ಪ್ರಗತಿವಾಹಿನಿ ಸುದ್ದಿ, ಬೆಂಗಳೂರು: ‘ಹೋಗೇ ಬಿಡ್ತು..’ ಎಂದುಕೊಳ್ಳುತ್ತಿರುವಾಗಲೇ ಮತ್ತೆ ಹೊಗೆಯೆಬ್ಬಿಸಲು ಸನ್ನದ್ಧವಾಗಿದೆ ಕೋವಿಡ್ ಮಹಾಮಾರಿ.
ಒಂದು ವಾರದಿಂದ ಮತ್ತೆ ತನ್ನ ಇನ್ನಿಂಗ್ಸ್ ಶುರುವಿಟ್ಟುಕೊಂಡ ಮಹಾಮಾರಿ ಪ್ರಮಾಣ ಬರಿಯ 11 ದಿನಗಳಲ್ಲಿ ದ್ವಿಗುಣವಾಗುತ್ತ ಸಾಗುತ್ತಿದೆ. ದೇಶಾದ್ಯಂತ ಶನಿವಾರ ದಾಖಲಾಗಿದ್ದ ಪ್ರಕರಣಗಳ ಸಂಖ್ಯೆ 524. ಕಳೆದ 24 ತಾಸುಗಳಲ್ಲಿ 444 ಪ್ರಕರಣಗಳು ದಾಖಲಾಗಿವೆ. 2022ರ ನವೆಂಬರ್ ನಂತರ ದಾಖಲಾದ ಗರಿಷ್ಠ ಪ್ರಕರಣಗಳ ಸಂಖ್ಯೆ ಇದಾಗಿದೆ. ಒಂದೇ ವಾರದಲ್ಲಿ ದಾಖಲಾದ ಪ್ರಕರಣಗಳ ಪ್ರಮಾಣ ಶೇ.50ಕ್ಕಿಂತ ಹೆಚ್ಚಾಗಿದೆ.
114 ದಿನಗಳ ನಂತರ ದೇಶದಲ್ಲಿ ಪ್ರಕರಣಗಳ ಸಂಖ್ಯೆ 500 ದಾಟಿದೆ. ಕಳೆದೊಂದು ವಾರದಲ್ಲಿ 2671 ಪ್ರಕರಣಗಳು ದಾಖಲಾಗಿದ್ದು ಒಂದು ವಾರದಲ್ಲಿ ಕರ್ನಾಟಕ- 584, ಕೇರಳ-520, ಮಹಾರಾಷ್ಟ್ರ-512, ತಮಿಳುನಾಡು-224, ತೆಲಂಗಾಣ-197 ಹಾಗೂ ಗುಜರಾತ್-190 ಹೊಸ ಕೇಸುಗಳು ದಾಖಲಾಗಿವೆ.
ಏಳು ದಿನಗಳ ಅವಧಿಯಲ್ಲಿ ದೇಶದಲ್ಲಿ 6 ಜನ ಕೋವಿಡ್ ಗೆ ಬಲಿಯಾಗಿದ್ದಾರೆ. ಈ ಮೂಲಕ ದೇಶದಲ್ಲಿ ಕೋವಿಡ್ ನಿಂದಾದ ಸಾವಿನ ಸಂಖ್ಯೆ 5,30,781ಕ್ಕೆ ಏರಿಕೆಯಾಗಿದೆ.
ಏತನ್ಮಧ್ಯೆ ಬಹುಪಾಲು ಜನ ಕೋವಿಡ್ ಆಟ ಮುಗಿದೇ ಹೋಗಿದೆ ಎಂಬ ಭ್ರಮೆಯಲ್ಲಿ ಮಾಸ್ಕ್ ಧರಿಸುವಿಕೆ ಸೇರಿದಂತೆ ಎಲ್ಲ ನಿಯಮಾವಳಿಗಳನ್ನು ಗಾಳಿಗೆ ತೂರಿಕೊಂಡು ಮೈಮರೆತಿದ್ದಾರೆ. ಇನ್ನಷ್ಟು ಜನ ಲಸಿಕೆ ಪಡೆದಿದ್ದೇವೆಂಬ ಹುಂಬ ಧೈರ್ಯದಲ್ಲಿದ್ದಾರೆ. ಇದರ ಮಧ್ಯೆಯೇ ಹೆಚ್ಚುತ್ತಿರುವ ಹಠಾತ್ ಹೃದಯಾಘಾತದಿಂದಾಗುವ ಸಾವುಗಳಿಗೆ ಲಸಿಕೆಯೊಂದಿಗಿನ ಸಂಬಂಧ ತಳಕು ಹಾಕಿ ಪ್ರಚಾರವೆಬ್ಬಿಸುವ ಕೆಲಸವೂ ಕೆಲವರಿಂದ ನಡೆದಿದೆ.
ಏನೇ ಆದರೂ ಮೈಮರೆಯುವಿಕೆಯಿಂತ ಮುನ್ನೆಚ್ಚರಿಕೆ ಮುಖ್ಯವಾಗಿದೆ ಎಂದು ವೈದ್ಯಕೀಯ ತಜ್ಞರು ಹೇಳುತ್ತಿದ್ದಾರೆ.
ಪ್ರಗತಿವಾಹಿನಿ ಸುದ್ದಿಗಳನ್ನು ನಿಮ್ಮ ಸ್ನೇಹಿತರಿಗೆ, ಬೇರೆ ಗ್ರುಪ್ ಗಳಿಗೆ ಶೇರ್ ಮಾಡಿ