*ತೆಲಂಗಾಣದಲ್ಲಿ ಕಾಂಗ್ರೆಸ್ ಗೆಲುವಿಗೆ ಸಚಿವೆ ಲಕ್ಷ್ಮೀ ಹೆಬ್ಬಾಳ್ಕರ್ ಹರ್ಷ*

ಪ್ರಗತಿವಾಹಿನಿ ಸುದ್ದಿ; ಬೆಂಗಳೂರು: ನೆರೆಯ ರಾಜ್ಯ ತೆಲಂಗಾಣ ವಿಧಾನಸಭಾ ಚುನಾವಣೆಯಲ್ಲಿ ಕಾಂಗ್ರೆಸ್ ಪಕ್ಷ ಭರ್ಜರಿ ಗೆಲುವು ಸಾಧಿಸಿರುವುದಕ್ಕೆ ಮಹಿಳಾ ಮತ್ತು ಮಕ್ಕಳ ಕಲ್ಯಾಣ ಇಲಾಖೆ ಸಚಿವರಾದ ಲಕ್ಷ್ಮೀ ಆರ್. ಹೆಬ್ಬಾಳ್ಕರ್ ಹರ್ಷ ವ್ಯಕ್ತಪಡಿಸಿದ್ದಾರೆ.
ತೆಲಂಗಾಣದಲ್ಲಿ ನಡೆಸಿದ ಚುನಾವಣಾ ಪ್ರಚಾರ ವೇಳೆಯಲ್ಲಿ ಅಲ್ಲಿನ ಜನರು ಕಾಂಗ್ರೆಸ್ ಬಗ್ಗೆ ವಿಶೇಷ ಒಲವು ಹೊಂದಿದ್ದು ಎದ್ದು ಕಾಣುತ್ತಿತ್ತು. ಆ ಒಲವು ಇಂದು ನಮ್ಮ ಪಕ್ಷದ ಗೆಲುವಾಗಿದೆ. ಕಳೆದ 10 ವರ್ಷಗಳಿಂದ ಬಿಆರ್ ಎಸ್ ಆಡಳಿತದಿಂದ ರೋಸಿಹೋಗಿದ್ದ ಜನರು ಕಾಂಗ್ರೆಸ್ಸಿಗೆ ಗೆಲುವು ತರಲು ಕಾರಣಕರ್ತರಾಗಿದ್ದಾರೆ ಎಂದು ಸಚಿವರು ಅಭಿಪ್ರಾಯಪಟ್ಟಿದ್ದಾರೆ.
ತೆಲಂಗಾಣದಲ್ಲಿ ಗ್ಯಾರಂಟಿ ಯೋಜನೆಗಳಷ್ಟೇ ಪಕ್ಷಕ್ಕೆ ಗೆಲುವು ತಂದು ಕೊಟ್ಟಿಲ್ಲ, ಕಳೆದ ಹತ್ತು ವರ್ಷಗಳಿಂದ ತೆಲಂಗಾಣ ರಾಜ್ಯದಲ್ಲಿ ಏನು ಆಗಿದೆ ಎಂದು ನೋಡಿದ್ದೇವೆ. ಹಾಲಿ ಮುಖ್ಯಮಂತ್ರಿ ಕೆಸಿಆರ್ ಜನಸ್ನೇಹಿ ಸರ್ಕಾರ ಆಗಲಿರಲಿಲ್ಲ. ಇದೀಗ ಕಾಂಗ್ರೆಸ್ ಪಕ್ಷಕ್ಕೆ ಅಭೂತಪೂರ್ವ ಗೆಲುವು ಕೊಟ್ಟಿದ್ದಾರೆ ಎಂದು ಸಚಿವೆ ಹೇಳಿದರು.
ಮುಖ್ಯಮಂತ್ರಿ ಸಿದ್ದರಾಮಯ್ಯ ಅವರೊಂದಿಗೆ ಸಚಿವೆ ಲಕ್ಷ್ಮೀ ಹೆಬ್ಬಾಳ್ಕರ್ ಅವರು ಕೂಡ ತೆಲಂಗಾಣದ ಕೆಲ ಭಾಗಗಳಲ್ಲಿ ಚುನಾವಣಾ ಪ್ರಚಾರ ನಡೆಸಿದ್ದರು. ವಿಶೇಷವಾಗಿ ನಾಲ್ಕು ದಿನಗಳ ಕಾಲ ತೆಲಂಗಾಣದಲ್ಲಿ ಪ್ರಚಾರ ನಡೆಸಿದ್ದ ಸಚಿವೆ ಲಕ್ಷ್ಮೀ ಹೆಬ್ಬಾಳ್ಕರ್, ಕರ್ನಾಟಕದಲ್ಲಿ ಅನುಷ್ಠಾನಗೊಳಿಸಿರುವ ಗ್ಯಾರಂಟಿ ಯೋಜನೆಗಳ ಬಗ್ಗೆ ಬಹಿರಂಗ ಸಮಾವೇಶಗಳಲ್ಲಿ ಮಾತನಾಡಿ, ಜನರಿಗೆ ಭರವಸೆ ಮೂಡಿಸಿದ್ದರು.
ಪ್ರಗತಿವಾಹಿನಿ ಸುದ್ದಿಗಳನ್ನು ನಿಮ್ಮ ಸ್ನೇಹಿತರಿಗೆ, ಬೇರೆ ಗ್ರುಪ್ ಗಳಿಗೆ ಶೇರ್ ಮಾಡಿ