*ಶಾಲೆಗೆ ಗೈರಾಗಿ 7 ವರ್ಷಗಳಿಂದ ಸಂಬಳ ಮಾತ್ರ ಪಡೆಯುತ್ತಿದ್ದ ಶಿಕ್ಷಕ ಸಸ್ಪೆಂಡ್*
ಪ್ರಗತಿವಾಹಿನಿ ಸುದ್ದಿ; ಉಡುಪಿ: ಕಳೆದ 7 ವರ್ಷಗಳಿಂದ ಶಾಲೆಗೆ ಬಾರದೇ ಸಂಬಳವನ್ನು ಮಾತ್ರ ಪಡೆಯುತ್ತಿದ್ದ ಸರ್ಕಾರಿ ಶಾಲೆಯ ಶಿಕ್ಷಕನನ್ನು ಅಮಾನತುಗೊಳಿಸಿ ಆದೇಶ ಹೊರಡಿಸಿರುವ ಘಟನೆ ಉಡುಪಿಯಲ್ಲಿ ನಡೆದಿದೆ.
ಉಡುಪಿ ಜಿಲ್ಲೆಯ ಕುಂದಾಪುರ ತಾಲೂಕಿನ ಅಂಪಾರು ದಿನಕರ ಶೆಟ್ಟಿ ಸುಮಾರು 7 ವರ್ಷಗಳಿಂದ ಶಾಲೆಗೆ ಗೈರಾಗಿದ್ದು, ಮಕ್ಕಳಿಗೆ ಪಾಠ ಮಾಡದೇ ಮನೆಯಲ್ಲಿಯೇ ಕುಳಿತು ಸಂಬಳ ಪಡೆಯುತ್ತಿದ್ದರು. ಶಿಕ್ಷಕ ದಿನಕರ ಶೆಟ್ಟಿಯ ಬೇಜವಾಬ್ದಾರಿ ಈಗ ಶಿಕ್ಷಣ ಇಲಾಖೆ ಗಮನಕ್ಕೆ ಬಂದಿದೆ. ಈ ಹಿನ್ನೆಲೆಯಲ್ಲಿ ಶಿಕ್ಷಕನನ್ನು ಅಮಾನತು ಮಾಡಲಾಗಿದೆ.
ಇನ್ನು ದಿನಕರ ಶೆಟ್ಟಿ ಸರ್ಕಾರಿ ನೌಕರರ ಸಂಘದ ಉಡುಪಿ ಜಿಲ್ಲಾಧ್ಯಕ್ಷರೂ ಆಗಿದ್ದಾರೆ. ಆನಗಳ್ಳಿ ಸರ್ಕಾರಿ ಹಿರಿಯ ಪ್ರಾಥಮಿಕ ಶಾಲೆಯ ಸಹಶಿಕ್ಷಕ ಕೂಡ ಆಗಿದ್ದಾರೆ. ಇಷ್ಟೆಲ ಜವಾಬ್ದಾರಿಗಳಿದ್ದರೂ 2017ರಿಂದ ಈವರೆಗೆ ಶಿಕ್ಷಕ ಶಾಲೆಯತ್ತ ಮುಖ ಮಾಡಿಲ್ಲ, ವಿದ್ಯಾರ್ಥಿಗಳಿಗೆ ಪಾಠ ಹೇಳಿಲ್ಲ. ಅನಾರೋಗ್ಯದ ನೆಪ ಹೇಳಿ ಶಾಲೆಗೆ ಗೈರಾಗಿ, ಬೇರೆ ವ್ಯವಹಾರ ಮಾಡಿಕೊಂಡಿರುವುದು ಬೆಳಕಿಗೆ ಬಂದಿದೆ.
ಶಿಕ್ಷಕನ ಗೈರು ಹಾಜರಾತಿಗೆ ಸ್ಥಳೀಯರು ಆಕ್ರೋಶ ವ್ಯಕ್ತಪಡಿಸಿ, ಕುಂದಾಪುರ ಶಿಕ್ಷಣಾಧಿಕಾರಿಗೆ ದೂರು ನೀಡಿದ್ದರು. ಈ ಹಿನ್ನೆಲೆಯಲ್ಲಿ ಅಮಾನತು ಮಾಡಲಾಗಿದೆ.
ಪ್ರಗತಿವಾಹಿನಿ ಸುದ್ದಿಗಳನ್ನು ನಿಮ್ಮ ಸ್ನೇಹಿತರಿಗೆ, ಬೇರೆ ಗ್ರುಪ್ ಗಳಿಗೆ ಶೇರ್ ಮಾಡಿ