ಹುಳಂದ ಅರಣ್ಯದಲ್ಲಿ ದನಗಾಹಿ ಮೇಲೆ ಕರಡಿಗಳ ಹಿಂಡು ದಾಳಿ: ಗಂಭೀರ ಗಾಯ
ಪ್ರಗತಿವಾಹಿನಿ ಸುದ್ದಿ, ಖಾನಾಪುರ: ತಾಲೂಕಿನ ಕಣಕುಂಬಿ ಅರಣ್ಯ ವ್ಯಾಪ್ತಿಯ ಹುಳಂದ ಗ್ರಾಮದ ಹೊರವಲಯದಲ್ಲಿ ದನ ಮೇಯಿಸಲು ತೆರಳಿದ್ದ ದನಗಾಹಿ ಮೇಲೆ ಕರಡಿಗಳ ಹಿಂಡು ದಾಳಿ ನಡೆಸಿದ ಘಟನೆ ಮಂಗಳವಾರ ಸಂಭವಿಸಿದ್ದು, ಬುಧವಾರ ಪ್ರಕರಣ ಬೆಳಕಿಗೆ ಬಂದಿದೆ.
ತಾಲ್ಲೂಕಿನ ಹುಳಂದ ಗ್ರಾಮದ ರೈತ ವಿಠ್ಠಲ ಗಾವಡೆ (೫೪) ಮಂಗಳವಾರ ಮಧ್ಯಾಹ್ನ ಎಂದಿನಂತೆ ತಾವು ಸಾಕಿದ ಜಾನುವಾರುಗಳನ್ನು ಮೇಯಿಸಲು ಗ್ರಾಮದಿಂದ ೨ ಕಿಮೀ ದೂರದ ಅರಣ್ಯ ಪ್ರದೇಶಕ್ಕೆ ತೆರಳಿದ್ದರು. ಸಂಜೆ ಜಾನುವಾರುಗಳು ಮನೆಗೆ ಮರಳಿದರೂ ವಿಠ್ಠಲ ಮರಳಿರಲಿಲ್ಲ. ಅವರಿಗಾಗಿ ಕುಟುಂಬದ ಸದಸ್ಯರು ಮತ್ತು ಗ್ರಾಮಸ್ಥರು ಹುಡುಕಾಟ ನಡೆಸಿದಾಗ ಅವರು ಅರಣ್ಯ ಪ್ರದೇಶದಲ್ಲಿ ಪ್ರಜ್ಞಾಹೀನರಾಗಿ ಬಿದ್ದಿದ್ದು, ಅವರ ಮೇಲೆ ಒಂದು ಹೆಣ್ಣು ಕರಡಿ ಮತ್ತು ಎರಡು ಕರಡಿ ಮರಿಗಳಿದ್ದ ತಂಡ ದಾಳಿ ನಡೆಸಿದ್ದರಿಂದ ಅವರ ಕೈ, ಮುಖ, ಬೆನ್ನು, ಕಾಲುಗಳಿಗೆ ಗಂಭೀರ ಗಾಯಗಳಾಗಿದ್ದು ತಿಳಿದುಬಂದಿದೆ. ಕೂಡಲೇ ಸ್ಥಳೀಯರು ಅವರಿಗೆ ಪ್ರಾಥಮಿಕ ಚಿಕಿತ್ಸೆ ನೀಡಿ ಅವರನ್ನು ಬೆಳಗಾವಿಯ ಖಾಸಗಿ ಆಸ್ಪತ್ರೆಗೆ ದಾಖಲಿಸಿದ್ದಾರೆ.
ಪ್ರಾಣಾಪಾಯದಿಂದ ಪಾರು: ಡಿಸಿಎಫ್
’ಕರಡಿಗಳು ವಿಠ್ಠಲ ಅವರಿಗೆ ಮೊನಚಾದ ಉಗುರುಗಳಿಂದ ಪರಚಿವೆ. ಅವರ ಮೇಲೆ ಹಲ್ಲೆಗೈದು ಮೈಕೈ ಹಾಗೂ ಮುಖಕ್ಕೆ ಗಂಭೀರ ಗಾಯಗಳನ್ನು ಉಂಟುಮಾಡಿವೆ. ಘಟನೆ ನಡೆದ ಬಳಿಕ ಅವರು ಪ್ರಜ್ಞೆ ಕಳೆದುಕೊಂಡಿದ್ದರಿಂದ ವಿಪರೀತ ರಕ್ತಸ್ರಾವವಾಗಿದೆ. ಅವರಿಗೆ ಚಿಕಿತ್ಸೆ ಮುಂದುವರೆದಿದ್ದು, ಪ್ರಾಣಾಪಾಯದಿಂದ ಪಾರಾಗಿದ್ದಾರೆ ಎಂದು ಅವರಿಗೆ ಚಿಕಿತ್ಸೆ ನೀಡುತ್ತಿರುವ ವೈದ್ಯರು ಮಾಹಿತಿ ನೀಡಿದ್ದಾರೆ’ ಎಂದು ಉಪ ಅರಣ್ಯ ಸಂರಕ್ಷಣಾಧಿಕಾರಿ (ಡಿಸಿಎಫ್) ಎಸ್.ಕೆ ಕಲ್ಲೋಳಕರ ತಿಳಿಸಿದ್ದಾರೆ.
ಕರಡಿ ದಾಳಿಯಿಂದ ಗಂಭೀರ ಗಾಯಗೊಂಡ ವಿಠ್ಠಲ ಅವರನ್ನು ಬೆಳಗಾವಿಯ ಖಾಸಗಿ ಆಸ್ಪತ್ರೆಯಲ್ಲಿ ಬುಧವಾರ ಭೇಟಿಯಾಗಿ ಆರೋಗ್ಯ ವಿಚಾರಿಸಿದ ಅವರು, ಬಳಿಕ ಸುದ್ದಿಗಾರರೊಂದಿಗೆ ಮಾತನಾಡಿ “ಅರಣ್ಯ ಇಲಾಖೆಯ ಸಿಬ್ಬಂದಿಯಿಂದ ಘಟನೆಯ ಮಾಹಿತಿ ಪಡೆಯಲಾಗಿದೆ. ಆಸ್ಪತ್ರೆಯ ವೈದ್ಯರನ್ನು ಭೇಟಿಯಾಗಿ ವಿಠ್ಠಲ ಅವರ ಆರೋಗ್ಯದ ಬಗ್ಗೆ ವಿಶೇಷ ಕಾಳಜಿ ವಹಿಸಲು ವಿನಂತಿಸಲಾಗಿದೆ. ವಿಠ್ಠಲ ಅವರ ವೈದ್ಯಕೀಯ ಚಿಕಿತ್ಸಾ ವೆಚ್ಚವನ್ನು ಅರಣ್ಯ ಇಲಾಖೆಯಿಂದ ಭರಿಸುವುದಾಗಿ ಆಸ್ಪತ್ರೆಯ ಮುಖ್ಯಸ್ಥರಿಗೆ ತಿಳಿಸಲಾಗಿದೆ. ಕರಡಿಯ ಮರಿಗಳು ಕಂಡುಬಂದ ಕಾರಣ ಹುಳಂದ ಹಾಗೂ ಅಕ್ಕಪಕ್ಕದ ಗ್ರಾಮಸ್ಥರು ಅರಣ್ಯದೊಳಗೆ ತೆರಳದಂತೆ ಡಂಗುರ ಹೊಡೆಸಲು ನಮ್ಮ ಇಲಾಖೆಯ ಸಿಬ್ಬಂದಿಗೆ ಸೂಚಿಸಲಾಗಿದೆ’ ಎಂದು ತಿಳಿಸಿದರು.
ಈ ಸಂದರ್ಭದಲ್ಲಿ ಕಣಕುಂಬಿ ಆರ್.ಎಫ್.ಒ ಶಿವಕುಮಾರ ಹಾಗೂ ಸಿಬ್ಬಂದಿ ಇದ್ದರು.
ಪ್ರಗತಿವಾಹಿನಿ ಸುದ್ದಿಗಳನ್ನು ನಿಮ್ಮ ಸ್ನೇಹಿತರಿಗೆ, ಬೇರೆ ಗ್ರುಪ್ ಗಳಿಗೆ ಶೇರ್ ಮಾಡಿ