*ತೆಲಂಗಾಣದಲ್ಲಿ ಕಾಂಗ್ರೆಸ್ ಪಕ್ಷ ಅಧಿಕಾರಕ್ಕೆ ಬಂದರೆ 2 ಲಕ್ಷ ಸರ್ಕಾರಿ ಉದ್ಯೋಗಗಳು ಭರ್ತಿ: ಡಿ.ಕೆ. ಶಿವಕುಮಾರ್*
ಪ್ರಗತಿವಾಹಿನಿ ಸುದ್ದಿ; ಕೋದಾಡ (ತೆಲಂಗಾಣ): ತೆಲಂಗಾಣ ಚುನಾವಣಾ ಅಖಾಡ ರಂಗೇರಿದ್ದು, ಕರ್ನಾಟಕ ಡಿಸಿಎಂ ಡಿ.ಕೆ.ಶಿವಕುಮಾರ್ ಕಾಂಗ್ರೆಸ್ ಅಭ್ಯರ್ಥಿ ಪರ ಭರ್ಜರಿ ಚುನಾವಣಾ ಪ್ರಚಾರ ನಡೆಸಿದರು.
“ಎಲ್ಲರಿಗೂ ನಮಸ್ಕಾರ, ನನ್ನ ಪಕ್ಕದ ರಾಜ್ಯದ ಸಹೋದರ, ಸಹೋದರಿಯರನ್ನು ನೋಡಲು ಬಹಳ ಸಂತೋಷದಿಂದ ಬಂದಿದ್ದೇನೆ” ಎಂದು ತೆಲುಗಿನಲ್ಲಿ ಡಿ.ಕೆ.ಶಿವಕುಮಾರ್ ಅವರು ಭಾಷಣ ಆರಂಭಿಸಿದರು.
ಕಾಂಗ್ರೆಸ್ ಪಕ್ಷವು ಅಧಿಕಾರಕ್ಕೆ ಬಂದ ತಕ್ಷಣ 2 ಲಕ್ಷ ಸರ್ಕಾರಿ ಉದ್ಯೋಗಗಳನ್ನು ಭರ್ತಿ ಮಾಡುತ್ತದೆ ಎಂದು ಡಿಸಿಎಂ ಡಿ.ಕೆ.ಶಿವಕುಮಾರ್ ಹೇಳಿದರು.
ತೆಲಂಗಾಣದ ಕೋದಾಡದಲ್ಲಿ ಕಾಂಗ್ರೆಸ್ ಅಭ್ಯರ್ಥಿ ಪದ್ಮಾವತಿ ಅವರ ಪರ ಚುನಾವಣಾ ಪ್ರಚಾರ ಭಾಷಣ ಮಾಡಿದ ಡಿ.ಕೆ.ಶಿವಕುಮಾರ್, ಕೆಸಿಆರ್ ಅವರು ಎರಡು ರೂಮುಗಳಿರುವ ಮನೆ ನೀಡುತ್ತೇನೆ, ಉದ್ಯೋಗ ನೀಡುತ್ತೇನೆ ಎಂದು ಕೊಟ್ಟ ಮಾತು ತಪ್ಪಿದ್ದಾರೆ ಎಂದು ತೆಲಂಗಾಣದ ಆಡಳಿತಾರೂಡ ಬಿಆರ್‌ಎಸ್ ಪಕ್ಷದ ವಿರುದ್ದ ವಾಗ್ದಾಳಿ ನಡೆಸಿದರು.
ನಾವು ತೆಲಂಗಾಣದ ಯುವಕರ ಕನಸುಗಳಿಗೆ ದಾರಿಯಾಗುತ್ತೇವೆ. Job for Everyone ಎನ್ನುವ ಘೋಷವಾಕ್ಯದೊಂದಿಗೆ, ಉದ್ಯೋಗದ ಕನಸನ್ನು ನನಸು ಮಾಡುತ್ತೇವೆ ಎಂದು ಹೇಳಿದರು.
ಖಾಲಿ ಇರುವ ಶಿಕ್ಷಕರು, ಉಪನ್ಯಾಸಕರ ಹುದ್ದೆ ಸೇರಿದಂತೆ ತಕ್ಷಣಕ್ಕೆ ಅಗತ್ಯವಿರುವ ಎಲ್ಲಾ ಹುದ್ದೆಗಳನ್ನು ಅಧಿಕಾರಕ್ಕೆ ಬಂದ ತಕ್ಷಣ ಪಾರದರ್ಶಕವಾಗಿ ಭರ್ತಿ ಮಾಡಲಾಗುವುದು ಎಂದರು.
ನಾನು ನಿಮ್ಮ ಪಕ್ಕದ ರಾಜ್ಯವಾದ ಕರ್ನಾಟಕದಿಂದ ಬಂದವನು. ನಮ್ಮ ರಾಜ್ಯದ ಜನ ಬಿಜೆಪಿಯನ್ನು ಮನೆಗೆ ಓಡಿಸಿ, ಗ್ಯಾರಂಟಿ ಕಾಂಗ್ರೆಸ್ ಸರ್ಕಾರವನ್ನು ಅಧಿಕಾರಕ್ಕೆ ತಂದು ಹೊಸ ಅಭಿವೃದ್ಧಿಗೆ ಮುನ್ನುಡಿ ಬರೆದಿದ್ದಾರೆ ಎಂದು ತಿಳಿಸಿದರು.
ಅಧಿಕಾರಕ್ಕೆ ಬಂದ ನಂತರ, ಮೊದಲ ಕ್ಯಾಬಿನೆಟ್ ನಲ್ಲೇ ಗ್ಯಾರಂಟಿ ಯೋಜನೆಗಳಿಗೆ ತಾತ್ವಿಕವಾಗಿ ಒಪ್ಪಿಗೆ ನೀಡಿದೆವು. ಮಹಿಳೆಯರಿಗೆ ಉಚಿತ ಬಸ್, ತಿಂಗಳಿಗೆ ಎರಡು ಸಾವಿರ, ಕುಟುಂಬದ ಪ್ರತಿ ವ್ಯಕ್ತಿಗೆ 10 ಕೆ.ಜಿ ಅಕ್ಕಿ, 200 ಯುನಿಟ್ ವಿದ್ಯುತ್ ಯೋಜನೆ ಜಾರಿಗೆ ತಂದಿದ್ದು, ನಿರುದ್ಯೋಗ ಯುವಕ- ಯುವತಿಯರಿಗೆ ಯುವನಿಧಿ ಯೋಜನೆ ಜಾರಿಗೆ ತರಲಿದ್ದೇವೆ ಎಂದು ಹೇಳಿದರು.
ಕರ್ನಾಟಕ ಮಾದರಿಯಲ್ಲೇ ತೆಲಂಗಾಣದಲ್ಲಿ ಕೂಡ 200 ಯುನಿಟ್ ವಿದ್ಯುತ್ ಉಚಿತವಾಗಿ ನೀಡಲಾಗುತ್ತದೆ. ನಮ್ಮ ಕರ್ನಾಟಕದಲ್ಲಿ ಮಹಿಳಾ ಯಜಮಾನಿಗೆ 2 ಸಾವಿರ ಕೊಡುತ್ತಿದ್ದೇವೆ, ಆದರೆ ಇಲ್ಲಿ 2,500 ಕೊಡುತ್ತೇವೆ ಎಂದು ಗ್ಯಾರಂಟಿ ನೀಡಲಾಗಿದೆ. ಗ್ಯಾಸ್ ಸಿಲಿಂಡರ್‌ಗೆ 500 ರೂಪಾಯಿ, ಹಿರಿಯ ನಾಗರಿಕರಿಗೆ ತಿಂಗಳಿಗೆ 4,000 ರೂಪಾಯಿ, ಪ್ರತಿ ರೈತರಿಗೆ 15 ಸಾವಿರ ಪ್ರೋತ್ಸಾಹಧನ – ಹೀಗೆ ಗ್ಯಾರಂಟಿ ಅಭಿವೃದ್ಧಿಯ ಪರ್ವ ತೆಲಂಗಾಣವನ್ನು ಬದಲಾಯಿಸಲಿದೆ ಎಂದು ಹೇಳಿದರು.
ಪ್ರಧಾನಿ ನರೇಂದ್ರ ಮೋದಿಯವರು ತೆಲಂಗಾಣವನ್ನು ಭ್ರಷ್ಟಾಚಾರದ ರಾಜಧಾನಿ ಎಂದು ಅವಮಾನ ಮಾಡಿದ್ದಾರೆ. ಆ ಮೂಲಕ ಮೋದಿಯವರು ತಮ್ಮ ಬಿ ಟೀಮ್ ಆದ ಬಿಆರ್‌ಎಸ್ ಪಕ್ಷದ ದುರಾಡಳಿತದ ಬಗ್ಗೆ ಹೇಳಿದ್ದಾರೆ ಎಂದು ವ್ಯಂಗ್ಯವಾಡಿದರು.
ಕಾಂಗ್ರೆಸ್ ಪಕ್ಷವನ್ನು ಅಧಿಕಾರಕ್ಕೆ ತರುವ ಮೂಲಕ ಕೆಸಿಆರ್ ಅವರನ್ನು ಶಾಶ್ವತವಾಗಿ ಅವರ ತೋಟದ ಮನೆಯಲ್ಲಿ ವಿಶ್ರಾಂತಿ ತೆಗೆದುಕೊಳ್ಳಿ ಎಂದು ಹರಸೋಣ. ಅವರು ಸುದೀರ್ಘ 10 ವರ್ಷಗಳ ಕಾಲ ತೆಲಂಗಾಣವನ್ನು ಹಳ್ಳ ಹಿಡಿಸಿದ್ದಾರೆ ಎಂದರು.
ಕಳೆದ ಚುನಾವಣೆಯಲ್ಲಿ ನನ್ನ ಸಹೋದರಿ ಪದ್ಮಾವತಿ ಅವರು ಸಣ್ಣ ಅಂತರದಲ್ಲಿ ಸೋತಿದ್ದರು. ಆದರೆ ಈ ಬಾರಿ ಕನಿಷ್ಠ 25 ಸಾವಿರ ಮತಗಳ ಅಂತರದಲ್ಲಿ ಗೆಲ್ಲಲಿದ್ದಾರೆ ಎಂದರು.
ಇಡೀ ತೆಲಂಗಾಣವೇ ಬಿಆರ್‌ಎಸ್ ಪಕ್ಷ ಅಧಿಕಾರದಿಂದ ಕೆಳಗೆ ಇಳಿಯಬೇಕು ಎಂದು ಬಯಸುತ್ತಿದೆ. ಭಾರತ್ ಜೋಡೋ ಯಾತ್ರೆ ತೆಲಂಗಾಣದ ಮೇಲೆ ಹಾದು ಹೋದಾಗ ನನಗೆ ಅಂದೇ ಕಾಂಗ್ರೆಸ್ ಸರ್ಕಾರ ಅಧಿಕಾರಕ್ಕೆ ಬರುತ್ತದೆ ಎಂದು ಭರವಸೆ ಮೂಡಿತ್ತು ಎಂದು ಹೇಳಿದರು.
ಕಾಂಗ್ರೆಸ್ ಪಕ್ಷ ನೀಡಿದ ನಾಗಾರ್ಜುನ ಸಾಗರ ಯೋಜನೆಯಿಂದ ಲಕ್ಷಾಂತರ ರೈತರು ಇಂದು ಸಹ ದೇಶದ ಹಸಿವು ನೀಗಿಸುತ್ತಿದ್ದಾರೆ. ಭೂರಹಿತ ಕೃಷಿ ಕಾರ್ಮಿಕರಿಗೆ ಹಣ ಸೇರಿದಂತೆ, ಭತ್ತಕ್ಕೆ ಬೆಂಬಲ ಬೆಲೆ ಹೀಗೆ ನಾವು ಕೊಟ್ಟ ಮಾತು ತಪ್ಪುವುದಿಲ್ಲ, ಇದಕ್ಕೆ ಕರ್ನಾಟಕವೇ ಉದಾಹರಣೆ ಎಂದರು.
ಡಿಸೆಂಬರ್ 9 ನೇ ತಾರೀಕು ತೆಲಂಗಾಣದಲ್ಲಿ ಕಾಂಗ್ರೆಸ್ ಸರ್ಕಾರದ ಮುಖ್ಯಮಂತ್ರಿ ಪ್ರಮಾಣ ವಚನ ತೆಗೆದುಕೊಳ್ಳುತ್ತಾರೆ ಎಂದು ಭರವಸೆ ವ್ಯಕ್ತಪಡಿಸಿದರು.
ಪ್ರಗತಿವಾಹಿನಿ ಸುದ್ದಿಗಳನ್ನು ನಿಮ್ಮ ಸ್ನೇಹಿತರಿಗೆ, ಬೇರೆ ಗ್ರುಪ್ ಗಳಿಗೆ ಶೇರ್ ಮಾಡಿ