ಕಾಡಿನಲ್ಲಿ ದಿಕ್ಕು ತಪ್ಪಿದ್ದ ಶಂಕರ ಮಾರಿಹಾಳ ಭಯಾನಕ ಅನುಭವ
ಎಂ.ಕೆ.ಹೆಗಡೆ, ಬೆಳಗಾವಿ – ಕಾರವಾರದ ಡಿವೈಎಸ್ಪಿ, ಬೆಳಗಾವಿ ಮೂಲದ ಶಂಕರ ಮಾರಿಹಾಳ 2 ದಿನದ ಹಿಂದೆ ಕರ್ತವ್ಯದ ಮೇಲೆ ತೆರಳಿದ್ದಾಗ ಕೈಗಾದ ಕಾರ್ಗತ್ತಲ ಕಾಡಲ್ಲಿ ದಿಕ್ಕು ತಪ್ಪಿದ್ದರು. ಕಾಡಿನಿಂದ ಮರಳಿದ ಅವರು ಕಂಗೆಟ್ಟಿದ್ದ ಕುಟುಂಬವನ್ನು ಸಂತೈಸಲು ಬೆಳಗಾವಿಗೆ ಆಗಮಿಸಿದ್ದಾರೆ.
ರಾತ್ರಿಯೂ ಸೇರಿದಂತೆ ಸುಮಾರು 18 ಗಂಟೆ ಕಾಲ ಬೋರ್ಗರೆಯುವ ಮಳೆಯಲ್ಲೇ ಕಾಡಿನಲ್ಲಿ ಕಳೆದ ಅವರ ಭಯಾನಕ ಅನುಭವವನ್ನು ಪ್ರಗತಿವಾಹಿನಿಯೊಂದಿಗೆ ಹಂಚಿಕೊಂಡಿದ್ದಾರೆ.
ಉಗ್ರರು ನುಸುಳಿದ್ದಾರೆ ಎನ್ನುವ ಮಾಹಿತಿ ಆಧರಿಸಿ ಬಂದ ಹೈ ಅಲರ್ಟ್ ಮೆಸೇಜ್ ಹಿನ್ನೆಲೆಯಲ್ಲಿ ನಾವು ತನಿಖೆಗೆ ತೆರಳಿದ್ದೆವು. ಅರಣ್ಯ ಇಲಾಖೆ ಸಿಬ್ಬಂದಿ, ಸ್ಥಳೀಯರ ನೆರವು ಪಡೆದೇ ವ್ಯವಸ್ಥಿತ ಸಿದ್ದತೆಯೊಂದಿಗೆ ತೆರಳಿದ್ದೆವು. ಎಲ್ಲವನ್ನೂ ಮುಗಿಸಿ ಮರಳುವಾಗ ಚಿರತೆಯೊಂದು ಎದುರಾಯಿತು. ಅದು ನಮ್ಮನ್ನೇ ಗುರಿಯಾಗಿಸಿ ಬರುತ್ತಿರುವುದನ್ನು ಕಂಡು ಎಲ್ಲರೂ ದಿಕ್ಕಾಪಾಲಾಗಿ ಓಡಿದೆವು.
ಅದರಿಂದಾಗಿ ನಮ್ಮ ದಿಕ್ಕು ತಪ್ಪಿತು. ಜೊತೆಗಿದ್ದವರೆಲ್ಲ ಬೇರೆ ದಿಕ್ಕಿನಲ್ಲಿ ಓಡಿದರು. ನಂತರ ಎಷ್ಟೇ ಕೂಗಿಕೊಂಡರೂ ಮಳೆ, ನದಿಯ ಶಬ್ಧದ ನಡುವೆ ನಮ್ಮ ಧ್ವನಿ ಯಾರಿಗೂ ಕೇಳುವಂತಿರಲಿಲ್ಲ. ರಸ್ತೆಯಿಂದ ಸುಮಾರು 12 ಕಿ ಮೀ ಒಳಗೆ ಹೋಗಿದ್ದೆವು. ಸಂಜೆ 5.30ಕ್ಕೇ ಕಾಡಿನಲ್ಲಿ ಕತ್ತಲಾಯಿತು. ಏನೂ ಕಾಣುತ್ತಿರಲಿಲ್ಲ. ಅಲ್ಲಿನ ಪ್ರಾಣಿ, ಪಕ್ಷಿಗಳ ಚೀರಾಟ, ಹಳ್ಳ ಕೊಳ್ಳಗಳು ಹರಿಯುವ ಶಬ್ಧ, ಭೋರ್ಗರೆಯುವ ಮಳೆಯಿಂದಾಗಿ ಹೊರಗಿನ ಪ್ರಪಂಚವೇ ಕಾಣದಂತಾಯಿತು.
ಮರ ಏರು ಕುಳಿತುಕೊಂಡೆವು
ಜೊತೆಗಿದ್ದ ಇಂಟಲಿಜೆನ್ಸ್ ಬ್ಯೂರೊದ ಇನ್ಸ್ ಪೆಕ್ಟರ್ ರವಿಚಂದ್ರನ್ ಅಳುತ್ತಿದ್ದರು. ಅವರಿಗೆ ಧೈರ್ಯ ತುಂಬುವುದಕ್ಕೇ ಸಾಕಾಯಿತು. ಅರಣ್ಯದಲ್ಲಿ ಜಿಗಣೆ ಕಡಿಯುತ್ತಿತ್ತು. ಅದರಿಂದ ತಪ್ಪಿಸಿಕೊಳ್ಳಲು ಸ್ವಲ್ಪ ಹೊತ್ತು ಮರ ಏರಿ ಕುಳಿತುಕೊಂಡೆವು. ತೆಗೆದುಕೊಂಡು ಹೋಗಿದ್ದ ಛತ್ರಿ ಮುಳ್ಳು ಕಂಠಿಗಳಿಗೆ ಸಿಕ್ಕಿ ಛಿದ್ರವಾಗಿತ್ತು. ನಂತರ ಒಂದು ಕಲ್ಲು ಕಂಡಿತು. ಅದರ ಮೇಲೆ ಏರಿ ಕುಳಿತುಕೊಂಡೆವು. ಕಟ್ಟಿಕೊಂಡು ಹೋಗಿದ್ದ ಊಟವನ್ನು ಮಧ್ಯಾಹ್ನ 3 ಗಂಟೆ ಹೊತ್ತಿಗೆ ತಿಂದಿದ್ದೆವು. ಆ ನಂತರ ನಮ್ಮ ಬಳಿ ತಿನ್ನಲು ಓನೂ ಇರಲಿಲ್ಲ.
ಆ ರಾತ್ರಿ ಭಯಾನಕವಾಗಿತ್ತು. ಎಲ್ಲವೂ ನೆನಪಾಯಿತು. ಏನೂ ಮಾಡುವಂತಿರಲಿಲ್ಲ. ಬೆಳಗ್ಗೆವರೆಗೆ ಕಳೆಯುತ್ತೇವೋ ಇಲ್ಲವೋ ಎನ್ನುವ ಆತಂಕ ಕಾಡಿತ್ತು. ಬೆಳಕು ಹರಿಯುತ್ತಿದ್ದಂತೆ ಹಳ್ಳ ಹರಿಯುವ ಡೈರಕ್ಷನ್ ನೋಡಿ ಅರ್ಧ ಕಿಮೀ ಮೇಲೆ ಹೋದೆ. ಆಗ ಮೊಬೈಲ್ ನೆಟ್ ವರ್ಕ್ ಸಿಕ್ಕಿತು. ಒಂದು ಮೊಬೈಲ್ ಮೊದಲೇ ಸ್ವಿಚ್ಡ್ ಆಫ್ ಮಾಡಿಕೊಂಡಿದ್ದರಿಂದ ಚಾರ್ಜ್ ಉಳಿದುಕೊಂಡಿತ್ತು. ಅದರಿಂದ ಎಸ್ಪಿ ಸಾಹೇಬರಿಗೆ ಕಾಲ್ ಮಾಡಿದೆ. ಇರುವ ಸ್ಥಳದ ವಿವರ ನೀಡಿ, ಸ್ಥಳೀಯ ಕೆಲವರ ಹೆಸರನ್ನು ಹೇಳಿ, ಅವರಿಗೆ ಹೇಳಿದರೆ ಜಾಗದ ಗುರುತು ಹಿಡಿಯಬಹುದು ಎನ್ನುವ ಸುಳಿವನ್ನು ನೀಡಿದೆ.
ನಂತರ ಸ್ಥಳೀಯರು, ಪೊಲೀಸ್ ಹಾಗೂ ಅರಣ್ಯ ಸಿಬ್ಬಂದಿ ಬಂದು ನಮ್ಮನ್ನು ಸುರಕ್ಷಿತವಾಗಿ ಕರೆತಂದರು.
ಪ್ರಗತಿವಾಹಿನಿ ಸುದ್ದಿಗಳನ್ನು ನಿಮ್ಮ ಸ್ನೇಹಿತರಿಗೆ, ಬೇರೆ ಗ್ರುಪ್ ಗಳಿಗೆ ಶೇರ್ ಮಾಡಿ