ಪ್ರಗತಿವಾಹಿನಿ ಸುದ್ದಿ, ಶಿರಸಿ – ಕೊರೊನಾ ವೈರಸ್ ನಿಂದ ಇಡೀ ಭಾರತ ಲಾಕ್ ಡೌನ್ ಆಗಿದ್ದು ಸಾರ್ವಜನಿಕರು ಮನೆಯಲ್ಲಿಯೇ ಇದ್ದು ಸರ್ಕಾರ ಹೊರಡಿಸಿರುವ ನಿಷೇಧಾಜ್ಞೆ ಪಾಲಿಸುತ್ತಿದ್ದಾರೆ.
ಈ ಸಂದರ್ಭದಲ್ಲಿ ಒಂದು ಸಂಸ್ಥೆ ವಿಶೇಷವಾಗಿ ಆರೋಗ್ಯ ಸಮಸ್ಯೆಗೆ ಒಳಗಾದ ಅಸಹಾಯಕರಿಗೆ ಹಾಗೂ ಬಡವರಿಗೆ ಸಹಾಯ ಮಾಡುವ ನಿಟ್ಟಿನಲ್ಲಿ ಉಚಿತ ಆರೋಗ್ಯ ಸೇವೆ ನೀಡಲು ರಾಜ್ಯದಲ್ಲೇ ಮೊದಲು ಟೀಮ್ ಸಂಜೀವಿನಿ ಎಂಬ ಸಂಚಾರಿ ಆರೋಗ್ಯ ಬೈಕ್ ಘಟಕ ಸ್ಥಾಪಿಸಿದ್ದು ಇದೀಗ ಆ ಟೀಂ ನೇರವಾಗಿ ಮನೆ ಬಾಗಿಲಿಗೆ ಹೋಗಲಿದೆ.
ಉತ್ತರ ಕನ್ನಡ ಜಿಲ್ಲೆ ಶಿರಸಿಯ ಸ್ಕಾಡ್ ವೆಸ್ ಸಂಸ್ಥೆ ಟೀಮ್ ಸಂಜೀವಿನಿ ಎಂಬ ವಿನೂತನ ಬೈಕ್ ಸಂಚಾರಿ ಆರೋಗ್ಯ ಘಟಕವನ್ನು ಸ್ಥಾಪಿಸಿದೆ. ವಿಧಾನಸಭಾಧ್ಯಕ್ಷ ವಿಶ್ವೇಶ್ವರ ಹೆಗಡೆ ಕಾಗೇರಿ ಹಸಿರು ಬಾವುಟ ತೋರಿಸುವ ಮೂಲಕ ಟೀಮ್ ಸಂಜೀವಿನಿ ಆರೋಗ್ಯ ಘಟಕಕ್ಕೆ ಚಾಲನೆ ನೀಡಿದರು.
ಟೀಮ್ ಸಂಜೀವಿನಿಯಲ್ಲಿ 5 ಬೈಕ್, 3 ಆಂಬುಲೆನ್ಸ್ ಗಳಿದ್ದು ಪ್ರತಿ ಬೈಕ್ ನಲ್ಲಿ ಮೆಡಿಸಿನ್ ಕಿಟ್ ಗಳು ಇರಲಿವೆ.
ನಿಷೇಧಾಜ್ಞೆ ವೇಳೆ ಆಸ್ಪತ್ರೆಗೆ ಹೋಗಲಾಗದ ಬಡ ಅಸಹಾಯಕ ಕುಟುಂಬದ ವೃದ್ಧರು, ಮಹಿಳೆಯರು, ಮಕ್ಕಳು, ವಿಶೇಷ ಚೇತನರಿಗಾಗಿ ಸಹಾಯವಾಣಿ ಹೆಲ್ಪ್ ಡೆಸ್ಕ್ ಕೂಡಾ ಲಭ್ಯವಿದೆ. ಬೆಳಿಗ್ಗೆ 8 ಗಂಟೆಯಿಂದ 5 ಗಂಟೆಯವರಿಗೆ ಕರೆಮಾಡಿ ಹೆಸರು ನೋಂದಾಯಿಸಿದ್ರೆ ಈ ಟೀಮ್ ಸಂಜೀವಿನಿ ಸದ್ಯಸ್ಯರು ನೇರವಾಗಿ ಅವರ ಮನೆಗೆ ಭೇಟಿ ನೀಡಿ ಸೇವೆ ಒದಗಿಸುತ್ತಾರೆ.
ಈ ಟೀಮ್ ನಲ್ಲಿ ವೈದ್ಯರು, ನರ್ಸ್ ಗಳು ಪಾರ್ಮಸಿಸ್ಟ್ ಗಳು, ಲ್ಯಾಬ್ ಟೆಕ್ನಿಷಿಯನ್ , ಆರೋಗ್ಯ ಸಹಾಯಕರು ಹಾಗೂ ಸ್ವಯಂ ಸೇವಕರು ಸೇವೆ ಸಲ್ಲಿಸುತ್ತಿದ್ದಾರೆ.
ಟೀಮ್ ಸಂಜೀವಿನಿ ಮನೆಗೆ ಭೇಟಿ ನೀಡಿದ ಸಂದರ್ಭದಲ್ಲಿ ಮಧುಮೇಹ, ರಕ್ತದೊತ್ತಡ ಪರೀಕ್ಷೆ ಜೊತೆಗೆ ಕೋವಿಡ್ 19 ನಿಯಂತ್ರಣ ದ ಕುರಿತು ಜಾಗ್ರತಿ ಮೂಡಿಸಿ ತೀವ್ರ ಆರೋಗ್ಯ ಸಮಸ್ಯೆ ಕಂಡು ಬಂದಲ್ಲಿ ಆಸ್ಪತ್ರೆಗೆ ಸಾಗಿಸಲು ಕೂಡಾ ಸಹಾಯ ಮಾಡುತ್ತಿದೆ.
ಜೊತೆಗೆ ದೂರವಾಣಿ ಮೂಲಕ ತಜ್ಞ ವೈದ್ಯರ ಸಲಹೆಗಳನ್ನ ನೀಡಲಾಗುತ್ತಿದ್ದು ಈ ಎಲ್ಲಾ ಸೇವೆಗಳೂ ಸಂಪೂರ್ಣ ಉಚಿತವಾಗಿದೆ. ಕರ್ನಾಟಕ ಸರಕಾರದ ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಇಲಾಖೆಯ ಅಡಿಯಲ್ಲಿ ಗ್ರಾಮೀಣ ಪ್ರದೇಶದ ಜನರಿಗಾಗಿ ಸಂಚಾರಿ ಆರೋಗ್ಯ ಘಟಕಗಳನ್ನು ನಡೆಸುತ್ತಿರುವ, ಸ್ಕಾಡ್ ವೆಸ್ ಸಂಸ್ಥೆ ಟೀಮ್ ಸಂಜೀವಿನಿ ಎಂಬ ವಿನೂತನ ಯೋಜನೆ ರೂಪಿಸಿದೆ.
ಒಟ್ಟಾರೆ ರಾಜ್ಯದಲ್ಲೇ ಮೊದಲಬಾರಿಗೆ ಸ್ಕಾಡ್ ವೆಸ್ ಸಂಸ್ಥೆ ಇಂಥದ್ದೊಂದು ವಿಶೇಷ ಪ್ರಯತ್ನಕ್ಕೆ ಕೈ ಹಾಕಿದ್ದು ಸದ್ಯಕ್ಕೆ ಶಿರಸಿ ನಗರ ಪ್ರದೇಶದ ವ್ಯಾಪ್ತಿಗೆ ಈ ಉಚಿತ ಸೇವೆಯನ್ನು ಆರಂಭಿಸಿದೆ. ಅಲ್ಲದೇ ಜನರಿಂದ ಉತ್ತಮ ಪ್ರತಿಕ್ರಿಯೆ ವ್ಯಕ್ತವಾದಲ್ಲಿ ಅಥವಾ ತೀರಾ ಅವಶ್ಯಕತೆಯಿದ್ದಲ್ಲಿ ಬೇರೆ ಬೇರೆ ತಾಲೂಕುಗಳಿಗೂ ಸೇವೆ ಸಲ್ಲಿಸುವ ಚಿಂತನೆ ನಡೆಸಿದೆ.
ಅವಶ್ಯಕತೆ ಇದ್ದವರು ಸಂಪರ್ಕಿಸಿ – 08384 236398, 9900195285
ಪ್ರಗತಿವಾಹಿನಿ ಸುದ್ದಿಗಳನ್ನು ನಿಮ್ಮ ಸ್ನೇಹಿತರಿಗೆ, ಬೇರೆ ಗ್ರುಪ್ ಗಳಿಗೆ ಶೇರ್ ಮಾಡಿ