ರಾಜ್ಯಪಾಲ ವಜುಬಾಯಿವಾಲಾ ಆಗಮನ: ಮೂವರಿಗೆ ಗೌರವ ಡಾಕ್ಟರೇಟ್: ಕುಲಪತಿ ಪ್ರೊ.ಎಂ.ರಾಮಚಂದ್ರಗೌಡ ಮಾಹಿತಿ
ಪ್ರಗತಿವಾಹಿನಿ ಸುದ್ದಿ, ಬೆಳಗಾವಿ -: ರಾಣಿ ಚನ್ನಮ್ಮ ವಿಶ್ವವಿದ್ಯಾಲಯದ 8ನೇ ಘಟಿಕೋತ್ಸವ ಸೋಮವಾರ(ಅ.5) ಸುವರ್ಣವಿಧಾನಸೌಧದಲ್ಲಿ ನಡೆಯಲಿದೆ ಎಂದು ರಾಣಿಚನ್ನಮ್ಮ ವಿಶ್ವವಿದ್ಯಾಲಯದ ಕುಲಪತಿಗಳಾದ ಪ್ರೊ.ಎಂ.ರಾಮಚಂದ್ರಗೌಡ ತಿಳಿಸಿದ್ದಾರೆ.
ವಾರ್ತಾ ಮತ್ತು ಸಾರ್ವಜನಿಕ ಸಂಪರ್ಕ ಇಲಾಖೆಯ ವಾರ್ತಾಭವನದಲ್ಲಿ ಶನಿವಾರ (ಅ.3) ಪತ್ರಿಕಾಗೋಷ್ಠಿಯಲ್ಲಿ ಈ ವಿಷಯ ತಿಳಿಸಿದರು.
ರಾಜ್ಯಪಾಲರಾದ ವಜೂಭಾಯ್ ರೂಡಾಭಾಯ್ ವಾಲಾರವರು 8 ನೇ ಘಟಿಕೋತ್ಸವ ಕಾರ್ಯಕ್ರಮದ ಅಧ್ಯಕ್ಷತೆಯನ್ನು ವಹಿಸಲಿದ್ದಾರೆ.
ಉಪ ಮುಖ್ಯಮಂತ್ರಿ ಹಾಗೂ ಸಹ- ಕುಲಾಧಿಪತಿಗಳಾದ ಅಶ್ವಥ್ ನಾರಾಯಣ ಅಥಿತಿಗಳಾಗಿ ಆಗಮಿಸಲಿದ್ದು, ಬೆಂಗಳೂರಿನ ನ್ಯಾಕ್ ನಿರ್ದೇಶಕರಾದ ಪ್ರೊ.ಎಸ್.ಸಿ. ಶರ್ಮಾ ಘಟಿಕೋತ್ಸವ ಭಾಷಣ ಮಾಡಲಿದ್ದಾರೆ.
8ನೇ ಘಟಿಕೋತ್ಸವದಲ್ಲಿ ಸ್ನಾತಕ ತರಗತಿಗೆ 11 ಸುವರ್ಣ ಪದಕಗಳು; ಸ್ನಾತಕೋತ್ತರ ತರಗತಿಗಳಿಗೆ 22 ಸುವರ್ಣ ಪದಕಗಳನ್ನು ಮತ್ತು 79 ಪಿ.ಹೆಚ್.ಡಿ. ಪದವಿಗಳನ್ನು ಘಟಿಕೋತ್ಸವದಲ್ಲಿ ಪ್ರದಾನ ಮಾಡಲಾಗುವುದು.
ಇದಲ್ಲದೆ 4 ವಿಷಯಗಳಲ್ಲಿ ಅತ್ಯುನ್ನತ ಅಂಕಗಳನ್ನು ಗಳಿಸಿದವರಿಗೆ ಪ್ರಾಯೋಜಿತ ಸುವರ್ಣ ಪದಕಗಳನ್ನು ನೀಡಲಾಗುವುದು ಎಂದು ಕುಲಪತಿ ವಿವರಿಸಿದರು.
100 ಜನರಿಗೆ ಮಾತ್ರ ಅವಕಾಶ:
ಕೋವಿಡ್-೧೯ ಹಿನ್ನೆಲೆಯಲ್ಲಿ ಘಟಿಕೋತ್ಸವ ನಡೆಯುವ ಸಭಾಂಗಣದೊಳಗೆ ಕೇವಲ 100 ಜನರಿಗೆ ಮಾತ್ರ ಅವಕಾಶ ಇರುವುದರಿಂದ ಪಿ.ಹೆಚ್.ಡಿ ಪದವಿ ಪಡೆದವರಲ್ಲಿ ಕೆಲವರಿಗೆ ಮಾತ್ರ ಸಾಂಕೇತಿಕವಾಗಿ ಪದವಿ ಪತ್ರ ಪ್ರದಾನ ಮಾಡಿ, ಉಳಿದವರಿಗೆ ವಿಶ್ವವಿದ್ಯಾಲಯ ಮಟ್ಟದಲ್ಲಿ ಪದವಿ ಪ್ರದಾನ ಮಾಡಲಾಗುವುದು ಎಂದು ಕುಲಪತಿ ಪ್ರೊ.ರಾಮಚಂದ್ರಗೌಡ ತಿಳಿಸಿದರು.
ಘಟಿಕೋತ್ಸವದಲ್ಲಿ ಸ್ನಾತಕ ಪದವಿ ಪಡೆದ 31262 ವಿದ್ಯಾರ್ಥಿಗಲ್ಲಿ 77 ಜನ ವಿದ್ಯಾರ್ಥಿಗಳು ರ್ಯಾಂಕ ಪಡೆದಿದ್ದು, 11 ಜನರಿಗೆ ಘಟಿಕೋತ್ಸವದಲ್ಲಿ ಪ್ರಮಾಣ ಪತ್ರ ಪ್ರದಾನ ಮಾಡಲಾಗುವುದು, ಸ್ನಾತಕೋತ್ತರ ಪದವಿ ಪಡೆದ 2712 ವಿದ್ಯಾರ್ಥಿಗಳಲ್ಲಿ 68 ವಿದ್ಯಾರ್ಥಿಗಳು ರ್ಯಾಂಕ್ ಪಡೆಸಿದ್ದು, 22 ವಿದ್ಯಾರ್ಥಿಗಳಿಗೆ ಘಟಿಕೋತ್ಸವದಲ್ಲಿ ಪ್ರಮಾಣ ಪತ್ರ ನೀಡಲಾಗುತ್ತಿದೆ.
ಸ್ನಾತಕ ಹಾಗೂ ಸ್ನಾತಕೋತ್ತರ ತರಗತಿಯ ಒಟ್ಟು 33,974 ವಿದ್ಯಾರ್ಥಿಗಳು ಪದವಿ ಪಡೆದಿದ್ದಾರೆ ಎಂದು ತಿಳಿಸಿದರು.
ಮೂವರಿಗೆ ಗೌರವ ಡಾಕ್ಟರೇಟ್:
ಕ್ರೀಡಾ ಮತ್ತು ಸಮಾಜ ಸೇವೆಯ ಕ್ಷೇತ್ರಕ್ಕಾಗಿ ಗೋವಿಂದರಾಜ್ ಅವರಿಗೆ, ಔದ್ಯೋಗಿಕ ಮತ್ತು ಸಾಂಸ್ಥಿಕ ಹಣಕಾಸು ಕ್ಷೇತ್ರಕ್ಕಾಗಿ ಮೋಹನದಾಸ ಪೈ ಅವರಿಗೆ ಹಾಗೂ ಧಾರ್ಮಿಕ ಮತ್ತು ಸಮಾಜೋ-ಶೈಕ್ಷಣಿಕ ಕ್ಷೇತ್ರಕ್ಕಾಗಿ ಶ್ರೀಮನ್ ಮಹಾರಾಜ ನಿರಂಜನ ಜಗದ್ಗುರು ರಾಜಯೋಗೀಂದ್ರ ಮಹಾಸ್ವಾಮಿಗಳು ಅವರಿಗೆ ರಾಣಿ ಚನ್ನಮ್ಮ ವಿಶ್ವವಿದ್ಯಾಲಯದ ವತಿಯಿಂದ ಗೌರವ ಡಾಕ್ಟರೇಟ್ ಪದವಿ ಪ್ರದಾನ ಮಾಡಲಾಗುವುದು ಎಂದು ರಾಣಿಚನ್ನಮ್ಮ ವಿಶ್ವವಿದ್ಯಾಲಯದ ಕುಲಪತಿಗಳಾದ ಪ್ರೊ.ಎಂ.ರಾಮಚಂದ್ರಗೌಡ ತಿಳಿಸಿದರು.
ಘಟಿಕೋತ್ಸವ ನೇರಪ್ರಸಾರ:
ಕೊರೋನಾ ಮಹಾಮಾರಿ ನಿಮಿತ್ತ ರಾಜ್ಯಪಾಲರ ಆದೇಶದಂತೆ 8ನೇ ಘಟಿಕೋತ್ಸವ ಕಾರ್ಯಕ್ರಮಕ್ಕೆ 100 ಜನರಿಗೆ ಮಾತ್ರ ಭಾಗವಹಿಸಲು ಅನುಮತಿ ಇರುವುದರಿಂದ ಉಳಿದವರು YouTube ಹಾಗೂ Facebook ಲಿಂಕ್ ಬಳಸಿ live ನಲ್ಲಿ ವೀಕ್ಷಿಸಬಹುದಾಗಿದೆ.
YouTube:- https://www.youtube.com/ channel/ UCtrcypQvMVC8utr7xWZ2x-w?view as=subscriber
Facebook Page URL:
ಘಟಿಕೋತ್ಸವದಲ್ಲಿ ನೇರವಾಗಿ ಭಾಗವಹಿಸಲು ಸಾಧ್ಯವಾಗದ ವಿದ್ಯಾರ್ಥಿಗಳು, ಪಾಲಕರು ನೇರಪ್ರಸಾರದ ಮೂಲಕ ಕಾರ್ಯಕ್ರಮ ವೀಕ್ಷಿಸಬಹುದು ಎಂದು ಕುಲಪತಿ ಪ್ರೊ.ಎಂ.ರಾಮಚಂದ್ರಗೌಡ ತಿಳಿಸಿದರು.
ಕುಲಸಚಿವರಾದ ಪ್ರೊ.ಬಸವರಾಜ ಪದ್ಮಶಾಲಿ, ಮೌಲ್ಯಮಾಪನ ಕುಲಸಚಿವರಾದ ಪ್ರೊ.ಎಸ್.ಎಂ.ಹುರಕಡ್ಲಿ, ಹಣಕಾಸು ಅಧಿಕಾರಿ ಪ್ರೊ.ಡಿ.ಎನ್.ಪಾಟೀಲ ಮತ್ತಿತರರು ಪತ್ರಿಕಾಗೋಷ್ಠಿಯಲ್ಲಿ ಉಪಸ್ಥಿತರಿದ್ದರು.
ಪ್ರಗತಿವಾಹಿನಿ ಸುದ್ದಿಗಳನ್ನು ನಿಮ್ಮ ಸ್ನೇಹಿತರಿಗೆ, ಬೇರೆ ಗ್ರುಪ್ ಗಳಿಗೆ ಶೇರ್ ಮಾಡಿ