ಸಾಲವನ್ನು ಬಡ್ಡಿ ರಹಿತ ನೀಡುವುದಕ್ಕಾಗಿ ಅರ್ಜಿ ಆಹ್ವಾನಿಸಲಾಗಿದೆ.
ಅರ್ಹತೆಗಳು :
ಸ್ತ್ರೀ ಶಕ್ತಿ ಗುಂಪುಗಳು ಬ್ಯಾಂಕ್ ಖಾತೆಯನ್ನು ಹೊಂದಿದ್ದು, ಚಾಲ್ತಿಯಲ್ಲಿರಬೇಕು, ಗುಂಪಿನ ಸದಸ್ಯರು ಕರ್ನಾಟಕ ರಾಜ್ಯದ ಖಾಯಂ ನಿವಾಸಿಗಳಾಗಿರಬೇಕು, ಗುಂಪು ಬೇರೆ ಯಾವುದೇ ಆರ್ಥಿಕ ಸಂಸ್ಥೆ, ಬ್ಯಾಂಕುಗಳಲ್ಲಿ ಸಾಲಗಾರರಾಗಿರಬಾರದು, ಈಗಾಗಲೇ ಕಿರುಸಾಲ ಯೋಜನೆಯಡಿ ಪ್ರಯೋಜನೆ ಪಡೆಯದೇ ಇರುವ ಸಂಘಗಳು ಮಾತ್ರ ಸಾಲ ಪಡೆಯಲು ಅರ್ಹರಾಗಿರುತ್ತಾರೆ, ಸ್ತ್ರೀ ಶಕ್ತಿ ಗುಂಪು ಆರ್ಥಿಕವಾಗಿ ಸದೃಡವಾಗಿದ್ದು, ಗುಂಪಿನ ಉಳಿತಾಯ ಗರಿಷ್ಠ ರೂ.2.00 ಲಕ್ಷಗಳಿಗೂ ಮೇಲಿರಬೇಕು.
ದಾಖಲಾತಿಗಳು :
ಸಾಲ ಪಡೆಯಲು ನಿಗಮಕ್ಕೆ ಸಲ್ಲಿಸಬೇಕಾದ ಸಾಲದ ಅರ್ಜಿ, ಗ್ರೇಡಿಂಗ್ ಮಾಡಿರುವ ದಾಖಲೆಗಳನ್ನು ಸಂಬಂಧಿಸಿದ ಶಿಶು ಅಭಿವೃದ್ಧಿ ಯೋಜನಾಧಿಕಾರಿಗಳು ದೃಡೀಕರಿಸಿ ನೀಡುವುದು, ಸದಸ್ಯರೆಲ್ಲರು ಸಹಿ ಮಾಡಿರುವ ರೂ.50 ಛಾಪಾ ಕಾಗದ ಬ್ಯಾಂಕ್ ಖಾತೆಯ ಪುಸ್ತಕದ ನಕಲು ಪ್ರತಿ ಮತ್ತು ಬ್ಯಾಂಕಿನ ಹೆಸರು ಮತ್ತು ಅದರ ಐ.ಎಫ್.ಎಸ್.ಸಿ ಕೋಡ್ ದಾಖಲೆ, ಸಾಲ ಪಡೆಯಲು ಉದ್ದೇಶಿಸಿದ ಉತ್ಪಾದನಾ ಘಟಕದ ಯೋಜನಾ ವರದಿ ಅದರಲ್ಲಿ ಘಟಕದ ಸ್ಥಿರ ಮತ್ತು ಚರಾಸ್ತಿಯ ಸಂಪೂರ್ಣ ವಿವರ ಮತ್ತು ಘಟಕದ ಉತ್ಪಾದನಾ ಸಾಮಥ್ಯದಿಂದ ಗುಂಪು ಮಾಸಿಕವಾಗಿ ಗಳಿಸುವ ನಿವ್ವಳ ಲಾಭದ ವಿವರ ಹೊಂದಿರಬೇಕು.
ಕಿರುಸಾಲ ಯೋಜನೆಯಡಿ ನಿಗದಿತ ಅರ್ಜಿ ನಮೂನೆಗಳನ್ನು ಪ್ರತಿ ತಾಲೂಕಿನ ಶಿಶು ಅಭಿವೃದ್ಧಿ ಯೋಜನಾಧಿಕಾರಿಗಳ ಕಚೇರಿಯಿಂದ ಪಡೆದು ಅಗಸ್ಟ್ 13 ರ ಒಳಗೆ ಶಿಶು ಅಭಿವೃದ್ಧಿ ಯೋಜನಾಧಿಕಾರಿಗಳು ಕಚೇರಿಗೆ ಸಲ್ಲಿಸಬೇಕು. ನಂತರ ಬಂದ ಅರ್ಜಿಗಳನ್ನು ಪರಿಗಣಿಸಲಾಗುವುದಿಲ್ಲಾ ಎಂದು ಬೆಳಗಾವಿ ಮಹಿಳಾ ಹಾಗೂ ಮಕ್ಕಳ ಅಭಿವೃದ್ಧಿ ಇಲಾಖೆ ಉಪ ನಿರ್ದೇಶಕರು ತಿಳಿಸಿದ್ದಾರೆ.
ಸಾಮಾನ್ಯ ಪ್ರವೇಶ ಪರೀಕ್ಷೆಗಳು :
ನಿಷೇದಾಜ್ಞೆ ಜಾರಿ : ಕರ್ನಾಟಕ ಪರೀಕ್ಷಾ ಪ್ರಾಧಿಕಾರ, ಬೆಂಗಳೂರು ಅವರ ವತಿಯಿಂದ ಡಿಫ್ಲೋಮಾ ಅಭ್ಯರ್ಥಿಗಳಿಗೆ 2ನೇ ವರ್ಷದ ಅಥವಾ 3ನೇ ಸೆಮಿಸ್ಟ್ರಿನ ಇಂಜನಿಯರಿಂಗ್ ಕೋರ್ಸಗಳ ಪ್ರವೇಶಕ್ಕೆ ಹಾಗೂ ಎಂ.ಸಿಎ, ಎಂ.ಬಿಎ, ಎಂ.ಟೆಕ್ ಮತ್ತು ಎಂ.ಆರ್ಕಿಟೆಕ್ಚರ್ ಕೋರ್ಸುಗಳ ಪ್ರವೇಶಕ್ಕಾಗಿ ಬೆಳಗಾವಿ ನಗರದ 04 ಪರೀಕ್ಷಾ ಕೇಂದ್ರಗಳಲ್ಲಿ ಜುಲೈ 20 ಮತ್ತು 21 ರಂದು ಸಾಮಾನ್ಯ ಪ್ರವೇಶ ಪರೀಕ್ಷೆಗಳು ಜರುಗಲಿವೆ.
ಬೆಳಗಾವಿ ನಗರದ 04 ಪರೀಕ್ಷಾ ಕೇಂದ್ರಗಳು ಆರ್.ಪಿ.ಡಿ ಪದವಿಪೂರ್ವ ಕಾಲೇಜ್, ಲಿಂಗರಾಜ ಕಲಾ ಮತ್ತು ವಾಣಿಜ್ಯ ಪದವಿಪೂರ್ವ ಕಾಲೇಜ್, ರಾಜಾಲಕಮನಗೌಡ ಎಸ್.ಸಿ ಪದವಿಪೂರ್ವ ಕಾಲೇಜ್, ಮರಾಠ ಮಂಡಳ ಪದವಿಪೂರ್ವ ಕಾಲೇಜ್ ಈ ಪರೀಕ್ಷಾ ಕೇಂದ್ರಗಳ ಸುತ್ತಮುತ್ತ 200 ಮೀಟರ್ ವ್ಯಾಪ್ತಿಯಲ್ಲಿ ಶಾಂತಿ ಸುವ್ಯವಸ್ಥೆಯನ್ನು ಕಾಪಾಡುವದಕ್ಕಾಗಿ ಬೆಳಗಾವಿ ನಗರದ ಹೆಚ್ಚುವರಿ ಜಿಲ್ಲಾ ದಂಡಾಧಿಕಾರಿ ಮತ್ತು ಪೊಲೀಸ್ ಆಯುಕ್ತರಾದ ಬಿ.ಎಸ್ ಲೋಕೇಶಕುಮಾರ ಅವರು ನಿಷೇದಾಜ್ಞೆ ಆದೇಶವನ್ನು ಹೊರಡಿಸಿದ್ದಾರೆ.
ಮಹಿಳಾ ಸೇನಾ ಭರ್ತಿ ರ‍್ಯಾಲಿ ಮುಂದುಡಿಕೆ :
ಬೆಳಗಾವಿಯ ಮರಾಠಾ ಲಘು ಪದಾತಿ ದಳ ಕೇಂದ್ರದ ಆವರಣದಲ್ಲಿರುವ ಶಿವಾಜಿ ಕ್ರಿಡಾಂಗಣದಲ್ಲಿ ಜುಲೈ 22 ರಂದು ನಡೆಯಬೇಕಿದ್ದ ಮಹಿಳಾ ಸೇನಾ ಭರ್ತಿ ರ‍್ಯಾಲಿಯನ್ನು ಮುಂದೂಡಲಾಗಿದ್ದು, ಸದರಿ ರ‍್ಯಾಲಿಯು ಅಗಸ್ಟ್ 1 ರಿಂದ 5 ರವರೆಗೆ ಮಹಿಳಾ ನೇಮಕಾತಿ ರ‍್ಯಾಲಿ ನಡೆಯಲಿದೆ ಎಂದು ಇಲಾಖೆ ಪ್ರಕಟಣೆ ತಿಳಿಸಿದೆ.
ಜುಲೈ 21 ರಂದು ವಿದ್ಯುತ್ ನಿಲುಗಡೆ :
ಕ.ವಿ.ಪ್ರ.ನಿ.ನಿ. ವತಿಯಿಂದ ಎರಡನೇಯ ತ್ರೈಮಾಸಿಕ ಹಾಗೂ ತುರ್ತು ನಿರ್ವಹಣಾ ಕಾರ್ಯಗಳನ್ನು ಕೈಗೊಳ್ಳುತ್ತಿರುವುದರಿಂದ 110 ಕೆ.ವ್ಹಿ. ಎಮ್. ಕೆ. ಹುಬ್ಬಳ್ಳಿ ಉಪಕೇಂದ್ರದಿಂದ ಸರಬರಾಜು ಆಗುವ ಖಾನಾಪೂರ ತಾಲೂಕಿನ ಇಟಗಿ, ಬೋಗೂರ, ಬೇಡರಹಟ್ಟಿ, ಹಿರೇಮುನವಳ್ಳಿ, ಚಿಕ್ಕಮುನವಳ್ಳಿ, ಹಿರೇಹಟ್ಟಿಹೊಳಿ, ಚಿಕ್ಕಹಟ್ಟಿಹೊಳಿ, ಜಿಕನೂರ, ಗಾಡಿಕೊಪ್ಪ, ಪಾರಿಶ್ವಾಡ, ಗಂದಿಗವಾಡ, ಹಿರೇ ಅಂಗ್ರೋಳ್ಳಿ, ಚಿಕ್ಕ ಅಂಗ್ರೊಳ್ಳಿ, ಹಂದೂರ, ಕೇರವಾಡ, ಹುಲಿಕೊತ್ತಲ, ತೊಲಗಿ, ಬಿಳಕಿ, ಅವರೊಳ್ಳಿ ಹಾಗೂ ಕಗ್ಗಣಗಿ ಗ್ರಾಮಗಳಿಗೆ ಜುಲೈ 21 ರಂದು ಮುಂಜಾನೆ 9 ಗಂಟೆಯಿಂದ ಸಾಯಂಕಾಲ 04 ಗಂಟೆಯ ವರೆಗೆ ವಿದ್ಯುತ್ ಸರಬರಾಜಿನಲ್ಲಿ ವ್ಯತ್ಯಯವಾಗಲಿದೆ ಎಂದು ಹೆಸ್ಕಾಂ ಅಧಿಕಾರಿ ಪ್ರಕಟಣೆಯಲ್ಲಿ ತಿಳಿಸಿದ್ದಾರೆ.////
ಪ್ರಗತಿವಾಹಿನಿ ಸುದ್ದಿಗಳನ್ನು ನಿಮ್ಮ ಸ್ನೇಹಿತರಿಗೆ, ಬೇರೆ ಗ್ರುಪ್ ಗಳಿಗೆ ಶೇರ್ ಮಾಡಿ