
ಪ್ರಗತಿವಾಹಿನಿ ಸುದ್ದಿ, ನಿಪ್ಪಾಣಿ: “ತ್ಯಾಗದ ಸಂಕೇತ ಕೇಸರಿ ಕಂಡರೆ ಆಗದ, ಜಾತಿ ಜಾತಿಗಳಲ್ಲಿ ವಿಷ ಬೀಜ ಬಿತ್ತಿದ ಕಾಂಗ್ರೆಸ್ ಪಕ್ಷ ಈ ಬಾರಿಯು ನೆಲಕಚ್ಚುವುದು ನಿಶ್ಚಿತ” ಎಂದು ರಾಷ್ಟ್ರೀಯ ಪ್ರಧಾನ ಕಾರ್ಯದರ್ಶಿ ಸಿ.ಟಿ. ರವಿ ಹೇಳಿದರು.

ನಗರದ ಚನ್ನಮ್ಮ ವೃತ್ತದಲ್ಲಿ ಬಿಜೆಪಿ ವಿಜಯ ಸಂಕಲ್ಪ ಯಾತ್ರೆಯನ್ನುದ್ದೇಶಿಸಿ ಮಾತನಾಡಿದ ಅವರು, “ಭಾರತ ದೇಶದಲ್ಲಿ ಮಹಿಳೆಯರಿಗೆ ಕೊಡುವಷ್ಟು ಗೌರವ ಯಾವ ದೇಶದಲ್ಲೂ ನೀಡುವುದಿಲ್ಲ. ನಿಪ್ಪಾಣಿಯ ಜನ ತಮ್ಮ ಮನೆ ಮಗಳನ್ನು ಈ ಬಾರಿ ಅತ್ಯಧಿಕ ಮತಗಳ ಅಂತರದಿಂದ ಆಯ್ಕೆ ಮಾಡಿ ಜಯ ತಂದುಕೊಡಲಿದ್ದಾರೆ” ಎಂದರು.
ಜತ್ರಾಟವೇಸ್‌ನಲ್ಲಿ ಡಾ. ಅಂಬೇಡ್ಕರರ ಪ್ರತಿಮೆಗೆ ಪುಷ್ಪಹಾರ ಹಾಕಿ ವಿಜಯ ಸಂಕಲ್ಪ ಯಾತ್ರೆಗೆ ಚಾಲನೆ ನೀಡಿದ ಮಾಜಿ ಮುಖ್ಯಮಂತ್ರಿ, ಬಿ.ಎಸ್.ಯಡಿಯೂರಪ್ಪ, “ಪ್ರಧಾನಿ ನರೇಂದ್ರ ಮೋದಿಯವರ ಅಪೇಕ್ಷೆಯಂತೆ ದೇಶದ ಉದ್ದ-ಅಗಲಕ್ಕೂ ಬಿಜೆಪಿ ಪಕ್ಷದ ಅಧಿಕಾರದ ಚುಕ್ಕಾಣಿ ಹಿಡಿಯುತ್ತಿದೆ. ಕಾರ್ಯಕರ್ತರೆಲ್ಲರೂ ಒಗ್ಗೂಡಿ ಜಿಲ್ಲೆಯಲ್ಲಿ ಪಕ್ಷದ ಎಲ್ಲ ಅಭ್ಯರ್ಥಿಗಳನ್ನು ಗೆಲ್ಲಿಸಿ ಪಕ್ಷಕ್ಕೆ ಉತ್ತಮ ಕೊಡುಗೆ ನೀಡಿ” ಎಂದು ಮನವಿ ಮಾಡಿಕೊಂಡರು.
ವಿಧಾನ ಪರಿಷತ್ ಸದಸ್ಯ ಲಕ್ಷ್ಮಣ ಸವದಿ ಮಾತನಾಡಿ, “ಬಿಜೆಪಿ ಕಾರ್ಯಕರ್ತರು ಯಾವ ಆಮಿಷಕ್ಕೂ, ಯಾರ ಒತ್ತಡಕ್ಕೂ ಒಳಗಾಗುವುದಿಲ್ಲ. ಬರುವ ಚುನಾವಣೆಯಲ್ಲಿ ನಿಪ್ಪಾಣಿ ಮತಕ್ಷೇತ್ರದ ಜನ ಶಶಿಕಲಾ ಜೊಲ್ಲೆಯವರನ್ನು ವಿಧಾನಸೌಧದ ಮೂರನೆ ಮಹಡಿಯಲ್ಲಿ ನೋಡಲಿದ್ದಾರೆ” ಎಂದರು.

ಜಿಲ್ಲಾ ಉಸ್ತುವಾರಿ ಸಚಿವ ಗೋವಿಂದ ಕಾರಜೋಳ ಮಾತನಾಡಿ, “ಕಾಂಗ್ರೆಸ್ ಪಕ್ಷ ಮಾಡುತ್ತಿರುವ ಟೀಕೆಗಳಿಗೆ ಯಾವುದೇ ಅರ್ಥವಿಲ್ಲ. ಸುಳ್ಳು ಆರೋಪಕ್ಕೆ ಜನರು ಕಿಮ್ಮತ್ತು ಕೊಡುವುದಿಲ್ಲ. ಸುಖಾ ಸುಮ್ಮನೆ ತಳ ಬುಡವಿಲ್ಲದೇ ಟೀಕೆ, ಆರೋಪಗಳನ್ನು ಮಾಡುವುದನ್ನು ಕಾಂಗ್ರೆಸ್ ಬಿಡಬೇಕು” ಎಂದರು.
“ಕಳೆದ 9 ವರ್ಷಗಳಲ್ಲಿ ಪ್ರದಾನಮಂತ್ರಿ ನರೇಂದ್ರ ಮೋದಿ ಅವರು ಮಾಡಿರುವ ಕಾರ್ಯಗಳಿಗೆ ಇಡೀ ಜಗತ್ತೇ ಮೆಚ್ಚುಗೆ ಸೂಚಿಸಿದೆ. ಆದ್ರೆ ಕಾಂಗ್ರೆಸ್ ಮಾತ್ರ ಹುರುಳಿಲ್ಲದ ಆರೋಪ ಮಾಡುತ್ತಿದೆ. ಮೋದಿ ನೇತೃತ್ವದಲ್ಲಿ ದೇಶ, ಯಡಿಯೂರಪ್ಪ ಅವರ ನೇತೃತ್ವದಲ್ಲಿ ರಾಜ್ಯ ಅಭಿವೃದ್ಧಿ ಕಂಡಿದ್ದು, ಇತ್ತೀಚೆಗೆ ಬೆಳಗಾವಿಯಲ್ಲಿ ನಡೆದ ಚಳಿಗಾಲದ ಅಧಿವೇಶನದಲ್ಲಿ 5700 ಕೋಟಿ ರೂ. ಮೊತ್ತದ ಉತ್ತರ ಕರ್ನಾಟಕದ 13 ಏತ ನೀರಾವರಿ ಯೋಜನೆಗಳಿಗೆ ಅನುಮೋದನೆ ನೀಡಲಾಗಿದೆ. ನಿಪ್ಪಾಣಿಯಲ್ಲಿ ಮತ್ತೇ ಶಶಿಕಲಾ ಜೊಲ್ಲೆ ವಿಜಯಿಯಾಗಿ, ಮತ್ತೆ ಸಚಿವರಾಗುತ್ತಾರೆ ಎಂದು ಭರವಸೆ ನೀಡಿದರು.

ಮುಜರಾಯಿ, ಹಜ್ ಮತ್ತು ವಕ್ಫ್ ಸಚಿವೆ ಶಶಿಕಲಾ ಜೊಲ್ಲೆ ಪ್ರಾಸ್ತಾವಿಕ ಮಾತನಾಡಿ, “ಅಂತಾರಾಷ್ಟ್ರೀಯ ಮಹಿಳಾ ದಿನಾಚರಣೆಯಂದು ನನ್ನ ಕ್ಷೇತ್ರದಲ್ಲಿ ಬಿಜೆಪಿ ವಿಜಯ ಸಂಕಲ್ಪ ಯಾತ್ರೆ ಕೈಗೊಂಡಿದ್ದು ಹೆಮ್ಮೆಯ ಸಂಗತಿಯಾಗಿದ್ದು, ಪ್ರತಿಯೊಬ್ಬರಲ್ಲಿ ನಮ್ಮ ದೇಶ, ನಮ್ಮ ಧರ್ಮ ಎಂಬ ಅಭಿಮಾನ ಬೆಳೆಯಬೇಕಿದೆ. ರಾಮ ಮಂದಿರ ನಿರ್ಮಾಣಕ್ಕಾಗಿ ಆಡ್ವಾಣಿ ಅವರು ಹೇಗೆ ರಥಯಾತ್ರೆ ಮಾಡಿದ್ದರೋ, ಹಾಗೇಯೆ 2023ರಲ್ಲಿ ಕರ್ನಾಟಕದಲ್ಲಿ ಮತ್ತೇ ಬಿಜೆಪಿ ಅಧಿಕಾರಕ್ಕೆ ತರೋದೇ ಈ ವಿಜಯ ಸಂಕಲ್ಪಯಾತ್ರೆಯ ಧ್ಯೇಯವಾಗಿದೆ. ತಮ್ಮ ಮನೆಯ ಮಗಳಾದ ನನ್ನನ್ನು ಮೂರನೇ ಬಾರಿ ಆಯ್ಕೆ ಮಾಡಿ” ಎಂದು ಮತದಾರರಲ್ಲಿ ವಿನಂತಿಸಿಕೊಂಡರು.

“ನಮ್ಮ ಯಾತ್ರೆಯಲ್ಲಿ ಉತ್ಸಾಹದಿಂದ ಜನರು ಸೇರುತ್ತಿದ್ದಾರೆ. ಬಿಜೆಪಿ ಪರ ವಾತಾವರಣವಿದ್ದು ಬಿಜಿಪಿ ಸರಕಾರವೇ ರಚನೆಯಾಗಲಿದೆ. ನರೇಂದ್ರ ಮೋದಿಯವರು ಕಿಸಾನ್ ಸಮ್ಮಾನ್ ಯೋಜನೆ, ಜನೌಷಧಿ ಮತ್ತಿತರ ಹಲವು ಯೋಜನೆಗಳನ್ನು ಜನಹಿತಕ್ಕಾಗಿ ಜಾರಿಗೊಳಿಸಿದ್ದಾರೆ. ರಾಜ್ಯದಲ್ಲೂ ವಿದ್ಯಾನಿಧಿ ಯೋಜನೆ ಅನುಷ್ಠಾನಕ್ಕೆ ತರಲಾಗಿದೆ. ಕಾಂಗ್ರೆಸ್ಸಿಗರು ಸುಳ್ಳಿನ ಸರದಾರರು. ನಮ್ಮ ಸರಕಾರ ನುಡಿದಂತೆ ನಡೆದಿದೆ” ಎಂದು ಲಕ್ಷ್ಮಣ ಸವದಿ ಹೇಳಿದರು.
ಕಾರ್ಯಕ್ರಮಕ್ಕಿಂತ ಮೊದಲು ನಿಪ್ಪಾಣಿ ಪಟ್ಟಣದ ಪ್ರಮುಖ ಬೀದಿಗಳಲ್ಲಿ ಸುಮಾರು 3 ಕಿಮೀ ವರೆಗೆ ರೋಡ್ ಷೋ ನಡೆಯಿತು. ಮಹಿಳೆಯರು ಪೇಟಾ ತೊಟ್ಟು ವಾದ್ಯ ಮೇಳದೊಂದಿಗೆ ರೋಡ್ ಶೋನಲ್ಲಿ ಭಾಗವಹಿಸಿದ್ದರು. ರೋಡ್ ಶೋ ಮಧ್ಯೆ ಶಿವಾಜಿ ಮಹಾರಾಜರು, ಬಸವಣ್ಣನವರು ಹಾಗೂ ಕಿತ್ತೂರು ಚನ್ನಮ್ಮನ ಮೂರ್ತಿಗೆ ಮಾಲಾರ್ಪಣೆ ಮಾಡಲಾಯಿತು.

ಸಂಸದ ಅಣ್ಣಾಸಾಹೇಬ್ ಜೊಲ್ಲೆ, ವಿಧಾನ ಪರಿಷತ್ ಮಾಜಿ ಸದಸ್ಯ ಅರುಣ ಶಹಾಪುರ, ಮಹಾಂತೇಶ ಕವಟಗಿಮಠ, ನಗರಸಭೆ ಅಧ್ಯಕ್ಷ ಜಯವಂತ ಬಾಟಲೆ, ಬಿಜೆಪಿ ಜಿಲ್ಲಾಧ್ಯಕ್ಷ ಡಾ. ರಾಜೇಶ ನೇರ್ಲಿ, ಮಾಜಿ ಸಚಿವ ಶಶಿಕಾಂತ ನಾಯಕ, ರಾಜ್ಯ ಕಾರ್ಯದರ್ಶಿ ಉಜ್ವಲಾ ಬಡವನಾಚೆ, ವಿಜಯ ಸಂಕಲ್ಪ ಯಾತ್ರೆಯ ಮಾಧ್ಯಮ ಸಂಚಾಲಕ ಎಫ್.ಎಸ್.ಸಿದ್ದನಗೌಡರ, ಸಾಮಾಜಿಕ ಜಾಲತಾಣದ ರಾಜ್ಯ ಸಮಿತಿ ಸದಸ್ಯ ರಾಘವೇಂದ್ರ ನಾಗೂರ, ನಿತೀನ್ ಚೌಗಲೆ ಇದ್ದರು.
ಪ್ರಗತಿವಾಹಿನಿ ಸುದ್ದಿಗಳನ್ನು ನಿಮ್ಮ ಸ್ನೇಹಿತರಿಗೆ, ಬೇರೆ ಗ್ರುಪ್ ಗಳಿಗೆ ಶೇರ್ ಮಾಡಿ