Kannada NewsKarnataka NewsLatest

Video updated – ಕೇಂದ್ರ ಸಚಿವರು, ರಾಜ್ಯ ಸಚಿವರ ಸಭೆಯಲ್ಲೇ ಸವಾಲೆಸೆದ ಶಾಸಕಿ ಲಕ್ಷ್ಮಿ ಹೆಬ್ಬಾಳಕರ್

 ಬಿಜೆಪಿ ಸರಕಾರದ್ದು ಕೇವಲ ಅಗ್ಗದ ಪ್ರಚಾರ, ಚಾಲೇಂಜ್ ಮಾಡ್ತೀನಿ ಕೆಲಸ ತೋರಿಸಿ

 

ಪ್ರಗತಿವಾಹಿನಿ ಸುದ್ದಿ, ಬೆಳಗಾವಿ – ಬಿಜೆಪಿ ಸರಕಾರದ್ದು ಕೇವಲ ಅಗ್ಗದ ಪ್ರಚಾರ, ಸರಕಾರಿ ಕಿಟ್ ಹಾಗೂ ಪೆಟ್ರೊಲ್ ಬಂಕ್ ಗಳ ಮೇಲೆ, ಉಜ್ವಲ ಗ್ಯಾಸ್ ಮೇಲೆ ಚಿತ್ರಗಳನ್ನು ಮಾತ್ರ ಹಾಕಿದ್ದೀರಿ, ಅಗ್ಗದ ಪ್ರಚಾರ ನಿಮ್ಮದು.  ಕೋಟಿ ಉದ್ಯೊಗ ಸೃಷ್ಟಿ  ಎಲ್ಲಿ ಮಾಡಿದ್ದೀರಿ ತೋರಿಸಿ. ನಾನು  ಚಾಲೇಂಜ್ ಮಾಡ್ತೀನಿ ಕೆಲಸ ತೋರಿಸಿ – ಹೀಗೆ ಕೇಂದ್ರ ಸಚಿವ ಸುರೇಶ ಅಂಗಡಿಗೆ ಬಹಿರಂಗ ಸಭೆಯಲ್ಲೇ ಸವಾಲೆಸದವರು ಗ್ರಾಮೀಣ ಕ್ಷೇತ್ರದ ಶಾಸಕಿ ಲಕ್ಷ್ಮಿ ಹೆಬ್ಬಾಳಕರ್.

ಜಿಲ್ಲಾ ಉಸ್ತುವಾರಿ ಸಚಿವ ರಮೇಶ ಜಾರಕಿಹೊಳಿ ಸಮ್ಮುಖದಲ್ಲೇ ಕೇಂದ್ರ ಹಾಗೂ ರಾಜ್ಯ ಸರಕಾರಗಳನ್ನು ತೀವ್ರವಾಗಿ ತರಾಟೆಗೆ ತೆಗೆದುಕೊಂಡರು ಹೆಬ್ಬಾಳಕರ್.

 ಉದ್ಯೊಗ ಖಾತ್ರಿ ಕೂಲಿಗೆ ವಿದ್ಯಾವಂತರು ಬರುವಂತಾಗಿದೆ, ಪದವಿ ಪಡೆದ ಅಭ್ಯರ್ಥಿಗಳು ಕೂಲಿಗಾಗಿ ಉದ್ಯೋಗ ಖಾತ್ರಿ ಕಾರ್ಡ ಮಾಡಿಸಿಕೊಳ್ಳಲು ಅಲೆದಾಡಿ ಕೂಲಿ ಮಾಡುತ್ತಿದ್ದಾರೆ. ಕೆಂದ್ರ ಸರಕಾರ, ರಾಜ್ಯ ಸರಕಾರ ಏನ್ ಮಾಡ್ತಾ ಇದೆ? 20 ಲಕ್ಷ ಕಟಿ ರೂ. ಪ್ಯಾಕೇಜ್ ಹೆಸರಲ್ಲಿ ಪ್ರಚಾರ ಪಡೆದಿರು. ಯಾವ ರೈತರಿಗೆ ಏನು ಪರಿಹಾರ ಸಿಕ್ಕಿದೆ ಹೇಳಿ ಎಂದು ಅವರು ತರಾಟೆಗೆ ತೆಗೆದುಕೊಂಡರು.
ಸಿದ್ದರಾಮಯ್ಯ ಸರಕಾರದಲ್ಲಿ ಮಾಡಿದ ಹಲವಾರು ಕೆಲಸಗಳು ಬೋಗಸ್ ಎಂದು ತಿರುಗೇಟು ನೀಡಲು ಮುಂದಾಗ ಸುರೇಶ ಅಂಗಡಿಗೆ, ಹಿಂದಿನದ್ದನ್ನು ಈಗ ಚರ್ಚಿಸುವುದು ಬೇಡ. ಅದನ್ನು ಬೇಕಾದರೆ ಬೇರೆ ವೇದಿಕೆಯಲ್ಲಿ ಚರ್ಚಿಸಲು ನಾನು ಸಿದ್ದ, ಈಗಿನದ್ದನ್ನು ಹೇಳಿ ಎಂದು ಲಕ್ಷ್ಮಿ ಹೆಬ್ಬಾಳಕರ್ ತಿವಿದರು.
ವಿಶೇಷವೆಂದರೆ ರಮೇಶ ಜಾರಕಿಹೊಳಿ ತುಟುಪಿಟಕ್ ಎನ್ನದೆ ಕುಳಿತಿದ್ದರು. ನಂತರ ಪತ್ರಕರ್ತರೊಂದಿಗೆ ಮಾತನಾಡುವಾಗ, ಅವರ ಸರಕಾರದ್ದು ಅವರು ಹೇಳುತ್ತಾರೆ. ನಮ್ಮದು ನಾವು ಹೇಳುತ್ತೇವೆ. ಅವರಿಗೆ ಅನುಭವದ ಕೊರತೆ ಇದೆ. ಕೊಚ್ಚೆಗೆ ಕಲ್ಲು ಹೊಡೆದರೆ ಏನಾಗುತ್ತದೆ ಎಂದು ರಮೇಶ ಜಾರಕಿಹೊಳಿ ಪ್ರಶ್ನಿಸಿದರು.
ಲೆಟರ್ ಕೊಟ್ಟು ಮೀಟಿಂಗ್ ಮಾಡಿ ಶೋ ಮಾಡುವ ಸರಕಾರ ನಮ್ಮದಲ್ಲ. ಯಡಿಯೂರಪ್ಪ ಮೇತೃತ್ವದ ಸರಕಾರ ಎಲ್ಲ ಜಾತಿ, ಜನಾಂಗದ ಪರವಾಗಿ ಕೆಲಸ ಮಾಡುತ್ತದೆ. ಪ್ರಜ್ಞಾನವಂತರ ಹೋಮ, ಹವನ ಮಾಡಲು ಹೋಗುವುದಿಲ್ಲ. ಅದಕ್ಕೆಲ್ಲ ಜನರು ಮರುಳಾಗುವುದಿಲ್ಲ ಎಂದರು ರಮೇಶ್.
ಕೇಲವರು ಬೆಳಗಾವಿ ತಾಲೂಕಿನ ಅಭಿವೃದ್ಧಿ ಬಗ್ಗೆ ದೂರಿದ್ದರು. ಅದಕ್ಕಾಗಿ ಸಭೆ ಕರೆದಿದ್ದೆ. ಆದರೆ ದೂರಿದವರು ಸಭೆಯಲ್ಲಿ ಮಾತನಾಡಲೇ ಇಲ್ಲ. ನಾನೇನು ಮಾಡಲಿ ಎಂದು ರಮೇಶ ಜಾರಕಿಹೊಳಿ ಪ್ರಶ್ನಿಸಿದರು.
ಜಿಲ್ಲಾ ಮಧ್ಯವರ್ತಿ ಬ್ಯಾಂಕ್ ಚುನಾವಣೆ ಕುರಿತು ಬಾಲಚಂದ್ರ ಜಾರಕಿಹೊಳಿ, ಉಮೇಶ ಕತ್ತಿ ನಿರ್ಧಾರ ತೆಗೆದುಕೊಳ್ಳುತ್ತಾರೆ ಎಂದ ರಮೇಶ್, ಆರ್.ಶಂಕರ್ ಗೆ ಮಂತ್ರಿಸ್ಥಾನ ಸಿಗಲಿದೆ. ವಿಶ್ವನಾಥ ಮತ್ತು ಎಂ.ಟಿ.ಬಿ.ನಾಗರಾಜ ಕುರಿತು ಹೈಕಮಾಂಡ್ ನಿರ್ಧಾರ ತೆಗೆದುಕೊಳ್ಳುತ್ತೆ ಎಂದೂ ರಮೇಶ್ ಜಾರಕಿಹೊಳಿ ಹೇಳಿದರು.

 

 ಪಕ್ಷಾತೀತವಾಗಿ ಸಮಗ್ರ ಅಭಿವೃದ್ಧಿಗೆ ಆದ್ಯತೆ

 ಮುಖ್ಯಮಂತ್ರಿಗಳ ನೇತೃತ್ವದಲ್ಲಿ ಅಭಿವೃದ್ಧಿ ಕೆಲಸಗಳನ್ನು ಮಾಡಲಾಗುತ್ತಿದ್ದು, ಪಕ್ಷಾತೀತವಾಗಿ ಎಲ್ಲ ಕ್ಷೇತ್ರಗಳಲ್ಲಿ ಅಭಿವೃದ್ಧಿ ಕಾಮಗಾರಿಗಳನ್ನು ಕೈಗೆತ್ತಿಕೊಳ್ಳಲಾಗುವುದು. ಅದೇ ರೀತಿ ಜಿಲ್ಲೆಯ ಕೆಲವು ಗ್ರಾಮ ಪಂಚಾಯತಿಗಳನ್ನು ನಗರ ಸ್ಥಳೀಯ ಸಂಸ್ಥೆಯ ಮೇಲ್ದರ್ಜೆಗೆ ಏರಿಸುವುದು; ಕುಡಿಯುವ ನೀರು ಯೋಜನೆ ಅನುಷ್ಠಾನ ಹಾಗೂ ಸ್ಮಶಾನ ಭೂಮಿ ಮಂಜೂರಾತಿ ಸೇರಿದಂತೆ ಎಲ್ಲ ಕೆಲಸಗಳನ್ನು ಕಾಲಮಿತಿಯಲ್ಲಿ ಜಾರಿಗೊಳಿಸಲಾಗುವುದು ಎಂದು ಜಿಲ್ಲಾ ಉಸ್ತುವಾರಿ ಸಚಿವರಾದ ರಮೇಶ್ ಜಾರಕಿಹೊಳಿ ಅವರು ತಿಳಿಸಿದರು.
 ಸೋಮವಾರ (ಜೂ. 15) ನಡೆದ ಬೆಳಗಾವಿ ತಾಲ್ಲೂಕಿನಲ್ಲಿ ಸರ್ಕಾರದ ವಿವಿಧ ಕಾರ್ಯಕ್ರಮಗಳ ಅನುಷ್ಠಾನದ ಪ್ರಗತಿ ಪರಿಶೀಲನಾ ಸಭೆಯ ಅಧ್ಯಕ್ಷತೆ ವಹಿಸಿ ಅವರು ಮಾತನಾಡಿದರು.
ಮಲೀನ ನೀರು ಅಥವಾ ತ್ಯಾಜ್ಯ ವಸ್ತುಗಳು ನೇರವಾಗಿ ನದಿ ಸೇರದಂತೆ ಸಂಬಂಧಿಸಿದ ಸಂಸ್ಥೆಗಳೇ ಎಸ್.ಟಿ.ಪಿ. ನಿರ್ಮಿಸಲು ಕ್ರಮ ಕೈಗೊಳ್ಳಬೇಕು ಎಂದು ಸಚಿವ ರಮೇಶ್ ಜಾರಕಿಹೊಳಿ ತಿಳಿಸಿದರು.
ಸಾಂಬ್ರಾ, ಹಿಂಡಲಗಾ ಸೇರಿದಂತೆ ಜಿಲ್ಲೆಯ ವಿವಿಧ ಗ್ರಾಮ ಪಂಚಾಯತಿಗಳನ್ನು ನಗರ ಸ್ಥಳೀಯ ಸಂಸ್ಥೆಗಳಾಗಿ ಮೇಲ್ದರ್ಜೆಗೆ ಏರಿಸಲು ಪ್ರಸ್ತಾವ ಸಲ್ಲಿಸುವಂತೆ ನಿರ್ದೇಶನ ನೀಡಿದರು.
ಗ್ರಾಮೀಣ ಭಾಗದ ಜನರ ಸಮಸ್ಯೆಗಳನ್ನು ಆಲಿಸುವ ಉದ್ದೇಶದಿಂದ ತಾಲ್ಲೂಕು ಮಟ್ಟದ ಸಭೆ ಕರೆಯಲಾಗಿದೆ.
ಮುಖ್ಯಮಂತ್ರಿಗಳ ನೇತೃತ್ವದಲ್ಲಿ ಪಕ್ಷಾತೀತವಾಗಿ ಅಭಿವೃದ್ಧಿ ಕೆಲಸ ಮಾಡಲಾಗುವುದು. ಹಿರೇಬಾಗೇವಾಡಿ ಅಥವಾ ಕುಡಚಿ ಸೇರಿದಂತೆ ಯಾವುದೇ ಗ್ರಾಮವಿರಲಿ; ಎಲ್ಲ ಕಡೆ ಪಕ್ಷಾತೀತವಾಗಿ ಅಭಿವೃದ್ಧಿ ಕೆಲಸ ಮಾಡುತ್ತೇವೆ. ಸ್ಥಳೀಯ ಜನರ ಸಮಸ್ಯೆಗಳಿಗೆ ಸ್ಪಂದಿಸಲಾಗುವುದು.
ಗ್ರಾಮದಲ್ಲಿ ನರೇಗಾ ಯೋಜನೆಯಡಿ ಯಾವುದೇ ಕಾಮಗಾರಿ ಕೈಗೊಳ್ಳುವಾಗ ಸ್ಥಳೀಯ ತಾಪಂ ಸದಸ್ಯರೂ ಸೇರಿದಂತೆ ಸ್ಥಳೀಯ ಜನಪ್ರತಿಧಿಗಳನ್ನು ವಿಶ್ವಾಸಕ್ಕೆ ತೆಗೆದುಕೊಂಡಿರುವ ಬಗ್ಗೆ ಸದಸ್ಯರಿಂದ ಮಾಹಿತಿಯನ್ನು ಪಡೆದುಕೊಂಡರು.

ಕುಡಿಯುವ ನೀರು ಯೋಜನೆ; ಸ್ಥಳ ಪರಿಶೀಲನೆ:

ಬೆಳಗುಂದಿ ಮತ್ತು ಸುತ್ತಮುತ್ತಲಿನ ಗ್ರಾಮಗಳ ಜನರಿಗೆ ಕುಡಿಯುವ ನೀರು ಒದಗಿಸುವ 220 ಕೋಟಿ ರೂಪಾಯಿ ಯೋಜನೆಗೆ ಸಂಬಂಧಿಸಿದಂತೆ ಶೀಘ್ರ ಸ್ಥಳ ಪರಿಶೀಲನೆ ನಡೆಸಿ ಸೂಕ್ತ ನಿರ್ಧಾರ ಕೈಗೊಳ್ಳಲಾಗುವುದು ಎಂದರು.
ಕುಡಿಯುವ ನೀರು, ಪ್ರಾಥಮಿಕ ಆರೋಗ್ಯ ಕೇಂದ್ರಗಳಿಗೆ ವೈದ್ಯರು/ಸಿಬ್ಬಂದಿ ಒದಗಿಸುವುದು; ಶುದ್ಧ ಕುಡಿಯುವ ನೀರಿನ ಘಟಕಗಳ ನಿರ್ವಹಣೆ; ಬಿತ್ತನೆ ಬೀಜಗಳ ವಿತರಣೆ; ಗ್ರಾಮಗಳಿಗೆ ಸ್ಮಶಾನ ಭೂಮಿ ಒದಗಿಸುವುದು; ಬಹುಗ್ರಾಮ ಕುಡಿಯುವ ನೀರು ಯೋಜನೆ ಸೇರಿದಂತೆ ವಿವಿಧ ವಿಷಯಗಳ ಬಗ್ಗೆ ಜಿಲ್ಲಾ ಪಂಚಾಯತ ಹಾಗೂ ತಾಲ್ಲೂಕು ಪಂಚಾಯತಿ ಸದಸ್ಯರ ಅಹವಾಲುಗಳನ್ನು ಸಚಿವರು ಆಲಿಸಿದರು.
ಮಹಾನಗರ ಪಾಲಿಕೆ ಮತ್ತು ಸ್ಮಾರ್ಟ್ ಸಿಟಿ ಯೋಜನೆ ಅನುಷ್ಠಾನದ ಬಗ್ಗೆ ಪ್ರತ್ಯೇಕ ಸಭೆ ಕರೆದು ಚರ್ಚೆ ಮಾಡಲಾಗುವುದು ಎಂದು ಸಚಿವ ರಮೇಶ್ ಜಾರಕಿಹೊಳಿ ಭರವಸೆ ನೀಡಿದರು.
ನರೇಗಾ ಯೋಜನೆಯಡಿ ಕೈಗೊಳ್ಳಲಾದ ಕಾಮಗಾರಿಗಳ ಕುರಿತು ಬೆಳಗಾವಿ ತಾಪಂ ಕಾರ್ಯನಿರ್ವಾಹಕ ಅಧಿಕಾರಿ ಮಲ್ಲಿಕಾರ್ಜುನ ಸಭೆಗೆ ವಿವರಿಸಿದರು.
ತಾಪಂ ಸದಸ್ಯ ಯಲ್ಲಪ್ಪ ಕೋಳೇಕರ್, ನರೇಗಾ ಕಾರ್ಮಿಕರ ಜತೆ ಮಕ್ಕಳು ಇರುವುದರಿಂದ ಕುಡಿಯುವ ನೀರು ಮತ್ತಿತರ ಮೂಲಸೌಕರ್ಯಗಳನ್ನು ಒದಗಿಸಲು ಮನವಿ ಮಾಡಿಕೊಂಡರು.
ಈ ಸಂದರ್ಭದಲ್ಲಿ ಮಾತನಾಡಿದ ಜಿಲ್ಲಾ ಪಂಚಾಯತ ಮುಖ್ಯ ಕಾರ್ಯನಿರ್ವಾಹಕ ಅಧಿಕಾರಿ ಡಾ.ರಾಜೇಂದ್ರ ಕೆ.ವಿ., ಜಿಲ್ಲೆಯ 506 ಗ್ರಾಮ ಪಂಚಾಯತಿ ವ್ಯಾಪ್ತಿಯಲ್ಲಿ ಎಲ್ಲರಿಗೂ ಉದ್ಯೋಗ ಒದಗಿಸುವ ನಿಟ್ಟಿನಲ್ಲಿ ಕಾರ್ಯನಿರ್ವಹಿಸಲಾಗುತ್ತಿದ್ದು, ಲಾಕ್ ಡೌನ್ ಹಿನ್ನೆಲೆಯಲ್ಲಿ ಗ್ರಾಮಗಳಿಗೆ ಹಿಂದಿರುಗಿದವರಿಗೂ ಉದ್ಯೋಗ ನೀಡಲು ಕ್ರಮಕೈಗೊಳ್ಳಲಾಗಿದೆ ಎಂದು  ತಿಳಿಸಿದರು.
ನರೇಗಾ ಕಾಮಗಾರಿ ಸ್ಥಳದಲ್ಲೇ ಮಕ್ಕಳಿಗೆ ಕಲಿಸಲು ಅಂಗನವಾಡಿ ಮಾದರಿ ಬೋಧನೆ ಹಾಗೂ ಪ್ರಥಮ ಚಿಕಿತ್ಸೆ ಸೌಲಭ್ಯ ಒದಗಿಸಲಾಗುತ್ತಿದೆ.
ರಸ್ತೆಬದಿ ವ್ಯಾಪಾರ ಮಾಡುವವರಿಗೆ ನಬಾರ್ಡ್ ಸಹಾಯಧನ ನೆರವಿನಿಂದ ಮಳಿಗೆ ನಿರ್ಮಿಸಲು ಅವಕಾಶವಿದೆ. ಇದಕ್ಕೆ ಗ್ರಾಮ ಪಂಚಾಯತಿ ವತಿಯಿಂದ ಸೂಕ್ತ ಜಾಗೆ ನೀಡಬೇಕು ಎಂದು ತಿಳಿಸಿದರು.
ರೈಲ್ವೆ ಇಲಾಖೆಯ ರಾಜ್ಯ ಸಚಿವರಾದ ಸುರೇಶ್ ಅಂಗಡಿ, ಪ್ರಧಾನಮಂತ್ರಿಗಳ ಕನಸಿನಂತೆ ಎಲ್ಲರಿಗೂ ಶುದ್ಧ ಕುಡಿಯುವ ನೀರು ಒದಗಿಸಲಾಗುವುದು ಎಂದರು.
ಕಳಪೆ ಬಿತ್ತನೆ ಬೀಜ ವಿತರಿಸಲಾಗಿದೆ ಎಂದು ಸಾವಿರಾರು ರೈತರು ದೂರು ಸಲ್ಲಿಸುತ್ತಿರುವುದರಿಂದ ಈ ಬಗ್ಗೆ ಕೃಷಿ ಇಲಾಖೆಯ ಅಧಿಕಾರಿಗಳು ಸೂಕ್ತ ಸಮೀಕ್ಷೆ ನಡೆಸಿ ಕ್ರಮಕೈಗೊಳ್ಳಬೇಕು ಎಂದರು.
ವಿಧಾನಪರಿಷತ್ತಿನ ಸರಕಾರದ ಮುಖ್ಯ ಸಚೇತಕರಾದ ಮಹಾಂತೇಶ ಕವಟಗಿಮಠ ಅವರು ನರೇಗಾ ಅನುಷ್ಠಾನ ಕುರಿತು ಸಲಹೆ -ಸೂಚನೆಗಳನ್ನು ನೀಡಿದರು.
ಶಾಸಕರಾದ ಲಕ್ಷ್ಮೀ ಹೆಬ್ಬಾಳಕರ್ ಮಾತನಾಡಿ,  ಬೆಳಗುಂದಿ ಮತ್ತು ಸುತ್ತಮುತ್ತಲಿನ ಗ್ರಾಮಗಳ ಜನರಿಗೆ ಕುಡಿಯುವ ನೀರು ಒದಗಿಸುವ 220 ಕೋಟಿ ರೂಪಾಯಿ ಯೋಜನೆಗೆ ಸರ್ಕಾರ ಈಗಾಗಲೇ ಮಂಜೂರಾತಿ ನೀಡಿದ್ದು, ಅನುದಾನ ಕೊರತೆ ಹಿನ್ನೆಲೆಯಲ್ಲಿ ಯೋಜನೆ ಆರಂಭಗೊಂಡಿಲ್ಲ ಎಂದು ಆಕ್ಷೇಪಿಸಿದರು.
ಕೊರೊನಾ ಹಿನ್ನೆಲೆಯಲ್ಲಿ ನೇಕಾರರು, ರೈತರು ತೀವ್ರ ಸಂಕಷ್ಟದಲ್ಲಿದ್ದು, ಅವರಿಗೆ ನೆರವು ಒದಗಿಸುವ ಬಗ್ಗೆ ಸರ್ಕಾರದ ಹಂತದಲ್ಲಿ ತಕ್ಷಣ ಕ್ರಮಕೈಗೊಳ್ಳಬೇಕು ಎಂದು ಲಕ್ಷ್ಮೀ ಹೆಬ್ಬಾಳಕರ್ ಅವರು ಸಚಿವರಿಗೆ ಒತ್ತಾಯಿಸಿದರು.
ಶಾಸಕರಾದ ಅಭಯ್ ಪಾಟೀಲ, ಯಳ್ಳೂರ ಗ್ರಾಮದ ಜಲಜೀವನ ಕ್ರಿಯಾ ಯೋಜನೆ ರೂಪಿಸಲಾಗಿದ್ದು, ಕಾಮಗಾರಿ ಅನುಷ್ಠಾನಗೊಳಿಸಲಾಗುತ್ತಿದೆ‌. ಅದರ ಕಾರ್ಯಪ್ರಗತಿಯ ಬಗ್ಗೆ ಅಧಿಕಾರಿಗಳ ಮೂಲಕ ಜಿಲ್ಲಾ ಉಸ್ತುವಾರಿ ಸಚಿವರಿಗೆ ಮಾಹಿತಿಯನ್ನು ಸಲ್ಲಿಸಿದರು.
ಮಚ್ಛೆ ಮತ್ತು ಪೀರನವಾಡಿ ಗ್ರಾಮದಲ್ಲಿ ಜಲಜೀವನ ಮಿಷನ್ ಅಡಿಯಲ್ಲಿ ಕುಡಿಯುವ ನೀರು ಪೂರೈಕೆ ಯೋಜನೆ ತ್ವರಿತಗೊಳಿಸಲು ಒತ್ತಾಯಿಸಿದರು.
ಶಾಸಕ ಅನಿಲ್ ಬೆನಕೆ, ಧಾಮಣೆ ಗ್ರಾಮದ ವ್ಯಾಪ್ತಿಯ ಭಾಗದಲ್ಲಿ ಬಳಕೆಯಾಗದ ಮಹಾರಾಷ್ಟ್ರದ ತಿಲ್ಲಾರಿ ಜಲಾಶಯದ ನೀರನ್ನು ಈ ಕಡೆಗೆ ತಿರುಗಿಸಿದರೆ ಜಿಲ್ಲೆಯ ಬಹುತೇಕ ನೀರಿನ ಸಮಸ್ಯೆ ಬಗೆಹರಿಸಬಹುದು ಎಂದರು.
ಜಿಲ್ಲಾ ಪಂಚಾಯತ ಅಧ್ಯಕ್ಷೆ ಆಶಾ ಐಹೊಳೆ, ಶಿಥಿಲಗೊಂಡಿರುವ ಓವರ್ ಹೆಡ್ ಟ್ಯಾಂಕ್ ಗಳನ್ನು ತೆರವುಗೊಳಿಸುವಂತೆ ಮೂರು ವರ್ಷಗಳಿಂದ ಪ್ರಯತ್ನಿಸಲಾಗುತ್ತಿದೆ. ಆದಾಗ್ಯೂ ಟ್ಯಾಂಕ್ ತೆರವು ಕಾರ್ಯ ಕೈಗೊಳ್ಳಲಾಗುತ್ತಿಲ್ಲ. ಈ ಬಗ್ಗೆ ತುರ್ತು ಕ್ರಮ ಕೈಗೊಳ್ಳಬೇಕು ಎಂದು ಒತ್ತಾಯಿಸಿದರು.
ಜಿಲ್ಲಾಧಿಕಾರಿ ಡಾ.ಎಸ್.ಬಿ.ಬೊಮ್ಮನಹಳ್ಳಿ, ಸಂಬಂಧಿಸಿದ ಸಂಸ್ಥೆ ಹಾಗೂ ಅಪಾರ್ಟ್‌ಮೆಂಟ್ ಗಳು ತಾವೇ ಎಸ್.ಟಿ.ಪಿ ಅಳವಡಿಸಿಕೊಳ್ಳಬೇಕು. ಒಂದು ವೇಳೆ ಎಸ್.ಟಿ.ಪಿ ಇಲ್ಲದಿದ್ದರೆ ಅಂತಹವರಿಗೆ ನೋಟಿಸ್ ನೀಡಲು ಸೂಚನೆ ನೀಡಿದರು.
ರಾಕಸಕೊಪ್ಪ ಜಲಾಶಯಕ್ಕಾಗಿ ಜಮೀನು ಕಳೆದುಕೊಂಡಿರುವ ಜನರಿಗೆ ಯೋಜನಾ ನಿರಾಶ್ರೀತರಿಗೆ ಲಭ್ಯವಿರುವ ಸೌಲಭ್ಯಗಳನ್ನು ಒದಗಿಸುವ ಬಗ್ಗೆ ಪರಿಶೀಲಿಸಲಾಗುವುದು ಎಂದು ತಿಳಿಸಿದರು.
ಈಗಾಗಲೇ ಅರಣ್ಯ ಪ್ರದೇಶದ ವ್ಯಾಪ್ತಿಯಲ್ಲಿ ಅಂತ್ಯಕ್ರಿಯೆ ನಡೆಸುತ್ತದ ಬಂದಿದ್ದರೆ ಅಂತಹ ಜಮೀನನ್ನು ಗ್ರಾಮಸ್ಥರಿಗೆ ಒದಗಿಸಲು ಕ್ರಮ ಕೈಗೊಳ್ಳಲಾಗುವುದು ಎಂದು ಜಿಲ್ಲಾಧಿಕಾರಿ ಭರವಸೆ ನೀಡಿದರು.
ಬೆಳಗಾವಿ ನಗರಾಭಿವೃದ್ಧಿ ಪ್ರಾಧಿಕಾರದ ಅಧ್ಯಕ್ಷ ಘೂಳಪ್ಪ ಹೊಸಮನಿ, ಬೆಳಗಾವಿ ತಾಲ್ಲೂಕು ಪಂಚಾಯತ ಅಧ್ಯಕ್ಷ ಶಂಕರಗೌಡ ಪಾಟೀಲ, ಪೊಲಿಸ್ ಆಯುಕ್ತರಾದ ಬಿ‌.ಎಸ್.ಲೋಕೇಶ್ ಕುಮಾರ್ ಮತ್ತಿತರರು ಉಪಸ್ಥಿತರಿದ್ದರು.
ಇದಕ್ಕೂ ಮುಂಚೆ ಬೆಳಗಾವಿ ಜಿಲ್ಲಾ ಪಂಚಾಯತ್ ವತಿಯಿಂದ ಸ್ವಚ್ಛ ಭಾರತ ಮಿಷನ್ ಅಡಿಯಲ್ಲಿ ವಿವಿಧ ಗ್ರಾಮ ಪಂಚಾಯತಿಗಳಿಗೆ ನೀಡಲಾದ ಕಸ ಸಂಗ್ರಹಿಸುವ ವಾಹನಗಳನ್ನು ಜಿಲ್ಲಾ ಉಸ್ತುವಾರಿ ಸಚಿವರಾದ ರಮೇಶ್ ಜಾರಕಿಹೊಳಿ ಅವರು ಸೋಮವಾರ ಸಾರ್ವಜನಿಕ ಸೇವೆಗೆ ಸಮರ್ಪಿಸಿದರು

ಪ್ರಗತಿವಾಹಿನಿ ಸುದ್ದಿಗಳನ್ನು ನಿಮ್ಮ ಸ್ನೇಹಿತರಿಗೆ, ಬೇರೆ ಗ್ರುಪ್ ಗಳಿಗೆ ಶೇರ್ ಮಾಡಿ

Related Articles

Back to top button