ಹೊರಟಳೆ ಗೌರಮ್ಮ ತನ್ನಪ್ಪನ ಸಂಗಾತಾ… ಜೈ ಜಯಾ ಜೈ ಮಂಗಳಾ
ಪೂರ್ಣಿಮಾ ಹೆಗಡೆ
ಗೌರಿ ಹಬ್ಬವೆಂದರೆ ಅದೇಕೋ ತವರು ಮನೆ ಹಬ್ಬ ಎನ್ನಿಸುತ್ತದೆ. ಗೌರಿ ತವರು ಮನೆಗೆ ಬರುವ ಹಬ್ಬ ಇದಾಗಿರುವುದಕ್ಕಿರಬೇಕು. ವೈಭವ ವೈಭೋಗಗಳಿಂದ ಮೆರೆದು ತವರಿಗೂ ವೈಭವದ ಆಶಿರ್ವಾದ ಮಾಡಿ ಹೋಗುತ್ತಾಳೆ. ಅದೇ ಗೌರಿ ತದಿಗೆ. ಗಣಪತಿಯ ಮೂರ್ತಿಯಂತೆ ಗೌರಿಯ ಮೂರ್ತಿ ಮನೆಗೆ ಬರುತ್ತಿರಲಿಲ್ಲ. ಆದರೆ ಬಿದಿಗೆಯ ದಿನ ಸಾಯಂಕಾಲ ಮನೆಯ ಮಾಳಿಗೆಯ ಅಂಕಣಕ್ಕೆ ತರತರದ ಎಲ್ಲಾ ತರದ ಫಲ ಪುಷ್ಪಗಳನ್ನ ಕಟ್ಟಿದಾಗ ಗೌರಿ ಬಂದಳೆಂದು ಅರ್ಥ. ಅದೇ ಫಲವಳಿಗೆ.
ತದಿಗೆಯ ದಿನ ಮನೆಯ ಮುತ್ತೈದೆಯರು ಬಾಗೀನವಿರಿಸಿ ಪೂಜೆಮಾಡಿ ನೀರು ಬಿಟ್ಟು ತವರು ಮನೆಗೆಂದು ಇರಿಸುವುದರೊಂದಿಗೆ ಗೌರಿ ಪೂಜೆ ಮುಗಿದಂತೆ. ಗಣಪತಿಯನ್ನು ವಿಸರ್ಜಿಸುವಾಗ ಕಟ್ಟಿರುವ ಫಲವಳಿಗಳನ್ನೆಲ್ಲ ಹರಿವಾಣದಲ್ಲಿಟ್ಟು ಪೂಜೆ ಮಾಡಿ ನೈವೇದ್ಯ ತೋರಿಸಿ ಗಣಪನೊಂದಿಗೇ ಗೌರಿಯ ವಿಸರ್ಜನೆ ಗಂಗೆಯಲ್ಲಿ. ಆಯಿತಲ್ಲಿಗೆ ಚವತಿ ಹಬ್ಬ.
ನಾವು ಚಿಕ್ಕವರಿದ್ದಾಗ ಅಜ್ಜಿಹೇಳುವ ಗೌರಿಬಂದ ಹಾಡು ಗೌರಿಯ ಆಗಮನದ ಪರಿಯನ್ನು ಸೂಚಿಸುತ್ತಿತ್ತು. “ಮುದ್ದಿನ ಮಗಳನು ಕರೆಯ ಬೇಕೆನುತಾ ಛತ್ರೀ ಚಾಮರ ಕೊಡೆಗಳ ಪಿಡಿದು. ಮತ್ತೀಶ್ವರರಾ ಮಂದಿರಕಾಗಿ ಗಿರಿರಾಯನು ನಡೆದ” ಎಂದು ಮಗಳ ನೆನಪಾಗಿ ಅವಳನ್ನ ಕರೆದು ಕೊಂಡೇ ಬರಬೇಕೆಂದು ಗಿರಿರಾಯ ಶಿವನ ಮನೆಗೆ ಬಂದ. ಛತ್ರೀ ಚಾಮರ ರಾಜನಿಗೆ ಸಹಜ ಅದರೊಂದಿಗೆ ಕೊಡೆ ಹಿಡಿದಿದ್ದ ಎನ್ನುವುದು ಮಳೆಗಾಲವಾಗಿತ್ತು ಎನ್ನುವ ಸಹಜತೆ.
” ಬಂದ ಗಿರಿರಾಯನ ಕಂಡೀಶ್ವರರೂ ಚಂದದಿಂದಲೆ ಉಪಚಾರವ ಮಾಡಿ,,,,,,,” ಮಾವ ಬಂದಿರುವುದು ಶಿವನಿಗೆ ಸಂತೋಷವೇ. ಕಾಲು ತೊಳೆಯಲು ಬಾಗಿಲಿನಲ್ಲೇ ಬಿಸಿನೀರು, ಕೂಡ್ರುವುದಕ್ಕೆ ಮಣೆ ಕೊಟ್ಟು ಕುಶಲೋಪಚರಿ ವಿಚಾರಿಸುತ್ತಾನೆ. ಗೌರಿಗಂತೂ ಸಂಭ್ರಮವೇ ಸಂಭ್ರಮ. ಬಗೆಬಗೆಯ ಭಕ್ಷ್ಯಗಳನ್ನ ಮಾಡಿರುತ್ತಾಳೆ. ತಂದೆ ಬಂದಿರುವುದು ತನ್ನ ಕರೆಯಲೆಂದೇ ಗೊತ್ತು. ತಯಾರಿಯಲ್ಲಿ ತೊಡಗುತ್ತಾಳೆ.
“ಅಪ್ಪ ಇಟ್ಟ ಒಡ್ಯಾಣಗಳೂ, ಹಚ್ಚಗೆ ಹೊಚ್ಚಿದ ಪಟ್ಟೆಯ ತೆಗೆದಳು” ಎಲ್ಲವನ್ನೂ ತೆಗೆದುಕೊಳ್ಳುತ್ತಾಳೆ. ತಾಯಿಯ ನೆನಪು ಗೆಳತಿಯರ ತಮಾಷೆ. ಹಸು ಕರು ತಾನು ಬೆಳೆದ ವಾತಾವರಣ, ಸುತ್ತಲಿನ ಪರಿಸರದಲ್ಲಿ ಕಳೆದ ಬಾಲ್ಯದ ಸವಿನೆನಪುಗಳಿಂದ ಪುಳಕಿತಳಾಗುತ್ತಾಳೆ. ಸರಿ ಎಲ್ಲಾ ಮಾತುಕತೆಗಳೊಂದಿಗೇ ಊಟದ ಸಮಯವಾಗುತ್ತದೆ.
“ಹಾಕಿದ ಬಾಳೆಯು ಇರಿಸಿದ ಮಣೆಯೂ ತಟ್ಟೆಯ ತುಂಬೆಲ್ಲ ಮ್ರಷ್ಟಾನ್ನಗಳೂ ” ಮಾವನನ್ನ ಕರೆದುಕೊಂಡು ಊಟಕ್ಕೆ ಬಂದ ಶಿವ ಮಾವನನ್ನ ಮೊದಲನೆಯ ಮಣೆಯಲ್ಲಿ ಕೂರಿಸುತ್ತಾನೆ. ಇದು ಸಂಪ್ರದಾಯವನ್ನೂ ಹಿರಿಯರಿಗೆ ಗೌರವ ಕೊಡುವ ಪದ್ದತಿಯನ್ನೂ ಕಲಿಸುತ್ತದೆ. ಊಟ ಮಾಡುತ್ತಾ ಮಾಡುತ್ತಾ ” ಬಂದ ಕಾರಣದ ಬಗೆಯೇನೆನುತಲೆ ಈಶ್ವರ ತಾ ನುಡಿದ”.
ಮೋಹದ ಮಗಳನು ಕಳುಹಿಸಿ ಕೊಟ್ಟು ಕಳೆಯಿತು ಇಂದಿಗೆ ಒಂದ್ವರುಷಗಳು, ಬಾಲೆ ಶ್ರೀ ಗೌರಿಯ ಕಳುಹ ಬೇಕೆನುತಲೆ ಗಿರಿ ರಾಯನು ನುಡಿದ.” ಮಗಳನ್ನ ಕಳುಹಿಸಿ ಕೊಡಿ ಅಂತ ಆಜ್ನಾ ಪೂರ್ವಕವಾಗಿ ವಿನಂತಿಸಿ ಕೊಳ್ಳುತ್ತಾನೆ. ಅದಕ್ಕೆ ಶಿವ “ಬೀಸುವ ಗಾಳಿಯು ಸೂಸುವ ಮಳೆಯೂ ಸೋಕ್ಯಾಡುತಲಿವೆ ಹಳ್ಳ ಕೊಳ್ಳಗಳೂ, ಯಾಕಿಷ್ಟವಸರ ಬೇಸಿಗೆ ಬರಲೀ ಕರಕೊಂಡೋಗೆಂದಾ”, ಮಳೆ ಗಾಳಿಯ ನೆಪ.
ಬಹುಷಃ ಹೆಂಡತಿಯನ್ನ ಕಳಿಸಲಾಗದ ಮನಸೋ? ಅಥವಾ ಒಂದೇ ಮಾತಿಗೆ ಯಾಕೆ ಒಪ್ಪುವುದು ಎನ್ನುವ ಬಿಗುಮಾನವೋ ತಿಳಿಯದು. ಆದರೆ ಶಿವನ ಉತ್ತರದಿಂದ ಪರ್ವತರಾಯ ಸಿಟ್ಟಿಗೇಳುತ್ತಾನೆ. “ಕೊಟ್ಟ ಮಡಿಯಾ ಎತ್ತಲ್ಲಿಟ್ಟ, ಇಟ್ಟ ವೀಳ್ಯವ ಮೆಲ್ಲದೆ ಬಿಟ್ಟ” ಇದು ಗಿರಿರಾಯನ ಕೋಪದ ಪರಿ. “ಮೋಹದ ಮಗಳನು ನಾ ಎತ್ತಿ ಸಾಕಿ ಬಾಲೆಯ ಕೊಟ್ಟೆನು ನಾ ನಿನಗಾಗಿ, ಗೌರಿಯ ತವರಿಗೆ ಕಳುಹದೆ ಇರುವುದು ನ್ಯಾಯವೆ ಈಶ್ವರರೇ?” ಎಂದು ಅಸಮಾಧಾನವನ್ನ ಹೊರ ಹಾಕುತ್ತಾನೆ ಗಿರಿರಾಯ.
ಅಷ್ಟರಲ್ಲೇ ಈಶ್ವರನಿಗೆ ತನ್ನ ತಪ್ಪಿನ ಅರಿವಾಗಿರಬಹುದು ಅಥವಾ ಬಾಗಿಲ ಸಂದಿಯಲ್ಲಿ ಹೆಂಡತಿಯ ಮುದುಡಿದ ಮುಖ ಕಂಡಿರಬಹುದು, ಸಮಾಧಾನ ಮಾಡುತ್ತಾ ಅಪ್ಪಣೆ ಕೊಡುತ್ತಾನೆ. ” ಬೆಟ್ಟದ ರಾಯರೆ ಸಿಟ್ಟು ಮಾಡಲು ಬೇಡಿ ಈ ಕ್ಷಣದಲಿ ಕರಕೊಂಡೋಗಿರೆಂದ, ಅಪ್ಪಣೆಗೊಳಗೊಂಡು ಹೊರಟಳೆ ಗೌರಮ್ಮ ತನ್ನಪ್ಪನ ಸಂಗಾತಾ ಜೈ ಜಯಾ ಜೈ ಮಂಗಳಾ.
ಪ್ರಗತಿವಾಹಿನಿ ಸುದ್ದಿಗಳನ್ನು ನಿಮ್ಮ ಸ್ನೇಹಿತರಿಗೆ, ಬೇರೆ ಗ್ರುಪ್ ಗಳಿಗೆ ಶೇರ್ ಮಾಡಿ