ಪ್ರಗತಿವಾಹಿನಿ ಸುದ್ದಿ, ಬೆಳಗಾವಿ – ಕೇಂದ್ರ ರೈಲ್ವೆ ಖಾತೆ ರಾಜ್ಯ ಸಚಿವರಾಗಿದ್ದ ಸುರೇಶ ಅಂಗಡಿ ಅವರ ನಿಧನದಿಂದಾಗಿ ಬೆಳಗಾವಿ ಲೋಕಸಭಾಕ್ಷೇತ್ರಕ್ಕೆ ನಡೆಯಲಿರುವ ಉಪಚುನಾವಣೆಗೆ ಅಭ್ಯರ್ಥಿ ಆಯ್ಕೆಗೆ ಕಾಂಗ್ರೆಸ್ ಪ್ರಮುಖರ ಮಹತ್ವದ ಸಭೆ ಇಂದು ಸಂಜೆ ಬೆಳಗಾವಿಯಲ್ಲಿ ನಡೆಯಲಿದೆ.
ಸಂಜೆ 4 ಗಂಟೆಗೆ ಬೆಳಗಾವಿ ಗ್ರಾಮೀಣ ಜಿಲ್ಲಾ ಕಾಂಗ್ರೆಸ್ ಭವನ ಉದ್ಘಾಟನೆ ಕಾರ್ಯಕ್ರಮದ ನಂತರ ಈ ಸಭೆ ನಡೆಯಲಿದೆ. ಕೆಪಿಸಿಸಿ ಅಧ್ಯಕ್ಷ ಡಿ.ಕೆ.ಶಿವಕುಮಾರ, ಮಾಜಿ ಮುಖ್ಯಮಂತ್ರಿ ಹಾಗೂ ವಿಧಾನಸಭೆ ವಿರೋಧ ಪಕ್ಷದ ನಾಯಕ ಸಿದ್ದರಾಮಯ್ಯ, ವಿಧಾನಪರಿಷತ್ ವಿರೋಧ ಪಕ್ಷದ ನಾಯಕ ಎಸ್.ಆರ್.ಪಾಟೀಲ, ಕೆಪಿಸಿಸಿ ಕಾರ್ಯಾಧ್ಯಕ್ಷರಾದ ಸತೀಶ್ ಜಾರಕಿಹೊಳಿ, ಈಶ್ವರ ಖಂಡ್ರೆ, ಕೆಪಿಸಿಸಿ ವಕ್ತಾರರಾದ ಲಕ್ಷ್ಮಿ ಹೆಬ್ಬಾಳಕರ್ ಮೊದಲಾದವರು ಸಭೆಯಲ್ಲಿ ಪಾಲ್ಗೊಳ್ಳಲಿದ್ದಾರೆ.
ಬೆಳಗಾವಿ ಲೋಕಸಭಾ ಕ್ಷೇತ್ರಕ್ಕೆ ಕಳೆದ ಚುನಾವಣೆಯಲ್ಲಿ ವಿ.ಎಸ್.ಸಾಧುನವರ್ ಸ್ಪರ್ಧಿಸಿದ್ದರು ಆದರೆ ಅವರು ಭಾರಿ ಅಂತರದಿಂದ ಪರಾಭವಗೊಂಡ ಹಿನ್ನೆಲೆಯಲ್ಲಿ ಮತ್ತೆ ಅವರಿಗೆ ಟಿಕೆಟ್ ಕೊಡುವ ಸಾಧ್ಯತೆ ಇಲ್ಲ. ಶಾಸಕ ಹಾಗೂ ಕೆಪಿಸಿಸಿ ಕಾರ್ಯಾಧ್ಯಕ್ಷ ಸತೀಶ್ ಜಾರಕಿಹೊಳಿ ಹೆಸರು ಕೇಳಿ ಬಂದಿದೆಯಾದರೂ ಅವರು ಸಧ್ಯಕ್ಕೆ ಕೇಂದ್ರ ರಾಜಕಾರಣಕ್ಕೆ ಹೋಗುವ ಸಾಧ್ಯತೆ ಕಡಿಮೆ. ಮಾಜಿ ಶಾಸಕ ಅಶೋಕ ಪಟ್ಟಣ ಹೆಸರು ಕೇಳಿ ಬಂದಿದೆಯಾದರೂ ಅವರು ಜಿಲ್ಲೆಯ ಇತರ ಭಾಗದಲ್ಲಿ ಅಷ್ಟೇನೂ ಜನಪ್ರಿಯರಾಗಿಲ್ಲ.
ಮಾಜಿ ಸಂಸದ ಪ್ರಕಾಶ ಹುಕ್ಕೇರಿ ಕಳೆದ ಚುನಾವಣೆಯಲ್ಲಿ ಚಿಕ್ಕೋಡಿ ಬದಲು ಬೆಳಗಾವಿ ಟಿಕೆಟ್ ಕೇಳಿದ್ದರು. ಆದರೆ ಅವರಿಗೆ ನೀಡಿರಲಿಲ್ಲ. ಅಲ್ಲಿ ಪರಾಭವಗೊಂಡರು. ಈಗಲೂ ಅವರು ಬೆಳಗಾವಿ ಟಿಕೆಟ್ ಕೇಳುವ ಸಾಧ್ಯತೆ ಇದೆ. ಆದರೆ ಅವರು ತಮ್ಮ ಕಾರ್ಯಕ್ಷೇತ್ರವನ್ನು ಚಿಕ್ಕೋಡಿಗೆ ಸೀಮಿತಗೊಳಿಸಿಕೊಂಡಿದ್ದರಿಂದ ಬೆಳಗಾವಿ ಕ್ಷೇತ್ರ ವ್ಯಾಪ್ತಿಯಲ್ಲಿ ಅವರಿಗೆ ಅವಕಾಶ ಕಡಿಮೆ.
ಶಾಸಕಿ ಲಕ್ಷ್ಮಿ ಹೆಬ್ಬಾಳಕರ್ ಹೆಸರು ಬಲವಾಗಿ ಕೇಳಿ ಬಂದಿದ್ದು, ಅವರು ಈ ಹಿಂದೆ 2014ರಲ್ಲಿ ಸುರೇಶ ಅಂಗಡಿ ವಿರುದ್ಧ ಸ್ಪರ್ಧಿಸಿ ಅಲ್ಪ ಮತಗಳಿಂದ ಸೋಲು ಅನುಭವಿಸಿದ್ದರು. ಹಾಗಾಗಿ ಸಂಪೂರ್ಣ ಕ್ಷೇತ್ರದಲ್ಲಿ ಅವರು ಹಿಡಿತ ಹೊಂದಿದ್ದಾರೆ. ಜೊತೆಗೆ ಬೆಳಗಾವಿ ಗ್ರಾಮೀಣ ಕ್ಷೇತ್ರದಲ್ಲಿ ಅದ್ವಿತೀಯ ಅಭಿವೃದ್ಧಿ ಕಾರ್ಯ ನಡೆಸಿ ಹೆಸರು ಗಳಿಸಿದ್ದಾರೆ. ಕ್ಷೇತ್ರದಲ್ಲಿ ಮನೆಮಗಳೆನಿಸಿದ್ದಾರೆ. ಆದರೆ ಅವರು ಸಧ್ಯಕ್ಕೆ ರಾಷ್ಟ್ರ ರಾಜಕಾರಣಕ್ಕೆ ಹೋಗುವ ಮನಸ್ಸು ಮಾಡುತ್ತಾರೆಯೇ ಎನ್ನುವುದು ಪ್ರಶ್ನೆ.
ಈ ಎಲ್ಲ ಹಿನ್ನೆಲೆ ಇಟ್ಟುಕೊಂಡು ಕಾಂಗ್ರೆಸ್ ಗೆಲ್ಲುವ ಕುದುರೆಗಾಗಿ ಹುಡುಕಾಟ ನಡೆಸಿದೆ. ಹಳಬರಲ್ಲೇ ಯಾರನ್ನಾದರೂ ಕಣಕ್ಕಿಳಿಸುತ್ತಾರೋ ಅಥವಾ ಕ್ಷೇತ್ರದಲ್ಲಿ ಜನಪ್ರಿಯರಾಗಿರುವ, ಲಿಂಗಾಯತ ಸಮುದಾಯದ, ‘ಸೈಲೆಂಟ್ ವರ್ಕರ್’ ಹೊಸಮುಖವನ್ನೇನಾದರೂ ಪರಿಚಯಿಸುತ್ತಾರೋ ಎನ್ನುವುದನ್ನು ಕಾದುನೋಡಬೇಕಾಗಿದೆ.
ಒಟ್ಟಿನಲ್ಲಿ ಇಂದಿನ ಸಭೆ ಮಹತ್ವದ್ದಾಗಿದ್ದು, ಎಲ್ಲ ನಾಯಕರ ಅಭಿಪ್ರಾಯ ಹೊತ್ತು ಡಿ.ಕೆ.ಶಿವಕುಮಾರ ಮತ್ತು ಸಿದ್ದರಾಮಯ್ಯ ತೆರಳಲಿದ್ದಾರೆ.
ಡಿ.ಕೆ.ಶಿವಕುಮಾರ, ಸಿದ್ದರಾಮಯ್ಯ ಸೇರಿದಂತೆ ಪ್ರಮುುಖರೆಲ್ಲ ಇಂದು ಬೆಳಗ್ಗೆಯೇ ಬೆಳಗಾವಿಗೆ ಆಗಮಿಸಿದ್ದು, ಸಧ್ಯ ಘಟಪ್ರಭಾದಲ್ಲಿ ಕಾರ್ಯಕ್ರಮದಲ್ಲಿ ಪಾಲ್ಗೊಂಡಿದ್ದಾರೆ.
ಪ್ರಗತಿವಾಹಿನಿ ಸುದ್ದಿಗಳನ್ನು ನಿಮ್ಮ ಸ್ನೇಹಿತರಿಗೆ, ಬೇರೆ ಗ್ರುಪ್ ಗಳಿಗೆ ಶೇರ್ ಮಾಡಿ