
ಪ್ರಗತಿವಾಹಿನಿ ಸುದ್ದಿ, ಬೆಳಗಾವಿ : “ಗ್ರಾಮ ಪಂಚಾಯತ್ ಆರೋಗ್ಯ ಅಮೃತ ಯೋಜನೆ”ಯನ್ನು ಪ್ರಧಾನ ಮಂತ್ರಿಗಳ ಹುಟ್ಟು ಹಬ್ಬದ ದಿನವಾದ ಸೆಪ್ಟೆಂಬರ್ ೧೭ ರಂದು ಬೆಂಗಳೂರಿನ ವಿಧಾನ ಸೌಧದಲ್ಲಿ ರಾಜ್ಯದ ೭೫೦ ಹಳ್ಳಿಗಳಿಗೆ ಅನ್ವಯವಾಗುವಂತೆ ಬೃಹತ್ ಮಟ್ಟದಲ್ಲಿ ಚಾಲನೆ ನೀಡಲಾಗುವುದು ಎಂದು ಎಂದು ಗ್ರಾಮೀಣಾಭಿವೃದ್ಧಿ ಮತ್ತು ಪಂಚಾಯತ್ ರಾಜ್ ಇಲಾಖೆಯ ಸಚಿವರಾದ ಕೆ.ಎಸ್.ಈಶ್ವರಪ್ಪ ತಿಳಿಸಿದರು.
ಸುವರ್ಣ ವಿಧಾನ ಸೌಧದಲ್ಲಿ (ಆ.೩೧) ಮಂಗಳವಾರ ರಾಜ್ಯದ ಎಲ್ಲ ಜಿಲ್ಲಾ ಪಂಚಾಯತ್ ಮುಖ್ಯ ಕಾರ್ಯನಿರ್ವಾಹಕ ಅಧಿಕಾರಿಗಳ ೨ ದಿನಗಳ ಕಾರ್ಯಗಾರದ ಸಮಾರೋಪ ಸಮಾರಂಭದಲ್ಲಿ ಅವರು ಮಾತನಾಡಿದರು.
ಎರಡು ದಿನಗಳ ಈ ಕಾರ್ಯಾಗಾರದಲ್ಲಿ ಹಲವು ಅನುಭವ ಹಾಗೂ ಹಲವಾರು ವಿಷಯಗಳನ್ನು ತಿಳಿದುಕೊಂಡಿದ್ದೀರಿ. ಹೆಚ್ಚಿನ ಸಮಯ ಕಚೇರಿಯಲ್ಲಿ ಕಳೆಯದೆ ನಿಮ್ಮ ವ್ವಾಪ್ತಿಯ ಗ್ರಾಮ ಪಂಚಾಯತಿಗಳಿಗೆ ಭೇಟಿ ನೀಡಿ ಎಂದು ಅಧಿಕಾರಿಗಳಿಗೆ ಸೂಚನೆ ನೀಡಿದರು.
ಕಾರ್ಯನಿರ್ವಹಿಸದ ಅಧಿಕಾರಿಗಳ ವಿರುದ್ಧ ಕ್ರಮ ಕೈಗೊಳ್ಳಿ :
ಕೆಳ ಹಂತದ ಅಧಿಕಾರಿಗಳಿಗೆ ಹೊಸ ಯೋಜನೆಗಳ ಅರಿವಿಲ್ಲ ಹಾಗೂ ಕೆಲ ಅಧಿಕಾರಿಗಳು ಯೋಜನೆಯ ಕುರಿತು ಮಾಹಿತಿ ಇದ್ದರೂ ಆಸಕ್ತಿ ತೋರುತ್ತಿಲ್ಲ. ಇನ್ನೂ ಕೆಲವು ಅಧಿಕಾರಿಗಳು ಇತರೆ ವ್ಯವಹಾರಗಳಲ್ಲಿ ತೊಡಗಿರುವುದು ನನ್ನ ಗಮನಕ್ಕೆ ಬಂದಿದೆ. ಇಂತಹ ಬೆಳವಣಿಗೆಯಿಂದ ಗ್ರಾಮಗಳ ಅಭಿವೃದ್ಧಿ ಸಾಧ್ಯವಿಲ್ಲ. ಮುಂದಿನ ಸಭೆಯ ಒಳಗೆ ಅಂತಹ ಅಧಿಕಾರಿಗಳ ವಿರುದ್ಧ ಕ್ರಮ ಕೈಗೊಳ್ಳಬೇಕು ಎಂದು ಹೇಳಿದರು.
ಪಿಡಿಒಗಳಿಗೆ ಹಲವಾರು ಯೋಜನೆಯ ಕುರಿತು ತಿಳುವಳಿಕೆ ಇಲ್ಲ ಯೋಜನೆಗಳನ್ನು ರೂಪಿಸುವುದು ಪ್ರಯೋಜನ ಪಡೆದುಕೊಳ್ಳಲು ಆದರೆ ಅವುಗಳು ಸರಿಯಾಗಿ ಜನರಿಗೆ ತಲುಪುವ ಕೆಲಸಗಳು ಆಗುತ್ತಿಲ್ಲ. ಅದಕ್ಕಾಗಿ ಪ್ರತಿ ತಿಂಗಳು ತರಬೇತಿ ಕಾರ್ಯಕ್ರಮಗಳನ್ನು ಆಯೋಜಿಸಬೇಕು ಎಂದು ಸಿಇಒಗಳಿಗೆ ಗ್ರಾಮೀಣಾಭಿವೃದ್ಧಿ ಮತ್ತು ಪಂಚಾಯತ್ ರಾಜ್ ಇಲಾಖೆಯ ಸಚಿವರಾದ ಕೆ.ಎಸ್.ಈಶ್ವರಪ್ಪ ಸೂಚನೆ ನೀಡಿದರು.
ಗ್ರಾಮ ಪಂಚಾಯತಿಯ ಚುನಾವಣೆಯಲ್ಲಿ ಅಧ್ಯಕ್ಷ ಹಾಗೂ ಉಪಾಧ್ಯಕ್ಷರು, ಸದಸ್ಯರು ಗೆಲುವು ಸಾಧಿಸಿದ್ದಾರೆ. ಆದರೆ, ಅವರ ಕೆಲಸದ ಕುರಿತು ಅವರಿಗೆ ಅರಿವಿಲ್ಲ. ಹಾಗಾಗಿ ಪ್ರತಿ ಗ್ರಾಮ ಪಂಚಾಯತಿಗೆ ನೀವು ಭೇಟಿ ನೀಡುವುದು ಅತಿ ಅವಶ್ಯಕವಾಗಿದೆ ಎಂದು ಅವರು ವಿವಿಧ ಜಿಲ್ಲೆಗಳ ಮುಖ್ಯ ಕಾರ್ಯನಿರ್ವಾಹಕ ಅಧಿಕಾರಿಗಳಿಗೆ ಸೂಚನೆ ನೀಡಿದರು.
ಸುವರ್ಣ ಸೌಧದಲ್ಲಿ ಮತ್ತೊಂದು ಸಭೆಯ ಆಯೋಜನೆ :
ಒಂದು ಗ್ರಾಮದ ಪ್ರತಿ ಯೋಜನೆಯು ಯಾವ ಹಂತದಲ್ಲಿದೆ, ಅದನ್ನು ಎಷ್ಟು ಜನರಿಗೆ ತಲುಪಿಸಲು ಸಾಧ್ಯ ಎಂಬುದರ ಕುರಿತು ಅಂಕಿ-ಅಂಶಗಳ ಮಾಹಿತಿ ಪಡೆದುಕೊಳ್ಳಿ ಹಾಗೂ ಅಭಿವೃದ್ಧಿ ಕಾಣದ ಗ್ರಾಮ ಪಂಚಾಯತಿಯ ಸಮಸ್ಯೆಗಳನ್ನು ತಿಳಿದುಕೊಂಡು ಪರಿಹಾರ ಕ್ರಮಗಳನ್ನು ಕೈಗೊಳ್ಳಿ ಮತ್ತು ಪ್ರತಿ ಗ್ರಾಮ ಪಂಚಾಯತಿ ಜಿಲ್ಲೆಗಳು ಮುಂದಿನ ಸಭೆಯಲ್ಲಿ ಪ್ರಗತಿ ಸಾಧಿಸಬೇಕು ಎಂದು ಹೇಳಿದರು.
ಮುಂದಿನ ೩ ತಿಂಗಳ ಅವಧಿಯಲ್ಲಿ ಮತ್ತೊಮ್ಮೆ ಎಲ್ಲ ಜಿಲ್ಲೆಗಳ ಮುಖ್ಯ ಕಾರ್ಯನಿರ್ವಾಹಕ ಅಧಿಕಾರಿಗಳ ಸಭೆಯನ್ನು ಆಯೋಜಿಸಲಾಗುವುದು. ಈ ಅವಧಿಯಲ್ಲಿ ಬಾಕಿ ಇರುವ ಕಾಮಗಾರಿ ಮುಗಿಸಲು ಪ್ರಯತ್ನಿಸಿ ಕಾಮಗಾರಿಗಳು ಮಾಡದೆ ಇರುವಂತಹ ಅಧಿಕಾರಿಗಳ ವಿರುದ್ಧ ಎಲ್ಲಾ ರೀತಿಯ ಕಠಿಣ ಕ್ರಮ ಕೈಗೊಳ್ಳಲು ಸಿಇಓ ಗಳಿಗೆ ಎಲ್ಲಾ ರೀತಿಯ ಹಕ್ಕನ್ನು ನೀಡಲಾಗಿದೆ ಹಾಗೂ ಮುಂದಿನ ಸಭೆಯೊಳಗೆ ಸರ್ವಾಂಗೀಣ ಪ್ರಗತಿ ಸಾಧಿಸಬೇಕು ಎಂದು ಗ್ರಾಮೀಣಾಭಿವೃದ್ಧಿ ಮತ್ತು ಪಂಚಾಯತ್ ರಾಜ್ ಇಲಾಖೆಯ ಸಚಿವರಾದ ಕೆ.ಎಸ್.ಈಶ್ವರಪ್ಪ ತಿಳಿಸಿದರು.
ಗ್ರಾ.ಪಂ. ಅನುದಾನ ಹಂಚಿಕೆ ಪುಸ್ತಕ ಬಿಡುಗಡೆ :
೨ ನೇಯ ದಿನದ ಕಾರ್ಯಗಾರದಲ್ಲಿ ಬಿಡುಗಡೆಗೊಳಿಸಿದ “ಗ್ರಾಮ ಪಂಚಾಯತ ಅನುದಾನ ಹಂಚಿಕೆ ಪುಸ್ತಕ” ಹಾಗೂ “ಮಾತುಕತೆ” ಮಾಸಿಕ ಪತ್ರಿಕೆಯ ಕುರಿತು ಪ್ರಾಸ್ತಾವಿಕ ನುಡಿಗಳನ್ನಾಡಿದ ಗ್ರಾಮೀಣಾಭಿವೃದ್ಧಿ ಮತ್ತು ಪಂಚಾಯತ್ ರಾಜ್ ಇಲಾಖೆಯ ಪ್ರಧಾನ ಕಾರ್ಯದರ್ಶಿಗಳು ಹಾಗೂ ಜಿಲ್ಲಾ ಉಸ್ತುವಾರಿ ಕಾರ್ಯದರ್ಶಿಗಳಾದ ಎಲ್.ಕೆ.ಅತೀಕ್ ಅವರು, ಗ್ರಾಮ ಪಂಚಾಯತ ಅನುದಾನ ಹಂಚಿಕೆ ಪುಸ್ತಕವು ಗ್ರಾಮ ಪಂಚಾಯತಿಗಳಲ್ಲಿ ಲಭ್ಯವಿರುವ ಸಂಪನ್ಮೂಲಗಳ ಬಳಕೆಯ ಮಾಹಿತಿ ನೀಡಲಿದೆ.
ಗ್ರಾಮ ಪಂಚಾಯತ ಅನುದಾನ ಹಂಚಿಕೆ ಪುಸ್ತಕವು ಗ್ರಾಮೀಣ ಭಾಗಗಳಲ್ಲಿ ಯೋಜನೆಗಳನ್ನು ರೂಪಿಸಲು ಸಹಕಾರಿಯಾಗಿದೆ. ಮುಖ್ಯ ಕಾರ್ಯನಿರ್ವಾಹಕ ಅಧಿಕಾರಿಗಳು ಎಲ್ಲ ಗ್ರಾಮ ಪಂಚಾಯತಿಗಳಿಗೆ ಪುಸ್ತಕ ತಲುಪುವಂತೆ ನೋಡಿಕೊಳ್ಳಬೇಕು ಎಂದು ಗ್ರಾಮೀಣಾಭಿವೃದ್ಧಿ ಮತ್ತು ಪಂಚಾಯತ್ ರಾಜ್ ಇಲಾಖೆಯ ಪ್ರಧಾನ ಕಾರ್ಯದರ್ಶಿಗಳು ಹಾಗೂ ಜಿಲ್ಲಾ ಉಸ್ತುವಾರಿ ಕಾರ್ಯದರ್ಶಿಗಳಾದ ಎಲ್.ಕೆ.ಅತೀಕ್ ಅಧಿಕಾರಿಗಳಿಗೆ ತಿಳಿಸಿದರು.
ವಿಕೇಂದ್ರೀಕರಣ ವ್ಯವಸ್ಥೆಯಲ್ಲಿ ಯೋಜನೆಗಳ ಪ್ರತಿಯೊಂದು ಅನುದಾನದ ಬಳಕೆಯ ಅಂಕಿ-ಅಂಶಗಳು ಲಭ್ಯವಿದ್ದು,ದೂರದೃಷ್ಟಿ ಯೋಜನೆಯನ್ನು ರೂಪಿಸಲು ಸಹಕಾರಿಯಾಗಿದೆ. ಅದೇ ರೀತಿ, ಪ್ರತಿ ಗ್ರಾಮ ಪಂಚಾಯತಿಗಳಲ್ಲಿ ಈ ರೀತಿ ಅನುದಾನ ಬಳಕೆಯ ಅಂಕಿ -ಅಂಶಗಳನ್ನು ನೀಡುವುದರಿಂದ ಸಂಪನ್ಮೂಲದ ಪ್ರಮಾಣ ತಿಳಿಸುತ್ತದೆ. ದೂರದೃಷ್ಟಿ ಕೋನ, ಅನುದಾನದ ಸವಾಲುಗಳು, ಅನುದಾನದ ಬೇಡಿಕೆ, ಲಭ್ಯವಿರುವ ಅನುದಾನದ ಕುರಿತು ಚಿತ್ರಣ ನೀಡಲಿದೆ ಎಂದು ಅವರು ತಿಳಿಸಿದರು.
ಕಾರ್ಯಾಗಾರದಲ್ಲಿ ಕರ್ನಾಟಕ ರಾಜ್ಯ ವಿಕೇಂದ್ರೀಕರಣ ಯೋಜನೆ ಮತ್ತು ಅಭಿವೃದ್ಧಿ ಸಮಿತಿಯ ಉಪಾಧ್ಯಕ್ಷರಾದ ಪ್ರಮೋದ ಹೆಗಡೆ ದೂರ ದೃಷ್ಟಿ ಯೋಜನೆ ತಯಾರಿಕೆಯ ಕುರಿತು ವಿವರಿಸಿದರು.
ಇ-ಆಡಳಿತದ ನಿರ್ದೇಶಕರಾದ ಶಿಲ್ಪಾನಾಗ್ ಅವರು ಬಾಪೂಜಿ ಸೇವಾ ಕೇಂದ್ರಗಳ ಬಲವರ್ಧನೆಯ ಕುರಿತು ಮುಖ್ಯ ಕಾರ್ಯನಿರ್ವಾಹಕ ಅಧಿಕಾರಿಗಳಿಗೆ ವಿವರಿಸಿದರು.
ಕೆರೆಗಳ ಪುನಶ್ಚೇತನದಲ್ಲಿ ಮುಖ್ಯ ಕಾರ್ಯನಿರ್ವಾಹಕ ಅಧಿಕಾರಿಗಳ ಪಾತ್ರದ ಕುರಿತು ಶಿವಾನಂದ ಕಳವೆ ಉಪನ್ಯಾಸ ನೀಡಿದರು.
ಕಾರ್ಯಾಗಾರದಲ್ಲಿ ಬೆಳಗಾವಿ ಜಿಲ್ಲಾ ಪಂಚಾಯತ ಮುಖ್ಯ ಕಾರ್ಯನಿರ್ವಾಹಕ ಅಧಿಕಾರಿ ದರ್ಶನ್ ಎಚ್.ವಿ. ಸೇರಿದಂತೆ ರಾಜ್ಯದ ವಿವಿಧ ಜಿಲ್ಲೆಗಳ ಮುಖ್ಯ ಕಾರ್ಯನಿರ್ವಾಹಕ ಅಧಿಕಾರಿಗಳು ಉಪಸ್ಥಿತರಿದ್ದರು.
ಕಾಮಗಾರಿಗಳ ಪ್ರಗತಿ ವೀಕ್ಷಿಸಿದ ಸಚಿವ ಕೆ.ಎಸ್.ಈಶ್ವರಪ್ಪ
ರಾಜ್ಯದ ಎಲ್ಲ ಮುಖ್ಯ ಕಾರ್ಯನಿರ್ವಾಹಕ ಅಧಿಕಾರಿಗಳ ೨ ದಿನದ ಕಾರ್ಯಾಗಾರದ ಸಮಾರೋಪ ಕಾರ್ಯಕ್ರಮದ ನಂತರ ಗ್ರಾಮೀಣಾಭಿವೃದ್ಧಿ ಮತ್ತು ಪಂಚಾಯತ್ ರಾಜ್ ಇಲಾಖೆಯ ಸಚಿವರಾದ ಕೆ.ಎಸ್.ಈಶ್ವರಪ್ಪ ಅವರು ಗ್ರಾಮ ಪಂಚಾಯತ್‌ನ ವಿವಿಧ ಯೋಜನೆಗಳ ಅಡಿಯಲ್ಲಿ ಕೈಗೊಂಡಿರುವ ಅಭಿವೃದ್ಧಿ ಕಾರ್ಯಗಳನ್ನು ವೀಕ್ಷಿಸಿದರು.
ಬೆಳಗಾವಿ ಜಿಲ್ಲೆಯ ಕಾಕತಿ-ಹೊನಗಾ ಗ್ರಾಮಗಳಲ್ಲಿ ಕೆರೆ ಅಭಿವೃದ್ಧಿ ವೀಕ್ಷಿಸಿದರು. ಬಳಿಕ, ಭೂತರಾಮನಹಟ್ಟಿಯ ರಾಣಿ ಚೆನ್ನಮ್ಮ ಕಿರು ಮೃಗಾಲಯಕ್ಕೆ ಭೇಟಿ ನೀಡಿ, ನರೇಗಾ ಯೋಜನೆಯಡಿಯಲ್ಲಿ ಕೈಗೊಂಡ ಕೆರೆ ನಿರ್ಮಾಣದ ಕುರಿತು ಮೆಚ್ಚುಗೆ ವ್ಯಕ್ತಪಡಿಸಿದರು.
ಈ ಸಂದರ್ಭದಲ್ಲಿ ಗ್ರಾಮೀಣಾಭಿವೃದ್ಧಿ ಮತ್ತು ಪಂಚಾಯತ್ ರಾಜ್ ಇಲಾಖೆಯ ಪ್ರಧಾನ ಕಾರ್ಯದರ್ಶಿಗಳು ಹಾಗೂ ಜಿಲ್ಲಾ ಉಸ್ತುವಾರಿ ಕಾರ್ಯದರ್ಶಿಗಳಾದ ಎಲ್.ಕೆ.ಅತೀಕ್, ಉಪ ಅರಣ್ಯ ಸಂರಕ್ಷಣಾಧಿಕಾರಿ ಹರ್ಷ, ಮೃಗಾಲಯದ ವ್ಯವಸ್ಥಾಪಕರಾದ ರಾಕೇಶ್ ಅರ್ಜುನವಾಡ, ಬೆಳಗಾವಿ ಜಿಲ್ಲಾ ಪಂಚಾಯತ ಮುಖ್ಯ ಕಾರ್ಯನಿರ್ವಾಹಕ ಅಧಿಕಾರಿ ದರ್ಶನ್ ಎಚ್.ವಿ. ಸೇರಿದಂತೆ ರಾಜ್ಯದ ವಿವಿಧ ಜಿಲ್ಲೆಗಳ ಮುಖ್ಯ ಕಾರ್ಯನಿರ್ವಾಹಕ ಅಧಿಕಾರಿಗಳು ಉಪಸ್ಥಿತರಿದ್ದರು.
ಜಲಾಶಯ ಆವರಣದಲ್ಲಿ ಉದ್ಯಾನವನ – ಶಶಿಕಲಾ ಜೊಲ್ಲೆ
ಪ್ರಗತಿವಾಹಿನಿ ಸುದ್ದಿಗಳನ್ನು ನಿಮ್ಮ ಸ್ನೇಹಿತರಿಗೆ, ಬೇರೆ ಗ್ರುಪ್ ಗಳಿಗೆ ಶೇರ್ ಮಾಡಿ