Kannada NewsKarnataka NewsLatest

ಬೆಳಗಾವಿಯ ಮೊದಲೆರಡು ವರದಿಗಳು ನೆಗೆಟಿವ್: 194 ಜನ ಗೃಹ ಕ್ವಾರಂಟೈನ್ ನಲ್ಲಿ

ಪ್ರಗತಿವಾಹಿನಿ ಸುದ್ದಿ, ಬೆಳಗಾವಿ – ಜಿಲ್ಲೆಯಲ್ಲಿ ಕೋವಿಡ್ ೧೯ ಗೆ ಸಂಬಂಧಿಸಿದಂತೆ ಒಟ್ಟು ಐದು ಮಾದರಿಗಳನ್ನು ಪ್ರಯೋಗಾಲಯಕ್ಕೆ ಕಳಿಸಲಾಗಿದ್ದು, ಅದರಲ್ಲಿ ಒಂದು ವರದಿ ನೆಗೆಟಿವ್ ಬಂದಿರುತ್ತದೆ. ಒಂದು ವರದಿ ತಿರಸ್ಕೃತಗೊಂಡಿರುವುದರಿಂದ ಅದನ್ನು ಕೂಡ ನೆಗೆಟಿವ್ ಎಂದು ಪರಿಗಣಿಸಲಾಗಿದೆ ಎಂದು ಜಿಲ್ಲಾಧಿಕಾರಿ ಡಾ.ಎಸ್.ಬಿ.ಬೊಮ್ಮನಹಳ್ಳಿ ತಿಳಿಸಿದ್ದಾರೆ.

ತಮ್ಮ ಕಚೇರಿಯಲ್ಲಿ ಇಂದು ಸುದ್ದಿಗಾರರ ಜತೆ ಮಾತನಾಡಿದ ಅವರು, ಪ್ರಯೋಗಾಲಯಕ್ಕೆ ಕಳಿಸಲಾದ ವರದಿಗಳ ಪೈಕಿ ಒಂದು ಮಾದರಿಯನ್ನು ಪರೀಕ್ಷೆಗೆ ಪರಿಗಣಿಸಿರುವುದಿಲ್ಲ; ಒಂದು ನೆಗೆಟಿವ್ ಬಂದಿರುತ್ತದೆ.
ಆದ್ದರಿಂದ ಐದು ಮಾದರಿಗಳ ಪೈಕಿ ಎರಡು ಮಾದರಿಗಳು ನೆಗೆಟಿವ್ ಎಂದು ಅಧಿಕೃತ ಪ್ರಕಟಿಸಲಾಗಿದೆ. ಇನ್ನುಳಿದ ಮೂರು ಮಾದರಿಗಳ ವರದಿ‌ ನಿರೀಕ್ಷಿಸಲಾಗಿದೆ.
ಹೊಸದಾಗಿ ಮತ್ತೊಂದು ಮಾದರಿಯನ್ನು ಪ್ರಯೋಗಾಲಯಕ್ಕೆ ಕಳಿಸಲಾಗುತ್ತಿದೆ ಎಂದು ಜಿಲ್ಲಾಧಿಕಾರಿ ಡಾ.ಬೊಮ್ಮನಹಳ್ಳಿ ತಿಳಿಸಿದರು.

ಬೈಲಹೊಂಗಲ-ಸುಳ್ಳುಸುದ್ದಿ 

ಬೈಲಹೊಂಗಲ ಭಾಗದಲ್ಲಿ ಒಂದು ಪ್ರಕರಣ ಪಾಸಿಟಿವ್ ಬಂದಿದೆ ಎಂದು ಮಾಧ್ಯಮಗಳಲ್ಲಿ ಪ್ರಕಟವಾದ ಸುದ್ದಿ ಸತ್ಯಕ್ಕೆ ದೂರವಾಗಿದೆ ಎಂದು ಜಿಲ್ಲಾಧಿಕಾರಿ ಡಾ.ಬೊಮ್ಮನಹಳ್ಳಿ ಸ್ಪಷ್ಟ ಪಡಿಸಿದ್ದಾರೆ.
ಆ ಭಾಗದ ವರದಿ ನೆಗೆಟಿವ್ ಬಂದಿರುವುದರಿಂದ ಜನರು ಆತಂಕಪಡಬೇಕಿಲ್ಲ ಎಂದು ಅವರು ತಿಳಿಸಿದ್ದಾರೆ.

೧೪೪ ಉಲ್ಲಂಘಿಸಿದರೆ ಕ್ರಿಮಿನಲ್ ಮೊಕದ್ದಮೆ 

ಈಗಾಗಲೇ ೧೪೪ ಕಲಂ ಮೇರೆಗೆ ಐದಕ್ಕಿಂತ ಹೆಚ್ಚು ಜನರು ಗುಂಪುಗೂಡುವುದು ಅಥವಾ ಒಟ್ಟಾಗಿ ಸಂಚರಿಸುವುದನ್ನು ಈಗಾಗಲೇ ನಿರ್ಬಂಧಿಸಲಾಗಿದೆ. ಒಂದು ವೇಳೆ ೧೪೪ ಕಲಂ ಆದೇಶ ಉಲ್ಲಂಘಿಸುವುದು ಕಂಡುಬಂದರೆ ಅಂತವರ ವಿರುದ್ಧ ಕ್ರಿಮಿನಲ್ ಮೊಕದ್ದಮೆ ದಾಖಲಿಸಲಾಗುವುದು ಎಂದು ಜಿಲ್ಲಾಧಿಕಾರಿ ಡಾ.ಎಸ್.ಬಿ.ಬೊಮ್ಮನಹಳ್ಳಿ ಎಚ್ಚರಿಕೆ ನೀಡಿದ್ದಾರೆ.

ಜಿಲ್ಲೆಯಲ್ಲಿ ೨೨೯ ಜನರು ವಿದೇಶದಿಂದ ಆಗಮಿಸಿರುತ್ತಾರೆ. ಇದರಲ್ಲಿ ೧೯೪ ಜನ ಗೃಹ ಕ್ವಾರಂಟೈನ್ ನಲ್ಲಿದ್ದಾರೆ. ೩೪ ಜನರು ೧೪ ದಿನಗಳ ಕ್ವಾರಂಟೈನ್ ಪೂರ್ಣಗೊಳಿಸಿದ್ದಾರೆ.
ಇಬ್ಬರು ಐಸೋಲೇಷನ್ ವಾರ್ಡ ನಲ್ಲಿದ್ದು, ಗಂಟಲು ದ್ರವ ಮಾದರಿ ಕಳಿಸಲಾದ ವ್ಯಕ್ತಿಗಳು ಆರೋಗ್ಯವಾಗಿದ್ದಾರೆ.
ಬಿಮ್ಸ್ ೮೦ ಹಾಗು ಕೆ.ಎಲ್.ಇ ೬೦ ಜನರ ಕ್ವಾರಂಟೈನ್ ಗೆ ಅವಕಾಶವಿದೆ. ಇದಲ್ಲದೇ ವಸತಿ ನಿಲಯ ಹಾಗೂ ಖಾಸಗಿ ಹೋಟೆಲ್ ಸೇರಿದಂತೆ ಸುಮಾರು ೫೦೦ ಹಾಸಿಗೆಗಳನ್ನು ಕ್ವಾರಂಟೈನ್ ಗೆ ಸಿದ್ಧಪಡಿಸಲಾಗಿದೆ.

ಅದೇ ರೀತಿ ಜಿಲ್ಲೆಯಲ್ಲಿ ಸರ್ಕಾರ ಹೊಸ ನಿಬಂಧನೆಗಳನ್ನು ಪಾಲಿಸಲು ಕ್ರಮ‌ಕೈಗೊಳ್ಳಲಾಗಿದೆ. ಅತ್ಯಾವಶ್ಯಕ ಸೇವೆಗಳಿಗೆ ವಿನಾಯಿತಿ ನೀಡಲಾಗಿದೆ.
ಜನರ ಸಂಚಾರಕ್ಕೆ ನಿರ್ಬಂಧವಿಲ್ಲ. ಆದರೆ ಐದಕ್ಕಿಂತ ಹೆಚ್ಚು ಜನರು ಒಂದು ಕಡೆ ಸೇರಲು ನಿರ್ಬಂಧವಿದೆ.
ಪೊಲೀಸ್ ಆಯುಕ್ತರು ಮತ್ತು ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿಗಳ ಜತೆ ಮತ್ತೊಂದು ಸುತ್ತಿನ ಸಭೆ ನಡೆಸಿ ಮತ್ತಷ್ಟು ಬಿಗಿಕ್ರಮ ಕೈಗೊಳ್ಳಲಾಗುವುದು ಎಂದು ತಿಳಿಸಿದರು.

ಅಂತರ್ ಜಿಲ್ಲಾ ಗಡಿಯಲ್ಲೂ ತಪಾಸಣೆ:

ಬೆಳಗಾವಿ ಜಿಲ್ಲೆಯ ನೆರೆಹೊರೆಯ ಗಡಿಯಲ್ಲಿ ಕೂಡ ಆರೋಗ್ಯ ಇಲಾಖೆಯ ತಂಡಗಳನ್ನು ನಿಯೋಜಿಸಿ ಎಲ್ಲ ಪ್ರಯಾಣಿಕರನ್ನು ತಪಾಸಣೆ ನಡೆಸಲಾಗುತ್ತಿದೆ ಎಂದು ಜಿಲ್ಲಾಧಿಕಾರಿ ಡಾ.ಬೊಮ್ಮನಹಳ್ಳಿ ತಿಳಿಸಿದ್ದಾರೆ.
ನೆರೆಯ ಧಾರವಾಡ, ಬಾಗಲಕೋಟೆ, ವಿಜಯಪುರ ಮತ್ತು ಉತ್ತರ ಕನ್ನಡ ಜಿಲ್ಲೆಯ ಗಡಿಯಲ್ಲಿ ತಪಾಸಣಾ ಕೇಂದ್ರ ಸ್ಥಾಪಿಸಲಾಗಿದೆ ಎಂದು ವಿವರಿಸಿದರು.

ಸಬ್ ರಿಜಿಸ್ಟ್ರಾರ್ ಕಚೇರಿಯಲ್ಲಿ ಜನಸಂದಣಿ ನಿಯಂತ್ರಣಕ್ಕೆ ಸಂಬಂಧಿಸಿದ ಇಲಾಖೆಯ ಅಧಿಕಾರಿಗಳಿಗೆ ಸೂಚನೆ ನೀಡಲಾಗುವುದು.
ವಾಹನ ಸಂಚಾರ ನಿರ್ಬಂಧಿಸಲಾಗಿದೆ. ಗಡಿಯಲ್ಲಿ ಪ್ರವೇಶಿಸುವ ಸಣ್ಣ ಪ್ರಯಾಣಿಕರ ವಾಹನಗಳಲ್ಲಿರುವ ಜನರ ತಪಾಸಣೆ ಮಾಡಲಾಗುತ್ತಿದೆ ಎಂದು ಹೇಳಿದರು.

ಪ್ರಗತಿವಾಹಿನಿ ಸುದ್ದಿಗಳನ್ನು ನಿಮ್ಮ ಸ್ನೇಹಿತರಿಗೆ, ಬೇರೆ ಗ್ರುಪ್ ಗಳಿಗೆ ಶೇರ್ ಮಾಡಿ

Related Articles

Back to top button