Kannada NewsKarnataka NewsLife StyleNational

*ಅಡುಗೆ ಎಣ್ಣೆ ದರ ಇಳಿಸಲು ಮಹತ್ವದ ನಿರ್ಧಾರ ಕೈಗೊಂಡ ಕೇಂದ್ರ*

ಪ್ರಗತಿವಾಹಿನಿ ಸುದ್ದಿ, ನವದೆಹಲಿ: ಭಾರತದಲ್ಲಿ ಅಡುಗೆ ಎಣ್ಣೆ ದರ ಗಗನಕ್ಕೆ ಏರಿದೆ. ಸದ್ಯ ಅಡುಗೆ ಎಣ್ಣೆ ಉಪಯೋಗಿಸುವ ಗ್ರಾಹಕರಿಗೆ ಕೇಂದ್ರ ಸರ್ಕಾರ ಗುಡ್‌ನ್ಯೂಸ್ ನೀಡಿದ್ದು, ಮೇ 31ರಿಂದ ಅಡುಗೆ ಎಣ್ಣೆ ದರ ಇಳಿಕೆ ಆಗಲಿದೆ.

ಕಚ್ಚಾ ಅಡುಗೆ ಎಣ್ಣೆಗಳ ಮೇಲಿನ ಆಮದು ಸುಂಕವನ್ನು ಅರ್ಧಕ್ಕೆ ಇಳಿಸುವ ಮಹತ್ವದ ನಿರ್ಧಾರ ಕೈಗೊಳ್ಳಲಾಗಿದ್ದು, ಹೊಸ ನಿಯಮಗಳು ಮೇ 31ರಿಂದ ದೇಶಾದ್ಯಂತ ಜಾರಿಗೆ ಬರಲಿವೆ. ಈ ಕುರಿತು ಕೇಂದ್ರ ಸರ್ಕಾರ ಅಧಿಕೃತ ಅಧಿಸೂಚನೆ ಹೊರಡಿಸಿದೆ.

ಪ್ರಸ್ತುತ ಕಚ್ಚಾ ಪಾಮ್ ಎಣ್ಣೆ ಕಚ್ಚಾ ಸೋಯಾಬೀನ್ ಎಣ್ಣೆ ಮತ್ತು ಕಚ್ಚಾ ಸೂರ್ಯಕಾಂತಿ ಎಣ್ಣೆಗಳ ಮೇಲೆ ಶೇ. 20ರಷ್ಟು ಆಮದು ಸುಂಕ ವಿಧಿಸಲಾಗುತ್ತಿತ್ತು. ಈಗ ಈ ಸುಂಕವನ್ನು ಶೇ.10ಕ್ಕೆ ಇಳಿಸಲಾಗಿದೆ. ಇದರ ಪರಿಣಾಮವಾಗಿ ಈ ಮೂರು ಎಣ್ಣೆಗಳ ಮೇಲಿನ ಒಟ್ಟು ತೆರಿಗೆ ಹೊರೆ 27.5% ರಿಂದ 16.5% ಕ್ಕೆ ಇಳಿಕೆ ಆಗಲಿದೆ.

ಸೆಪ್ಟೆಂಬರ್ 2024ರಲ್ಲಿ ಅಡುಗೆ ಎಣ್ಣೆಗಳ ಮೇಲಿನ ತೆರಿಗೆ ಹೆಚ್ಚಳದಿಂದ ಬೆಲೆಗಳು ಗಗನಕ್ಕೇರಿದ್ದವು. ಈಗಿನ ಸುಂಕ ಕಡಿತದಿಂದ ಮಾರುಕಟ್ಟೆಯಲ್ಲಿ ಸ್ಥಿರತೆ ಮೂಡಿಸಿ, ಹಣದುಬ್ಬರವನ್ನು ನಿಯಂತ್ರಿಸುವುದು ಸರ್ಕಾರದ ಉದ್ದೇಶವಾಗಿದೆ.

Home add -Advt

ಕೆಲವು ಕಂಪನಿಗಳು ಈಗಾಗಲೇ ಪ್ಯಾಕೆಟ್ ಸೂರ್ಯಕಾಂತಿ ಮತ್ತು ಸೋಯಾಬೀನ್ ಎಣ್ಣೆಗಳ ಬೆಲೆ ಇಳಿಕೆ ಘೋಷಿಸಿವೆ. ಮುಂದಿನ ದಿನಗಳಲ್ಲಿ ಕಡಿಮೆ ಸುಂಕದ ಹೊಸ ಸರಕುಗಳು ಮಾರುಕಟ್ಟೆಗೆ ಬಂದಂತೆ ಬೆಲೆಗಳು ಮತ್ತಷ್ಟು ಇಳಿಯುವ ಸಾಧ್ಯತೆ ಇದೆ.

ಈ ನಿರ್ಧಾರದಿಂದ ಗ್ರಾಹಕರ ಖರೀದಿ ಶಕ್ತಿ ಹೆಚ್ಚಾಗುವ ಸಾಧ್ಯತೆ ಇದೆ. ಜೊತೆಗೆ ಅಡುಗೆ ಎಣ್ಣೆ ಬೇಡಿಕೆ ಏರಿಕೆಯಾಗುವ ಸಾಧ್ಯತೆಯಿದೆ. ಮಾರುಕಟ್ಟೆಯಲ್ಲಿ ಬೆಲೆ ಸ್ಥಿರತೆ ಆಗಲಿದೆ ಎಂಬ ಪರಿಣಾಮಗಳು ಕಂಡುಬರುವ ನಿರೀಕ್ಷೆ ಇದೆ.

ಭಾರತವು ತನ್ನ ಅಡುಗೆ ಎಣ್ಣೆಯ ಅಗತ್ಯಗಳಲ್ಲಿ ಸುಮಾರು 70% ವಿದೇಶಗಳಿಂದ ಆಮದು ಮಾಡಿಕೊಳ್ಳುತ್ತದೆ. ದೇಶೀಯವಾಗಿ ಎಣ್ಣೆಕಾಳುಗಳ ಉತ್ಪಾದನೆ ಕಡಿಮೆ ಇರುವುದರಿಂದ ಆಮದು ಮೇಲಿನ ಅವಲಂಬನೆ ಹೆಚ್ಚಾಗಿದೆ. ಆಮದು ಸುಂಕ ಕಡಿತದಿಂದ ಸ್ಥಳೀಯ ಮಾರುಕಟ್ಟೆಯಲ್ಲಿ ಬೆಲೆ ಇಳಿಕೆಗೆ ದಾರಿ ತೆರೆಯಲಿದೆ ಎಂದು ನಿರೀಕ್ಷಿಸಲಾಗಿದೆ.

Related Articles

Back to top button