ಸ್ಮಶಾನ ಸ್ಥಳ ವಿವಾದ: ಲಕ್ಷ್ಮಿ ಹೆಬ್ಬಾಳಕರ ಸಂಧಾನ
ಪ್ರಗತಿವಾಹಿನಿ ಸುದ್ದಿ, ಬೆಳಗಾವಿ-
ಶವ ಸಂಸ್ಕಾರಕ್ಕೆ ಜಾಗವಿಲ್ಲದ ಸಮಸ್ಯೆ ಎದುರಿಸುತ್ತಿದ್ದ ತಾಲೂಕಿನ ಕವಳೆವಾಡಿ ಗ್ರಾಮದಲ್ಲಿ ಶಾಸಕರ ಅನುದಾನದಲ್ಲಿ ಪ್ರತ್ಯೇಕ ಸ್ಮಶಾನ ಭೂಮಿ ನಿರ್ಮಿಸಿಕೊಡುವುದಾಗಿ ಗ್ರಾಮೀಣ ಶಾಸಕಿ ಲಕ್ಷ್ಮಿ ಹೆಬ್ಬಾಳಕರ್ ಭರವಸೆ ನೀಡಿದರು.
ವಿವಾದಿತ ಜಾಗದಲ್ಲಿ ಅಂತ್ಯ ಸಂಸ್ಕಾರಕ್ಕೆ ಅವಕಾಶ ನೀಡದ ಕಾರಣದಿಂದ ಕವಳೆವಾಡಿ ಗ್ರಾಮದಲ್ಲಿ ಸೋಮವಾರ ಮೃತಪಟ್ಟ ಮಹಿಳೆ ಅಂತ್ಯಸಂಸ್ಕಾರಕ್ಕೆ ಪರದಾಡುತ್ತಿದ್ದ ಸ್ಥಳಕ್ಕೆ ಭೇಟಿ ನೀಡಿದ ಶಾಸಕಿ ಹೆಬ್ಬಾಳಕರ್, ಗ್ರಾಮಸ್ಥರೊಂದಿಗೆ ಚರ್ಚಿಸಿ ಸ್ಮಶಾನ ಭೂಮಿ ಸಮಸ್ಯೆಗೆ ಶಾಶ್ವತ ಪರಿಹಾರ ಕಲ್ಪಿಸುವ ಭರವಸೆ ನೀಡಿದರು.
ಇದರಿಂದಾಗಿ ಕಗ್ಗಂಟಾಗಿದ್ದ ವಿವಾದವನ್ನು ಯಶಸ್ವಿಯಾಗಿ ಪರಿಹರಿಸಿದರು.
ಶಾಸಕರ ಅನುದಾನದ 5 ಲಕ್ಷ ರೂ.ಬಳಕೆ ಮಾಡಿ ಶಾಶ್ವತ ಶೆಡ್ ಮತ್ತು ಅಂತ್ಯ ಸಂಸ್ಕಾರಕ್ಕೆ ಬೇಕಾದ ಎಲ್ಲ ಸೌಲಭ್ಯ ಕಲ್ಪಿಸಿಕೊಡಲಾಗುವುದು ಎಂದರು.
ಸಭೆಯಲ್ಲಿ ಮಾತನಾಡಿದ ಅವರು, ಗ್ರಾಮಕ್ಕೆ ಶಾಶ್ವತ ಸ್ಮಶಾನ ಭೂಮಿ ಕಲ್ಪಿಸಲು ಪ್ರಾಮಾಣಿಕವಾಗಿ ಪ್ರಯತ್ನಿಸುತ್ತಿರುವೆ. ನನ್ನ ಶಾಸಕರ ಅನುದಾನ ನಿಧಿಯಲ್ಲಿ ಸ್ಮಶಾನದ ಶೆಡ್ ನಿರ್ಮಾಣಕ್ಕೆ 5 ಲಕ್ಷ ರೂಪಾಯಿಗಳನ್ನು ಈ ಸಂದರ್ಭದಲ್ಲಿ ಘೋಷಣೆ ಮಾಡುತ್ತಿರುವೆ ಎಂದು ತಿಳಿಸಿದರು.
ಗ್ರಾಮದ ಮನೆಯ ಮಗಳಾಗಿ ಇಲ್ಲಿನ ಸಮಸ್ಯೆಗಳನ್ನು ಪರಿಹರಿಸುವುದು ನನ್ನ ಕರ್ತವ್ಯ. ಗ್ರಾಮಸ್ಥರ ಕಷ್ಟ ಸುಖಗಳಲ್ಲಿ ಸದಾ ಭಾಗಿಯಾಗಿರುತ್ತೇನೆ. ಬರುವ ದಿನಗಳಲ್ಲಿ ಕವಳೇವಾಡಿ ಗ್ರಾಮದ ಸ್ಮಶಾನ ಭೂಮಿ ಸಮಸ್ಯೆ ದೂರವಾಗಲಿದೆ ಎಂದು ಲಕ್ಷ್ಮಿ ಹೆಬ್ಬಾಳಕರ ಹೇಳಿದರು.
2 ಕಿಮೀ ಕಾಲ್ನಡಿಗೆ
ಮೂರು ದಿನಗಳ ಹಿಂದೆ ಕವಳೇವಾಡಿ ಗ್ರಾಮದಲ್ಲಿ ಮಹಿಳೆಯೊಬ್ಬರು ತೀರಿಕೊಂಡಿದ್ದರು. ಆದರೆ ಮೃತರ ಅಂತ್ಯಕ್ರಿಯೆಗೆ ಜಾಗವಿಲ್ಲದೆ ಮಹಿಳೆ ಕುಟುಂಬಸ್ಥರು ಗ್ರಾಮದ ಮೋರೆ ಕುಟುಂಬದವರ ಮನೆ ಮುಂದೆ ರಾತ್ರಿ ಶವ ಸುಡಲು ಮುಂದಾಗಿದ್ದರು. ಈ ಸಂದರ್ಭದಲ್ಲಿ ಪರಿಸ್ಥಿತಿ ವಿಕೋಪಕ್ಕೆ ಹೋಗುವ ಮಾಹಿತಿ ತಿಳಿದ ಶಾಸಕಿ ಹೆಬ್ಬಾಳಕರ ತಕ್ಷಣ ಗ್ರಾಮಕ್ಕೆ ಧಾವಿಸಿ ಯಾವುದೇ ಅನಾಹುತ ಆಗದಂತೆ ಎಲ್ಲರ ಮನವೊಲಿಸಿದ್ದರು. ಈಗ ಸಮಸ್ಯೆ ಪರಿಹಾರಕ್ಕಾಗಿ ಗ್ರಾಮಸ್ಥರ ಸಭೆ ನಡೆಸಿರುವ ಶಾಸಕಿ ಸ್ಮಶಾನ ಭೂಮಿಗಾಗಿ ಅನುದಾನ ಘೋಷಣೆ ಮಾಡಿದ್ದಾರೆ.
ಅಲ್ಲದೆ, 2 ಕಿಮೀ ದೂರ ನಡೆದು ಸ್ವತಃ ಅಂತ್ಯ ಸಂಸ್ಕಾರದಲ್ಲೂ ಪಾಲ್ಗೊಳ್ಳುವ ಮೂಲಕ ಲಕ್ಷ್ಮಿ ಹೆಬ್ಬಾಳಕರ್ ಮಾನವೀಯತೆ ಮರೆದರು.
1984ರಿಂದಲೂ ಗ್ರಾಮದ ದಾಖಲೆಯಲ್ಲಿರುವ ಜಾಗದಲ್ಲಿ, ಹಿಂದಿನಿಂದಲೂ ಅಂತ್ಯ ಸಂಸ್ಕಾರ ನಡೆಸಿಕೊಂಡು ಬಂದಿರುವ ಜಾಗ ಸ್ವಂತದ್ದು ಎಂದು ವಿರೋಧಿಸಿದ ಕುಟುಂಬದ ಮನೆ ಮುಂದೆ ಅಂತ್ಯ ಸಂಸ್ಕಾರಕ್ಕೆ ಮುಂದಾದ ಸಮಯಕ್ಕೆ ಸರಿಯಾಗಿ ಶಾಸಕಿ ಲಕ್ಷ್ಮಿ ಹೆಬ್ಬಾಳಕರ್ ಭೇಟಿ ನೀಡಿ ಸಂದಾನ ಸಭೆ ನಡೆಸಿ ಸಮಸ್ಯೆಗೆ ಪರಿಹಾರ ಸೂಚಿಸಿ ಗಮನ ಸೆಳೆದರು.
ಉಪವಿಭಾಗಾಧಿಕಾರಿ ಕವಿತಾ ಯೋಗಪ್ಪನವರ, ತಹಶಿಲ್ದಾರ ಮಂಜುಳಾ ನಾಯಕ್, ಪೊಲೀಸ್ ಅಧಿಕಾರಿಗಳು ಮತ್ತು ಗ್ರಾಮದ ಹಿರಿಯರು ಇದ್ದರು.
ಪ್ರಗತಿವಾಹಿನಿ ಸುದ್ದಿಗಳನ್ನು ನಿಮ್ಮ ಸ್ನೇಹಿತರಿಗೆ, ಬೇರೆ ಗ್ರುಪ್ ಗಳಿಗೆ ಶೇರ್ ಮಾಡಿ