ಪ್ರಗತಿವಾಹಿನಿ ಸುದ್ದಿ, ಬೆಳಗಾವಿ – ಕೇಂದ್ರ ಸರಕಾರ ಜಾರಿಗೊಳಿಸುತ್ತಿರುವ ಕೃಷಿ ಮಸೂದೆಗಳಿಂದಾಗಿ ಕೃಷಿ ಸಂಪೂರ್ಣ ಬಂಡವಾಳಶಾಹಿಗಳ ಕೈಗೆ ಸಿಲುಕುವ ಆತಂಕವಿದೆ ಎಂದು ಕಾಂಗ್ರೆಸ್ ಮುಖಂಡ, ಹರ್ಷ ಶುಗರ್ಸ್ ವ್ಯವಸ್ಥಾಪಕ ನಿರ್ದೇಶಕ ಚನ್ನರಾಜ ಹಟ್ಟಿಹೊಳಿ ಅಭಿಪ್ರಾಯಪಟ್ಟಿದ್ದಾರೆ.
ನೂತನ ಕೃಷಿ ಕಾಯಿದೆಗಳನ್ನು ಹಿಂಪಡೆಯುವಂತೆ ಆಗ್ರಹಿಸಿ ರೈತ ಸಂಘಟನೆಗಳು ಕರೆ ನೀಡಿರುವ ಭಾರತ ಬಂದ್ ಹಿನ್ನೆಲೆಯಲ್ಲಿ ಬೆಳಗಾವಿಯ ಚೆನ್ನಮ್ಮ ವೃತ್ತದಲ್ಲಿ ಚನ್ನರಾಜ ಹಟ್ಟಿಹೊಳಿ ಹಾಗೂ ಜಿಲ್ಲಾ ಕಾಂಗ್ರೆಸ್ ಅಧ್ಯಕ್ಷ ವಿನಯ ನಾವಲಗಟ್ಟಿ ನೇತೃತ್ವದಲ್ಲಿ ಕಾಂಗ್ರೆಸ್ ಪಕ್ಷದ ಕಾರ್ಯಕರ್ತರು ಪ್ರತಿಭಟನೆ ನಡೆಸಿ, ವಿವಿಧ ಸಂಘಟನೆಗಳು ಕರೆ ನೀಡಿದ್ದ ಭಾರತ್ ಬಂದ್ ಗೆ ಸಂಪೂರ್ಣವಾದ ಬೆಂಬಲವನ್ನು ಸೂಚಿಸಿದರು.
ಈ ವೇಳೆ ಮಾತನಾಡಿದ ಚನ್ನರಾಜ ಹಟ್ಟಿಹೊಳಿ, ಕೊರೋನಾ ಸಂದರ್ಭವನ್ನು ಬಳಸಿಕೊಂಡು ತರಾತುರಿಯಲ್ಲಿ ಕೃಷಿ ತಿದ್ದುಪಡಿ ಮಸೂದೆಯನ್ನು
ಮಂಡಿಸಿ ಕಾಯ್ದೆಯ (ಕಾನೂನಿನ) ರೂಪ ನೀಡಿದ್ದೇಕೆ? ಅಧಿವೇಶನದಲ್ಲಿ ಸುದೀರ್ಘ ಚರ್ಚೆಯೇ ಆಗದಿದ್ದಾಗ ಜನರಿಗೆ ಕಾಯ್ದೆ ಅರ್ಥವಾಗುವುದು ಹೇಗೆ? ರೈತರು ಪ್ರತಿಭಟನೆ ಆರಂಭಿಸಿದಾಗ ಹತ್ತಿಕ್ಕುವ ಪ್ರಯತ್ನ ಮಾಡಿದ್ದೇಕೆ? ಜಲಫಿರಂಗಿ, ಲಾಠಿ ಬಳಸಿ ಶಾಂತಿಯುತ ಪ್ರತಿಭಟನಾಕಾರರನ್ನು ಕೆರಳಿಸುವ ಪ್ರಯತ್ನ ಮಾಡಿದ್ದೇಕೆ? ರೈತರು ನಿಮ್ಮ ಕಣ್ಣಿಗೆ ನಕ್ಸಲರ, ಖಲಿಸ್ತಾನಿಗಳ ರೀತಿಯಲ್ಲಿ ಕಂಡರಾ ಎಂದು ಪ್ರಶ್ನಿಸಿದರು.
ಕೇಂದ್ರದ ಇಂತಹ ರೈತ ವಿರೋಧಿ ನೀತಿಯನ್ನು ರಾಜಕೀಯ ಪಕ್ಷಗಳು ಬೆಂಬಲಿಸುವುದು ತಪ್ಪೇ ಎಂದು ಪ್ರಶ್ನಿಸಿದ ಅವರು, ಪಂಜಾಬ್ ನಲ್ಲಿ ನಾಲ್ಕೈದು ತಿಂಗಳಿಂದ ಪ್ರತಿಭಟನೆ ನಡೆಯುತ್ತಿದ್ದರೂ ಕೇಂದ್ರ ಸರಕಾರ ಗಂಭೀರವಾಗಿ ಪರಿಗಣಿಸಲಿಲ್ಲ ಎಂದು ಆರೋಪಿಸಿದರು.
ಎಪಿಎಂಸಿ ಸದ್ಯಕ್ಕೆ ಮುಚ್ಚುವುದಿಲ್ಲ ಸರಿ, ಆದ್ರೆ ಭವಿಷ್ಯದಲ್ಲಿ ಖಾಸಗಿ ಮಂಡಿ ಪೈಪೋಟಿ ಎದುರಿಸಲು ಸಾಧ್ಯವಾಗುವುದಿಲ್ಲ. ಎಪಿಎಂಸಿಯಲ್ಲಿ ಕನಿಷ್ಠ ಬೆಂಬಲ ಬೆಲೆ ಇಂದಿಗೂ ಇದೆ ಮುಂದೆಯೂ ಇರಲಿದೆ, ಆದ್ರೆ ಖಾಸಗಿ ಮಂಡಿಯಲ್ಲಿ ಬೆಲೆ ನಿಗದಿ ಮಾಡುವವರು ಯಾರು? ಬೆಳೆ ಕಟಾವಿಗೆ ಬಂದಾಗ ದಿಢೀರ್ ಬೆಲೆ ಇಳಿಸಿಬಿಟ್ರೆ ಕೇಳೊರ್ಯಾರು? ಪಂಜಾಬ್ ಮತ್ತು ಹರಿಯಾಣ ಭಾಗದ ರೈತರು ನಂಬಿರೋದೆ ಕನಿಷ್ಠ ಬೆಂಬಲ ಬೆಲೆಯನ್ನು. ಒಪ್ಪಂದಾಧಾರಿತ ಕೃಷಿಯಲ್ಲಿ ಅನ್ಯಾಯವಾದ್ರೆ, ತಹಸೀಲ್ದಾರ್, ತದನಂತರ ಡಿಸಿ ಬಳಿ ಹೋಗ್ಬೆಕು. ಬಂಡವಾಳಶಾಹಿಗಳ ವಿರುದ್ಧ ಹೋರಾಡುವಷ್ಟು ಸಾಮಾನ್ಯ ರೈತರಿಗೆ ಆರ್ಥಿಕ ಶಕ್ತಿ ಇರುವುದಿಲ್ಲ. ಅಲ್ಲಿ ನ್ಯಾಯ ಸಿಗುವ ನಿರೀಕ್ಷೆಯೂ ಇಲ್ಲ. ಅಗತ್ಯ ಸರಕುಗಳ ತಿದ್ದುಪಡಿ ಕಾಯ್ದೆಯನ್ವಯ ದೊಡ್ಡ ದೊಡ್ಡ ಕಂಪನಿಗಳು ಆಹಾರ ದಾಸ್ತಾನು ಮಾಡಿ ಕೃತಕ ಅಭಾವ ಸೃಷ್ಟಿಸಿದರೆ ಕೇಳುವವರಿರುವುದಿಲ್ಲ. ಹಾಗಾಗಿ ಕೃಷಿ ಸಂಪೂರ್ಣ ಬಂಡವಾಳಶಾಹಿಗಳ ಕೈಗೆ ಸಿಲುಕುವ ಆತಂಕ ಇದೆ ಎಂದು ಚನ್ನರಾಜ ಹಟ್ಟಿಹೊಳಿ ಹೇಳಿದರು.
ಅಡಿವೇಶ ಇಟಗಿ, ಜಯಶ್ರೀ ಮಾಳಗಿ ಮೊದಲಾದವರಿದ್ದರು.
ಪ್ರಗತಿವಾಹಿನಿ ಸುದ್ದಿಗಳನ್ನು ನಿಮ್ಮ ಸ್ನೇಹಿತರಿಗೆ, ಬೇರೆ ಗ್ರುಪ್ ಗಳಿಗೆ ಶೇರ್ ಮಾಡಿ