*ಟ್ಯೂಷನ್ ಕ್ಲಾಸ್ ಗೆ ಹೋಗಿದ್ದ ವಿದ್ಯಾರ್ಥಿನಿ ಶಿಕ್ಷಕನಿಂದಲೇ ಕಿಡ್ನ್ಯಾಪ್: ಆರೋಪಿ ಸುಳಿವು ನೀಡಿದವರಿಗೆ ಬಹುಮಾನ ಘೋಷಿಸಿದ ಪೊಲೀಸರು*
ಪ್ರಗತಿವಾಹಿನಿ ಸುದ್ದಿ: 10ನೇ ತರಗತಿ ವಿದ್ಯಾರ್ಥಿನಿಯೋರ್ವಳನ್ನು ಟ್ಯೂಷನ್ ಹೇಳಿಕೊಡುತ್ತಿದ್ದ ಶಿಕ್ಷಕನೇ ಕಿಡ್ನ್ಯಾಪ್ ಮಾಡಿರುವ ಘಟನೆ ಬೆಂಗಳೂರಿನ ಜೆ.ಪಿನಗರದಲ್ಲಿ ನಡೆದಿದೆ.
ಕನಕಪುರ ಮೂಲದ ಟ್ಯೂಷನ್ ಟೀಚರ್ ಅಭಿಷೇಕ್ ಎಂಬಾತ 10ನೇ ತರಗತಿ ವಿದ್ಯಾರ್ಥಿನಿಯನ್ನು ಪ್ರೀತಿ-ಪ್ರೇಮ ಎಂದು ನಂಬಿಸಿ ಕಿಡ್ನ್ಯಾಪ್ ಮಾಡಿದ್ದು, ಕಳೆದ 40 ದಿನಗಳಿಂದ ಆರೋಪಿ ಹಾಗೂ ವಿದ್ಯಾರ್ಥಿನಿ ಇಬ್ಬರೂ ನಾಪತ್ತೆಯಾಗಿದ್ದಾರೆ.
ಈ ಬಗ್ಗೆ ವಿದ್ಯಾರ್ಥಿನಿ ತಂದೆ ಬೆಂಗಳೂರಿನ ಜೆ.ಪಿ,ನಗರ ಪೊಲೀಸ್ ಠಾಣೆಯಲ್ಲಿ ದೂರು ನೀಡಿದ್ದಾರೆ. ನವೆಂಬರ್ 23ರಂದು ವಿದ್ಯಾರ್ಥಿನಿ ಎಂದಿನಂತೆ ಟ್ಯೂಷನ್ ಗೆ ಹೋಗಿದ್ದಾಳೆ. ಟ್ಯೂಷನ್ ಕ್ಲಾಸ್ ಮುಗಿದು ರಾತ್ರಿಯಾದರೂ ವಿದ್ಯಾರ್ಥಿನಿ ಮನೆಗೆ ಬಂದಿಲ್ಲ. ಆತಂಕಕ್ಕೀಡಾದ ಪೋಷಕರು, ಟ್ಯೂಷನ್ ಸೆಂಟರ್ ಬಳಿ ಹೋಗಿ ನೋಡಿದ್ದಾರೆ. ಈ ವೇಳೆ ಶಿಕ್ಷಕ ಅಭಿಷೇಕ್ ವಿದ್ಯಾರ್ಥಿನಿಯನ್ನು ಕರೆದೊಯ್ದಿದ್ದಾಗಿ ಗೊತ್ತಾಗಿದೆ.
ಅಲ್ಲದೇ ಆರೋಪಿ ಶಿಕ್ಷಕ ತನ್ನ ಮನೆ ರೂಂನಲ್ಲಿಯೇ ಮೊಬೈಲ್ ಬಿಟ್ಟು ಹೋಗಿದ್ದಾನೆ. ವಿದ್ಯಾರ್ಥಿನಿಯೊಂದಿಗೆ ತಲೆಮರೆಸಿಕೊಂದಿರುವ ಶಿಕ್ಷಕ ಈವರೆಗೂ ಯಾವುದೇ ಗೂಗಲ್ ಪೇ, ಫೋನ್ ಪೇ, ಆನ್ ಲೈನ್ ಪೇಮೆಂಟ್ ಮೂಲಕ ಹಣವನ್ನೂ ಪಾವತಿ ಮಾಡುತ್ತಿಲ್ಲ. ಹಾಗಾಗಿ ಆರೋಪಿ ತಲೆಮರೆಸಿಕೊಂಡಿರುವ ಜಾಗ ಪತ್ತೆಗೆ ಹಚ್ಚುವುದು ಕಷ್ಟಕರವಾಗಿದೆ.
ಈಗಾಗಲೇ ಪೊಲೀಸರು ಬೆಂಗಳೂರು, ಕನಕಪುರ, ರಾಮನಗರ ಸೇರಿದಂತೆ ವಿವಿಧೆಡೆ ಹುಡುಕಾಟ ನಡೆಸಿದ್ದಾರೆ. ಈ ಹಿನ್ನೆಲೆಯಲ್ಲಿ ವಿದ್ಯಾರ್ಥಿನಿಯನ್ನು ಅಪಹರಿಸಿರುವ ಆರೋಪಿ ಶಿಕ್ಷಕನ ಬಗ್ಗೆ ಸುಳಿವು ನೀಡಿದರೆ ಬಹುಮಾನ ನೀಡುವುದಾಗಿ ಪೊಲೀಸರು ಪ್ರಕಟಣೆ ಹೊರಡಿಸಿದ್ದು, ಲುಕ್ ಔಟ್ ನೋಟಿಸ್ ಜಾರಿ ಮಾಡಿದ್ದಾರೆ.
ಪ್ರಗತಿವಾಹಿನಿ ಸುದ್ದಿಗಳನ್ನು ನಿಮ್ಮ ಸ್ನೇಹಿತರಿಗೆ, ಬೇರೆ ಗ್ರುಪ್ ಗಳಿಗೆ ಶೇರ್ ಮಾಡಿ