*ಮುಖ್ಯಮಂತ್ರಿಗಳ ಮಹತ್ವಾಕಾಂಕ್ಷಿ ಗ್ರಾಮಒನ್ ಯೋಜನೆ*
*ಇಂದಿನಿಂದ 3026 ಗ್ರಾಮ ಪಂಚಾಯತಿಗಳಲ್ಲಿ ಆರಂಭ:*
*ಮಾರ್ಚ್ ಅಂತ್ಯದೊಳಗೆ ರಾಜ್ಯಾದ್ಯಂತ ವಿಸ್ತರಣೆ*
ಪ್ರಗತಿವಾಹಿನಿ ಸುದ್ದಿ, ಬೆಂಗಳೂರು : ಸರ್ಕಾರದ ಮಹತ್ವಾಕಾಂಕ್ಷಿ ಯೋಜನೆಯಾದ ಗ್ರಾಮ ಒನ್ ಯೋಜನೆ ಇಂದಿನಿಂದ ರಾಜ್ಯದ 3026 ಗ್ರಾಮ ಪಂಚಾಯತಿಗಳಲ್ಲಿ ಆರಂಭವಾಗಿದೆ. ಮಾರ್ಚ್ ಅಂತ್ಯದೊಳಗೆ ಈ ಯೋಜನೆಯನ್ನು ರಾಜ್ಯಾದ್ಯಂತ ವಿಸ್ತರಣೆ ಮಾಡುವ ಗುರಿ ಇಟ್ಟುಕೊಳ್ಳಲಾಗಿದೆ ಎಂದು ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ತಿಳಿಸಿದರು.
ಅವರು ಇಂದು ವರ್ಚುಯಲ್ ಕಾರ್ಯಕ್ರಮದಲ್ಲಿ ಸಸಿಗೆ ನೀರು ಹಾಕುವ ಮೂಲಕ ರಾಜ್ಯದ 12 ಜಿಲ್ಲೆಗಳಲ್ಲಿ ಗ್ರಾಮ ಒನ್ ಕಾರ್ಯಕ್ರಮಕ್ಕೆ ಚಾಲನೆ ನೀಡಿ ಮಾತನಾಡಿದರು.
*ಜನರ ಸಮಯ ಹಾಗೂ ಹಣ ಉಳಿಸುವ ಗ್ರಾಮ ಒನ್*
ಸರ್ಕಾರದ ಸೌಲಭ್ಯ ಪಡೆಯಲು ಜನರು ಸಮಯ ಹಾಗೂ ಹಣ ವ್ಯಯಿಸುವುದನ್ನು ತಪ್ಪಿಸಿ, ಗ್ರಾಮೀಣ ಜನರ ಬಳಿಯೇ ಸೇವೆಗಳನ್ನು ತಲುಪಿಸುವ ಧ್ಯೇಯದೊಂದಿಗೆ ಗ್ರಾಮ ಒನ್ ಕಾರ್ಯಕ್ರಮವನ್ನು ರೂಪಿಸಲಾಗಿದೆ.
ಕೃಷಿ, ತೋಟಗಾರಿಕೆ, ಕಂದಾಯ, ಮಹಿಳಾ ಮತ್ತು ಮಕ್ಕಳ ಕಲ್ಯಾಣ, ಆಧಾರ್ ಕಾರ್ಡ್, ರೇಷನ್ ಕಾರ್ಡ್ ಸೇರಿದಂತೆ ಹಲವಾರು ಸೇವೆಗಳು ಗ್ರಾಮ ಮಟ್ಟದಲ್ಲಿ ಲಭ್ಯವಾಗಿಸುವ ಚಿಂತನೆಯಿಂದ ಗ್ರಾಮ ಒನ್ ಪ್ರಾರಂಭಿಸಲಾಗಿದೆ. ತಾಲ್ಲೂಕು ಕಚೇರಿಯಲ್ಲಿ ಸೇವೆಗಳಿಗಾಗಿ ಜನಸಂದಣಿ ತಪ್ಪಿಸಲು ಹಾಗೂ ಸೇವೆಗಳ ಪೂರೈಕೆಯಲ್ಲಿ ವಿಕೇಂದ್ರೀಕರಣದ ಉದ್ದೇಶದಿಂದ, ಗ್ರಾಮಮಟ್ಟದಲ್ಲಿಯೂ ಈ ಎಲ್ಲ ಸೇವೆಗಳನ್ನು ಒದಗಿಸಲಾಗುವುದು. ಗ್ರಾಮಸ್ಥರು ನೇರವಾಗಿ ಗ್ರಾಮ ಪಂಚಾಯತಿಗಳಿಗೆ ತೆರಳಿ ಗ್ರಾಮ ಒನ್ ಸೇವೆಗಳನ್ನು ಪಡೆಯಬಹುದಾಗಿದೆ ಎಂದು ತಿಳಿಸಿದರು.
*ಜನರ ವಿಶ್ವಾಸವನ್ನು ಪುನರ್ ಸ್ಥಾಪಿಸುವ ಚಿಂತನೆ :*
ಉತ್ತಮ ಸಲಕರಣೆ ,ಸಮರ್ಥ ಹಾಗೂ ಸದೃಢ ತಂತ್ರಜ್ಞಾನದಿಂದ ಯಾವುದೇ ಅಡಚಣೆಗಳಿಲ್ಲದೆ ಗ್ರಾಮೀಣ ಜನರಿಗೆ ಸೇವೆ ಒದಗಿಸುವ ವ್ಯವಸ್ಥೆ ಕಲ್ಪಿಸಲಾಗಿದೆ. 12 ಜಿಲ್ಲೆಗಳ 3026 ಗ್ರಾಮ ಪಂಚಾಯತಿಗಳಲ್ಲಿ ಈ ಸೇವೆಯನ್ನು ಪ್ರಾರಂಭಿಸಲಾಗಿದ್ದು, ಈ ಹಿಂದೆ 4 ಜಿಲ್ಲೆಗಳಲ್ಲಿ ಪ್ರಾಯೋಗಿಕವಾಗಿ ಪ್ರಾರಂಭಿಸಿ, ಅನುಷ್ಠಾನದಲ್ಲಿನ ಎಲ್ಲ ತೊಡಕುಗಳನ್ನು ನಿವಾರಿಸಲಾಗಿದೆ. ಜನರಿಗೆ ಸರ್ಕಾರದ ಸೇವೆಗಳನ್ನು ತಲುಪಿಸುವ ಕ್ರಾಂತಿಕಾರಿ ಬದಲಾವಣೆ ಇದಾಗಿದೆ. ತಳಮಟ್ಟದಲ್ಲಿ ಸರ್ಕಾರದ ಸೇವೆಗಳನ್ನು ಸಮರ್ಪಕವಾಗಿ ಸುಲಭವಾಗಿ ತಲುಪಿಸಲಾಗುವುದು. ಈ ವ್ಯವಸ್ಥೆಯ ಮೂಲಕ ಸರ್ಕಾರದ ಕಾರ್ಯನಿರ್ವಹಣೆಯ ಮೇಲಿನ ಜನರ ವಿಶ್ವಾಸವನ್ನು ಪುನರ್ ಸ್ಥಾಪಿಸುವ ಚಿಂತನೆ ಇದೆ ಎಂದು ತಿಳಿಸಿದರು.
*ಗ್ರಾಮ ಸ್ವರಾಜ್ಯದಿಂದ ಗ್ರಾಮ ಸುರಾಜ್ಯದೆಡೆಗೆ :*
ಮಹಾತ್ಮ ಗಾಂಧಿಯವರ ಗ್ರಾಮ ಸ್ವರಾಜ್ಯ ಹಾಗೂ ಅಟಲ್ ಬಿಹಾರಿ ವಾಜಪೇಯಿಯವರ ಗ್ರಾಮ ಸುರಾಜ್ಯ , ಸ್ವರಾಜ್ಯದಿಂದ ಸುರಾಜ್ಯದೆಡೆಗೆ ಗ್ರಾಮಗಳನ್ನು ಒಯ್ಯಲು ಆಧುನಿಕ ತಂತ್ರಜ್ಞಾನ ಮಹತ್ವದ ಪಾತ್ರವನ್ನು ವಹಿಸುತ್ತದೆ ಎಂದರು.
*ಗ್ರಾಮ ಒನ್ – ದಕ್ಷ ವ್ಯವಸ್ಥೆಯಾಗಿಸಲು ಸೂಚನೆ:*
ಮನೆ ಹೊಲ ಹಕ್ಕು ಪತ್ರಗಳು, ಸಂಧ್ಯಾ ಸುರಕ್ಷಾ, ಅಂಗವಿಕಲರ ಮಾಸಾಶನ, ಜಾತಿ ಪ್ರಮಾಣ ಪತ್ರ, ಆದಾಯ ಪ್ರಮಾಣ ಪತ್ರ ಹೀಗೆ ಜನರ ಹತ್ತಾರು ಸೇವೆಗಳ ಅವಶ್ಯಕತೆಗಳನ್ನು ಪೂರೈಸುವ ಪ್ರಯತ್ನವಾಗಿದೆ. ಪ್ರಮುಖ ಸೇವೆಗಳಿಗೆ ಸೀಮಿತಗೊಳಿಸಿ ಅತ್ಯಂತ ದಕ್ಷ ವ್ಯವಸ್ಥೆಯನ್ನಾಗಿ ಮಾಡಬೇಕು ಎಂದು ಅಧಿಕಾರಿಗಳಿಗೆ ಸೂಚಿಸಿದ್ದೇನೆ. ಈ ವ್ಯವಸ್ಥೆಯನ್ನು ನಿರಂತರವಾಗಿ ಸುಧಾರಿಸುವ ಮೂಲಕ ಜನರಿಗೆ ಸಮರ್ಪಕವಾಗಿ ಸೇವೆಗಳನ್ನು ಒದಗಿಸಲಾಗುವುದು ಎಂದರು.
*ಗ್ರಾಮ ಒನ್ ಬಗ್ಗೆ ಜನರಲ್ಲಿ ಅರಿವು :*
ಶಾಸಕರು, ಸಚಿವರು ಹಾಗೂ ಜನಪ್ರತಿನಿಧಿಗಳು ಗ್ರಾಮ ಒನ್ ವ್ಯವಸ್ಥೆಯ ಬಗ್ಗೆ ಜನರಲ್ಲಿ ಅರಿವು ಮೂಡಿಸಿ, ಗ್ರಾಮಗಳಿಗೆ ಭೇಟಿ ನೀಡಿದ ಸಂದರ್ಭದಲ್ಲಿ ಗ್ರಾಮ ಒನ್ ಕಾರ್ಯನಿರ್ವಹಣೆಯ ಬಗ್ಗೆ ಪರಿಶೀಲಿಸಬೇಕೆಂದು ಮುಖ್ಯಮಂತ್ರಿಗಳು ಸಲಹೆ ನೀಡಿದರು.
*ಗ್ರಾಮ ಒನ್ ಯಶಸ್ಸಿಗೆ ಜಿಲ್ಲಾಧಿಕಾರಿಗಳ ನಾಯಕತ್ವ:*
ಗ್ರಾಮ ಒನ್ ನ ಪ್ರಾಯೋಗಿಕ ಹಂತದಲ್ಲಿಯೇ 6 ಲಕ್ಷಕ್ಕಿಂತ ಹೆಚ್ಚು ಅರ್ಜಿಗಳನ್ನು ಸ್ವೀಕರಿಸಿ ಸೇವೆಗಳನ್ನು ಪೂರೈಸಲಾಗಿದೆ. ತಹಶೀಲ್ದಾರರು, ಸಹಾಯಕ ಕಮೀಷನರ್ ರ ಸಹಕಾರ ಬಹಳ ಮುಖ್ಯ. ಅನ್ ಲೈನ್ ನಲ್ಲಿ ಸ್ವೀಕೃತವಾಗುವ ಅರ್ಜಿಗಳಿಗೆ ಶೀಘ್ರವಾಗಿ ಮಂಜೂರಾತಿ ನೀಡಿದಾಗ ಮಾತ್ರ ಸಂಬಂಧಪಟ್ಟ ಪ್ರಮಾಣ ಪತ್ರಗಳನ್ನು ಜನರಿಗೆ ದೊರಕಿಸಿಕೊಡಲು ಸಾದ್ಯವಾಗುತ್ತದೆ. ಜನರಿಗೆ ಸೇವೆಗಳನ್ನು ಒದಗಿಸುವ ಎಲ್ಲ ಹಂತದ ವ್ಯವಸ್ಥೆಯನ್ನು ತಾಲ್ಲೂಕು ಕಚೇರಿಯಲ್ಲಿ ಕಲ್ಪಿಸಿ ಆನ್ಲೈನ್ ನಲ್ಲಿಯೇ ಎಲ್ಲ ಪರಿಹಾರವನ್ನು ಒದಗಿಸುವ ವ್ಯವಸ್ಥೆ ಆಗಬೇಕು. ಇದಕ್ಕಾಗಿ ಸಂಬಂಧಪಟ್ಟ ಜಿಲ್ಲಾಧಿಕಾರಿಗಳು ಈ ಕಾರ್ಯಕ್ರಮದ ಪರಿಣಾಮಕಾರಿ ಅನುಷ್ಠಾನಕ್ಕೆ ಜವಾಬ್ದಾರಿ ಹಾಗೂ ನಾಯಕತ್ವ ವಹಿಸಬೇಕು. ಸರ್ಕಾರದ ಪ್ರಥಮ ಆದ್ಯತೆಯ ಈ ಕಾರ್ಯಕ್ರಮವನ್ನು ಯಶಸ್ವಿಗೊಳಿಸಲು ಸೂಕ್ತ ಕ್ರಮಗಳನ್ನು ಕೈಗೊಳ್ಳಬೇಕು ಎಂದು ತಿಳಿಸಿದರು.
*ಗ್ರಾಮೀಣ ಜನರ ಜೀವನಮಟ್ಟ ಸುಧಾರಿಸುವ ಗ್ರಾಮ ಒನ್ :*
ಗ್ರಾಮೀಣ ಜನರ ಬದುಕಿನಲ್ಲಿ ಬದಲಾವಣೆ ತಂದು ಜೀವನದ ಗುಣಮಟ್ಟವನ್ನು ಉನ್ನತೀಕರಿಸಲು ಸರ್ಕಾರದ ಸೇವೆಗಳನ್ನು ಸುಲಭವಾಗಿ ದೊರಕಿಸಿಕೊಟ್ಟು ಗ್ರಾಮ ಒನ್ ವ್ಯವಸ್ಥೆಯ ಪರಿಕಲ್ಪನೆಯನ್ನು ಸಾಕಾರಗೊಳಿಸುವ ಹಾಗೂ ಜನಮನದಲ್ಲಿ ಉಳಿಯುವಂತಹ ಕಾರ್ಯಕ್ರಮ ವಾಗಬೇಕು. ಜನರ ಬದುಕನ್ನು ನಂ.1 ಮಟ್ಟಕ್ಕೆ ಏರಿಸಲು ಗ್ರಾಮ ಒನ್ ಸಹಕರಿಸುವಂತಾಗಲಿ ಎಂದು ಮುಖ್ಯಮಂತ್ರಿಗಳು ತಿಳಿಸಿದರು.
ಹಾವೇರಿ ಜಿಲ್ಲೆ ಸೇರಿದಂತೆ ವಿವಿಧ ಜಿಲ್ಲೆಗಳಲ್ಲಿ ಯೋಜನೆ ಉದ್ಘಾಟನಾ ಸಮಾರಂಭ ಸಂದರ್ಭದಲ್ಲಿ ಗ್ರಾಮಸ್ಥರಿಂದ ಅರ್ಜಿ ಸ್ವೀಕರಿಸಿ ಆಯುಷ್ಮಾನ್ ಭಾರತ, ಆರ್ ಟಿ ಸಿ, ಸಂಧ್ಯಾ ಸುರಕ್ಷಾ ಕಾರ್ಡ್, ರಹವಾಸಿ ಪ್ರಮಾಣಪತ್ರ ಮುಂತಾದ ಪ್ರಮಾಣಪತ್ರಗಳನ್ನು ವಿತರಣೆ ಮಾಡಲಾಯಿತು. ತಕ್ಷಣವೇ ಪ್ರಮಾಣಪತ್ರ ವಿತರಿಸಲು ವ್ಯವಸ್ಥೆ ಮಾಡಿಕೊಂಡಿದ್ದ ಇ ಆಡಳಿತ ಇಲಾಖೆ ಅಧಿಕಾರಿಗಳ ಕಾರ್ಯವನ್ನು ಸಿಎಂ ಬೊಮ್ಮಾಯಿ ಶ್ಲಾಘಿಸಿದರು.
ಪ್ರಗತಿವಾಹಿನಿ ಸುದ್ದಿಗಳನ್ನು ನಿಮ್ಮ ಸ್ನೇಹಿತರಿಗೆ, ಬೇರೆ ಗ್ರುಪ್ ಗಳಿಗೆ ಶೇರ್ ಮಾಡಿ