ಪ್ರಗತಿವಾಹಿನಿ ಸುದ್ದಿ, ಘಟಪ್ರಭಾ: ಯಾರು ಎಷ್ಟೇ ಟೀಕಿಸಿದರೂ ನಾನು ಉತ್ತರಿಸಲ್ಲ. ಈ ಚುನಾವಣೆ ಮುಗಿದ ಬಳಿಕ ಮಾತನಾಡುವೆ. ಕ್ಷೇತ್ರದ ಜನರ ಕಲ್ಯಾಣ ಹಾಗೂ ವಿಕಾಸವೇ ನನಗೆ ಮುಖ್ಯವಾಗಿದೆ ಎಂದು ಗೋಕಾಕ ಬಿಜೆಪಿ ಅಭ್ಯರ್ಥಿ ರಮೇಶ ಜಾರಕಿಹೊಳಿ ಹೇಳಿದರು.
ಗುರುವಾರದಂದು ಸಮೀಪದ ಶಿಂದಿಕುರಬೇಟ ಗ್ರಾಮದಲ್ಲಿ ಪಾದಯಾತ್ರೆ ಮೂಲಕ ಮತಯಾಚಿಸಿ ಮಾತನಾಡಿದ ಅವರು, ಯಾರ ಅಪಪ್ರಚಾರಕ್ಕೂ ತಲೆ ಕೆಡಿಸಿಕೊಳ್ಳವುದಿಲ್ಲ ಎಂದು ಹೇಳಿದರು.
ಚುನಾವಣೆ ನಿಮಿತ್ಯ ಮತದಾರರನ್ನು ಭೇಟಿ ಮಾಡಿ ಮತ ಯಾಚನೆ ಮಾಡುತ್ತಿದ್ದೇನೆ. ಎಲ್ಲ ಕಡೆಗಳಲ್ಲೂ ನನಗೆ ಅಭೂತಪೂರ್ವ ಬೆಂಬಲ ವ್ಯಕ್ತವಾಗುತ್ತಿದೆ. ಯಾರ ವಿರುದ್ಧವೂ ಮಾತನಾಡದಂತೆ ಕೇಂದ್ರ ಸಚಿವ ಸುರೇಶ ಅಂಗಡಿ ಹಾಗೂ ಅರಭಾವಿ ಶಾಸಕ ಬಾಲಚಂದ್ರ ಜಾರಕಿಹೊಳಿ ಅವರು ಹೇಳಿದ್ದಾರೆ ಎಂದು ಅವರು ತಿಳಿಸಿದರು.
ಕಳೆದ ಆರೇಳು ತಿಂಗಳುಗಳಿಂದ ನಡೆಯುತ್ತಿದ್ದ ರಾಜಕೀಯ ವಿದ್ಯಮಾನಗಳನ್ನು ಜನರು ಗಮನಿಸಿದ್ದಾರೆ. ನನಗಿಂತ ಮೊದಲೇ ನಮ್ಮ ಕಾರ್ಯಕರ್ತರು ಬಿಜೆಪಿಯೊಂದಿಗೆ ಮಾನಸಿಕವಾಗಿ ಗುರುತಿಸಿಕೊಂಡಿದ್ದರು. ಹೀಗಾಗಿ ನನಗಿಂತ ಹೆಚ್ಚು ಕ್ರೀಯಾಶೀಲರಾಗಿ ಕಾರ್ಯಕರ್ತರು ಹುಮ್ಮಸ್ಸಿನಿಂದ ಕೆಲಸ ಮಾಡುತ್ತಿದ್ದಾರೆ. ನನ್ನ ನಿರ್ಧಾರಕ್ಕೆ ಅವರು ಬದ್ಧರಾಗಿ ಸ್ವಾಗತಿಸಿದ್ದಾರೆ. ಕಾರ್ಯಕರ್ತರಿಗೆ ಹಾಗೂ ಅಭಿಮಾನಿಗಳಿಗೆ ಕೃತಜ್ಞತೆ ಸಲ್ಲಿಸುತ್ತಿದ್ದೇನೆ ಎಂದು ಹೇಳಿದರು.
ಬಿಜೆಪಿ ಯಾವ ಸಮಾಜದ ವಿರುದ್ಧವಿಲ್ಲ. ಹಾಗೆಯೇ ನಾನು ಕೂಡಾ ಎಲ್ಲ ಸಮಾಜಗಳನ್ನು ಪ್ರೀತಿಸಿ ಗೌರವಿಸುತ್ತಿದ್ದೇನೆ. ಜೊತೆಗೆ ಎಲ್ಲ ಸಮಾಜ ಬಾಂಧವರು ಸಹ ನನಗೆ ಬೆಂಬಲ ನೀಡುತ್ತಿದ್ದಾರೆ. ಕ್ಷೇತ್ರದ ಸರ್ವಾಂಗೀಣ ಅಭಿವೃದ್ದಿಗಾಗಿ ಹಾಗೂ ಮುಖ್ಯಮಂತ್ರಿ ಬಿ.ಎಸ್.ಯಡಿಯೂರಪ್ಪನವರ ಕೈಬಲಪಡಿಸಲು ಬಿಜೆಪಿಯ ಕಮಲ ಹೂವಿನ ಗುರ್ತಿಗೆ ಮತ ನೀಡಿ ಪ್ರಚಂಡ ಬಹುಮತದಿಂದ ಆರಿಸಿ ತರುವಂತೆ ಮನವಿ ಮಾಡಿಕೊಂಡರು.
ನನಗೆ ಕಾಂಗ್ರೇಸ್ ಪಕ್ಷದ ನಾಯಕರುಗಳ ವಿರುದ್ಧ ಅಸಮಾಧಾನವಿದೆ. ಇದನ್ನು ವರಿಷ್ಠರ ಗಮನಕ್ಕೆ ತಂದರೂ ಯಾವುದೇ ಪ್ರಯೋಜವಾಗಲಿಲ್ಲ. ಪಕ್ಷವನ್ನು ಏಕೆ ಬಿಟ್ಟಿದ್ದೀರಿ? ಎಂದು ಯಾರು ಇದುವರೆಗೂ ಕೇಳಿಲ್ಲ. ಹೀಗಾಗಿ ನಮ್ಮಂತಹ ನಿಷ್ಠಾವಂತರನ್ನು ಕಡೆಗಣಿಸುತ್ತಿರುವುದರಿಂದ ಕಾಂಗ್ರೇಸ ಪಕ್ಷಕ್ಕೆ ಯಾವುದೇ ಉಳಿಗಾಲವಿಲ್ಲ ಎಂದು ಹೇಳಿದರು.
ಹಿರಿಯ ಮುಖಂಡ ಬಿ.ಆರ್.ಸಂಗಪ್ಪಗೋಳ ಮಾತನಾಡಿ, ನಾನು ಮುಖ್ಯಮಂತ್ರಿಯಾಗಿರುವುದು ರಮೇಶ ಜಾರಕಿಹೊಳಿ ಅವರ ಕೃಪಾಕಟಾಕ್ಷದಿಂದ ಎಂದು ಸ್ವತ: ಮುಖ್ಯಮಂತ್ರಿಗಳೇ ಎಲ್ಲ ಕಡೆಗಳಲ್ಲೂ ಗುಣಗಾನ ಮಾಡುತ್ತಿದ್ದಾರೆ. ಸರ್ಕಾರವನ್ನು ಬೀಳಿಸುವ ಹಾಗೂ ರಚಿಸುವ ಶಕ್ತಿ ಗೋಕಾಕ ನೆಲಕ್ಕಿದೆ. ರಮೇಶ ಜಾರಕಿಹೊಳಿ ಅವರ ಪ್ರಭಾವದಿಂದಾಗಿ ಉತ್ತರ ಕರ್ನಾಟಕಕ್ಕೆ ಹೆಚ್ಚಿನ ಶಕ್ತಿ ಬಂದಿದೆ. ಸರ್ಕಾರದ ಹಲವು ಪ್ರಭಾವಿ ಖಾತೆಗಳು ಉತ್ತರ ಕರ್ನಾಟಕ ಭಾಗದವರಿಗೆ ಹಂಚಿಕೆ ಮಾಡಿರುವುದು ಜಾರಕಿಹೊಳಿಯವರ ನಾಯಕತ್ವಕ್ಕೆ ಸಾಕ್ಷಿಯಾಗಿದೆ. ಈ ಕ್ಷೇತ್ರವನ್ನು ಅಭಿವೃದ್ದಿ ಪಡಿಸುವ ದೃಷ್ಟಿಯಿಂದ ಬಿಜೆಪಿಗೆ ಮತ ನೀಡಿ. ರಮೇಶ ಜಾರಕಿಹೊಳಿ ಅವರು ರಾಜ್ಯದ ಉಪಮುಖ್ಯಮಂತ್ರಿಯಾಗಿ ಅಧಿಕಾರ ಸ್ವೀಕರಿಸಿ ಜನಸೇವೆ ಮಾಡಲಿದ್ದಾರೆಂದು ಹೇಳಿದರು.
ವಿಠ್ಠಲ ಕಾಶಪ್ಪಗೋಳ, ಗುರುಸಿದ್ದಪ್ಪ ಕಡೇಲಿ, ನಾಗಲಿಂಗ ಪೋತದಾರ, ಮಹಾಂತೇಶ ಹಳ್ಳಿ ಜಿ.ಪಂ ಮಾಜಿ ಸದಸ್ಯ ಸುಧೀರ ಜೋಡಟ್ಟಿ, ಭೀಮಶಿ ಬಿರನಾಳಿ, ರಾಮಚಂದ್ರ ಬಂತಿ, ಮಂಜುನಾಥ ಗುಡಕೇತ್ರ, ಎಂ.ಡಿ.ತಟಗಾರ, ದಾವಲ ದಬಾಡಿ,ಮಾರುತಿ ಜಾಧವ, ಓಂಕಾರ ಗಾಡಿವಡ್ಡರ, ಪ್ರೇಮಾ ಭಂಡಾರಿ, ರಫೀಕ ಮಕಾನದಾರ, ವಿಠ್ಠಲ ಸಣ್ಣಕ್ಕಿ, ಮುಂತಾದವರು ಈ ಸಂದರ್ಭದಲ್ಲಿ ಉಪಸ್ಥಿತರಿದ್ದರು.ನಂತರ ರಮೇಶ ಜಾರಕಿಹೊಳಿ ಅವರು ವಿವಿಧಡೆ ಪ್ರಚಾರ ಕಾರ್ಯ ಕೈಗೊಂಡರು.
ಪ್ರಗತಿವಾಹಿನಿ ಸುದ್ದಿಗಳನ್ನು ನಿಮ್ಮ ಸ್ನೇಹಿತರಿಗೆ, ಬೇರೆ ಗ್ರುಪ್ ಗಳಿಗೆ ಶೇರ್ ಮಾಡಿ