ಪ್ರಗತಿವಾಹಿನಿ ಸುದ್ದಿ, ಬೆಳಗಾವಿ – ಬಳ್ಳಾರಿ ಜಿಲ್ಲೆ ವಿಭಜನೆ ಘೋಷಣೆ ಬೆನ್ನಲ್ಲೇ ಬೆಳಗಾವಿ ಜಿಲ್ಲೆ ಸದ್ದು ಕೇಳಿಬಂದಿದೆ. ರಾಜ್ಯದಲ್ಲೇ ದೊಡ್ಡದಾಗಿರುವ ಬೆಳಗಾವಿ ಜಿಲ್ಲೆಯನ್ನು ವಿಭಜಿಸಿ 3 ಜಿಲ್ಲೆಯನ್ನಾಗಿಸಬೇಕೆನ್ನುವ ಪ್ರಸ್ತಾವನೆಗೆ 2 ದಶಕಗಳ ಇತಿಹಾಸವಿದೆ. ಯಾವ ದೃಷ್ಟಿಯಿಂದ ನೋಡಿದರೂ ಜಿಲ್ಲೆಯ ವಿಭಜನೆ ಅಗತ್ಯ, ಅನಿವಾರ್ಯ. ಕೇವಲ ಭಾಷೆ ಮತ್ತು ಗಡಿ ವಿವಾದದ ಕಾರಣದಿಂದ ಜಿಲ್ಲಾ ವಿಭಜನೆಯನ್ನು ಮುಂದೂಡಲಾಗುತ್ತಿದೆ.
ಬೆಳಗಾವಿಯನ್ನು ಎರಡು ವಿಭಾಗ ಮಾಡಬೇಕೋ, ಮೂರು ವಿಭಾಗ ಮಾಡಬೇಕೋ? ವಿಭಜಿಸುವುದಾದರೆ ಯಾವ್ಯಾವುದು ಜಿಲ್ಲಾ ಕೇಂದ್ರವಾಗಬೇಕು? ವಿಭಜಿತವಾಗಲಿರುವ ಜಿಲ್ಲೆಗೆ ಯಾವ್ಯಾವ ತಾಲೂಕು ಸೇರಿಸಬೇಕು? ಇತ್ಯಾದಿ ಪ್ರಶ್ನೆಗಳಿಗೆ ಇನ್ನೂ ನಿಖರ ಉತ್ತರ ಸಿಕ್ಕಿಲ್ಲ. ಹಾಗಾಗಿ ಜಿಲ್ಲೆಯ ಎಲ್ಲ ತಾಲೂಕುಗಳೂ ಜಿಲ್ಲಾ ಹೋರಾಟದಲ್ಲಿ ಒಂದಿಲ್ಲೊಂದು ಕಾರಣಕ್ಕಾಗಿ ಪಾಲ್ಗೊಳ್ಳುತ್ತವೆ. ಚಿಕ್ಕೋಡಿ ಜಿಲ್ಲೆಯಾಗಬೇಕು, ಗೋಕಾಕ ಜಿಲ್ಲೆಯಾಗಬೇಕು, ಬೈಲಹೊಂಗಲ ಜಿಲ್ಲಾ ಕೇಂದ್ರವಾಗಬೇಕು, ಅಥಣಿ ಜಿಲ್ಲೆ ಮಾಡಿದರೆ ಅನುಕೂಲ, ನಿಪ್ಪಾಣಿ ಜಿಲ್ಲೆ ಮಾಡಿದರೆ ಗಡಿ ವಿವಾದ ಅಂತ್ಯವಾಗಲಿದೆ…. ಇವೆಲ್ಲ ಕೇಳಿಬರುತ್ತಿರುವ ಒತ್ತಡಗಳು.
ಕಿತ್ತೂರು, ಕಾಗವಾಡ, ನಿಪ್ಪಾಣಿ, ಯರಗಟ್ಟಿ, ಮೂಡಲಗಿ ತಾಲೂಕುಗಳು ಸೇರಿ ಜಿಲ್ಲೆಯಲ್ಲಿ 15 ತಾಲೂಕುಗಳಾಗಿವೆ. ಬೆಳಗಾವಿಯನ್ನೂ ವಿಭಜಿಸಿ ನಗರ ತಾಲೂಕು, ಗ್ರಾಮೀಣ ತಾಲೂಕು ಮಾಡಬೇಕೆನ್ನುವ ಕೂಗು ಇದೆ.
ಪಕ್ಕದ ಧಾರವಾಡ, ವಿಜಯಪುರಗಳನ್ನು ಗಮನಿಸಿದರೆ ಬೆಳಗಾವಿಯಲ್ಲಿ ಇನ್ನೂ 4 -5 ತಾಲೂಕು ಆಗಬಹುದು, ವಿಭಜಿಸಿ 3 ಅಥವಾ 4 ಜಿಲ್ಲೆಯನ್ನೂ ಮಾಡಬಹುದು.
ಆಡಳಿತಾತ್ಮಕ ದೃಷ್ಟಿಯಿಂದ ಮತ್ತು ಅಭಿವೃದ್ಧಿಯ ದೃಷ್ಟಿಯಿಂದ ಬೆಳಗಾವಿ ವಿಭಜನೆಯಾಗಲೇಬೇಕು. ಕೇವಲ ಗಡಿ, ಭಾಷೆಯ ಹೆಸರಿನಲ್ಲಿ ಮುಂದೂಡುತ್ತ ಹೋಗುವುದಕ್ಕಿಂತ ಅದಕ್ಕೆ ತಕ್ಕಂತೆ ವಿಭಜನೆಯ ಸೂತ್ರ ರೂಪಿಸುವುದು ಒಳಿತು. ಇಷ್ಟು ದೊಡ್ಡ ಜಿಲ್ಲೆಯನ್ನು ಹೀಗೆಯೇ ಮುಂದುವರಿಸಿಕೊಂಡು ಹೋಗುವುದರಲ್ಲಿ ಅರ್ಥವಿಲ್ಲ.
ಬೆಳಗಾವಿ ಜಿಲ್ಲೆ ವಿಭಜನೆಯಾಗಲೇಬೇಕು, ಚಿಕ್ಕೋಡಿ ಮತ್ತು ಗೋಕಾಕ ಹೊಸ ಜಿಲ್ಲೆಯಾಗಲಿ ಎಂದು ಮಾಜಿ ಸಚಿವ, ಕೆಪಿಸಿಸಿ ಕಾರ್ಯಾಧ್ಯಕ್ಷ ಸತೀಶ್ ಜಾರಕಿಹೊಳಿ ಹೇಳಿದ್ದಾರೆ. ಬಳ್ಳಾರಿ ಜಿಲ್ಲೆ ವಿಭಜಿಸಿದ ಬೆನ್ನಲ್ಲೇ ಅವರು ಹೇಳಿಕೆ ನೀಡಿದ್ದಾರೆ.
ಇನ್ನೂ ಅನೇಕ ನಾಯಕರು ಜಿಲ್ಲಾ ವಿಭಜನೆಗೆ ಆಗ್ರಹಿಸಿದ್ದಾರೆ. ಸರಕಾರ ಕೇವಲ ರಾಜಕೀಯ ಕಾರಣಕ್ಕಾಗಿ ಬಳ್ಳಾರಿ ವಿಭಜಿಸಿದೆ. ಅದು ಸಮರ್ಥನೀಯವಲ್ಲ. ಅಭಿವೃದ್ಧಿ ಮತ್ತು ಆಡಳಿತಾತ್ಮಕವಾಗಿ ಅಗತ್ಯವಾಗಿರುವ ಬೆಳಗಾವಿಯನ್ನು ವಿಭಜಿಸುವುದು ಸೂಕ್ತವಾದುದು.
ಪ್ರಗತಿವಾಹಿನಿ ಸುದ್ದಿಗಳನ್ನು ನಿಮ್ಮ ಸ್ನೇಹಿತರಿಗೆ, ಬೇರೆ ಗ್ರುಪ್ ಗಳಿಗೆ ಶೇರ್ ಮಾಡಿ