Kannada News

ನಿರಂತರ ಮಳೆಯಲ್ಲೂ ವಿದ್ಯಾರ್ಥಿಗಳ ಪ್ರತಿಭಟನೆ

ನಿರಂತರ ಮಳೆಯಲ್ಲೂ ವಿದ್ಯಾರ್ಥಿಗಳ ಪ್ರತಿಭಟನೆ, ಹೆಚ್ಚಾದ ಪ್ರತಿಭಟನೆ ಕಾವು

ಪ್ರಗತಿವಾಹಿನಿ ಸುದ್ದಿ : ಶೇಖರ ಕಲ್ಲೂರ ಚನ್ನಮ್ಮನ ಕಿತ್ತೂರು. ತಾಲೂಕಾಗಿ 7 ವರ್ಷ ಕಳೆದರು ಕಿತ್ತೂರಿಗೆ ಸರಿಯಾಗಿ ಬಸ್ ವ್ಯವಸ್ಥೆಯಾಗಿಲ್ಲ. ದಿನದಿಂದ ದಿನಕ್ಕೆ ಬೆಳೆಯುತ್ತಿರುವ ತಾಲೂಕಿನಲ್ಲಿ ಜನಪ್ರತಿನಿಧಿಗಳು ಹಾಗೂ ಅಧಿಕಾರಿಗಳ ನಿರ್ಲಕ್ಷತೆಯಿಂದ ಕ್ಷೇತ್ರದಲ್ಲಿ ಬಸ್ ಸಮಸ್ಯೆ ಕುರಿತು ಪ್ರತಿದಿನ ವಿವಿಧಡೆ ಪ್ರತಿಭಟನೆ ಕಾವು ಹೆಚ್ಚಾಗುತ್ತಿದೆ.
ಪಟ್ಟಣದ ಕಿತ್ತೂರು ಬಸ್ ನಿಲ್ದಾಣದಲ್ಲಿ ನಿರಂತರ ಸುರಿಯುವ ಮಳೆಯಲ್ಲಿ ಸಮೀಪದ ಕುಲವಳ್ಳಿ, ಗಂಗ್ಯಾನಟ್ಟಿ, ಸಾಗರ, ಮಾಚಿ ಹಾಗೂ ಕತ್ರಿದಡ್ಡಿ ಗ್ರಾಮದ ವಿದ್ಯಾರ್ಥಿಗಳು ಹಾಗೂ ಗ್ರಾಮಸ್ಥರು ಸೇರಿಕೊಂಡು ಶುಕ್ರವಾರ 3 ಗಂಟೆಗೂ ಹೆಚ್ಚು ಪ್ರತಿಭಟನೆ ನಡೆಸಿದರು.
ಪ್ರತಿನಿತ್ಯ ಹಳ್ಳಿಗಳಿಂದ ಪಟ್ಟಣಕ್ಕೆ ವಿದ್ಯಾರ್ಥಿಗಳು ಹಾಗೂ ಗ್ರಾಮಸ್ಥರು ಸಂಚರಿಸುತ್ತಾರೆ. ಅದರಲ್ಲಿ ಶಾಲಾ-ಕಾಲೇಜು ವಿಧ್ಯಾರ್ಥಿಗಳು ದಿನಕ್ಕೆ ಸುಮಾರು 150 ರಿಂದ 200 ವಿಧ್ಯಾರ್ಥಿಗಳು ಪಟ್ಟಣಕ್ಕೆ ಬರುತ್ತಾರೆ. ಆದರೆ ಬಸ್ಸಿನ ವ್ಯವಸ್ಥೆ ಸರಿಯಾಗಿ ಇಲ್ಲದ ಕಾರಣ ವಿಧ್ಯಾರ್ಥಿಗಳು ಮಳೆಯಲ್ಲಿ ನೆನೆದುಕೊಂಡು ಕಾಲ್ನಡಿ ಮೂಲಕ ಸುಮಾರು 7 ಕಿ.ಮೀ. ಬರುವ ಪರಿಸ್ಥಿತಿ ನಿರ್ಮಾಣವಾಗಿದೆ.
ಬೆಳಿಗ್ಗೆ 7 ಗಂಟೆಗೆ ಬರುವ ಬಸ್ಸನ್ನು ರದ್ದು ಮಾಡಿದ್ದಾರೆ. ಪರಿಣಾಮ ಬೆಳಿಗ್ಗೆ ಕಾಲೇಜಿಗೆ ಹೋಗುವ ವಿದ್ಯಾರ್ಥಿಗಳು ನಡೆದುಕೊಂಡು ಹೋಗಬೇಕಾಗುತ್ತದೆ. ಬಳಿಕ 9 ಗಂಟೆಗೆ ಹಾಗೂ 3 ಗಂಟೆಗೆ ಬರುವ ಬಸ್ಸಗಳು ಸರಿಯಾದ ಸಮಯಕ್ಕೆ ಬಾರದೇ ಇರುವದರಿಂದ ಗುಡ್ಡಗಾಡಿನಲ್ಲಿ ವಿದ್ಯಾರ್ಥಿಗಳು ಸಹ ನಡೆದುಕೊಂಡು ಬರುತ್ತಾರೆ.
ಇದರಿಂದ ವಿದ್ಯಾರ್ಥಿಗಳಿಗೆ ಹಾಗೂ ಗ್ರಾಮಸ್ಥರಿಗೆ ತುಂಬಾ ತೊಂದರೆಯಾಗುತ್ತಿವೆ. ಈ ಎಲ್ಲ ಸಮಸ್ಯೆಗಳನ್ನು ಈಗಾಗಲೇ ಶಾಸಕರಿಗೆ, ಜಿಲ್ಲಾ ಪಂಚಾಯತ ಸದಸ್ಯರಿಗೆ ಹಾಗೂ ಸಾರಿಗೆ ಅಧಿಕಾರಿಗಳಿಗೆ ಸಾಕಷ್ಟು ಭಾರಿ ಮನವಿ ಸಲ್ಲಿಸಿದರು ಯಾವುದೇ ಪ್ರಯೋಜನವಾಗಿಲ್ಲ ಎಂದು ಗ್ರಾಮದ ಮುಖಂಡ ಖಾಸಿಂ ನೇಸರಗಿ ಆರೋಪಿಸಿದರು.
ಎಲ್ಲೆಲ್ಲಿ ಪ್ರತಿಭಟನೆ : ಕಳೆದ ಒಂದು ವಾರದಿಂದ ಕಿತ್ತೂರು ಸಮೀಪದ ದೇಮಟ್ಟಿ, ಮರಿಗೇರಿ, ಉಗರಖೋಡ, ಹುಲಿಕಟ್ಟಿ ಗ್ರಾಮಗಳಿಗೆ ನಿಗದಿತ ಸಮಯಕ್ಕೆ ಬಸ್ಸಗಳು ಬಾರದೇ ಇರುವ ಕಾರಣ ವಿದ್ಯಾರ್ಥಿಗಳು ಹಾಗೂ ಸಾರ್ವಜನಿಕರಿಂದ ನಿರಂತರ ಪ್ರತಿಭಟನೆ ಕಾವು ಹೆಚ್ಚಾಗಿದೆ.
ಪ್ರತಿಭಟನೆ ವೇಳೆ ಮೇಲಾಧಿಕಾರಿಗಳು ಬಂದು ಬಸ್ಸಿನ ಸಮಸ್ಯೆ ಬಗ್ಗೆ ಗಮನ ಹರಿಸದೇ ಇರುವುದು ಸಾರ್ವಜನಿಕರಲ್ಲಿ ನಿರಾಸೆ ಮೂಡಿಸಿದೆ. ತಾತ್ಕಾಲಿಕವಾಗಿ ಸ್ಥಳಿಯ ನಿಯಂತ್ರಣಾಧಿಕಾರಿ ಕಾಟಾಚಾರಕ್ಕೆ ಪ್ರತಿಭಟನಾ ಸ್ಥಳಕ್ಕೆ ಬಂದು ಭರವಸೆ ನೀಡಿ ಹೋಗುತ್ತಾರೆ. ಆದರೆ ಯಾವುದೇ ಕೆಲಸ ಕಾರ್ಯಗತವಾಗುವುದಿಲ್ಲ. ಆದಷ್ಟು ಬೇಗ ಜಿಲ್ಲಾ ವಿಭಾಗಿಯ ನಿಯಂತ್ರಣಾಧಿಕಾರಿ ಹಾಗೂ ಜನಪ್ರತಿನಿಧಿಗಳು ಬಂದು ಸಮಸ್ಯೆಗಳ ಬಗ್ಗೆ ಗಮನ ಹರಿಸಬೇಕು ಎಂದು ಸಾರ್ವಜನಿಕರು ಆಗ್ರಹಿಸಿದ್ದಾರೆ.
1.ಒಂದು ವಾರದಿಂದ ಬಸ್ಸಿನ ಸಮಸ್ಯೆಯಾಗಿದ್ದು, ಪ್ರತಿದಿನ ಶಾಲೆಗೆ ಹೋಗಲು ತುಂಬಾ ತೊಂದರೆಯಾಗುತ್ತಿದೆ. ನಮ್ಮಗೆ ಬಸ್ಸಿನ ವ್ಯವಸ್ಯೆ ಮಾಡಿಕೊಡಿ. : – ಸಾನೀಯಾ ಇಮಾಮನವರ ವಿದ್ಯಾರ್ಥಿನಿ.
2. ಈಗಾಗಲೇ ಎಲ್ಲ ಹಳ್ಳಿಗಳಿಗೂ ಬಸ್ ವ್ಯವಸ್ಥೆ ಮಾಡಿಸಲು ಸಾರಿಗೆ ಅಧಿಕಾರಿಗಳಿಗೆ ಸೂಚಿಸಿದ್ದೇನೆ. ಬೇಗನೆ ಸಮಸ್ಯೆ ಬಗೆ ಹರಿಯುವದು. : – ಮಹಾಂತೇಶ ದೊಡಗೌಡರ, ಶಾಸಕ.

ಪ್ರಗತಿವಾಹಿನಿ ಸುದ್ದಿಗಳನ್ನು ನಿಮ್ಮ ಸ್ನೇಹಿತರಿಗೆ, ಬೇರೆ ಗ್ರುಪ್ ಗಳಿಗೆ ಶೇರ್ ಮಾಡಿ

Related Articles

Back to top button